೨೦೧೦ ಮುಗೀತು

ಚಿತ್ರನಟ ಅಶ್ವತ್ಥ್ ವಿಧಿವಶ, ದೇಜಗೌ ಕರ್ನಾಟಕ ರತ್ನ, ಪೇಜಾವರ ಸ್ವಾಮೀಜಿ ಅವರ ಸಾಮರಸ್ಯದ ವಾಸ್ತವ್ಯ, ಅರಳಕುಪ್ಪೆ ಗ್ರಾಮದ ಬಹುತೇಕ ಹೆಣ್ಣು ಮಕ್ಕಳನ್ನು ಸೆಳೆದುಕೊಂಡ ಉಂಡಬತ್ತಿ ಕೆರೆ. ಮೈಸೂರು ಭಾಗದ ೨೦೧೦ರ ನೆನಪಿನ ಸುಳಿಯಿದು...
ಡಿಸೆಂಬರ್ ೧೪ರಂದು ನಂಜನಗೂಡಿನಲ್ಲಿ ಬೀಗರೂಟ ಮುಗಿಸಿ ಊರಿಗೆ ಹಿಂದಿರುಗುತ್ತಿದ್ದ ವಾಹನ ಮೈಸೂರು ಹೊರವಲಯದ ಉಂಡಬತ್ತಿ ಕೆರೆಗೆ  ಉರುಳಿದ್ದರಿಂದ ೩೧ ಮಂದಿ ಪ್ರಾಣಬಿಟ್ಟರು. ಇದರಲ್ಲಿ ೨೬ ಮಂದಿ ಮಹಿಳೆಯರು. ಈಗ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಮನೆಯೊಡತಿಯರೇ ಇಲ್ಲ. ವರ್ಷಾಂತ್ಯದ ದೊಡ್ಡ ದುರಂತವಿದು.
ಡಿಸೆಂಬರ್ ೧೫ರಂದು ಕೊಳ್ಳೇಗಾಲ ತಾಲೂಕಿನ ಮಹಾದೇಶ್ವರ ಬೆಟ್ಟಕ್ಕೆ ಪೂಜೆಗೆಂದು ಹೊರಟಿದ್ದ ಬೆಂಗಳೂರು ಹಾಗೂ ಮಳವಳ್ಳಿಯ ಕುಟುಂಬಗಳ ವಾಹನ ಅಪಘಾತಕ್ಕೀಡಾಗಿ ೬ ಮಂದಿ ಮೃತಪಟ್ಟರು.
ಮೈಸೂರಿನ ಮಂಡಿ ಮೊಹಲ್ಲಾದ ಗುಜರಿಯಲ್ಲಿ ಬೆಂಕಿ ಅವಘಡ. ಆರು ಮಂದಿ ಬೆಂಕಿಗೆ ಆಹುತಿ. ಅನಧಿಕೃತವಾಗಿ ಅನಿಲ ತುಂಬುವಾಗ ಸಂಭವಿಸಿದ ಅನಾಹುತ. ಮೇ ಮೊದಲ ವಾರದಲ್ಲಿ ನೇಪಾಳಕ್ಕೆ ತೆರಳಿದ್ದ ಮೈಸೂರಿಗರ ಬಸ್ ಉರುಳಿ ಬಿದ್ದು ಇಬ್ಬರು ಮೃತಪಟ್ಟಿದ್ದರು. ಇನ್ನೂ ಹಲವರು ಗಾಯಗೊಂಡಿದ್ದರು.
ಮೈಸೂರು ಪೊಲೀಸರಿಗೆ ದೊಡ್ಡ ತಲೆನೋವಾಗಿರುವ ಸರಗಳ್ಳರ ಬಂಧನ ಇನ್ನೂ ಸಾಧ್ಯವಾಗೇ ಇಲ್ಲ. ನಿಯಂತ್ರಣವೂ ಕಷ್ಟವಾಗಿದೆ.
೨೦ ವರ್ಷದ ಹಿಂದೆ ನಡೆದಿದ್ದ ಬದನವಾಳು ದುರಂತದ ಎಲ್ಲಾ ೨೦ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು ಅಕ್ಟೋಬರ್‌ನಲ್ಲಿ.
ಕೊಡಗಿನಲ್ಲಿ ಉಗ್ರರ ಹೆಜ್ಜೆಯ  ಗುರುತು. ಕೇರಳದ ಮದನಿ ಸೋಮವಾರಪೇಟೆ ತಾಲೂಕಿನಲ್ಲಿ ತಂಗಿದ್ದ ಮಾಹಿತಿ. ಪೊಲೀಸರಿಂದ ಮುಂದುವರಿದ ತನಿಖೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ