ಈರುಳ್ಳಿ ದಿಲ್ಲಿಯಲ್ಲಿ ಕುಸಿದಿರಬಹುದು ಹಳ್ಳಿಯಲ್ಲಲ್ಲ !

ವಿಕ ತಂಡ
ಈರುಳ್ಳಿ ದರ ಮಾರುಕಟ್ಟೆಯಲ್ಲಿ ಬಹಳ ಕುಸಿದಿಲ್ಲ. ಹೋಲ್‌ಸೇಲ್ ಕಥೆ ಗೊತ್ತಿಲ್ಲ. ನಿತ್ಯವೂ ಕಾಲು ಕೆಜಿ ಬಳಸುವ ಮಂದಿಗೆ ಇಳಿಕೆಯ ಅನುಭವ ತಿಳಿಯುತ್ತಿಲ್ಲ, ಬರೀ ಏರಿಕೆಯ ಬಿಸಿಯಷ್ಟೇ.
ಮಡಿಕೇರಿಯಲ್ಲಿ:ಈರುಳ್ಳಿ ಬೆಲೆ ಕೊಡಗಿನ ಜನರಿಗೂ ಬಿಸಿ ಮುಟ್ಟಿಸಿದೆ. ಸ್ವಲ್ಪ ಬೆಲೆ ಇಳಿಕೆಯಿಂದ ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.
ಈರುಳ್ಳಿಗೆ ದುಬಾರಿ ಬೆಲೆಯಾದರೂ ಜನರು ಖರೀದಿಯನ್ನು ನಿಲ್ಲಿಸಿಲ್ಲ. ಜಿಲ್ಲೆಯ ಕೆಲವು ವರ್ತಕರು ಪರಿಸ್ಥಿತಿಯ ಲಾಭ ಪಡೆದುಕೊಳ್ಳತೊಡಗಿದ್ದಾರೆ. ಹಾಗಾಗಿ ಒಂದೊಂದು ಅಂಗಡಿಗಳಲ್ಲಿ ಒಂದೊಂದು ದರ. ಒಂದು ಅಂಗಡಿಯಲ್ಲಿ ಗುರುವಾರ ೫೮ ರೂ., ಬುಧವಾರ ೪೮ ರೂ, ಮಂಗಳವಾರ ೪೦ ರೂ. ಗಳಿದ್ದರೆ,  ಮತ್ತೊಂದು ಅಂಗಡಿಯಲ್ಲಿ ಕ್ರಮವಾಗಿ ೪೦, ೬೦, ೩೦ ರೂ. ಗೆ ಈರುಳ್ಳಿ ಲಭ್ಯ.
ಕೊಡಗು ಜಿಲ್ಲೆಯಲ್ಲಿ ಮೂರು ಎಪಿಎಂಸಿಗಳಿದ್ದು, ಇವು ವಿವಿಧ ಸಾಮಗ್ರಿಗಳ ಮಾರಾಟದ ಮಧ್ಯವರ್ತಿಗಳಾಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಯಾವುದೇ ವಸ್ತುಗಳಿಗೆ ಸಂಬಂಧಿಸಿದಂತೆ ಒಂದೇ ದರ ಕಾಣುವುದಿಲ್ಲ. ಜಿಲ್ಲೆಯ ವರ್ತಕರಿಗೆ ಬೆಂಗಳೂರಿನ ಮಾರುಕಟ್ಟೆಯೇ ಆಶ್ರಯ.
ಮಂಡ್ಯದಲ್ಲಿ: ಈರುಳ್ಳಿ ಬೆಲೆ ನಿಯಂತ್ರಣ ಸಂಬಂಧ ಕೇಂದ್ರ ಸರಕಾರ ರಫ್ತು ನಿಷೇಧ ಮಾಡಿದ ಬೆನ್ನಲ್ಲೇ ಪ್ರತಿ ಕಿಲೋ ಈರುಳ್ಳಿಗೆ ೨೦ ರಿಂದ ೨೫ರೂ. ಕಡಿಮೆಯಾಗಿದೆ. ಆದರೆ, ಸರಕಾರದ ಈ ನಿರ್ಧಾರದಿಂದ ತಮಗೆ ನಷ್ಟ ಆಗಿದೆ ಎಂದು ವ್ಯಾಪಾರಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ