ಸತ್ಯ ಹೇಳಿದ್ರೆ `ಸುಸ್ತು' ರಸ್ತೆ ಅಂದ್ರೆ ಮಸ್ತ್

ಮೂರ್ನಾಡು/ ನಾಪೋಕ್ಲು: ವಾಹನ ದಟ್ಟಣೆ ಅಧಿಕವಾಗುತ್ತಿದ್ದರೂ ರಸ್ತೆಗಳು ದೊಡ್ಡ- ದೊಡ್ಡ ಗುಂಡಿಗಳಿಂದ ಕೂಡಿವೆ. ಇದರಿಂದ ಚಾಲಕರು, ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದಾರೆ.
ಕೊಂಡಂಗೇರಿ ಮೂಲಕ ವೀರಾಜಪೇಟೆಗೆ ಸಾಗುವ ರಸ್ತೆ ವರ್ಷಕ್ಕೆ ಎರಡು ಬಾರಿ ಡಾಂಬರೀಕರಣಗೊಂಡರೂ ಗುಂಡಿಗಳೇ ಎದ್ದು ಕಾಣುತ್ತದೆ. ರಸ್ತೆಯಲ್ಲಿ ವಾಹನಗಳು ನಾಟ್ಯವಾಡುತ್ತಿದೆಯೇನೋ ಎಂಬಂತೆ ಸಾಗುವ ವಾಹನಗಳು ಚಾಲಕರಿಗೆ ಕಿರಿಕಿರಿಯುಂಟು ಮಾಡುತ್ತಿವೆ. ಸಾರ್ವಜನಿಕರಿಗೆ ನಡೆದಾಡಲು ಕಷ್ಟವಾಗಿದೆ.
ವೀರಾಜಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿ ಗುಂಡಿಗಳಾಗಿ ಮಾರ್ಪಟ್ಟಿದ್ದು, ಬಲಮುರಿ , ಕಾಂತೂರು- ಮರಗೋಡು ರಸ್ತೆ ಅಸಹನೀಯವಾಗಿದೆ. ಗ್ರಾಮೀಣ ಭಾಗದ ರಸ್ತೆಗಳ ಬಗ್ಗೆ ಹೇಳುವ ಹಾಗೇ ಇಲ್ಲ. ದುರಸ್ತಿಗೆ ಬಿಡುಗಡೆಯಾಗುತ್ತಿರುವ ಅನುದಾನ ಸಮರ್ಪಕ ಬಳಕೆ ಆಗುತ್ತಿಲ್ಲ.
ನಾಪೋಕ್ಲು ಹಾಗೂ ಸುತ್ತಮುತ್ತಲಿನ ಗ್ರಾಮದ ರಸ್ತೆ ಅವ್ಯವಸ್ಥೆಯ ಆಗರ. ಐದು ತಿಂಗಳ ಹಿಂದೆಯಷ್ಟೇ ಡಾಂಬರೀಕರಣ ಮಾಡಲಾಗಿದ್ದ ನಾಪೋಕ್ಲು- ಭಾಗಮಂಡಲ ರಸ್ತೆ ಮತ್ತೆ ದುಸ್ಥಿತಿಗೆ ತಲುಪಿದೆ. ಕಳೆದ ಹಲವು ವರ್ಷಕ್ಕೆ ಹೋಲಿಸಿದರೆ ಒಂದಿಷ್ಟು ಸುಧಾರಣೆ ಕಂಡಿದೆ. ಅಂದ ಮಾತ್ರಕ್ಕೆ ಪ್ರಸ್ತುತ ರಸ್ತೆಗಳು ಯೋಗ್ಯ ಸ್ಥಿತಿಯಲ್ಲಿವೆ, ಸುಗಮ ಸಂಚಾರಕ್ಕೆ ಸಮರ್ಥವಾಗಿವೆ ಎಂದು ಅರ್ಥೈಸಬೇಕಾಗಿಲ್ಲ. ಕಳಪೆ ಕಾಮಗಾರಿ ಹಾಗೂ ಅನುದಾನದ ಕೊರತೆಯಿಂದ ರಸ್ತೆ ಅಭಿವೃದ್ಧಿ ಪಡಿಸುವುದೆಂದರೇ ತೇಪೆ ಹಾಕುವುದೆಂದೇ ಅರ್ಥ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ