ಮರ ಅಮರ

ಪಿ.ಓಂಕಾರ್ ಮೈಸೂರು
ಮೈಸೂರು ಧರಿಸಿರುವ `ಪಾರಂಪರಿಕ ನಗರಿ'ಯ ಕಿರೀಟ ಬರೀ ಕಟ್ಟಡಗಳಿಂದ ಪ್ರಾಪ್ತವಾದದ್ದಲ್ಲ. ಹಲವು ತಲೆಮಾರುಗಳಿಗೆ ಉಸಿರು-ನೆರಳು ನೀಡಿದ, ಪ್ರಾಣಿ ಪಕ್ಷಿಗಳಿಗೆ ಆಸರೆಯಾದ, ಹಣ್ಣು ಹಂಪಲು ನೀಡಿ ಹಸಿವು ನೀಗಿಸಿದ `ಹಿರಿಯ' ಮರಗಳೂ ಕಿರೀಟದ ಗರಿಗಳೇ. ಹಲವು ತಲೆಮಾರುಗಳ ಸಾಕ್ಷಿ ಪ್ರಜ್ಞೆಯೂ ಸಹ.
ಹೊರವಲಯದ ಚಿಕ್ಕಹಳ್ಳಿಯ `ದೊಡ್ಡ ಆಲ'ವೂ ಸೇರಿ ನಗರದಲ್ಲಿ ಐದು ಪಾರಂಪರಿಕ ವೃಕ್ಷಗಳಿವೆ. ಇಂಥ ಮರಗಳನ್ನು ಗುರುತಿಸಿ, ಸಂರಕ್ಷಿಸುವ ಕಾಳಜಿಯಿಂದ ಆರಂಭವಾದ `ಪಾರಂಪರಿಕ ವೃಕ್ಷ ಸಂರಕ್ಷಣಾ ಸಮಿತಿ' ಈ ಮರಗಳನ್ನು ಗುರುತಿಸಿ ಫಲಕ ಅಳವಡಿಸಿದೆ. ಈ ಪೈಕಿ ಮೂರು ಮರಗಳು( ಚಿಕ್ಕಹಳ್ಳಿ ಆಲದ ಮರ, ಗಂಗೋತ್ರಿಯ ಅರಳಿ, ಕರ್ಜನ್ ಪಾರ್ಕ್‌ನ ಕೆಂಪು ಬೂರಗ) `ಕರ್ನಾಟಕದ ೧೦ ಪಾರಂಪರಿಕ ವೃಕ್ಷ'ಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇನ್ನೊಂದು ವಿಶೇಷ. ಕರ್ನಾಟಕ ಜೀವ ವೈವಿಧ್ಯ ಕಾರ್‍ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಈ ಕುರಿತು ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದಾರೆ. ೨೦೦೭ರ ಫೆಬ್ರವರಿಯಲ್ಲಿ ಆರಂಭವಾದ ಸಸ್ಯಶಾಸ್ತ್ರಜ್ಞರಾದ ಕೆ.ಬಿ.ಸದಾನಂದ, ಡಾ.ಎ.ರಾಮಲಿಂಗಂ,ಜೀವ ಶಾಸ್ತ್ರಜ್ಞ ಕೆ.ಎಂ.ವೀರಪ್ಪ ಅವರಿರುವ  `ಪಾರಂಪರಿಕ ವೃಕ್ಷ ಸಂರಕ್ಷಣಾ ಸಮಿತಿ' ವಿವಿಧ ಅಂಶಗಳನ್ನು ಪರಿಶೀಲಿಸಿ, ೫ ಮರಗಳಿಗೆ `ಪರಂಪರೆ'ಯ ಕಿರೀಟ ತೊಡಿಸಿದೆ. ಅದು ಅಧಿಕೃತಗೊಂಡು, ಸಂರಕ್ಷಣೆ ಸಾಧ್ಯವಾಗಲೆನ್ನುವುದು ಎಲ್ಲರ ಹಂಬಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ