ಈ ಬಡಾವಣೆಗಳೂ ಶತಾಯುಷಿ

ಚೀ. ಜ. ರಾಜೀವ  ಮೈಸೂರು
ಭಾರತೀಯ ಆಧುನಿಕ ಇತಿಹಾಸದಲ್ಲಿ ಸಾಮ್ರಾಜ್ಯಗಳನ್ನು  ನಿರ್ಮಿಸಿದ ಇಲ್ಲವೇ  ನಾಡು ಕಟ್ಟಿದ ಅಧ್ಯಾಯಗಳು ಹೇರಳವಾಗಿವೆ. ಆದರೆ, ನಗರವೊಂದನ್ನು ವ್ಯವಸ್ಥಿತವಾಗಿ ಕಟ್ಟಿ ಬೆಳಸಿದ ಕತೆಗಳು ವಿರಳಾತಿ ವಿರಳ.  ಮೈಸೂರು ನಗರ ನಿರ್ಮಾಣ ಅಂಥದ್ದೊಂದು ಅಪರೂಪದ  ಇತಿಹಾಸವನ್ನು ಹೊಂದಿದೆ ಮಾತ್ರವಲ್ಲ, ೧೯ನೇ ಶತಮಾನದಲ್ಲಿ ವ್ಯವಸ್ಥಿತ  ನಗರ ನಿರ್ಮಾಣಕ್ಕಾಗಿಯೇ  ಪ್ರತ್ಯೇಕ  ಮಂಡಳಿಯನ್ನು ಹೊಂದಿದ್ದ  ದೇಶದ ಪ್ರಥಮ ನಗರ ಎಂಬ ಅಗ್ಗಳಿಕೆಗೂ ಪಾತ್ರವಾಗಿದೆ. ಹಾಗಾಗಿಯೇ ಇಲ್ಲಿನ ಬಡಾವಣೆಗಳಿಗೂ ಪಾರಂಪರಿಕ ಸೊಬಗಿದೆ, ಶತಮಾನದ ಇತಿಹಾಸವಿದೆ.
ಬ್ರಾಹ್ಮಣರೇ ಹೆಚ್ಚು ವಾಸಿಸುವ ಅಗ್ರಹಾರಗಳು, ವೈವಿಧ್ಯಮಯ ವೃತ್ತಿ-ಕಸುಬಿನವರು ಬದುಕು ಕಟ್ಟಿಕೊಂಡಿದ್ದ  ಮೊಹಲ್ಲಾಗಳು, ರೈತಾಪಿ ಕೃಷಿಕರೇ ಹೆಚ್ಚಿದ್ದ  ಕೊಪ್ಪಲುಗಳು ಮೈಸೂರಿನ ವೈಶಿಷ್ಟ್ಯ.  ಒಡೆಯರ್ ಸಂಸ್ಥಾನದಲ್ಲಿ ದಿವಾನ್‌ರಾಗಿದ್ದ  ನೆರೆಯ ತಮಿಳುನಾಡಿನ ಆಡಳಿತಗಾರರ ದೆಸೆಯಿಂದಾಗಿ ತಮ್ಮ ಎಲ್ಲ ಹೆಸರಿನ ಹಿಂದೆ  `ಪುರಂ' ಎಂಬ ಉಪಸರ್ಗಗಳನ್ನು ಹೊಂದಿರುವ ಚಾಮರಾಜಪುರಂ, ಕೃಷ್ಣಮೂರ್ತಿಪುರಂನಂಥ ಬಡಾವಣೆಗಳು ಕೂಡ  ಈ ಪುರಾತನ ನಗರದ  ಅವಿಭಾಜ್ಯಗಳು.ಮಹಾತ್ಮಾ  ಗಾಂಧೀಜಿ ಭೇಟಿ ನೀಡಿದ್ದ  ಅಶೋಕಪುರಂ, ಜನಪದೀಯ ಹಾಗೂ ಸಾಂಸ್ಕೃತಿಕ ಸಿರಿತನದ ಕುಕ್ಕನಹಳ್ಳಿ, ಪಡುವಾರಹಳ್ಳಿಯಂಥ  ಹಳ್ಳಿ-ಬಡಾವಣೆಗಳು ಈ ಊರನ್ನು ರೂಪಿಸಿವೆ, ಇದರ  ಖ್ಯಾತಿಗೆ  ಕಾಣಿಕೆ ನೀಡಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ