ಮಡಿಕೇರಿ ಗಡಗಡ

ವಿಕ ವಿಶೇಷ
ಮಂಜಿನ ನಗರಿ ಮಡಿಕೇರಿ ಜನ ಈಗ ಚಳಿ ಹೊಡೆತಕ್ಕೆ ಅಕ್ಷರಶಃ ಥರಗುಟ್ಟಿ ಹೋಗಿದ್ದಾರೆ. ಪ್ರವಾಸಿಗರೂ ಇಳಿಮುಖಗೊಂಡ ಉಷ್ಣಾಂಶಕ್ಕೆ ಸಿಲುಕಿ ತತ್ತರಿಸಿದ್ದಾರೆ. ಮಡಿಕೇರಿ ಸದ್ಯಕ್ಕೆ ಗಡಗಡ. ಮುಂಜಾನೆ ಬೆಚ್ಚನೆ ಕಂಬಳಿ ಹೊದ್ದು ಮಲಗಿರಲು ಬಯಸುವವರೇ ಹೆಚ್ಚು. ತಣ್ಣಗೆ ಬೀಸುತ್ತಿರುವ ಕುಳಿರ್ಗಾಳಿ ಹಾಗೆ ಬಿಡದು. ಸೂರ್ಯನ ಬೆಳಕು ಮನೆ ಒಳಗೆ ಹೊಕ್ಕುವವರೆಗೂ ಬೆಚ್ಚನೆ ಕಂಬಳಿ ಯೊಳಗಿರಲು ಹೆಚ್ಚಿನವರು ಬಯಸುತ್ತಿ ದ್ದಾರೆ.
ಒಳಗೊಂದು... ಅದರ ಮೇಲೊಂದು... ಅಲ್ಲಿಂದ ಸ್ವೆಟರ್... ಮಫ್ಲರ್... ಕೈ- ಕಾಲಿಗೆ ಗವುಸುಗಳನ್ನು ಧರಿಸಿದರೂ ಚಳಿ ಬಿಡದು. ಕೊಡಗಿನ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಈ ವರ್ಷ ಡಿಸೆಂಬರ್ ೧೪ ರಂದು ಅತ್ಯಂತ ಕಡಿಮೆ ಉಷ್ಣಾಂಶ ೧೧.೬ ಡಿಗ್ರಿ ಸೆ. ದಾಖಲಾಗಿದೆ. ೨೦೦೬ ರ ಫೆಬ್ರವರಿ ೮ ರಂದು ದಾಖಲಾದ ೫.೧ ಡಿಗ್ರಿ ಸೆ. ಇದುವರೆಗಿನ ದಾಖಲೆ. ಪ್ರಸ್ತುತ ೧೨-೧೩ ಡಿಗ್ರಿ ಸುತ್ತಮುತ್ತಲೇ ಗಿರಕಿ.
ನಿತ್ಯದ ವಾಕಿಂಗ್‌ಗೂ ಸದ್ಯಕ್ಕೆ ಬ್ರೇಕ್. ದೇಹ ದಂಡನೆಗಿಂತ ಚಳಿ ಹೊಡೆತದಿಂದ ತಪ್ಪಿಸಿ ಕೊಂಡರೆ ಸಾಕೆಂಬ ನಿಲುವು. ಅನಿವಾರ್‍ಯವಾಗಿ ವಾಯುವಿಹಾರಕ್ಕೆ ಹೊರಡುವವರು ಗಾಳಿ ಒಳಪ್ರವೇಶಿಸದಂತೆ ಫುಲ್ ಬಂದೋಬಸ್ತ್.
ಒಲೆ ಇರುವ ಮನೆಗಳಲ್ಲಿ ಬೆಚ್ಚನೆ ಬೆಂಕಿ ಕಾಯಿಸಿಕೊಳ್ಳಲು ಈಗ ಪೈಪೋಟಿ. ಉಳ್ಳವರು ಹೀಟರ್, ಆಗಸ್ಟಿಕ್ ಬಳಸುತ್ತಿ ದ್ದಾರೆ. ಮುಸ್ಸಂಜೆ ವೇಳೆಯಲ್ಲಿ `ಗರಂ' ಆಗಿ ಚಳಿಯನ್ನು ದೂರ ಮಾಡಲು ಹಲವರು ಮೈ ಮರೆಯುತ್ತಿದ್ದಾರೆ. ಭುವಿಯೇ ಮಂಚ, ಆಗಸವೇ ಹೊಂದಿಕೆ ಅನ್ನುವ ಪರಿಸ್ಥಿತಿಯಲ್ಲಿರುವ ಬಯಲು ವಾಸಿಗಳು, ಗುಡಿಸಲು ವಾಸಿಗಳು ವಾಸ್ತವ್ಯ ಹೂಡಿರುವ ಸ್ಥಳದ ಪಕ್ಕ `ಕ್ಯಾಂಪ್ ಫೈಯರ್' ಹಾಕಿಕೊಂಡು ಸದ್ಯಕ್ಕೆ ಮುಕ್ತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ