ಕನ್ನಂಬಾಡಿ ತುಂಬುವ ಮುನ್ನವೇ ತ.ನಾಡಿಗೆ ನೀರು !

ಮತ್ತೀಕೆರೆ ಜಯರಾಮ್ ಮಂಡ್ಯ
‘ಜೀವನಾಡಿ’ ಕನ್ನಂಬಾಡಿ(ಕೆಆರ್‌ಎಸ್) ಭರ್ತಿಯಾಗದೆ ಮೈಸೂರು ಭಾಗದ ರೈತರು ಕಂಗಾಲಾಗಿದ್ದರೆ, ಜಲಾಶಯ ದಿಂದ ಕದ್ದುಮುಚ್ಚಿ ನದಿಗೆ ನೀರು ಹರಿಸುವ ಮೂಲಕ ರಾಜ್ಯ ಸರಕಾರ ತಮಿಳುನಾಡನ್ನು ತಣಿಸಲು ಹೊರಟಿದೆ. 
ಜಲಾಶಯದ ೫೦ನೇ ಗೇಟ್ ಮೂಲಕ ೩೨೧೮ ಕ್ಯೂಸೆಕ್ ನೀರನ್ನು ಬುಧವಾರ ಮಧ್ಯಾಹ್ನದಿಂದಲೇ ನದಿಗೆ ಬಿಡುಗಡೆ ಮಾಡಲಾಗಿದೆ. ಇನ್ನೂ ದುರಸ್ತಿ ಹಂತದಲ್ಲಿರುವ ೮೦ನೇ ಗೇಟ್‌ನಲ್ಲೂ ಮುನ್ನೂರು ಕ್ಯೂಸೆಕ್‌ನಷ್ಟು ಸೋರಿಕೆ ನೀರು ಹರಿದು ಹೋಗುತ್ತಿದೆ.
ಕಾವೇರಿ ನ್ಯಾಯ ಮಂಡಳಿಯ ಮಧ್ಯಂತರ ಆದೇಶ ದನ್ವಯ ಜೂನ್ ಮತ್ತು ಜುಲೈನ ಪಾಲು ೧೫ ಟಿಎಂಸಿ ಅಡಿ ನೀರು ಹರಿಸಿ ತಮಿಳುನಾಡನ್ನು ತೃಪ್ತಿಪಡಿಸಲು ರಾಜ್ಯ ಸರಕಾರವು ಮಂಡ್ಯ ಮತ್ತು ಮೈಸೂರು ಭಾಗದ ರೈತರ ಭವಿಷ್ಯವನ್ನು ಬಲಿಕೊಡಲು ಮುಂದಾಗಿದೆ. ಕೇರಳದ ವೈನಾಡಿನಲ್ಲಿ ಧಾರಾಕಾರ ಮಳೆಯಾಗಿ ಭರ್ತಿ ಅಂಚಿಗೆ ತಲುಪಿರುವ ಕಬಿನಿ ಜಲಾಶಯ ದಿಂದಲೂ ತಮಿಳುನಾಡಿಗೆ ನೀರು ಹರಿಯುತ್ತಿದೆ. ಅಲ್ಲಿ ಒಳ ಹರಿವಿನಷ್ಟೇ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗಿದ್ದರೂ ಕನ್ನಂಬಾಡಿ ಒಡಲು ಬಸಿಯುವ ದುಸ್ಸಾಹಸ ನಡೆದಿದೆ. ಕನ್ನಂಬಾಡಿಯು ಕಳೆದ ವರ್ಷ ಇಷ್ಟರಲ್ಲಾಗಲೇ ತುಂಬಿ ತುಳುಕುತ್ತಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಳೆದ ಬಾರಿ ಜು.೨೪ರಂದೇ ಕೆಆರ್‌ಎಸ್‌ಗೆ ಆಗಮಿಸಿ ಕಾವೇರಿ ಮಾತೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಬಾಗಿನ ಸಮರ್ಪಿಸಿದ್ದರು. ಭರ್ತಿಯಾಗಿದ್ದ ಜಲಾಶಯ ದಿಂದ ನದಿಗೆ ನೀರು ಬಿಡುವ ಮುನ್ನವೇ ನಾಲೆಗಳಿಗೆ ಹರಿಸ ಲಾಗಿತ್ತು. ಈ ವೇಳೆಗಾಗಲೇ ರೈತರು ಮುಂಗಾರು ಕೃಷಿ ಚಟು ವಟಿಕೆಯಲ್ಲಿ ತೊಡಗಿದ್ದರು. ಕಬ್ಬು, ಬತ್ತದ ಬಿತ್ತನೆ ಕಾರ್ಯ ಭರದಿಂದ ಸಾಗಿತ್ತು. ಈ ಬಾರಿ ನಾಲೆಗಳಿಗಿನ್ನೂ ನೀರು ಬಿಟ್ಟಿಲ್ಲ.
ಪ್ರಸಕ್ತ ವರ್ಷ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ತಳ ಬಿಟ್ಟು ಮೇಲೆದ್ದಿಲ್ಲ. ಕೊಡಗಿನಲ್ಲಿ ನಾಲ್ಕು ದಿನದ ಹಿಂದಿನವರೆಗೂ ಮುಂಗಾರು ಕ್ಷೀಣಿಸಿದ್ದರಿಂದ ಮಂಡ್ಯದ ರೈತರು ಮಂಕಾಗಿದ್ದರು. ಅತ್ತ ಕೊಡಗಿನಲ್ಲಿ ಮಳೆ ಜೋರಾಗುತ್ತಿದ್ದಂತೆ ಇತ್ತ ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು. ಆದರೆ ವರುಣ ಕೃಪೆ ತೋರುವಷ್ಟರಲ್ಲಿ  ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದು ರೈತರಿಗೆ ಆಘಾತವನ್ನುಂಟು ಮಾಡಿದೆ.
ಘೋರ ಅನ್ಯಾಯ: ರೈತರು ಸಂಕಷ್ಟದಲ್ಲಿದ್ದಾಗ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಹರಿಸುವ ಚಾಳಿ ನಡೆದು ಬಂದಿದೆ. ಆದರೆ, ಕನ್ನಂಬಾಡಿಯಲ್ಲಿ ನೀರಿನ ಮಟ್ಟ ೧೦೦ ಅಡಿಗಿಂತ ಕಮ್ಮಿ ಇದ್ದಾಗ ನೀರು ಬಿಟ್ಟು, ರೈತರಿಗೆ ಘೋರ ಅನ್ಯಾಯ ಮಾಡಿರುವುದು ಇದೇ ಮೊದಲು. ಗರಿಷ್ಠ ೧೨೪.೮೦ ಅಡಿಯ ಜಲಾಶಯದಲ್ಲಿ ಬುಧವಾರ ಸಂಜೆ ನೀರಿನ ಮಟ್ಟ ೯೦.೫೦ ಅಡಿ ಇತ್ತು. ಜಲಾಶಯಕ್ಕೆ ಮಧ್ಯಾಹ್ನದವರೆಗೆ ೯೨೩೨ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಸಂಜೆಯ ಬಳಿಕ ಒಳ ಹರಿವಿನ ಪ್ರಮಾಣ ೧೫,೦೨೭ ಕ್ಯೂಸೆಕ್‌ಗೆ ಏರಿದೆ. ಒಳ ಹರಿವು ಹೆಚ್ಚಿದ ಬಳಿಕ ಹೊರ ಹರಿವನ್ನು ೩೨೬೫ ಕ್ಯೂಸೆಕ್ ಹೆಚ್ಚಿಸ ಲಾಗಿದೆ. ಆರು ವರ್ಷದಿಂದ ಕರ್ನಾಟಕ ಮತ್ತು ತಮಿಳುನಾಡಿನ ಜಲಾನಯನ ಪ್ರದೇಶದಲ್ಲಿ ಸಮೃದ್ಧ  ಮಳೆಯಾಗಿತ್ತು. ಕನ್ನಂಬಾಡಿ ಮತ್ತು ಮೆಟ್ಟೂರು ಜಲಾಶಯಗಳು ಭರ್ತಿಯಾಗಿದ್ದವು. ಹಾಗಾಗಿ ಅಧಿಕಾರಸ್ಥರಿಗೆ ಕಾವೇರಿ ಕದನದ ಕಾಟವಿರಲಿಲ್ಲ.  ಇದೀಗ ಯಡಿಯೂರಪ್ಪ ಅವರಿಗೆ ಅಗ್ನಿ ಪರೀಕ್ಷೆ ಎದುರಾಗಿದೆ.
ತಮಗೆ ಅನ್ಯಾಯವಾದಾಗ ಮಂಡ್ಯ ಜಿಲ್ಲೆಯ ರೈತರು ರೊಚ್ಚಿಗೇಳದೆ ಸುಮ್ಮನಿರಲಾರರು. ಕಾವೇರಿ ಜಲ ವಿವಾದ ಎದುರಾದಾಗೆಲ್ಲಾ ಜಿಲ್ಲೆ ಹೊತ್ತಿ ಉರಿದಿದೆ. ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿರುವ ಬಿಜೆಪಿ ಬೇರು ಈ ಜಿಲ್ಲೆಯಲ್ಲಿ ಗಟ್ಟಿಯಾಗಿಲ್ಲ. ಹಾಗಾಗಿ ಚಳ ವಳಿ ಮತ್ತಷ್ಟು ಭುಗಿಲೇಳುವ ಸಾಧ್ಯತೆ ನಿಚ್ಚಳವಾಗಿದೆ.

ಗುಜರಿ ಬದಲು ವಿದೇಶಕ್ಕೆ

ಈಚನೂರು ಕುಮಾರ್
ಮ್ಮ ಮನೆಯಲ್ಲಿ ಓಬೀರಾಯನ ಕಾಲದ ರೇಡಿಯೊ ಇದೆಯೇ? ಅದನ್ನು ಕೇಳುವರು ಇಲ್ಲವೆಂದು ಬಿಸಾಡಲು ನಿರ್ಧರಿಸಿದ್ದೀರಾ? ತುಸು ನಿಲ್ಲಿ, ಮೈಸೂರಿನ ಎಂ.ಬಿ.ರಾಮರಾವ್ ಕಾಸು ಕೊಟ್ಟು ಅದನ್ನು ಕೊಳ್ಳುತ್ತಾರೆ !
ಟಿ.ವಿ, ಎಫ್.ಎಂ ಯುಗದಲ್ಲಿ ರೇಡಿಯೊಗಳಿಗೂ ಬೆಲೆ ತಂದುಕೊಟ್ಟಿದ್ದಾರೆ ನಮ್ಮ ರಾಯರು. ಯಾವ ಭಾಗವೇ ಹಾಳಾಗಿರಲಿ, ಕ್ಷಣಮಾತ್ರದಲ್ಲಿ ರಿಪೇರಿ ಮಾಡಿ ಹೊಚ್ಚಹೊಸದರಂತೆ ಮಾಡುತ್ತಾರೆ. ಅಂತಹ ರೇಡಿಯೊ ಕೊಳ್ಳಲು ಇರಾನಿ ಪ್ರಜೆಗಳು ಕೆ.ಆರ್. ಮೊಹಲ್ಲಾದಲ್ಲಿರುವ ಅವರ ವಿನಾಯಕ ಎಲೆಕ್ಟ್ರಾನಿಕ್ಸ್ ಮುಂದೆ ಸಾಲುಗಟ್ಟಿ ನಿಂತಿರುತ್ತಾರೆ!
‘ಕಾಸು ಎಷ್ಟಾದರೂ ಪರವಾಗಿಲ್ಲ, ನಮಗೊಂದು ಒಳ್ಳೆಯ ರೇಡಿಯೊ ಕೊಡಿ’ ಎಂದು ಗೋಗರೆಯುವವರಿಗೇನೂ ಕಮ್ಮಿ ಯಿಲ್ಲ. ಇಂತಹುದೇ ಬ್ರ್ಯಾಂಡ್ ಬೇಕೆಂದು ಕೇಳುವವರೂ ಇದ್ದಾರೆಂದರೆ ಅಚ್ಚರಿಯಾದೀತಲ್ಲವೆ? ೩೫೦ ರೂ. ಆರಂಭಿಕ ಬೆಲೆಯಿಂದ ಸಾವಿರಾರು ರೂಪಾಯಿ ಮೌಲ್ಯದ ರೇಡಿಯೊ ಗಳು ಇವರಲ್ಲಿ ಸಿಗುತ್ತವೆ. ರಾಮರಾವ್ ಅವರಿಗೆ ಈಗ ೮೪. ವಯಸ್ಸು ೨೦ ಆಗಿದ್ದಾಗನಿಂದಲೂ ಹೊಟ್ಟೆಪಾಡಿಗೆ ರೇಡಿಯೊವನ್ನೇ ನಂಬಿ ಕೊಂಡಿದ್ದಾರೆ. ಅದರಿಂದ ಮೋಸವೇನೂ ಆಗಿಲ್ಲವೆನ್ನಿ.
ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ರಾಮರಾವ್ ಓದಿದ್ದು ಉಡುಪಿಯಲ್ಲಿ. ನಂತರ ಮುಂಬಯಿಗೆ ಹೋಗಿ ಅಲ್ಲಿ ಅಣ್ಣಾಜಿರಾವ್ ಬಳಿ ರೇಡಿಯೋ ದುರಸ್ತಿ ಕಲಿತು ಪಳಗಿದರು.  ೧೯೪೪-೪೫ರ ಆಸುಪಾಸು ಬೆಸ್ಟ್ ರೇಡಿಯೊ ಶಾಪ್ ಸರ್ವೀಸ್‌ನಲ್ಲಿದ್ದು ಗಿರಿಗಾಂವ್‌ನಲ್ಲೇ ‘ಬೆಸ್ಟ್’ ಎನ್ನಿಸಿಕೊಂಡರು. ಅಣ್ಣಾಜಿಯವರೋ ಜಪಾನ್ ಮತ್ತು ಜರ್ಮನ್ ಸೆಟ್, ಬುಶ್ ನ್ಯಾಶನಲ್ ಎಕೊ, ಜೆನಿತ್, ಪೈಲಟ್, ಮರ್ಫಿ, ಫಿಲಿಪ್ಸ್ ಮೊದಲಾದ ಹೆಸರಾಂತ ಕಂಪನಿಗಳ ರೇಡಿಯೊಗಳನ್ನೇ ತರಿಸುತ್ತಿದ್ದರು.
೧೯೪೬ರಲ್ಲಿ ರಾಮರಾವ್ ಮೈಸೂರಿಗೆ ಬಂದರು. ಓಲ್ಡ್ ಬ್ಯಾಂಕ್ ರಸ್ತೆ ಎಂದು ಕರೆಯುತ್ತಿದ್ದ ಸರ್ದಾರ್ ಪಟೇಲ್ ರಸ್ತೆಯಲ್ಲಿ ಆಗಿನ ನಿಯಮಗಳಂತೆ ಕಾನೂನುಬದ್ಧವಾಗಿಯೇ ರೇಡಿಯೊ ಮಾರಾಟದ ಅಂಗಡಿ ತೆರೆದರು.  ನಂತರ ಕಾಳಮ್ಮನ ಗುಡಿ ರಸ್ತೆ, ಮುಂದೆ ಸಯ್ಯಾಜಿರಾವ್ ರಸ್ತೆಗೆ ಸ್ಥಳಾಂತರ. ರಾಜೀವ್‌ಗಾಂಧಿಯವರು ರೇಡಿಯೊ ಮಾರಾಟದ ಲೈಸೆನ್ಸ್ ತೆಗೆದು ಹಾಕುವವರೆಗೆ ಚೆನ್ನಾಗಿಯೇ ವ್ಯಾಪಾರ-ವ್ಯವಹಾರ ನಡೆಸಿದರು. ೩, ೪, ೫ ಬ್ಯಾಂಡ್ ರೇಡಿಯೊಗಳ ವ್ಯವಹಾರ. ಬಿಡಿಭಾಗಗಳನ್ನು ಜೋಡಿಸಿ ಸಿದ್ಧಪಡಿಸಿದ ಡೆಲ್ಲಿ ಸೆಟ್‌ಗಳು ಬೀದಿಗೆ ಇಳಿದವಲ್ಲ, ಬಹುತೇಕ ರೇಡಿಯೊ ಮಾರಾಟಗಾರರು ನಡುರಸ್ತೆಯಲ್ಲಿ ನಿಲ್ಲುವಂತಾಯಿತು. ಆಗ ಹಳೆ ರೇಡಿಯೊಗಳಿಗೆ ಹೊಸ ರೂಪ ನೀಡಿ ಮಾರಾಟ ಮಾಡಲು ಶುರುವಿಟ್ಟುಕೊಂಡರು. ಅರಮನೆ ನಗರಿಗೆ ಬರುವ ಇರಾನಿಗಳಿಗೆ ಹಳೆ ರೇಡಿಯೊಗಳೆಂಂದರೆ ಅದೇನು ಮೋಹವೋ? ಇವರ ಅಂಗಡಿ ಹುಡುಕಿಕೊಂಡು ಬಂದು ರೇಡಿಯೊ ಒಯ್ಯುತ್ತಾರೆ.
‘ಜಗತ್ತಿನ ಪ್ರಸಿದ್ಧ ಕಂಪನಿಗಳ ರೇಡಿಯೊ ಬಿಡಿಭಾಗಳನ್ನು ಅಸೆಂಬಲ್ ಮಾಡುವುದು ಅಥವಾ ಹಾಳಾಗಿರುವ ರೇಡಿಯೊ ಸರಿ ಮಾಡುವುದು ಹೇಗೆ ಸಾಧ್ಯವಾಯಿತು’ ಎಂದು ಪ್ರಶ್ನಿಸಿದರೆ,  ‘ಟ್ರಬಲ್ ಶೂಟರ‍್ಸ್ ಮ್ಯಾನ್ಯುಯೆಲ್’ ಎಂಬ ೧೫ ಸಂಪುಟಗಳ ಕೃತಿಯತ್ತ ಬೊಟ್ಟು ಮಾಡುತ್ತಾರೆ. ಜಾನ್ ಎಫ್. ರೈಡರ್ ರಚಿಸಿದ ಕೃತಿಯಲ್ಲಿ ೧೯೧೯ರಿಂದ ೧೯೪೬ ರವರೆಗಿನ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇದೇ ಇವರಿಗೆ ಇಂದಿಗೂ ದಾರಿದೀಪ.

ಬಿಗಿಯಾಗುತ್ತಿದೆ ಪೊಲೀಸ್ ತಪಾಸಣೆ

ವಿಕ ಸುದ್ದಿಲೋಕ ಮೈಸೂರು
ಹೆಲ್ಮೆಟ್ ಹಾಕದೇ ಇದ್ದರೆ ಸಂಚಾರಿ ಪೊಲೀಸರಷ್ಟೇ ಅಲ್ಲ, ಮಾಮೂಲಿ ಪೊಲೀಸರೂ ನಿಮ್ಮನ್ನು ಹಿಡಿಯುವರು !
ಹೆಲ್ಮೆಟ್ ಇಲ್ಲದೇ ಅಪಘಾತದಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆತಂಕಗೊಂಡಿ ರುವ ನಗರ ಪೊಲೀಸರು ನಿಯಂತ್ರಣಕ್ಕೆ ಮುಂದಾಗಿ ದ್ದಾರೆ. ಹೆಲ್ಮೆಟ್ ಹಾಕಿಕೊಳ್ಳದೇ ವಾಹನ ಚಲಾಯಿ ಸುವ ದ್ವಿಚಕ್ರವಾಹನ ಸವಾರರ ಮೇಲೆ ಸಂಚಾರ ಪೊಲೀಸರ ಕಣ್ಗಾವಲು ಬಿಗಿಗೊಂಡಿದೆ. ಸಂಚಾರ ನಿಯಂತ್ರಣಕ್ಕೆ  ಕೋಟಿ ರೂ. ವೆಚ್ಚ ಮಾಡಿ ಹೈಟೆಕ್ ಯಂತ್ರಗಳ ಬಳಕೆ ಆರಂಭಿಸಿರುವ ಪೊಲೀಸರು ಹೆಲ್ಮೆಟ್ ಹಾಕಿಕೊಳ್ಳದ ಮೇಲೆ ದಂಡ ಪ್ರಯೋಗ ಬಿಗಿಗೊಳಿಸಿದ್ದಾರೆ. ಇದು ಸಾಮಾನ್ಯ ಪೊಲೀಸ ರಿಗೂ ವರ್ಗಾವಣೆಗೊಳ್ಳಲಿದೆ.
ಹೆಚ್ಚಿದ ಅಪಘಾತ, ಸಾವು: ನಗರದಲ್ಲಿ ವಾಹನ ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಸದ್ಯ ೪.೫೦ ಲಕ್ಷದಷ್ಟು ವಾಹನಗಳು ಸಂಚರಿ ಸುತ್ತಿವೆ. ಅದರಲ್ಲೂ ದ್ವಿಚಕ್ರ ವಾಹನದ ಪ್ರಮಾ ಣವೇ ಹೆಚ್ಚು. ಈ ವರ್ಷದ ಜೂನ್ ಅಂತ್ಯಕ್ಕೆ ನಗರ ದಲ್ಲಿ ಸಂಭವಿಸಿದ ಅಪಘಾತ ೪೪೧. ಈ ಪೈಕಿ ೬೪ ಮಂದಿ ಪ್ರಾಣಕಳೆದುಕೊಂಡವರು. ೫೫ ಮಂದಿ ಗಾಯಗೊಂಡವರು. ಅದರಲ್ಲೂ ದ್ವಿಚಕ್ರ ವಾಹನದಲ್ಲಿ ಮೃತಪಟ್ಟವರು ೨೪. ಹೆಲ್ಮೆಟ್ ಇಲ್ಲದೇ ಜೀವ ಬಿಟ್ಟವರು ೧೮ ಮಂದಿ.
ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿದ ೯೨೩, ಅತಿವೇಗವಾಗಿ ಚಾಲನೆ ಮಾಡಿದ ೨೮೧೫, ಮದ್ಯ ಪಾನ ಸೇವಿಸಿ ವಾಹನ ಚಲಾಯಿಸಿದವರ ವಿರುದ್ಧ ೧೪೩೦, ಡಿಎಲ್ ಇಲ್ಲದೇ ಓಡಿಸಿದ್ದಕ್ಕೆ ೧೬೩೧, ವಾಹನ ಓಡಿಸುವಾಗ ಮೊಬೈಲ್ ಬಳಸಿದ ೬೯೯, ಹೆಲ್ಮೆಟ್ ಧರಿಸದೇ ವಾಹನ ಓಡಿಸಿದ ೩೦,೧೨೨, ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದ ೧೭೮೫೭ ಮೊಕದ್ದಮೆ ದಾಖಲಿಸ ಲಾಗಿದೆ. ಪೊಲೀಸರೇ ನೇರವಾಗಿ ೭೬,೬೯,೮೦೦ ರೂ., ೧೪,೬೫,೦೦೦ ಗಳನ್ನು ನ್ಯಾಯಾಲಯದಲ್ಲಿ ದಂಡ ಪಾವತಿಸಿದ್ದಾರೆ. ಕಳೆದ ೬ ತಿಂಗಳಲ್ಲಿ ಸುಮಾರು ೯೧ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.  ಒಟ್ಟು ದಾಖಲಾದ ಮೊಕದ್ದಮೆ  ಸಂಖ್ಯೆ ೬೮೦೯೪.
ಉಡಾಫೆ: ಬಹುತೇಕ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಹಾಕಿ ಅಭ್ಯಾಸವೇ ಇಲ್ಲ. ನನ್ನ ತಲೆ ಹೋದರೇನಂತೆ ತಲೆಗೆ ಮಾತ್ರ ಹೆಲ್ಮೆಟ್ ಧರಿ ಸೋಲ್ಲ ಎನ್ನುವ ಮನೋಭಾವ ಹಲವರದ್ದು. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳಿಗಂತೂ ಹೆಲ್ಮೆಟ್ ಎಂದರೆ ಅಲರ್ಜಿ. ಯುವತಿಯರಿಗೆ ತಮ್ಮ ಹೇರ್‌ಸ್ಟೈಲ್ ಮೇಲೆ ಕಾಳಜಿ. ಸಾವಿರಾರು ರೂ. ಕೊಟ್ಟು ಬೈಕ್ ಕೊಡಿಸುವ ಅಪ್ಪ ಜತೆಗೊಂದು ಹೆಲ್ಮೆಟ್ ಅನ್ನು ಕೊಡಿಸಿದರೂ ಮಕ್ಕಳಿಗೆ ಮಾತ್ರ ಹೆಲ್ಮೆಟ್ ಯಾಕೆ ಎನ್ನೋ ಉಡಾಫೆ. ಪೊಲೀಸರು ಹಿಡಿದರೆ ೧೦೦ ರೂ. ದಂಡ ಕಟ್ಟಿದರೆ ಮುಗೀತೆನ್ನುವ ದಾಷ್ಟ್ಯ ಬೇರೆ. ಕೆಲ ಯುವಕರಂತೂ ಪೊಲೀಸರ ಕಂಡರೆ ಓಟ ಕೀಳ್ತಾರೆಯೇ ಹೊರತು ಹೆಲ್ಮೆಟ್ ಹಾಕೋಲ್ಲ. ಇಂಥ ಸಂದರ್ಭದಲ್ಲಿ ಸರಕ್ಕನೇ ಬೈಕ್ ತಿರುಗಿಸಿ ಬೇರೆಯವರಿಗೆ ಡಿಕ್ಕಿ ಹೊಡೆದ ಸಾಕಷ್ಟು ಘಟನೆಗಳೂ ನಡೆದಿವೆ.

ಇದ್ದೂ ಇಲ್ಲದಂತಿರುವ ದೌರ್ಜನ್ಯ ದೂರು ಸಮಿತಿ

ಚೀ.ಜ. ರಾಜೀವ ಮೈಸೂರು
‘ಹೆಣ್ಣಾದ ನಿನಗೆ ಇಷ್ಟು ಸೊಕ್ಕು ಇರುವಾಗ, ಗಂಡಾದ ನನಗೆ ಅದಿನ್ನೆಷ್ಟು ಇರೋದಿಲ್ಲ. ಸ್ವಲ್ಪ ಮೈ ಮುಟ್ಟಿದ್ದಕ್ಕೆ, ಯಾಕಿಷ್ಟು ರಂಪಾ ಮಾಡ್ತೀಯಾ ?’
ಇದು- ಮಹಿಳಾ ಹಕ್ಕುಗಳ ಗೈರು ಹಾಜರಿಯಲ್ಲಿ ನಿರ್ಮಾಣ ವಾದ ಯಾವುದೋ ಹಳೆ ಕನ್ನಡ ಸಿನಿಮಾದ ಡೈಲಾಗ್ ಅಲ್ಲ. ಮಹಿಳಾ ಹಕ್ಕಿನ ಅರಿವಿರುವ ೨೧ನೇ ಶತಮಾನದಲ್ಲಿ - ಮೈಸೂರು ವಿಶ್ವವಿದ್ಯಾನಿಲಯದ ಮಹಾಶಯರೊಬ್ಬರು, ತನ್ನ ಮಹಿಳಾ ಸಹೋದ್ಯೋಗಿ ಮೇಲೆ ಎಸೆದಿರುವ ಮಾತಿನ ದೌರ್ಜನ್ಯ !
ಹಾಗಾದರೆ ಈ ದೂರು ಮೈಸೂರು ವಿಶ್ವವಿದ್ಯಾನಿಲಯದ ಕಿವಿಗೆ ಮುಟ್ಟಿಲ್ಲವೇ ?. ಇಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ವಿವಿಯ ಪ್ರಾಧ್ಯಾಪಕಿ. ಇದಷ್ಟೇ ಅಲ್ಲ, ಇಂಥ ನೂರೆಂಟು ದೂರುಗಳು ವಿವಿಯ ಕ್ರಾಫರ್ಡ್ ಭವನವನ್ನು ಮುಟ್ಟುತ್ತಿಲ್ಲ. ಎಲ್ಲವೂ ಮಹಿಳೆಯರು ಕಾರ್ಯನಿರ್ವಹಿಸುವ ನಾಲ್ಕು ಗೋಡೆಗಳ ನಡುವೆ ಕರಗಿ ಹೋಗುತ್ತಿವೆ. ಏಕೆಂದರೆ, ವಿವಿಗೆ ದೂರು ನೀಡಿದರೆ ಪ್ರಯೋಜನ ವಾಗುವುದಿಲ್ಲ ಎಂಬ ಸತ್ಯ ಕಾರ್ಯನಿರ್ವಹಿಸುತ್ತಿರುವ ವಿವಿಯ ಮಹಿಳಾ ಸಿಬ್ಬಂದಿಗೆ ಅರ್ಥವಾಗಿದೆ.
ಮಹಿಳಾ ದೌರ್ಜನ್ಯ ಎಸಗಿದ ಆರೋಪ ಹೊತ್ತು, ಬೇರೆ ಇಲಾಖೆಗೆ ನಿಯೋಜನೆಗೊಂಡಿದ್ದ ವಿವಿಯ ಪ್ರಾಧ್ಯಾಪಕರೊಬ್ಬರು ಇತ್ತೀಚೆಗೆ ಮಾತೃ ಇಲಾಖೆಗೆ ಬಂದಿದ್ದಾರೆ. ಈ ಕ್ರಿಯೆಯನ್ನು ವಿವಿಯ ಸಿಂಡಿಕೇಟ್ ಸದಸ್ಯರೊಬ್ಬರು- ‘ಅಯ್ಯೋ, ಇದೆಲ್ಲಾ ಸಾಮಾನ್ಯ. ಇದನ್ನು ದೂರು ಅನ್ನೋಕೆ ಆಗುತ್ತೇನೆ ?’ ಎಂದು ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಗತಿ ವಿವಿಯಲ್ಲಿರುವ ಮಹಿಳಾ ದೌರ್ಜನ್ಯ ದೂರು ಸಮಿತಿಯ ಕಾರ್ಯವೈಖರಿಯ ಮುಂದೆ ಹೊಸ ಪ್ರಶ್ನೆಯನ್ನು ಇಟ್ಟಿದೆ.
ಐದು ವರ್ಷಕ್ಕೆ ೨೫ ದೂರು !: ಎಲ್ಲೆಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೋ, ಅಲ್ಲೆಲ್ಲಾ ಲೈಂಗಿಕ ದೌರ್ಜನ್ಯ ಸಂಬಂಧಿ ದೂರುಗಳನ್ನು ಆಲಿಸುವ ವ್ಯವಸ್ಥೆ ಇರಲೇಬೇಕೆಂದು ಸುಪ್ರೀಕೋರ್ಟ್ ಆದೇಶ ನೀಡಿದೆಯಲ್ಲದೆ, ಈ ಸಂಬಂಧ ತಾನೇ ಒಂದಿಷ್ಟು ಮಾರ್ಗಸೂಚಿ ಅಂಶಗಳನ್ನೂ ನೀಡಿದೆ.
ಹಾಗಾಗಿ ಮೈಸೂರು ವಿವಿ ಕೂಡ ೨೦೦೫ರಲ್ಲಿ ಮಹಿಳಾ ದೌರ್ಜನ್ಯ ದೂರು ಸಮಿತಿಯನ್ನು ರಚಿಸಿತು. ಇದರ ಮೊದಲ ಅಧ್ಯಕ್ಷೆಯಾಗಿ ಜವಾಬ್ದಾರಿ ಹೊತ್ತ ಚ. ಸರ್ವಮಂಗಳ ೨೦೦೯ರವರೆಗೆ ಕಾರ್ಯನಿರ್ವಹಿಸಿದರು. ಅವರ ಅವಧಿಯಲ್ಲಿ ಸಮಿತಿಗೆ ೧೮ ದೂರುಗಳು ಬಂದವು. ಕಳೆದ ಒಂದು ವರ್ಷದಿಂದ ಶಿಕ್ಷಣ ಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಕೆ. ಯಶೋದರ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿ ದ್ದಾರೆ. ಒಟ್ಟಾರೆ ಸಮಿತಿ ಇಲ್ಲಿಯವರೆಗೆ ೨೫ ದೂರುಗಳನ್ನು ಸ್ವೀಕರಿಸಿ, ಪ್ರಾಮಾಣಿಕವಾದ ದೂರುಗಳ ಕುರಿತು ವಿಚಾರಣೆ ನಡೆಸಿದೆ. ವಿವಿ ನೀಡುವ ಈ ಅಂಕಿ-ಅಂಶಗಳನ್ನು ಗಮನಿಸಿದರೆ, ವಿವಿಯಲ್ಲಿ ನಡೆದಿರುವ ಮಹಿಳಾ ದೌರ್ಜನ್ಯ ಪ್ರಕರಣಗಳು ವರ್ಷಕ್ಕೆ ಐದಷ್ಟೆ !
ಹಲ್ಲಿಲ್ಲದ ಸಮಿತಿ ಬಗ್ಗೆ ಯೂ ನಿರ್ಲಕ್ಷ್ಯ: ‘ನ್ಯಾಯಾಲಯದ ಮಾರ್ಗಸೂಚಿ ಪ್ರಕಾರ ದೌರ್ಜನ್ಯವನ್ನು ಪರಿಗಣಿಸುವುದಾರೆ, ವಿವಿ ವ್ಯಾಪ್ತಿಯಲ್ಲಿ ನಿತ್ಯವೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ಆದರೆ, ಯಾರೂ ದೂರು ನೀಡುವುದಿಲ್ಲ. ಮಹಿಳಾ ದೌರ್ಜನ್ಯ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂಬುದರ ಬಗ್ಗೆ ಪ್ರಚಾರದ ಕೊರತೆ, ಯಾವುದೆಲ್ಲಾ ದೌರ್ಜನ್ಯ ಎಂದು ಮಹಿಳೆಯರಿಗೆ ಇನ್ನೂ ಅರಿವು ಇಲ್ಲದಿರುವುದು, ದೂರು ನೀಡಿದರೂ ಪ್ರಯೋಜನವಾಗುವುದಿಲ್ಲ ಎಂಬುದೇ ಇದಕ್ಕೆ ಕಾರಣ’ ಎನ್ನುತ್ತಾರೆ ಸಮಿತಿಯ ಹಿಂದಿನ ಅಧ್ಯಕ್ಷೆ ಚ. ಸರ್ವಮಂಗಳ.
‘ಹಾಗೆ ನೋಡಿದರೆ, ಮಹಿಳಾ ದೌರ್ಜನ್ಯ ದೂರು ಸಮಿತಿಗೆ ಹಲ್ಲು -ಬಾಲ ಎರಡೂ ಇಲ್ಲ. ದೂರು ಆಲಿಸುವುದು, ಅದರಲ್ಲಿ ಎಳ್ಳಷ್ಟಾದರೂ ಸತ್ಯಾಂಶ ಇದೆ ಎಂದಾದರೆ, ವಿಚಾರಣೆ ನಡೆಸಿ ವರದಿ ನೀಡುವುದಷ್ಟೇ ಸಮಿತಿಯ ಕೆಲಸ. ವಿಚಾರಣೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ವಿವಿಯ ಆಡಳಿತಕ್ಕೆ ಬಿಟ್ಟ ವಿಚಾರ’ ಎಂದು ವಿಷಾದದಿಂದಲೇ ಹೇಳುತ್ತಾರೆ.
‘ಸಮಿತಿ ಸ್ವೀಕರಿಸಿರುವ ೨೫ ದೂರುಗಳ ಪೈಕಿ, ಮೂರ‍್ನಾಲ್ಕು ಪ್ರಕರಣಗಳಲ್ಲಿ ಯಾವುದೇ ಹುರುಳು ಇರಲಿಲ್ಲ. ತೇಜೋವಧೆ ಮಾಡುವ ದೃಷ್ಟಿಯಿಂದ ನೀಡಲಾಗಿತ್ತು. ಉಳಿದ ದೂರುಗಳಲ್ಲಿ ಸತ್ಯಾಂಶ ಇತ್ತು. ತಪ್ಪಿತಸ್ಥರ ಪೈಕಿ ವಿವಿ ಕೆಲವರಿಗೆ ಬುದ್ಧಿಮಾತು ಹೇಳಿದೆಯಂತೆ. ಇನ್ನೂ ಕೆಲವರಿಗೆ ವಾಗ್ದಾಂಡನೆ ವಿಧಿಸಿದೆಯಂತೆ. ತಾನು ಕೈಗೊಂಡಿರುವ ಕ್ರಮಗಳ ಬಗ್ಗೆ ಯೂ ವಿಶ್ವವಿದ್ಯಾನಿಲಯ ದೂರು ಸಮಿತಿಗೆ ಮಾಹಿತಿ ನೀಡುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಹೀಗಿದ್ದರೂ ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯಗಳ ಕುರಿತು ಸಮಿತಿಗೆ ದೂರು ನೀಡುವುದನ್ನು ನಿಲ್ಲಿಸಬಾರದು. ಕೊರತೆಗಳ ನಡುವೆಯೂ ಪರಿಸ್ಥಿತಿಯನ್ನು ಸುಧಾರಿಸಬೇಕಿದೆ ಎನ್ನುತ್ತಾರೆ ವಿವಿಯ ವಿವೇಕಿಗಳು.

ಪ್ರತಿಭಟನಾಕಾರರಿಗೆ ಹರ್ಷಗುಪ್ತಾ ಮನವಿ


ವಿಕ ಸುದ್ದಿಲೋಕ ಮೈಸೂರು
‘ಜಿಲ್ಲಾಡಳಿತ ಬಗೆಹರಿಸಬಹುದಾದ  ಎಲ್ಲ  ಸಮಸ್ಯೆಗಳ ಕುರಿತು ಗಮನಸೆಳೆಯಲು  ಪ್ರತಿಭಟನೆ, ಧರಣಿ ನಡೆಸುವುದಷ್ಟೇ  ಮಾರ್ಗವಲ್ಲ. ಅದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ಗಳೊಂದಿಗೆ ಚರ್ಚೆಗೆ ಬನ್ನಿ. ನ್ಯಾಯ ಸಮ್ಮತವಾದ ಎಲ್ಲ  ಸಮಸ್ಯೆ ಗಳಿಗೆ  ಜಿಲ್ಲಾಧಿಕಾರಿ ಕಚೇರಿ ಆ ಹಂತದಲ್ಲಿಯೇ  ಪರಿಹಾರ  ದೊರಕಿಸಿಕೊಡಲು ಯತ್ನಿಸುತ್ತದೆ. ನೀವು ನಮ್ಮೊಂದಿಗೆ ಸಹಕರಿಸಿ... !’
ಇದು ಜಿಲ್ಲಾಧಿಕಾರಿ ಹರ್ಷ ಗುಪ್ತಾ ಅವರು ಜಿಲ್ಲೆಯ ನಾಗರಿಕರಿಗೆ ಮಾಡಿಕೊಂಡಿರುವ ಮನವಿ.  ಭಾನುವಾರ ವಿಜಯ ಕರ್ನಾಟಕ ಮೈಸೂರು ಆವೃತ್ತಿಯಲ್ಲಿ  ನಡೆದ  ‘ಫೋನ್ ಇನ್ ಕಾರ್ಯಕ್ರಮ’ದಲ್ಲಿ ಭಾಗವಹಿಸಿದ್ದ ಅವರು, ‘ಜಿಲ್ಲಾಧಿಕಾರಿ ಕಚೇರಿ ಜನರ ಕಚೇರಿ. ಇದು  ಜಿಲ್ಲಾಡಳಿತದ  ಮುಖ. ಈ ಕಚೇರಿಯಿಂದ  ತಮಗೆ  ಪರಿಹಾರ ದೊರಕ ಬಲ್ಲದು ಎಂದು ಬಹಳಷ್ಟು ಜನ ಈಗಲೂ ನಂಬಿದ್ದಾರೆ. ಅದನ್ನು ಉಳಿಸಿಕೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.
ಅಧಿಕಾರ ವಹಿಸಿಕೊಂಡ ತಕ್ಷಣ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಜಿಲ್ಲೆಯ ಗ್ರಾಮೀಣ ಹಾಗೂ ನಗರ  ಬದುಕಿನ ಕಷ್ಟ-ಸುಖಗಳಿಗೆ ಕಿವಿಕೊಟ್ಟಿರುವ  ಹರ್ಷಗುಪ್ತಾ ಅವರಿಗೆ, ಮೈಸೂರು ಜಿಲ್ಲೆಯ ಸಮಸ್ಯೆ-ಸವಾಲು ಹಾಗೂ ಸಾಮರ್ಥ್ಯಗಳು ಗೊತ್ತಾಗಿದೆ.  ಜತೆಗೆ ಜಿಲ್ಲಾಧಿಕಾರಿ ಕಚೇರಿಯ ಮಿತಿಯೂ !
‘ನಮ್ಮ  ಕಚೇರಿ ಮುಂದೆ ನಿತ್ಯವೂ ೨-೩ ಪ್ರತಿಭಟನೆ ನಡೆಯು ತ್ತಲೇ ಇರುತ್ತದೆ. ಸಾಂಕೇತಿಕವಾಗಿ ಪ್ರತಿಭಟನೆ ನಡೆಸುವುದು ಸರಿ, ಆದರೆ, ಎಲ್ಲದಕ್ಕೂ ಅದೇ ಹಾದಿ ತುಳಿಯುವುದು ಸರಿಯಲ್ಲ. ರಾಜ್ಯ, ಕೇಂದ್ರ ಸರಕಾರಕ್ಕೆ ಸಂಬಂಧಿಸಿದ್ದು, ಒಮ್ಮೊಮ್ಮೆ  ಜಾಗತಿಕ ವಿಷಯಗಳನ್ನು ಮುಂದಿಟ್ಟುಕೊಂಡು ಯಾವುದಾದರೂ ಸಂಘಟನೆ, ವ್ಯಕ್ತಿಗಳು ಪ್ರತಿಭಟನೆ ನಡೆಸುತ್ತಲೇ ಇರುತ್ತಾರೆ. ಇದರಿಂದ ನಮ್ಮ ಕಚೇರಿಗೆ ಅನವಶ್ಯವಾಗಿ ತೊಂದರೆಯಾಗುತ್ತಿದೆ. ಹೀಗೆ  ಸಾಲು- ಸಾಲು ಪ್ರತಿಭಟನೆ ನಡೆಸಿದರೆ, ಜಿಲ್ಲಾಡಳಿತದ ಬಗ್ಗೆ  ಪ್ರತಿಭಟನೆ ನಡೆಸುವವರಿಗೆ ನಂಬಿಕೆಯೂ ಇಲ್ಲ, ವಿಶ್ವಾಸವೂ  ಇಲ್ಲ ಎಂದರ್ಥ.  ತಂದೆ-ತಾಯಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ ಎಂದು, ಮಕ್ಕಳ್ಯಾರೂ  ಅವರ    ಇಮೇಜ್  ಹಾಳು ಮಾಡುವುದಿಲ್ಲ. ಅದೇ ರೀತಿ  ಜಿಲ್ಲಾಧಿಕಾರಿ  ಕಚೇರಿ ಕುರಿತು ಜನಸಾಮಾನ್ಯರಲ್ಲಿರುವ ಕಲ್ಪನೆಯನ್ನು(ಇಮೇಜ್) ಯಾರೂ ಹಾಳು ಮಾಡಬಾರದು.  ಜಿಲ್ಲಾಡಳಿತದ್ದು ನಿಷ್ಪಕ್ಷಪಾತ  ನೀತಿ. ಹಾಗಾಗಿ ನಮ್ಮ ಬಗ್ಗೆ  ನಂಬಿಕೆ ಇಡಬೇಕು’ ಎಂದು ಮನವಿ ಮಾಡಿಕೊಂಡರು.
‘ಪ್ರತಿಭಟನೆಯಲ್ಲಿ  ದುಷ್ಟ ಶಕ್ತಿಗಳು ಲಾಭ ಪಡುವ ಅವಕಾಶ ಇರುತ್ತದೆ. ಕೆಲವರ ಬೇಡಿಕೆ ಸರಿಯಾಗಿಯೇ  ಇರುತ್ತದೆ. ಆದರೆ, ಅದನ್ನು ಇಡುವ ರೀತಿ ಸರಿ ಇರುವುದಿಲ್ಲ’ ಎಂದು ಪ್ರತಿಭಟನಕಾರರಿಗೆ ಕಿವಿಮಾತು ಹೇಳಿದರು.
‘ಕೆಲವು ಮೂಲ ಸಮಸ್ಯೆಗಳು ರಾತ್ರೋರಾತ್ರಿ ಬದಲಾವಣೆ  ಆಗುತ್ತದೆ ಎಂದು ಭಾವಿಸಬೇಡಿ. ತಾಲೂಕು ಕಚೇರಿಗೆ ಅಲೆದಾಟ ತಪ್ಪಿಸುವಂಥ ವಾತಾವರಣ ನಿರ್ಮಿಸುವುದು ಸೇರಿದಂತೆ ಒಂದಿಷ್ಟು ಸುಧಾರಣೆಗೆ ಕಾಲಾವಕಾಶ ಬೇಕು. ನಾನೂ ಒಂದಿಷ್ಟು ಸಿದ್ಧತೆ ಮಾಡಿಕೊಳ್ಳಬೇಕಿದೆ.  ಇದಕ್ಕಾಗಿ ಆರು ತಿಂಗಳು ಸಮಯ ಬೇಕು’ ಎಂದರು. ಯಾವುದಾದರೊಂದು ಒಳ್ಳೆಯ ಕೆಲಸ ಮಾಡಲು ಜನರ ಸಹಕಾರ ಅಗತ್ಯ. ಜನರ ಪಾಲುದಾರಿಕೆ ಇಲ್ಲದೇ ಸುಧಾರಣೆ ಸಾಧ್ಯವಿಲ್ಲ. ಹಾಗಾಗಿ ಜನರೂ ತ್ಯಾಗಕ್ಕೂ ಸಿದ್ಧವಾಗಬೇಕಿದೆ ಎಂದು ನುಡಿದರು.
೬೫೫ ಗಿರಿಜನರಿಗೆ ಅರಣ್ಯ ಹಕ್ಕು
ಜಿಲ್ಲೆಯಲ್ಲಿರುವ ಮೂಲನಿವಾಸಿ ಗಿರಿಜನ ಕುಟುಂಬಗಳಿಗೆ ಅರಣ್ಯ ಹಕ್ಕು ಮಾನ್ಯತೆ ಕಾಯ್ದೆ -೨೦೦೬ರ  ಅನ್ವಯ ಯಾವುದೇ ಸೌಲಭ್ಯವನ್ನು ಜಿಲ್ಲಾಡಳಿತ ಒದಗಿಸಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಹುಣಸೂರು ತಾಲೂಕು ವೀರನಹೊಸಳ್ಳಿ ಪ್ರಕಾಶ್ ಎಂಬುವವರ ಅಹವಾಲು.
‘ಅರಣ್ಯ ಹಕ್ಕಿನ ಅನ್ವಯ ಸೌಲಭ್ಯ ನೀಡಿ ಎಂದು ೪೩೦೦ ಜನ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಎಲ್ಲವನ್ನೂ ಪರಿಶೀಲಿಸಿ- ೬೫೦ ಗಿರಿಜನರಿಗೆ ಅರ್ಹತೆಗೆ ಅನುಸಾರವಾಗಿ ಅರಣ್ಯ ಭೂಮಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಶನಿವಾರ ಇಲ್ಲವೇ ಭಾನುವಾರ ಎಚ್.ಡಿ.ಕೋಟೆ ತಾಲೂಕಿನ ಯಾವುದಾದರ ರೊಂದು ಹಾಡಿಯಲ್ಲಿ ಸಮಾರಂಭ ಮಾಡಿ,ಎಲ್ಲರಿಗೂ ಹಕ್ಕು ಪತ್ರ ನೀಡಲಾಗುವುದು. ರ್ಜಿ ತಿರಸ್ಕೃತಗೊಂಡವರು ತಮ್ಮ ಅರ್ಜಿ ನ್ಯಾಯ ಸಮ್ಮತವಾಗಿದೆ ಎಂದು ಸಾಬೀತು ಪಡಿಸು ವುದು ಸೇರಿದಂತೆ ಯಾವುದೇ ರೀತಿಯ ಆಕ್ಷೇಪ ಸಲ್ಲಿಸಲು ೬೦ ದಿನ ಕಾಲಾವಕಾಶ ನೀಡಲಾಗಿದೆ’ ಎಂದು ತಿಳಿಸಿದರು.

ಈ ವರ್ಷದಿಂದಲೇ ಪಿಜಿ ಕೋರ್ಸ್‌ಗೆ ಸಿಬಿಸಿಎಸ್ ಜಾರಿ

ವಿಕ ಸುದ್ದಿಲೋಕ ಮೈಸೂರು
ಪ್ರಸಕ್ತ  ಶೈಕ್ಷಣಿಕ ವರ್ಷದಿಂದಲೇ (೨೦೧೦-೧೧) ಮೈಸೂರು ವಿಶ್ವವಿದ್ಯಾ ನಿಲಯದ  ಸ್ನಾತಕೋತ್ತರ  ವಿಭಾಗಗಳಲ್ಲಿ ಆಯ್ಕೆ ಮತ್ತು ಮೊತ್ತಾಂಶ ಆಧಾರಿತ  ಪದ್ಧತಿ (ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್-ಸಿಬಿಸಿಎಸ್) ಜಾರಿಗೆ ಬರಲಿದೆ. ಮುಂದಿನ ವರ್ಷದಿಂದ ಪದವಿಗೂ ವಿಸ್ತರಣೆಯಾಗಲಿದೆ.
ವಿದ್ಯಾರ್ಥಿಗಳ ನಿರಂತರ  ಮೌಲ್ಯಮಾಪನಕ್ಕೆ ಅವಕಾಶ ನೀಡುವ ಈ ಪದ್ಧತಿ  ಆಳದಲ್ಲಿ  ಉನ್ನತ ಶಿಕ್ಷಣದ  ಗುಣಮಟ್ಟ ಹೆಚ್ಚಿಸುವ ಹಾಗೂ ಅಂತರ್ ಶಿಸ್ತೀಯ ಅಧ್ಯಯನಕ್ಕೆ ಒತ್ತು ನೀಡುವ ಪ್ರಬಲ ಎಳೆಯನ್ನು ಹೊಂದಿದೆ ಎಂಬುದು ವಿವಿಯ ನಿಲುವು. 
ಕುಲಪತಿ ಪ್ರೊ. ವಿ.ಜಿ.ತಳವಾರ್  ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಶಿಕ್ಷಣ ಮಂಡಳಿ ಸಾಮಾನ್ಯ ಸಭೆ ಹೊಸ ಪದ್ಧತಿಗೆ ಅನುಮೋದನೆ ನೀಡಿತು. ಸಿಬಿಸಿಎಸ್  ಈಗಾಗಲೇ ಕೆಲವು ವಿವಿಗಳಲ್ಲಿ ಜಾರಿಯಲ್ಲಿದೆ. ಹಾಗಾಗಿ ಈ ಪದ್ಧತಿ ಜಾರಿಗೆ ತರುತ್ತಿರುವ ಮೊದಲ ವಿವಿ ಎಂಬ ಅಗ್ಗಳಿಕೆ ಮೈಸೂರು ವಿವಿಗೆ ಸಲ್ಲುವುದಿಲ್ಲ. ಆದರೆ,  ಕಲಿಯುವ ವಿದ್ಯಾರ್ಥಿಯನ್ನು ಕೇಂದ್ರೀಕರಿಸಿ ರೂಪಿಸಿರುವ ಎಲ್‌ಟಿಪಿ(ಲೆಕ್ಚರ‍್ಸ್ -ಟ್ಯುಟೋರಿ ಯಲ್ಸ್ -ಪ್ರಾಕ್ಟಿಕಲ್ಸ್) ಎಂಬ ಹೊಸ ಮಾದರಿಯ ಶೈಕ್ಷಣಿಕ ಅಭ್ಯಾಸದ ಮೂಲಕವೇ ಸಿಬಿಸಿಎಸ್ ಅನುಷ್ಠಾನ ಮಾಡಲು ಹೊರಟಿರುವುದು ಮೈಸೂರು ವಿವಿಯ ಅಗ್ಗಳಿಕೆ. 
‘ಇದು ವಿದ್ಯಾರ್ಥಿ ಸ್ನೇಹಿ ಪದ್ಧತಿ.  ತಾನು ಬಯಸಿದ ವಿಷಯವನ್ನು ಕಲಿಯಲು ಹೇರಳ ಅವಕಾಶಗಳಂಟು. ವಿದ್ಯಾರ್ಥಿ ಆಯ್ದುಕೊಂಡ  ಪ್ರಮುಖ ವಿಷಯಗಳ ಜತೆ, ಬೇರೆ ಶಿಸ್ತಿನ ಒಂದು ವಿಷಯವನ್ನೂ ಕಲಿಯಬಹುದು.  ಅಂತರ್ ಶಿಸ್ತೀಯ ಕಲಿಕೆಯನ್ನು ಪ್ರೋತ್ಸಾಹಿಸುವ ಈ  ಪದ್ಧತಿಯಲ್ಲಿ  ಕಲಿಕೆಗೆ  ಮುಕ್ತ ಅವಕಾಶಗಳಂಟು’ ಎಂದು ಪ್ರೊ. ತಳವಾರ್ ಹೇಳಿದರು.
‘ಈ ಕಲಿಕಾ ಪದ್ಧತಿಯಲ್ಲಿ ವಿದ್ಯಾರ್ಥಿ ಬಯಸಿದ ಎಲ್ಲ ವಿಷಯಗಳನ್ನು ಆಯ್ಕೆ ಮಾಡಬಹುದು ಎಂಬುದು ಸ್ವಾಗ ತಾರ್ಹ. ಆದರೆ, ಪಠ್ಯೇತರ ಚಟುವಟಿಕೆಗಳಿಗೆ ಇಲ್ಲಿ ಸ್ಥಾನವೇ ಇಲ್ಲ. ಇದನ್ನು ಪರಿಗಣಿಸಬೇಕು’ ಎಂದು ದೈಹಿಕ ಶಿಕ್ಷಣ ವಿಭಾಗದ  ನಿರ್ದೇಶಕ  ಡಾ.ಸಿ.ಕೃಷ್ಣ ಸಲಹೆ ನೀಡಿದರು. ಇದನ್ನು ಸ್ವಾಗತಿಸಿದ ಕುಲಪತಿ, ಈ ಬಗ್ಗೆ  ಕೂಲಂಕಷವಾಗಿ ಚರ್ಚೆ ನಡೆಸಿ, ವರದಿ ಸಲ್ಲಿಸಲು ಸಮಿತಿಯನ್ನು ರಚಿಸಿದರು. 
ಸಂಶೋಧನಾ ನಿರ್ದೇಶನಾಲಯ ಸ್ಥಾಪನೆ:  ಪಿಎಚ್.ಡಿಗೆ ಸಂಬಂಧಿಸಿದಂತೆ ಯುಜಿಸಿ ನೀಡಿರುವ ಹೊಸ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ರಚಿಸಿರುವ ‘ಪಿಎಚ್.ಡಿ ರೆಗ್ಯೂಲೇಷನ್ -೨೦೧೦’ಗೆ ಸಭೆ ಅನುಮೋದನೆ ನೀಡಿತು. ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರ ಅಂಕಿತ ಬಿದ್ದ ತಕ್ಷಣ, ಪಿಎಚ್.ಡಿಗೆ ಹೊಸ ನಿಯಮಾವಳಿಗಳು ಜಾರಿಗೆ ಬರಲಿವೆ ಎಂದು ಕುಲಪತಿ ಪ್ರೊ. ತಳವಾರ್ ತಿಳಿಸಿದರು.
ಹಾಲಿ ಜಾರಿಯಲ್ಲಿರುವ ಪಿಎಚ್.ಡಿ -೨೦೦೪ ರೆಗ್ಯೂ ಲೇಷನ್‌ಗಳನ್ನು ಪರಿಷ್ಕರಿಸುವ ಸಂಬಂಧ ಪ್ರೊ. ಸಿ.ಪಿ. ಸಿದ್ದಾಶ್ರಮ ಅಧ್ಯಕ್ಷತೆಯಲ್ಲಿ  ತಜ್ಞರ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಸುದೀರ್ಘ ಕಾಲ ಅಧ್ಯಯನ ನಡೆಸಿ, ನೀಡಿರುವ ವರದಿಗೆ  ಶಿಕ್ಷಣ ಮಂಡಳಿ ಸಭೆ ಸಮ್ಮತಿ ಸೂಚಿಸಿತು.
‘ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ  ಸಂಶೋಧನಾ ನಿರ್ದೇಶನಾಲಯ ವನ್ನು ಸ್ಥಾಪಿಸಲಾಗುವುದು. ಈ ನಿರ್ದೇಶನಾಲಯ ಪೂರ್ಣಾ ವಧಿ ನಿರ್ದೇಶಕರನ್ನು ಹೊಂದಿರುತ್ತದೆ. ಪಿಎಚ್.ಡಿ ನೋಂದಣಿಗೆ ಸಂಬಂಧಿಸಿದಂತೆ  ಎಲ್ಲ ರೀತಿಯ ಕಚೇರಿ ವ್ಯವಹಾರಗಳನ್ನು ಹೊಸ ನಿರ್ದೇಶನಾಲಯ ನಿಭಾಯಿಸು ತ್ತದೆ. ಇದರಿಂದ ಸಂಶೋಧನಾ ವಿದ್ಯಾರ್ಥಿಗಳು ಎರಡು- ಮೂರು ಕಚೇರಿಯ ಅಲೆದಾಡುವುದು ತಪ್ಪುತ್ತದೆ’ ಎಂದು ತಳವಾರ್ ತಿಳಿಸಿದರು.
ಪ್ರತಿ ಕೋರ್ಸಿಗೆ ಶೇ. ೭೫ ಹಾಜರಿ ಬೇಕಿಲ್ಲ: ಇನ್ನು ಮುಂದೆ ಪದವಿ ವಿದ್ಯಾರ್ಥಿಗಳು  ಒಂದು ಸೆಮಿಸ್ಟರ್‌ನಲ್ಲಿ ಸರಾಸರಿ ಶೇ. ೭೫ರಷ್ಟು ಹಾಜರಾತಿ ಹೊಂದಿದ್ದರೆ, ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ. ಈ ಹಿಂದಿನಂತೆ ಸೆಮಿಸ್ಟರ್‌ನ ಪ್ರತಿ ವಿಷಯದಲ್ಲೂ ಶೇ. ೭೫ರಷ್ಟು ಹಾಜರಾತಿ ಹೊಂದಿರಬೇಕು ಎಂಬ ರೆಗ್ಯೂಲೇಷನ್‌ಗೆ  ತಿದ್ದುಪಡಿ ತರಲಾಗಿದೆ.  ವಿವಿಯ ಈ ಪ್ರಸ್ತಾವನೆಗೆ ಶಿಕ್ಷಣ ಮಂಡಳಿ ಸಾಮಾನ್ಯ ಸಭೆ  ಅನುಮೋದನೆ ನೀಡಿತು.
ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ  ಈಗಾಗಲೇ  ಈ ನಿಯಮ ಜಾರಿಯಲ್ಲಿದೆ. ಇನ್ನು ಮುಂದೆ ಪದವಿಗೂ ಈ ನೀತಿಯನ್ನು ಜಾರಿಗೆ ತರುವ ಮೂಲಕ ಏಕರೂಪ ಹಾಜರಾತಿ ನಿಯಮ ಅಳವಡಿಸಿಕೊಳ್ಳಲು ತೀರ್ಮಾನಿಸಲಾಯಿತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ  ಈ ತಿದ್ದುಪಡಿ ಸಮಂಜಸವಾಗಿದೆ ಎಂದು ಸಭೆ ಅಭಿಪ್ರಾಯ ಪಟ್ಟಿತು.

ಹಿರಿಯ ಸಾಹಿತಿ ಶಿಕಾರಿಪುರ ಹರಿಹರೇಶ್ವರ ಇನ್ನಿಲ್ಲ

ಹರಿಹರೇಶ್ವರ ಅವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ದಲ್ಲಿ ೧೯೩೬ರಲ್ಲಿ. ಅಲ್ಲಿಯೇ ಪ್ರಾಥಮಿಕ, ಪ್ರೌಢಶಿಕ್ಷಣ. ದಾವಣಗೆರೆ ಯಲ್ಲಿ ಕಾಲೇಜು.ಬಳಿಕ ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉನ್ನತ ಅಧ್ಯಯನ. ಬಳಿಕ ತಮಿಳುನಾಡಿನ ನೈವೇಲಿ ಯಲ್ಲಿ ಎಂಜಿನಿಯರ್ ಆಗಿ ವೃತ್ತಿ ಬದುಕು ಆರಂಭ. ಬೆಂಗಳೂರಿನಲ್ಲಿ ಕೆಲ ವರ್ಷ ಉಪನ್ಯಾಸಕರಾಗಿ ಸೇವೆ. ಇದೇ ವೇಳೆ ಅವರಲ್ಲಿ ಮೊಳೆತದ್ದು  ಕನ್ನಡದ ಪ್ರೀತಿ. ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಬೆಂಗಳೂರಿನ ಛಾಯಾ ರವಿ ಕಲಾವಿದರೊಂದಿಗೆ ಗುರುತಿಸಿಕೊಂಡರು. ಬೆಂಗಳೂರು ಆಕಾಶವಾಣಿಯ ಹಲವು ನಾಟಕಗಳಲ್ಲಿ  ಪಾತ್ರ ನಿರ್ವಹಣೆ.ನಾಗಲಕ್ಷ್ಮಿ ಅವರೊಂದಿಗೆ ವಿವಾಹವಾದ ನಂತರ ಹರಿಹೇಶ್ವರ ಅವರ ಕನ್ನಡ ಪ್ರೇಮದ ಧ್ಯೇಯಕ್ಕೆ ಇಮ್ಮಡಿ ಶಕ್ತಿ.
೭೦-೮೦ರ ದಶಕದಲ್ಲಿ ಉದ್ಯೋಗ ಅರಸಿ ಅವರು ಹೊರಟದ್ದು ಮೊದಲು ಇರಾನ್‌ಗೆ. ಅಲ್ಲಿಂದ ಹಾರಿದ್ದು ಅಮೆರಿಕಕ್ಕೆ. ಒಂದೆರಡು ವರ್ಷದಲ್ಲಿ ಅವರಿಗೆ ಅಮೆರಿಕಾವೇ ಕನ್ನಡದ ಮನೆಯಾಯಿತು. ಕನ್ನಡದ ಕೆಲಸ ನಿರಂತರ. ವೃತ್ತಿಯ ಜತೆ ಜತೆಯಲ್ಲಿ ಪ್ರವೃತ್ತಿಗೂ ಮಹತ್ವ ನೀಡುತ್ತಾ ಹೋದರು.
ಹರಿಹರೇಶ್ವರರ  ‘ಕನ್ನಡ ಉಳಿಸಿ ಬೆಳಸುವ ಬಗೆ ’ ಈ ನಿಟ್ಟಿನಲ್ಲಿ ಕನ್ನಡಿಗರನ್ನು ಜಾಗೃತಿಗೊಳಿಸುವಲ್ಲಿ ಸಫಲ. ಅಮೆರಿಕನ್ನಡಿಗರಲ್ಲಿ ಕನ್ನಡ ಪುಸ್ತಕಗಳನ್ನು ಕೊಂಡು ಓದುವುದು, ಕನ್ನಡಿಗರಿರುವಾಗ ಅವರ ಜತೆ ಕನ್ನಡದಲ್ಲೇ ಮಾತನಾಡುವುದು, ಅಮೆರಿಕನ್ನಡ ಪತ್ರಿಕೆಯ ಮೂಲಕ ಕನ್ನಡ ಪಾಠ ಮಾಡುವುದು, ಕನ್ನಡ ಶಾಲೆ ತೆರೆಯುವುದು, ಕನ್ನಡದಲ್ಲಿ ಕಥೆ, ಕವನ ಬರೆಯಲು ಉತ್ತೇಜಿಸುವುದು ಅವರ ಮುಖ್ಯ ಧ್ಯೇಯ.
ಬಹುತೇಕರಿಗೆ ಡಾಲರ್ ಮುಂದೆ ಕನ್ನಡ ಕಾಣುವುದಿಲ್ಲ. ಆದರೆ ವಿದೇಶದಲ್ಲಿದ್ದೂ ಕನ್ನಡವನ್ನೇ ಉಸಿರನ್ನಾಗಿಸಿಕೊಂಡ ಹರಿಹರೇಶ್ವರರು ಕನ್ನಡಕ್ಕಾಗಿ ಶ್ರಮಿಸಿದ್ದಾರೆ. ‘ಕರ್ನಾಟಕದಿಂದ ಅಮೆರಿಕಕ್ಕೆ ಹೋದವರೆ ಲ್ಲರೂ ನಯಾಗರ, ಸ್ಟ್ಯಾಚು ಆಫ್ ಲಿಬರ್ಟಿ, ವಾಷಿಂಗ್‌ಟನ್ ಡಿಸಿ., ಕ್ಯಾಲಿಫೋರ್ನಿಯಾ ನೋಡದೇ ಬರಬಹುದು.ಹರಿಹರೇಶ್ವರರನ್ನು ಭೇಟಿ ಯಾಗದೇ ಬರುವುದಿಲ್ಲ’ ಎನ್ನುವುದು ಅವರ ಪ್ರೀತಿಯನ್ನು ಅನುಭವಿಸಿ ಬಂದವರು ಹೇಳಿದ ಮಾತು.ಅಷ್ಟರ ಮಟ್ಟಿಗೆ ಕನ್ನಡದ ದಿಗ್ಗಜ ಸಾಹಿತಿ ಗಳು. ಚಲನಚಿತ್ರ ನಿರ್ದೇಶಕರು. ನಾಟಕಕಾರರು. ಪತ್ರಕರ್ತರು... ಹೀಗೆ ಎಲ್ಲಾ ಕ್ಷೇತ್ರದವರೊಂದಿಗೆ ಅವರ ಒಡನಾಟ.ರಸ್ತೆ, ಸೇತುವೆಯ ನಿರ್ಮಾಣಕ್ಕೆ ಅಚ್ಚುಕಟ್ಟಾದ ವಿನ್ಯಾಸಗಳನ್ನು ರೂಪಿಸುತ್ತಿದ್ದ ಹರಿಹರೇಶ್ವರ ಅಷ್ಟೇ ದೊಡ್ಡ ಪ್ರೀತಿ ಸೌಧವನ್ನು ಕಟ್ಟಿಕೊಂಡಿದ್ದರು.
ಅಕ್ಕ ಯಶಸ್ಸಿನ ರೂವಾರಿ
೨೦೦೦ರಲ್ಲಿ ನಡೆದ ಮೊದಲನೇ ಅಕ್ಕ ಸಮ್ಮೇಳನದ ಹಿಂದೆ ನಿಂತು ಯಶಸ್ವಿಯಾಗಿ ದುಡಿದವರು ಇದೇ ಹರಿಹರೇಶ್ವರ. ಅಕ್ಕ ಸಮ್ಮೇಳನದ ಸ್ಮರಣ ಸಂಚಿಕೆ  ಸಂಪಾದಕರಾಗಿದ್ದರು. ಅಮೆರಿಕನ್ನಡ ಎನ್ನುವ ಪತ್ರಿಕೆ ಸಂಪಾದಕರಾಗಿ ಕಕ್ಕುಲತೆಯಿಂದಲೇ ಅದನ್ನು ಹೊರತರುತ್ತಿದ್ದರು. ಅನಿವಾಸಿ ಕನ್ನಡಿಗನ ಸಾಧನೆ
ಪರಿಗಣಿಸಿ ೧೯೯೯ರಲ್ಲಿ ಕರ್ನಾಟಕ ಸರಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ೨೦ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಇವರ ‘ಮಾತಿನ ಚಾವಡಿ’ ಇತ್ತೀಚಿಗಷ್ಟೇ ಲೋಕಾರ್ಪಣೆಗೊಂಡಿತ್ತು.
ಏಳೆಂಟು ವರ್ಷದ ಹಿಂದೆ ಸ್ವದೇಶಕ್ಕೆ ವಾಪಸಾದ ಅವರು, ನಗರದ ಸರಸ್ವತಿಪುರಂನಲ್ಲಿ ಪತ್ನಿಯೊಂದಿಗೆ ನೆಲೆಸಿದ್ದರು. ನಗರದಲ್ಲಿ ನಡೆಯುವ ಬಹುತೇಕ ಸಾಹಿತ್ಯಕ ಕಾರ‍್ಯಕ್ರಮಗಳಿಗೆ ತಪ್ಪದೇ ಹಾಜರಾಗುತ್ತಿದ್ದರಲ್ಲದೆ, ಕನ್ನಡದ ಕಾರ್ಯಕ್ರಮಗಳಿಗೆ ಉದಾರ ನೆರವಿನ ಹಸ್ತವನ್ನೂ ಚಾಚುತ್ತಿದ್ದರು. ರಂಗಭೂಮಿ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನೃಪತುಂಗ ಕನ್ನಡ ಶಾಲೆಯ ಧರ್ಮದರ್ಶಿಯೂ ಹೌದು.

ಇಳೆಗೆ ಬಿದ್ದ ಮಳೆ, ಕೃಷಿ ಚಟುವಟಿಕೆಗೆ ಕಳೆ !

ನವೀನ್ ಮಂಡ್ಯ
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಗಳು ಆರಂಭಗೊಂಡಿವೆ. ಮಳೆ ಎಟುಕಿಸಿಕೊಂಡಿರುವುದ ರಿಂದ ಭತ್ತದ ಬೆಳೆಗೆ ಪೂರಕವಾಗಿ ಭೂಮಿಯನ್ನು ಹದ ಗೊಳಿಸಿ, ಸಸಿ ಮಡಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.
ಸಾಮಾನ್ಯವಾಗಿ ಜಿಲ್ಲೆಯಲ್ಲಿ ಜುಲೈ ೩ನೇ ವಾರದಲ್ಲಿ ಮುಂಗಾರು ಕೃಷಿ ಚಟುವಟಿಕೆ ಆರಂಭಗೊಳ್ಳುವುದು ವಾಡಿಕೆ. ಹಾಗೆಯೇ ಈ ಬಾರಿಯೂ ನಡೆದಿದೆ. ಜತೆಗೆ, ಜೂನ್ ತಿಂಗಳು ಮತ್ತು ಜುಲೈನ ಮೊದಲೆರಡು ವಾರಗಳಲ್ಲಿ ಉತ್ತಮ ಮಳೆಯಾಗಿರುವುದು ರೈತರಿಗೆ ಸಹಕಾರಿಯಾಗಿದೆ. ಭೂಮಿ ಸಿದ್ಧತೆ, ಬಿತ್ತನೆ, ನಾಟಿ, ಅಂತರ ಬೇಸಾಯ ಹಾಗೂ ಕಬ್ಬಿನ ಕಟಾವು ಕಾರ್ಯ ಮುಂದು ವರಿದಿದೆ. ಖುಷ್ಕಿ ಪ್ರದೇಶದಲ್ಲಿ ರಾಗಿ ಬೆಳೆ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ಕಬ್ಬು ಬೆಳೆಯು ವಿವಿಧ ಹಂತದಲ್ಲಿದ್ದು, ಮಧ್ಯಂತರ ಬೇಸಾಯ ನಡೆಯುತ್ತಿದೆ. ಕೂಳೆ ಬೆಳೆ ನಿರ್ವಹಣೆಯೂ ಸಾಗಿದೆ.
ಎಣ್ಣೆಕಾಳು ಬೆಳೆಗಳಲ್ಲಿ ನೆಲಗಡಲೆ, ಹುಚ್ಚೆಳ್ಳು ಮತ್ತು ಹರಳು ಬೆಳೆಗಳ ಬಿತ್ತನೆ ಮುಂದುವರಿದಿದ್ದು, ಮುಂದುವರಿದ ಬೆಳೆಗಳು ವಿವಿಧ ಬೆಳವಣಿಗೆ ಹಂತದಲ್ಲಿವೆ. ಹಾಲಿ ಇರುವ ಬೆಳೆಗಳು ಉತ್ತಮ ಸ್ಥಿತಿಯಲ್ಲಿವೆ. ದ್ವಿದಳ ಬೆಳೆಗಳಾದ ಅಲಸಂದೆ, ಹೆಸರು, ಉದ್ದು ಬೆಳೆಗಳ ಕಾಯಿ ಬಲಿತು ಅಲ್ಲಲ್ಲಿ ಕಟಾವು ಆರಂಭಗೊಂಡಿದೆ.
ಜಿಲ್ಲೆಯಲ್ಲಿ ೨,೧೧,೩೦೦ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಬೆಳೆ ಬೆಳೆಯಲು ಕೃಷಿ ಇಲಾಖೆ ಗುರಿ ಹಾಕಿಕೊಂಡು, ಆ ನಿಟ್ಟಿನಲ್ಲಿ ರೈತರನ್ನು ಪ್ರೇರೇಪಿಸುತ್ತಿದೆ. ಇದಕ್ಕೆ ಪೂರಕವಾಗಿ ಜುಲೈ ೨ನೇ ವಾರಾಂತ್ಯಕ್ಕೆ ಈಗಾಗಲೇ ಶೇ೧೩.೨ರಷ್ಟು ಅಂದರೆ ೨೭,೮೩೩ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, ಜೋಳ ರಾಗಿ, ಎಳ್ಳು, ತೊಗರಿ ಸೇರಿದಂತೆ ದ್ವಿದಳ ಧಾನ್ಯಗಳ ಬಿತ್ತನೆ, ನಾಟಿ ಕಾರ್ಯ ಮುಗಿದಿದೆ.
ಪ್ರಮುಖವಾಗಿ ೨೫೦೦೦ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯುವ ಗುರಿ ಹೊಂದಿದ್ದು, ೧೧,೩೬೮ ಹೆಕ್ಟೇರ್‌ನಲ್ಲಿ ಈಗಾಗಲೇ ಕಬ್ಬಿನ ಬಿತ್ತನೆ ಕಾರ್ಯ ನಡೆ ದಿದೆ. ಈ ಪೈಕಿ ೫೬೬೦ ಹೆಕ್ಟೇರ್ ಪ್ರದೇಶದಲ್ಲಿ ತನಿ ಕಬ್ಬು ಹಾಗೂ ೫೭೦೮ ಹೆಕ್ಟೇರ್‌ನಲ್ಲಿ ಕೂಳೆ ಕಬ್ಬು ಇದೆ.
ಎಳ್ಳು ಬಿತ್ತನೆಯಲ್ಲಿ ಗುರಿ(೪೫೦೦ ಹೆಕ್ಟೇರ್) ಮೀರಿದ ಸಾಧನೆ(೫೬೬೨ ಹೆಕ್ಟೇರ್) ಮಾಡಲಾಗಿದೆ. ಏಕದಳ, ದ್ವಿದಳ ಮತ್ತು ಎಣ್ಣೆಕಾಳುಗಳ ಬೆಳೆಯ ಬಿತ್ತನೆ ಕಾರ್ಯವೂ ಸಾಕಷ್ಟು ಪ್ರಗತಿ ಕಂಡು ಬಂದಿದೆ. ದ್ವಿದಳ ಧಾನ್ಯದ ಪೈಕಿ ೨೩೧೫೦ ಹೆಕ್ಟೇರ್ ಗುರಿಯ ಪೈಕಿ ೯೫೭೬ ಹೆಕ್ಟೇರ್‌ನಲ್ಲಿ ಹಾಗೂ ಎಣ್ಣೆಕಾಳುಗಳ ಬೆಳೆಯಲ್ಲಿ ೧೦೮೦೦ ಹೆಕ್ಟೇರ್‌ನಲ್ಲಿ ೬೬೮೩ ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ.
ಏಕದಳ ಧಾನ್ಯಗಳಲ್ಲಿ ಪ್ರಮುಖವಾಗಿ ಭತ್ತಕ್ಕೆ ಆದ್ಯತೆ ನೀಡಲಾಗಿದೆ. ಈ ಬಾರಿ ಮುಂಗಾರು ಹಂಗಾಮಿನಲ್ಲಿ ಒಟ್ಟು ೭೦,೦೦೦ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಾಗಿದೆ. ಈಗ ತಾನೇ ಭೂಮಿಯನ್ನು ಹದಗೊಳಿಸಿ, ಒಟ್ಲುಪಾತಿ(ಸಸಿಮಡಿ) ಸಿದ್ಧಪಡಿಸುವ ಕಾರ್ಯ ಸಾಗಿದೆ. ಇದಕ್ಕೆ ಪೂರಕವಾಗಿ ವಿವಿಧ ತಳಿಯ ಬಿತ್ತನೆ ಭತ್ತವನ್ನು ಕೃಷಿ ಇಲಾಖೆ ವಿತರಿಸುತ್ತಿದೆ.

ಆಸ್ಪತ್ರೆಗಳ ಕಥೆ-ವ್ಯಥೆ

ಜೆ.ಶಿವಣ್ಣ ಮೈಸೂರು
ಸರಕಾರಿ ಆಸ್ಪತ್ರೆಗಳೆಂದರೆ ಇವತ್ತಿಗೂ ಜನ ಜನ ಮೂಗು ಮುರಿಯುತ್ತಾರೆ. ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆ, ಅನೈರ್ಮಲ್ಯ, ಮೂಲ ಸೌಲಭ್ಯಗಳ ಕೊರತೆ, ವೈದ್ಯ-ಸಿಬ್ಬಂದಿಗಳ ಅವಜ್ಞೆ, ಸುಲಿಗೆ... ಇತ್ಯಾದಿಗಳು ಇದಕ್ಕೆಲ್ಲಾ ಪ್ರಮುಖ ಕಾರಣ.
ಇದರಿಂದ ಬಡವರಿಗೆ ಮಾತ್ರ ಸರಕಾರಿ ಆಸ್ಪತ್ರೆ ಮೀಸಲು ಎನ್ನುವ ಸ್ಥಿತಿಯಾಗಿದೆ. ಅನಕ್ಷರಸ್ಥರು, ಪ್ರಶ್ನಿಸುವ, ತಮ್ಮ ಹಕ್ಕನ್ನು ಪ್ರತಿಪಾದಿ ಸುವ ಕಸುವು ಕಳೆದುಕೊಂಡವರಷ್ಟೇ ಇದರ ಫಲಾನುಭವಿಗಳು. ಇದನ್ನೇ ಬಂಡವಾಳ ಮಾಡಿಕೊಂಡು ವೈದ್ಯ -ಸಿಬ್ಬಂದಿ ಸೇವೆ ಬಿಟ್ಟು  ಸುಲಿಗೆ ಆರಂಭಿಸುತ್ತಾರೆ. ಅರೋಗ್ಯ ಇಲಾಖೆಯಿಂದ ಆರಂಭವಾಗಿ ಆಸ್ಪತ್ರೆವರೆಗೂ ಭ್ರಷ್ಟಾಚಾರದ ಕಬಂಧಬಾಹು ವ್ಯಾಪಿಸಿದೆ.
ಹತ್ತು ಹಲವು ಆರೋಗ್ಯ ಯೋಜನೆಗಳ ಮೂಲಕ ಎಷ್ಟೇ ಪ್ರಮಾಣದಲ್ಲಿ ಹಣ ಪೂರೈಸಿದರೂ ಭ್ರಷ್ಟ ಕೈಗಳ ಕೈಚಳಕದಿಂದ ನುಂಗಣ್ಣರ ಜೇಬು ಸೇರುತ್ತಿದೆ. ಜೀವ ರಕ್ಷಕ ಔಷಧಗಳು, ಚುಚ್ಚುಮದ್ದು, ವೈದ್ಯಕೀಯ ಸೌಲಭ್ಯಗಳಲ್ಲೂ ವಂಚನೆ ನಡೆಸುವ ದುರುಳರು ಹಿಂದೆಯೂ ಇದ್ದರು, ಇವತ್ತೂ ಇದ್ದಾರೆ. ಯಾವುದೇ ಸರಕಾರಿ ಯೋಜನೆಗಳ ಲಾಭ ಮೊದಲು ತಲುಪುವುದು ಭ್ರಷ್ಟರ ಕೈಗೇ. ಹಾಗಾಗಿಯೇ  ಇಂದಿಗೂ ಗ್ರಾಮೀಣ ಭಾಗಗಳು ಆರೋಗ್ಯ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಡೇಂಗ್ಯು, ಚಿಕುನ್‌ಗುನ್ಯಾ, ಮಲೇರಿಯಾ, ಹಂದಿಜ್ವರ ಮೊದಲಾದ ಮಾರಕ ಕಾಯಿಲೆಗಳು ಇವತ್ತಿಗೂ ದಿಢೀರ್ ಕಾಣಿಸಿಕೊಂಡು ದಂಗು ಬಡಿಸುತ್ತವೆ.
ಇದರಿಂದ ಗ್ರಾಮೀಣ ಜನರಿಗೆ ಅರೋಗ್ಯ ಸೇವೆ ಒದಗಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಆರ್‌ಎಚ್‌ಎಂ) ಹೊರತಾ ಗಿಲ್ಲ. ನುಂಗಿ ನೊಣೆಯುವವರಿಗೆ ಹುಂಡಿ ಮುಂದಿಟ್ಟಂತಾಗಿದೆ.
ಎನ್‌ಆರ್‌ಎಚ್‌ಎಂ ಅಡಿಯಲ್ಲಿ ಮೈಸೂರು ಜಿಲ್ಲೆಯ ೭ ತಾಲೂಕು ಗಳ ಗ್ರಾಮೀಣ ಭಾಗದ ೨೫ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಇದಕ್ಕಾಗಿ ಲಕ್ಷಾಂತರ ರೂ. ವ್ಯಯಿಸಲಾಗಿದೆ. ಇಲ್ಲಿ ೨೪ ಗಂಟೆಯೂ ಆರೋಗ್ಯ ಸೇವೆ ಲಭ್ಯ. ಆದರೆ ೨೪ ಗಂಟೆ ಆಸ್ಪತ್ರೆ ಎನ್ನುವ ಲೇಬಲ್ ಹಚ್ಚಲಾಗಿದೆಯೇ ಹೊರತು ಸರಕಾರಿ ಆಸ್ಪತ್ರೆಗಳೆಂದರೆ ಕೊರತೆಗಳ ಕೂಪ ಎನ್ನುವ ಅಪವಾದದಿಂದ ಮುಕ್ತ ವಾಗಿಲ್ಲ. ಇಲ್ಲಿ ಸೌಲಭ್ಯಗಳು ಸಿಗುತ್ತಿವೆಯೇ ? ಇಲ್ಲ. ಇಲ್ಲವೇ ಇಲ್ಲ. ಅದಕ್ಕೆ ಅನೇಕ ಆಸ್ಪತ್ರೆಗಳನ್ನು ಉದಾಹರಣೆಯಾಗಿ ನೀಡಬಹುದು.
ತಾಜಾ ಉದಾಹರಣೆ ಎಂದರೆ ಎಚ್.ಡಿ.ಕೋಟೆಯ ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರ. ಕೇವಲ ೨೪ಗಿ೭ ಎಂದು ನಮೂದಿಸಿದಷ್ಟೇ ಹೊಸತು, ಅದೇ ಹಳತು ವ್ಯವಸ್ಥೆ . ಜಿ.ಪಂ. ಉಪಾಧ್ಯಕ್ಷೆ ನಂದಿನಿ ಚಂದ್ರಶೇಖರ್ ಅಣ್ಣೂರು ಕೇಂದ್ರಕ್ಕೆ ೧೭.೨.೧೦ ರಂದು ದಿಢೀರ್ ಭೇಟಿ ನೀಡಿದ್ದಾಗ  ೨೪ಗಿ೭ ಆಸ್ಪತ್ರೆ ಬಣ್ಣ ಬಯಲಾಯಿತು. ವೈದ್ಯರಿಲ್ಲ. ಔಷಧ ಇಲ್ಲ. ಕೇಳಿದರೆ ಹೊರಗಿನಿಂದ  ತನ್ನಿ ಎನ್ನುತ್ತಾರೆ. ಆದರೆ ಜನಪ್ರತಿನಿಧಿಗಳು ಬಂದಾಗ ಎಲ್ಲಾ ಔಷಧಗಳು ಇವೆ ಎನ್ನುತ್ತಾರೆ. ವಾರದಲ್ಲಿ ೩ ದಿನಕ್ಕೆ ಒಬ್ಬರಂತೆ ಇಬ್ಬರು ವೈದ್ಯರನ್ನು ನೇಮಿಸಿದ್ದು, ಈ ದಿನ ಕರ್ತವ್ಯದಲ್ಲಿರಬೇಕಾದ ವೈದ್ಯರು ಬಂದಿಲ್ಲ. ಈ ಬಗ್ಗೆ  ಕೇಳಿದರೆ  ಸಬೂಬು  ಹೇಳುತ್ತಾರೆ. ೨೪ಗಿ೭ ಆಸ್ಪತ್ರೆಯಾದರೂ  ಒಂದು ದಿನವೂ ವೈದ್ಯರು ವಾಸ್ತವ್ಯ ಹೂಡಿಲ್ಲ ಎನ್ನುವ ದೂರುಗಳ ಸುರಿಮಳೆಯನ್ನೇ ಗ್ರಾಮಸ್ಥರಿಂದ ಎದುರಿಸುವಂತಾಯಿತು. 
ಇದು ಕೇವಲ ಒಂದು ಉದಾಹರಣೆ ಅಷ್ಟೇ. ಅಣ್ಣೂರು ಸೇರಿದಂತೆ ಹಂಪಾಪುರ, ಬಿ.ಮಟಕೆರೆ, ಮುಳ್ಳೂರು. ಹುಣಸೂರಿನ ಬಿಳಿಕೆರೆ, ಗಾವಡಗೆರೆ ಸೇರಿದಂತೆ ಬಹುತೇಕ ಕೇಂದ್ರಗಳಲ್ಲಿ ೨೪ ಗಂಟೆ ವೈದ್ಯರು ಸಿಗುವುದಿಲ್ಲ. ಹಾಗಾಗಿ ೨೪ ಗಂಟೆ ಸೇವೆ ಎನ್ನುವ ಉದ್ದೇಶವೇ ವಿಫಲವಾಗಿದೆ. ಈ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿದ್ದರೂ ಪ್ರಯೋಜನವಿಲ್ಲ. ೮.೧.೨೦೧೦ ರಲ್ಲಿ ಯೋಜನೆಯ ಸಾಧನೆಯನ್ನು ತೋರಲು ಅಚ್ಚುಕಟ್ಟಾಗಿ ಸಜ್ಜುಗೊಳಿಸಿದ್ದ ಕಡಕೊಳ ಮತ್ತು ಹುಲ್ಲಹಳ್ಳಿಯ ಕೇಂದ್ರಗಳ ದರ್ಶನ ಮಾಡಿಸಲಾಗಿತ್ತು. ಆದರೆ ಒಟ್ಟಾರೆಯಾಗಿ ಗಮನಿಸಿದಾಗ ಅವುಗಳ ಸ್ಥಿತಿ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ ಎನ್ನುವುದಕ್ಕೆ ಅನೇಕ ನಿದರ್ಶನಗಳನ್ನು ನೀಡಬಹುದು.

ವರ್ಗಾವಣೆ ಆದೇಶ ಪಡೆಯಲು ೨ ಸಾವಿರ ರೂ ?

ವಿಕ ಸುದ್ದಿಲೋಕ ಮೈಸೂರು
ವರ್ಗಾವಣೆ ಆದೇಶ ಪಡೆಯಲು ಡಿಡಿಪಿಐ ಕಚೇರಿ ಸಿಬ್ಬಂದಿಗೆ  ೨೦೦೦ ರೂ.  ಲಂಚ  ನೀಡಬೇಕಂತೆ...ತಕ್ಷಣ ಪಡೆಯದಿದ್ದರೆ ರಾಷ್ಟ್ರಪತಿ  ಆಳ್ವಿಕೆಯ ‘ಬಿಸಿ’  ಅನುಭವಿಸಬೇಕಂತೆ... !
ಇದು ಸರಕಾರಿ ಶಿಕ್ಷಕ ಸಮುದಾಯದ ಮಧ್ಯೆ ಶುರುವಾದ ಬಿಸಿ-ಬಿಸಿ ಚರ್ಚೆ. ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರ ವರ್ಗಾ ವಣೆ ಕೌನ್ಸಿಲಿಂಗ್ ಮುಗಿದು ೨೦ ದಿನ  ಕಳೆದರೂ, ಬಹಳಷ್ಟು ಜಿಲ್ಲೆಗಳಲ್ಲಿ  ವರ್ಗಾವಣೆ ಆದೇಶ ಸಂಬಂಧಿಸಿದ ಶಿಕ್ಷಕರ ಕೈ ಸೇರಿಲ್ಲ . ಯಾವತ್ತು ಕೈ ಸೇರುತ್ತದೆ ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ. ಹಾಗಾಗಿ ಶಿಕ್ಷಕ ವಲಯದಲ್ಲಿ ಈಗ ವರ್ಗಾವಣೆ ಆದೇಶ, ಕುರಿತು ಬಿಡುಗಡೆ ಕುರಿತ ಗೊಂದಲ, ಅನುಮಾನ, ಅಡ್ಡಿ , ಆತಂಕಗಳು ಶುರುವಾಗಿವೆ.
೨೦೧೦-೧೧ನೇ ಸಾಲಿನ ಪ್ರಾಥಮಿಕ ಹಾಗೂ  ಪ್ರೌಢಶಿಕ್ಷಣ ಶಾಲೆಗಳ ಎಲ್ಲ ಶಿಕ್ಷಕರ ಕೋರಿಕೆಯ ವರ್ಗಾವಣೆ ಹಾಗೂ ಪರಸ್ಪರ ವರ್ಗಾ ವಣೆ ಕೌನ್ಸೆಲಿಂಗ್ ಮೇ ೨೯ ರಿಂದ  ಜೂ.೩೦ರವರೆಗೆ ನಡೆಯಿತು. ಜಿಲ್ಲಾ ಹಾಗೂ ವಿಭಾಗ ಮಟ್ಟದಲ್ಲಿ ನಡೆದ ಕೌನ್ಸಿಲಿಂಗ್‌ನಲ್ಲಿ ಶಿಕ್ಷಕರು ಭಾಗವಹಿಸಿ, ವರ್ಗಾವಣೆಯಾಗಿರುವ ತಮ್ಮ ಸ್ಥಳ ಯಾವುದೆಂಬು ದನ್ನು ತಿಳಿದುಕೊಂಡರು. ವರ್ಗಾವಣೆ ಆದೇಶಗಳನ್ನು ಜೂ. ೨೧ರ ನಂತರ ಜಾರಿಗೆ ಬರುವಂತೆ ಹೊರಡಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರೇ ಸ್ಪಷ್ಟಪಡಿಸಿದ್ದರು.
ಎಲ್ಲವೂ ಮುಗಿದು ೨೦ ದಿನಗಳಾಗುತ್ತಿದ್ದರೂ ವರ್ಗಾವಣೆ ಆದೇಶಗಳು ಡಿಡಿಪಿಐ ಹಾಗೂ ಬಿಇಒ ಕಚೇರಿಗಳಿಂದ ಬಿಡುಗಡೆ ಹೊಂದುತ್ತಿಲ್ಲ. ಈ ಮಧ್ಯೆ ‘ಆ ಜಿಲ್ಲೆಯಲ್ಲಿ  ವರ್ಗಾವಣೆ ಆದೇಶ ನೀಡಿದ್ದಾರಂತೆ, ಈ ಜಿಲ್ಲೆಯಲ್ಲಿ ನೀಡಿಲ್ಲ ವಂತೆ’ಎಂಬ ಅಂತೆ-ಕಂತೆಗಳು ಎಸ್‌ಎಂಎಸ್- ಸೆಲ್ ಫೋನ್ ಮೂಲಕ ಶಿಕ್ಷಕರ ನಡುವೆ ಹರಿದಾಡಲಾರಂಭಿಸಿವೆ.
ಆದೇಶ ನೀಡುವಿಕೆಗೆ ಸಾಮಾನ್ಯ ಪ್ರಕ್ರಿಯೆ ಇಲ್ಲ : ಕೌನ್ಸೆಲಿಂಗ್ ಮುಗಿದ  ಮರುದಿನವೇ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಶಿಕ್ಷಕರ ವರ್ಗಾವಣೆ ಮಾಡಿರುವುದಾಗಿ ಸಾಮಾನ್ಯ ಜ್ಞಾಪನ ಆದೇಶವನ್ನು ಪ್ರಕಟಿಸಿತು.
‘ವರ್ಗಾವಣೆ ಹೊಂದಿದ ಶಿಕ್ಷಕರನ್ನು ಸಂಬಂಧಿಸಿದ ಅಧಿಕಾರಿಗಳು ಸಕಾಲದಲ್ಲಿ ಕರ್ತವ್ಯದಿಂದ ಬಿಡುಗಡೆ ಮಾಡಿ, ವರ್ಗಾವಣೆ ಮಾಡಿದ ಹುದ್ದೆ -ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸು ವುದು’ ಎಂದು ಇಲಾಖೆಯ ನಿರ್ದೇಶಕರು ಸ್ಪಷ್ಟವಾಗಿ ಸೂಚಿಸಿ ದ್ದರು. ವೆಬ್‌ಸೈಟ್‌ನಲ್ಲಿದ್ದ ಈ ಮಾಹಿತಿ-ಆದೇಶವಾಗಿ ಶಿಕ್ಷಕರ ಕೈ ಸೇರಲು ವಿಳಂಬವಾಗುತ್ತಿದೆ. ಈ ನಡುವೆ, ಜನಗಣತಿ ಕಾರ್ಯದಲ್ಲಿ ನಿರತರಾಗಿರುವ ಶಿಕ್ಷಕರು ವರ್ಗಾವಣೆಯಾಗಿದ್ದರೆ, ಅಂಥವರನ್ನು ಸಂಬಂಧಿಸಿದ ಜಿಲ್ಲಾಧಿಕಾರಿ ಅನುಮತಿ ಪಡೆದು ಉಪನಿರ್ದೇಶಕರು ಬಿಡುಗಡೆ ಮಾಡಬೇಕು ಎಂದು ಷರತ್ತು ವಿಧಿಸಲಾಗಿತ್ತು.  ಸಾರ್ವಜನಿಕ ಶಿಕ್ಷಣ ಇಲಾಖೆಯ ಕೆಲವು ಉಪ ನಿರ್ದೇಶಕರು(ಡಿಡಿಪಿಐ) ಹೇಳುವ ಪ್ರಕಾರ- ಈ ಷರತ್ತಿನ ಕಾರಣದಿಂದಾಗಿಯೇ ಶಿಕ್ಷಕರ ಬಿಡುಗಡೆ  ತಡವಾಗುತ್ತಿದೆ !
‘ಜನಗಣತಿ ಕಾರ್ಯದಲ್ಲಿ ನಿರತರಾಗಿರುವ ಶಿಕ್ಷಕರನ್ನು ಬಿಡುಗಡೆ ಮಾಡಿ ಎಂದು ಸರಕಾರವೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಹೀಗಿದ್ದರೂ ಕೆಲ ಜಿಲ್ಲೆಗಳಲ್ಲಿ ವಿಳಂಬವಾಯಿತು ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಡಿಡಿಪಿಐ ಪತ್ರಿಕೆ ತಿಳಿಸಿದರು.
ಇದಲ್ಲದೆ, ಬಹಳಷ್ಟು ಜಿಲ್ಲೆಗಳಲ್ಲಿ   ಡಿಡಿಪಿಐ ಗಳಿಗೆ ಈ ಪ್ರಕ್ರಿಯೆಯನ್ನು ಸರಳವಾಗಿ ಪೂರ್ಣಗೊಳಿಸಲು ಮನಸ್ಸಿಲ್ಲ. ಮೊದ ಲಿಂದಲೂ ವರ್ಗಾವಣೆ ಕ್ರಿಯೆ ಯಲ್ಲಿ  ‘ಕೈ ಬಿಸಿ’ ಮಾಡಿಕೊಳ್ಳುತ್ತಿದ್ದ ಅಧಿಕಾರಿಗಳಿಗೆ  ಕೌನ್ಸೆಲಿಂಗ್ ಕೈ ಕಚ್ಚುವಂತೆ ಮಾಡಿದೆ. ಹಾಗಾಗಿ ಬೇಕೋ- ಬೇಡವೋ ಎಂಬಂತೆ ಮಾಡುತ್ತಿದ್ದಾರೆ ಎಂಬುದು ಶಿಕ್ಷಕರ ಆರೋಪ. 
ಕೌನ್ಸೆಲಿಂಗ್‌ನಂತೆ ಬಿಡುಗಡೆ ಮಾಡುವ ಪ್ರಕ್ರಿಯೆಗೂ ವೇಳಾಪಟ್ಟಿಯನ್ನು ನಿಗದಿ ಪಡಿಸಿದ್ದರೆ, ಈ ಗೊಂದಲ ಸರಿಯಾಗುತ್ತಿತ್ತು ಎಂಬುದು ಬಿಇಒ ಒಬ್ಬರ ಅಭಿಪ್ರಾಯ.

ನೂತನ ಐಜಿ ಬೀಸಿದ ಚಾಟಿಗೆ ಎದ್ದ ಅಧಿಕಾರಿಗಳು


ವಿಕ ಸುದ್ದಿಲೋಕ ಮೈಸೂರು
ಜಡ್ಡುಗಟ್ಟಿದ್ದ ಮೈಸೂರು ವ್ಯಾಪ್ತಿಯ ಐದು ಜಿಲ್ಲೆಯ ಪೊಲೀಸರಲ್ಲೀಗ  ಸಸ್ಪೆಂಡ್ ಸಂಚಲನ.
ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ಅಲಿಖಾನ ಶಿವನಾರಾಯಣ ಮೂರ್ತಿ ಅವರು ಎರಡೇ ತಿಂಗಳಲ್ಲಿ ಮೈಸೂರು, ಮಂಡ್ಯ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ‘ಕೆಲಸ ಮಾಡಿ ಇಲ್ಲವೇ ಶಿಕ್ಷೆ ನೋಡಿ’ ಎನ್ನುವ ಚಾಟಿ ಬೀಸಿದ್ದಾರೆ. ನೀವು ಕೆಲಸ ಮಾಡದಿದ್ದರೆ ಐಜಿ ವಿಶೇಷ ತಂಡ ದಾಳಿ ನಡೆಸುತ್ತದೆ.
ಇದರ ಫಲವಾಗಿ ತಮ್ಮ ಕೆಲಸ ಮರೆತ ಮೂವರು ಸರ್ಕಲ್ ಇನ್ಸ್‌ಪೆಕ್ಟರ್‌ಗಳು, ಸಬ್‌ಇನ್ಸ್‌ಪೆಕ್ಟರ್‌ಗಳು ಶಿಕ್ಷೆ ಅನುಭವಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಇತರೆ ಠಾಣೆಯ ಅಧಿಕಾರಿಗಳು ಕೆಲಸದ ಹಾದಿ ಹಿಡಿದಿದ್ದಾರೆ ಎನ್ನಲಾಗಿದೆ.
ಜನಸಂಪರ್ಕ ಸಭೆಯ ಫಲ:ಕಾನೂನು ಸುವ್ಯವಸ್ಥೆ ಜತೆಯಲ್ಲಿ ಅಕ್ರಮ ಚಟುವಟಿಕೆಗಳ ನಿಗ್ರಹ ಪೊಲೀಸರ ಮೊದಲ ಆದ್ಯತೆ. ಈ ಚಟುವಟಿಕೆಗಳ ಮೇಲೆ ನಿಯಂತ್ರಣವೇ ಇಲ್ಲದೇ ಹೋದರೆ ಪೊಲೀಸಿಂಗ್ ಇಲ್ಲ ಎಂದೇ ಅರ್ಥ. ಇಂಥ ವಾತಾವರಣ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ನಿಧಾನವಾಗಿ ಮೂಡತೊಡಗಿತ್ತು. ಎಲ್ಲದ್ದಕ್ಕೂ ಎಸ್ಪಿಗೆ ದೂರು ಹೋಗಬೇಕು. ಅವರಿಂದ ನಿರ್ದೇಶನ ಬಂದ ನಂತರವೇ ಕೆಲಸ ಎನ್ನುವ ಸ್ಥಿತಿ.
ಐಜಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೂರ್ತಿ, ಐದು ಜಿಲ್ಲೆ ವ್ಯಾಪ್ತಿಯ ೧೫ ಉಪವಿಭಾಗಗಳ ಪ್ರವಾಸ ಕೈಗೊಂಡರು. ಇದಾದ ನಂತರ ಜನಸಂಪರ್ಕ ಸಭೆಗಳನ್ನು ಆರಂಭಿಸಿದರು. ಉಪವಿಭಾಗ ಮಟ್ಟದಲ್ಲಿ ಸಭೆ ನಡೆದು ಸಮಸ್ಯೆಗಳ ಪಟ್ಟಿ ಮಾಡಿಕೊಂಡರು. ಇವುಗಳ ಪರಿಹಾರಕ್ಕೆ ಸಮಯವನ್ನೂ ನಿಗದಿಪಡಿಸಿದರು. ಈಗ ತಾಲೂಕು ಮಟ್ಟದಲ್ಲಿ ಜನಸಂಪರ್ಕ ಸಭೆ ಆರಂಭವಾಗಿದೆ. ಅಲ್ಲಿ ಇದೇ ರೀತಿಯ ದೂರುಗಳು ಬಂದರೆ ವಿಶೇಷ ತಂಡದಿಂದ ದಾಳಿ ನಡೆಸಿ ಬಿಗಿ ಮಾಡುವುದು. ಆನಂತರ ನಿರ್ಲಕ್ಷ್ಯ ವಹಿಸಿದ ಅಧಿಕಾರಿ/ಸಿಬ್ಬಂದಿ ವಿರುದ್ಧ ಕ್ರಮ.
ಜಿಲ್ಲೆ ವ್ಯಾಪ್ತಿಯಲ್ಲಿ ದೂರುಗಳು ಕೇಳಿ ಬಂದಾಗ ಕ್ರಮ ಕೈಗೊಳ್ಳಬೇಕು. ದೂರುಗಳು ಬಂದಾಗ ಕೆಳ ಹಂತದ ಅಧಿಕಾರಿಗಳಿಗೆ ತಿಳಿಸಬೇಕು. ನಿರ್ಲಕ್ಷ್ಯ ವಹಿಸಿದ ನಂತರ ಕ್ರಮವನ್ನೂ ನೀವೆ ಕೈಗೊಳ್ಳಿ ಎಂದು ಎಲ್ಲಾ ಎಸ್ಪಿಗಳಿಗೆ ಐಜಿಪಿ ಸೂಚಿಸಿದ್ದಾರೆ.
ಇದೇ ರೀತಿಯ ಕಾರ‍್ಯಾಚರಣೆ ಪೊಲೀಸ್ ಅಧಿಕಾರಿಗಳ ಮೇಲೆಯೇ ಐಜಿಪಿ ಅವರಿಂದ ಆಗುತ್ತಿರುವ ಎನ್ನುವ ಸಲಹೆ ಸಾರ್ವಜನಿಕರಿಂದ ಕೇಳಿ ಬಂದಿದೆ.
ಐಜಿಗೆ ನೀವೇ ದೂರು ಹೇಳಿ
ನಿಮ್ಮ ಭಾಗದಲ್ಲಿ ಪೊಲೀಸರಿಂದ ನ್ಯಾಯ ಸಿಗುತ್ತಿಲ್ಲ, ದೂರುಗಳ ಬಗ್ಗೆ ಪೊಲೀಸರಿಂದ ಸ್ಪಂದನೆ ಇಲ್ಲ ಎನ್ನಿಸಿದಾಗ ನೇರವಾಗಿಯೇ ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕರಿಗೆ ಕರೆ ಮಾಡಿ ತಿಳಿಸಬಹುದು. ಅವರ ಮೊಬೈಲ್ ಸಂಖ್ಯೆ-೯೪೮೦೮ ೦೦೦೩೧

ನಗರದ ಕಸ ಗುಡಿಸಲು ಬರಲಿವೆ ಯಂತ್ರ

ವಿಕ ಸುದ್ದಿಲೋಕ ಮೈಸೂರು
ಇನ್ನೊಂದು ತಿಂಗಳಲ್ಲಿ ‘ಹಸಿರು ನಗರ ’ದ  ಸ್ವಚ್ಛತೆಗೆ  ಕಸಗುಡಿಸುವ ಯಂತ್ರಗಳು ಬರಲಿವೆ. ನಂತರ,ಪ್ರಮುಖ ರಸ್ತೆಗಳ ಸ್ವಚ್ಛತಾ ಕಾರ‍್ಯಾಚರಣೆ ರಾತ್ರಿ ವೇಳೆ ನಡೆಯಲಿದೆ.
ಒಂದು ಟ್ರಕ್ ಮೌಂಟೆಡ್ ಸ್ವಚ್ಛತಾ ಯಂತ್ರ ,೨ ಪಾದಚಾರಿ ಮಾರ್ಗ ಸ್ವಚ್ಛತಾ ಯಂತ್ರಗಳ ಖರೀದಿಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದ್ದು,ಅಂತಿಮ ಹಂತದ ಪ್ರಕ್ರಿಯೆ ಗಳಷ್ಟೇ  ಬಾಕಿ. ಒಂದು-ಒಂದೂವರೆ ತಿಂಗಳಲ್ಲಿ ಯಂತ್ರ ಕಾರ‍್ಯಾಚರಣೆ ಆರಂಭವಾಗ ಲಿದೆ ಎಂದು ಮೇಯರ್ ಸಂದೇಶ್ ಸ್ವಾಮಿ ಹೇಳಿದ್ದಾರೆ.
ಜಿಲ್ಲಾ ಪತ್ರಕರ್ತರ ಸಂಘ ಗುರುವಾರ ಆಯೋಜಿಸಿದ್ದ  ‘ಮಾಧ್ಯಮ ಸಂವಾದ’ದಲ್ಲಿ ಪಾಲ್ಗೊಂಡ ಅವರು, ಈ ಯಂತ್ರಗಳು ಗಂಟೆಗೆ ೫ ರಿಂದ ೭ ಕಿ.ಮೀ. ವರೆಗೆ ಕಸ ಗುಡಿಸುತ್ತವೆ. ರಸ್ತೆ ವಿಭಜಕ ಇದ್ದರೆ ಎರಡೂ ಕಡೆ ಪ್ರತ್ಯೇಕ ಕಾರ‍್ಯಾಚರಣೆ ಅಗತ್ಯವಾದ್ದರಿಂದ ೨ರಿಂದ ೩ ಕಿ.ಮೀ. ಸ್ವಚ್ಛತೆ  ಸಾಧ್ಯ ಎಂದರು.
೧೨ ತಾಸು ಕಾರ‍್ಯ ನಿರ್ವಹಣೆ: ರಾತ್ರಿ ೯ ರಿಂದ ಶುರುವಾಗಿ ೧೨ ತಾಸು ಯಂತ್ರಗಳು ಕಾರ‍್ಯನಿರ್ವಹಿಸಲಿದ್ದು, ನಿರ್ವಹಣೆ ಹೊಣೆಯನ್ನು ಮಾಸಿಕ  ಸುಮಾರು ೩ ಲಕ್ಷ ರೂ.ಗೆ ಯಂತ್ರ ನಿರ್ಮಾಣ ಕಂಪನಿಗೇ ವಹಿಸಲಾಗುತ್ತದೆ. ನಗರದ ಹೃದಯ ಭಾಗದ ಮುಖ್ಯ ರಸ್ತೆಗಳ  ಜತೆಗೆ ಪ್ರಮುಖ ಬಡಾವಣೆಗಳ ಕೆಲ ವಿಶಾಲ ರಸ್ತೆಗಳೂ ಯಂತ್ರ ಸ್ವಚ್ಛತೆಗೆ ಒಳಗೊಳ್ಳಲಿವೆ ಎಂದು ವಿವರಿಸಿದರು.
ಮುಡಾ ಹೇರಿದ ಹೊರೆ: ಪಾಲಿಕೆಯಲ್ಲಿ ಬೇಕಾದಷ್ಟು  ಸಮಸ್ಯೆಗಳಿದ್ದರೂ ಕುಡಿಯುವ ನೀರು,ರಸ್ತೆ ದುರಸ್ತಿ, ಬೀದಿ ದೀಪಗಳ ನಿರ್ವಹಣೆ ಮತ್ತು ಸ್ವಚ್ಛತೆ,ಕಸ ವಿಲೇವಾರಿಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಆದರೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ  ಅವೈಜ್ಞಾನಿಕ ಕ್ರಮಗಳಿಂದ ರೆವಿನ್ಯೂ ಬಡಾವಣೆಗಳ ಸಂಖ್ಯೆ ಹೆಚ್ಚುತ್ತಿರುವುದು ‘ಹೊರೆ’ಯಾಗಿ ಪರಿಣಮಿಸಿದೆ ಎಂದು ಆಕ್ಷೇಪಿಸಿದರು.
ಖಾಸಗಿ ಡೆವಲಪರ್‌ಗಳು ಬಡಾವಣೆಯನ್ನು ನಕ್ಷೆಯಂತೆ  ಸಕಲ ಮೂಲಸೌಲಭ್ಯಗಳೊಂದಿಗೆ ರೂಪಿಸ ದಿದ್ದರೂ ಮುಡಾ ಶೇ.೬೦ರಷ್ಟು ನಿವೇಶನ ಹಂಚಿಕೆಗೆ ಅವಕಾಶ ನೀಡುತ್ತಿರುವುದು ಸಮಸ್ಯೆಗೆ ಕಾರಣ. ಪಾಲಿಕೆಗೆ  ಹಸ್ತಾಂತರ ಆಗದಿದ್ದರೂ, ಅಲ್ಲಿಂದ ನಿರೀಕ್ಷಿತ ತೆರಿಗೆ ಬರದಿದ್ದರೂ ಮನೆ ನಿರ್ಮಿಸಿಕೊಂಡವರಿಗೆ ಮಾನವೀಯ ದೃಷ್ಟಿಯಿಂದ ನೀರು, ಯುಜಿಡಿ ಮತ್ತಿತರ ಮೂಲ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಮುಡಾ ಅಧಿಕಾರಿಗಳ ತಪ್ಪಿನಿಂದ ಪಾಲಿಕೆ ಕೋಟಿಗಟ್ಟಲೆ ಬೆಲೆ ತೆರಬೇಕು ಎಂದು ದೂರಿದರು.
ಮುಂದಿನ ದಿನಗಳಲ್ಲಿ ಈ ಸಂಬಂಧ ಪಾಲಿಕೆ ಕಠಿಣವಾಗಿ ವರ್ತಿಸುವುದು ಅನಿವಾರ‍್ಯ. ರೆವಿನ್ಯೂ ಬಡವಾಣೆಗಳಲ್ಲಿ ಸುಮಾರು ೨ ಲಕ್ಷ ಆಸ್ತಿಗಳನ್ನು ಗುರುತಿಸಿದ್ದು, ಕಟ್ಟುನಿಟ್ಟಾಗಿ ದುಪ್ಪಟ್ಟು ತೆರಿಗೆ ಸಂಗ್ರಹ ವಸೂಲಿ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಹಸುರೀಕರಣ: ‘ನಗರ ಹಸುರೀಕರಣ’ ಆಶಯದೊಂದಿಗೆ  ೬೦ ಸಾವಿರ ಸಸಿಗಳನ್ನು ಬೆಳೆಸಿದ್ದು,ನಗರದ ವಿವಿಧೆಡೆ ಸಾರ್ವ ಜನಿಕ ಸ್ಥಳ, ರಸ್ತೆ ಬದಿ ನೆಡುವ ಪ್ರಕ್ರಿಯೆ ಆರಂಭವಾಗಿದೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.
ಭವಿಷ್ಯದಲ್ಲಿ ರಸ್ತೆ ಅಗಲೀಕರಣಕ್ಕೆ ಮರಗಳನ್ನು ಕಡಿಯುವುದು ಅನಿವಾರ‍್ಯವಾದರೆ ಈಗ್ಯಾಕೆ  ಸಸಿ ನೆಡುವ ಶ್ರಮ ತೆಗೆದುಕೊಳ್ಳುತ್ತೀರಿ ಎಂಬ ಮಾರ್ಮಿಕ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಭವಿಷ್ಯದಲ್ಲಿ ರಸ್ತೆ ವಿಸ್ತರಣೆಗೆ ಬಾಧಕವಾಗದಂತೆ ಸಸಿ ನೆಡಲಾಗುವುದು ಎಂದು ‘ಅಭಯ’ ನೀಡಿದರು. ಸಾಲು ಮರ ಕಡಿದು ಲಲಿತ ಮಹಲ್ ರಸ್ತೆ ಅಗಲೀಕರಣ ಮಾಡುವ ವಿಷಯ ‘ಮರ ನ್ಯಾಯಾಲಯ’ದ ಮುಂದಿದ್ದು, ಸಾರ್ವಜನಿಕರು,ಪರಿಸರ ಪ್ರೇಮಿಗಳ ಅಭಿಪ್ರಾಯ ಪಡೆದು ಮುಂದಡಿ ಇಡಲಾಗುವುದು ಎಂದು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ನೆಲಮಾಳಿಗೆ ಪಾರ್ಕಿಂಗ್: ನಗರ ವಾಣಿಜ್ಯಕಟ್ಟಡಗಳ ನೆಲಮಾಳಿಗೆಗಳನ್ನು ಕಡ್ಡಾಯ ವಾಗಿ ಪಾರ್ಕಿಂಗ್‌ಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಅವರು ಹೇಳಿದರು.
ಕಡ್ಡಾಯಗೊಳಿಸುವ ಹಿಂದಿನ  ಪ್ರಸ್ತಾಪ ಜಾರಿಯಾಗಿಲ್ಲ. ನೆಲಮಾಳಿಗೆಗಳನ್ನು ಗೋದಾಮು ಆಗಿ ಬಳಸಿಕೊಳ್ಳಲು ಕೆಲವರಿಗೆ ಪಾಲಿಕೆಯೇ ಅನುಮತಿ ನೀಡಿರುವುದು ಸಮಸ್ಯೆಯಾಗಿದೆ. ಆ ಅನುಮತಿಗಳನ್ನು ವಾಪಸ್ ಪಡೆಯುವ ಕುರಿತಂತೆ  ಸಮಿತಿ ಚರ್ಚಿಸಿ ತೀರ್ಮಾನಿಸಲಿದೆ. ಅದಕ್ಕೆ ಮೊದಲು ನೆಲಮಾಳಿಗೆ ಹೊಂದಿದ ವಾಣಿಜ್ಯ ಕಟ್ಟಡಗಳ ಪಟ್ಟಿಯನ್ನು ತಯಾರಿಸಲಾಗುವುದು ಎಂದರು. ಸಂಘದ ಅಧ್ಯಕ್ಷ ಕೆ.ಶಿವಕುಮಾರ್, ಪ್ರಧಾನ ಕಾರ‍್ಯದಾರ್ಶಿ ಬಿ.ಎಸ್.ಪ್ರಭುರಾಜನ್ ಹಾಜರಿದ್ದರು.

ಮುಂಗಾರು ಬೆಳೆಗೆ ಕುತ್ತು ತಂದ ನೀರಿನ ಕೊರತೆ

ರವಿ ಸಾವಂದಿಪುರ ಭಾರತಿನಗರ
ಮದ್ದೂರು ತಾಲೂಕು ವ್ಯಾಪ್ತಿಯಲ್ಲಿ ಬರುವ ವಿಶ್ವೇಶ್ವರಯ್ಯ ನಾಲೆಯ ಕಡೆ ಭಾಗದ ಜಮೀನುಗಳಿಗೆ ನೀರು ತಲುಪದೆ ಬೆಳೆಗಳು ಒಣಗುತ್ತಿವೆ.
ಗೌಡಯ್ಯನದೊಡ್ಡಿ ಗೇಟ್ ಬಳಿ ನಡೆಯುತ್ತಿರುವ ವಿಶ್ವೇಶ್ವರಯ್ಯ ನಾಲೆಯ ಲೋಕಸರ ಬ್ರಾಂಚ್ ೮ನೇ ವಿತರಣಾ ನಾಲೆಯ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ವಿ.ನಾಲೆಯ ಕಡೆಯ ಭಾಗದ ಜಮೀನುಗಳಿಗೆ ನೀರು ತಲುಪುತ್ತಿಲ್ಲ.
ಗೌಡಯ್ಯನದೊಡ್ಡಿ ಗೇಟ್ ಬಳಿ ಸೇತುವೆಗೆ ಹೊಂದಿಕೊಂಡಂತೆ ಇದ್ದ ವಿತರಣಾ ನಾಲೆ ಮೂಲಕ ವಿ.ನಾಲೆಯ ಕಡೆಯ ಭಾಗದ ಸುಮಾರು ೧ ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರುಣಿಸಲಾಗುತ್ತಿತ್ತು. ಆದರೆ, ಒಂದೂವರೆ ವರ್ಷದ ಹಿಂದೆಯೇ ಸೇತುವೆ ಕುಸಿದಿತ್ತು. ಸೇತುವೆ ಕುಸಿಯಲು ಪಕ್ಕದಲ್ಲಿದ್ದ ವಿತರಣಾ ನಾಲೆಯೂ ಒಂದು ರೀತಿ ಕಾರಣವಾಗಿತ್ತು. ನಾಲೆ ನೀರು ಸೇತುವೆ ಜಿನುಗಿ ಶಿಥಿಲಗೊಳ್ಳುತ್ತಾ ಬಂದಿತ್ತು.
ಕಡೆಗೂ ಸೇತುವೆ ಬಿದ್ದು ಹೋದ ಬಳಿಕ ಶಾಸಕಿ ಕಲ್ಪನಾ ಸಿದ್ದರಾಜು ಅವರ ಪ್ರಯತ್ನದ ಫಲವಾಗಿ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣಗೊಂಡಿತು. ಆ ಬಳಿಕ ಹಳೆ ಸೇತುವೆಯನ್ನು ಪೂರ್ಣವಾಗಿ ಕೆಡವಲಾಯಿತು.
ಆಗ ಸೇತುವೆಗೆ ಹೊಂದಿ ಕೊಂಡಂತಿದ್ದ ವಿತರಣಾ ನಾಲೆಯನ್ನು ಕೆಡವಲಾಯಿತು. ಅಂದಿನಿಂದ ಈ ಭಾಗದ ರೈತರು ನೀರಿನ ಅಭಾವ ಎದುರಿಸುವಂತಾಗಿದೆ. ಒಂದೂವರೆ ತಿಂಗಳ ಹಿಂದೆ ಹೊಸದಾಗಿ ವಿತರಣಾ ನಾಲೆ ಕಾಮಗಾರಿ ಅರಂಭಗೊಂಡಿದ್ದು, ಮುಗಿಯಲು ಇನ್ನೂ ಒಂದೆರಡು ತಿಂಗಳ ಕಾಲಾವಕಾಶ ಬೇಕಿದೆ. ಆ ನಂತರವಷ್ಟೇ ವಿತರಣಾ ನಾಲೆಯಲ್ಲಿ ನೀರು ಹರಿಸಿ ಆ ಭಾಗದ ಜಮೀನು ಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗು ತ್ತದೆ. ಆದರೆ, ಅಲ್ಲಿವರೆಗೆ ಮುಂಗಾರು ಬೆಳೆಯನ್ನು ಕೈ ಬಿಡಬೇಕೆ ? ಎಂಬುದು ರೈತರ ಪ್ರಶ್ನೆಯಾಗಿದೆ.
ಜತೆಗೆ, ಕಟಾವು ಹಂತ ತಲುಪಿರುವ ಕಬ್ಬಿಗೆ ಇನ್ನೊಂದು ಕಟ್ಟು ನೀರಿನ ಅವಶ್ಯಕತೆ ಇದೆ. ಆದರೆ, ನಾಲೆಯಲ್ಲಿ ನೀರು ಹರಿಯದ ಪರಿಣಾಮ ಕಬ್ಬು ಬೆಳೆಯೂ ಒಣಗುತ್ತಿದೆ. ಇದರಿಂದ ಇಳುವರಿ ಕಡಿಮೆಯಾಗುವ ಭೀತಿ ಯನ್ನು ರೈತರು ಎದುರಿಸುತ್ತಿದ್ದಾರೆ.
ರೇಷ್ಮೆ ಬೆಳೆಗೂ ನೀರಿನ ಅಭಾವ ಉಂಟಾಗಿದೆ. ಇದರಿಂದ ಬೆಳೆ ಕೈ ಕಚ್ಚುವ ಹಂತ ತಲುಪಿದ್ದು, ಕೈಗೆ ಬಂದ ತುತ್ತು ಬಾರದಾಗಿದೆ. ವರ್ಷಪೂರ್ತಿ ಕಷ್ಟಪಟ್ಟು ದುಡಿದು ಬೆಳೆದ ಬೆಳೆ ಕೈ ಸೇರದಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ
ಕುಸಿದು ಬಿದ್ದ ಸೇತುವೆ ಪಕ್ಕದಲ್ಲೇ ತಾತ್ಕಾಲಿಕವಾಗಿ ಪೈಪ್‌ಲೈನ್ ಅಳವಡಿಸಿ ವಿತರಣಾ ನಾಲೆ ವ್ಯಾಪ್ತಿಯ ರೈತರಿಗೆ ನೀರೊದಗಿಸಬಹುದಿತ್ತು. ಆದರೆ,  ಅಧಿಕಾರಿಗಳು ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ಕಾರಣ ರೈತರು ತೊಂದರೆಗೆ ಒಳಗಾಗ ಬೇಕಿದೆ.
ಪರ‍್ಯಾಯ ಏನು?: ಈಗಲೂ ಕಾಲ ಮಿಂಚಿಲ್ಲ. ತಾತ್ಕಾಲಿಕ ಪೈಪ್‌ಲೈನ್ ಅಳವಡಿಸಿ ನೀರೊಗಿಸುವ ಮೂಲಕ ಒಣಗುತ್ತಿರುವ ಬೆಳೆಗಳ ಜೀವ ಉಳಿಸಬಹುದಾಗಿದೆ. ಜತೆಗೆ, ಹೆಬ್ಬಾಳ ಚೆನ್ನಯ್ಯ ನಾಲೆಯಿಂದ ನೀರನ್ನು ಪಂಪ್‌ಮಾಡಿ ಕೊಡಬಹುದಾಗಿದೆ.
ಈ ಪರ‍್ಯಾಯ ವ್ಯವಸ್ಥೆಯನ್ನು ಅಧಿಕಾರಿಗಳು ಕೈಗೊಂಡರೆ ಬೆಳೆಗಳ ರಕ್ಷಣೆ ಖಂಡಿತಾ ಸಾಧ್ಯವಾಗುತ್ತದೆ. ಅದಕ್ಕೆ ಮನಸ್ಸು ಮಾಡಬೇಕಷ್ಟೆ. ಜತೆಗೆ, ಆ ಕೆಲಸ ಕೈಗೊಳ್ಳುವ ಇಚ್ಛಾಶಕ್ತಿಯನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ತೋರಬೇಕಿದೆ.  

ಮಾಲಿನ್ಯ ಪತ್ತೆ ಯಂತ್ರ ಅಳವಡಿಕೆಗೆ ಇಲ್ಲ ಜಾಗ

ಕುಂದೂರು ಉಮೇಶಭಟ್ಟ, ಮೈಸೂರು
ವಾಯುಮಾಲಿನ್ಯ ನಿಖರತೆ ಪತ್ತೆಗೆ ೧೦೧೦ ಜಾಗ ನೀಡುವ ಯೋಗ್ಯತೆ ಮಹಾನಗರ ಪಾಲಿಕೆಗೆ ಇಲ್ಲವೇ ?
ಗರುಡಾ ಮಾಲ್‌ಗೆ ಜಾಗ ನೀಡುವ ವಿಚಾರದಲ್ಲಿ ಪಾಲಿಕೆ ಸದಸ್ಯರು ತೋರಿದ ಆಸಕ್ತಿ, ಜಸ್ಕೋಗೆ ಕುಡಿಯುವ ನೀರಿನ ಆಧುನೀಕರಣ ಗುತ್ತಿಗೆ ವಹಿಸಲು ಪ್ರವಾಸ ಕೈಗೊಳ್ಳುವಾಗ ಇದ್ದ ಉತ್ಸಾಹ ಇಂಥ ವಿಷಯದಲ್ಲಿ ಏಕೆ ಇಲ್ಲ ಎನ್ನುವ ಪ್ರಶ್ನೆ ಈಗ ಎದುರಾಗಿದೆ.
ಪರಿಸರ ಮಾಲಿನ್ಯ ತಡೆಗೆ ಹಳೆಯ ಪದ್ಧತಿಗೆ ಗುಡ್‌ಬೈ ಹೇಳಿ ಅತ್ಯಾಧುನಿಕ ಯಂತ್ರ ಅಳವಡಿಸುವ ಯೋಜನೆಗೆ ೨ ವರ್ಷದಿಂದ ಸಣ್ಣ ಜಾಗವೇ ಸಿಕ್ಕಿಲ್ಲ.
ನಗರದ ಹೃದಯ ಭಾಗವಾದ ಪುರಭವನ ಎದುರಿನಲ್ಲಿ ಸುಮಾರು ೬೦-೭೦ ಲಕ್ಷ ರೂ. ಬೆಲೆ ಬಾಳುವ ಮಾಲಿನ್ಯ ಪತ್ತೆ ಯಂತ್ರ ಅಳವಡಿಸಲು ೧೦೧೦ ಜಾಗವನ್ನು ಪರಿಸರ ಮಾಲಿನ್ಯ ಮಂಡಳಿ ಕೇಳಿದೆ. ಪಾಲಿಕೆ ಇದಕ್ಕೆ ಅನುಮತಿ ನೀಡಬೇಕಾಗಿದೆ. ನಾ ಕೊಡೆ, ನೀ ಬಿಡೆ ಎನ್ನುವಂತೆ, ಇತ್ತ ಭೂಮಿ ನೀಡಲು ಪಾಲಿಕೆ ಕಣಿ ಮಾಡುತ್ತಿದ್ದರೆ, ಪರಿಸರ ಮಾಲಿನ್ಯ ಮಂಡಳಿ ಸ್ಥಳೀಯ ಅಧಿಕಾರಿಗಳು ಅನುಮತಿ ಪಡೆಯಲು ಪ್ರಾಮಾಣಿಕವಾಗಿ ಯತ್ನಿಸದೇ ಕಾಲ ದೂಡುವ ಕೆಲಸ ಮಾಡುತ್ತಿದ್ದಾರೆ. ಇದರ ನಷ್ಟ ಆಗುತ್ತಿರುವುದು ಮಾತ್ರ ಮೈಸೂರಿನ ಜನತೆಗೆ.
ಪತ್ರ ಬರೆದರೂ ಫಲವಿಲ್ಲ: ಬೆಂಗಳೂರಿನಲ್ಲಿ ಮೂರು ವರ್ಷದ ಹಿಂದೆಯೇ  ಮಾಲಿನ್ಯ ಪತ್ತೆ ಯಂತ್ರ ಅಳವಡಿಸಿ ಅದನ್ನು ಸಮರ್ಪಕ ವಾಗಿ ಬಳಕೆ ಮಾಡಲಾಗುತ್ತಿದೆ. ಇದೇ ಯಂತ್ರಗಳನ್ನು ಮೈಸೂರು, ಹುಬ್ಬಳ್ಳಿ,  ಮಂಗಳೂರಿನಲ್ಲೂ ಅಳವಡಿಸಲು ನಿರ್ಧರಿಸಲಾಯಿತು. ಇದಕ್ಕಾಗಿ ಹಣವನ್ನೂ ಮೀಸಲಿಟ್ಟು ಮಂಡಳಿಗೂ ಬಿಡುಗಡೆ ಮಾಡ ಲಾಯಿತು. ಅದರಂತೆ ಮಂಡಳಿ ಸ್ಥಳೀಯ ಅಧಿಕಾರಿಗಳು ಯೋಜನೆ ರೂಪಿಸಿದರು. ಪರಿಸರ ಮಾಲಿನ್ಯ ಪ್ರಮಾಣವನ್ನು ಪತ್ತೆ ಮಾಡಲು ನಗರದ ಕೇಂದ್ರ ಭಾಗದಲ್ಲಿ ಯಂತ್ರ ಅಳವಡಿಸಲು ನಿರ್ಧರಿಸಿ ಪುರ ಭವನ ಆವರಣದಲ್ಲಿ ಜಾಗಕ್ಕೆ ಕೋರಿದರು. ೨ ವರ್ಷದ ಹಿಂದೆಯೇ ಈ ಸಂಬಂಧ ಪಾಲಿಕೆಗೆ ಪತ್ರವೂ ಮಂಡಳಿಯಿಂದ ಬಂದಿದೆ. ಮೂರ‍್ನಾಲ್ಕು ತಿಂಗಳಲ್ಲೇ ಈ ಯಂತ್ರವನ್ನು ಅಳವಡಿಸಿ ೨ ವರ್ಷದ ಹಿಂದಿನ ದಸರೆ ವೇಳೆ ಅಣಿಯಾಗಬೇಕಾಗಿತ್ತು. ಆದರೆ ಪಾಲಿಕೆ ಅನುಮತಿ ನೀಡಲು ಇನ್ನೂ ಮೀನ ಮೇಷ ಎಣಿಸುತ್ತಲೇ ಇದೆ.
ಏನಿದು ಯಂತ್ರ: ಇದು ಟವರ್ ಮಾದರಿಯಲ್ಲಿ ಅಳವಡಿಸುವ ಯಂತ್ರ. ಇದಕ್ಕೆ ನಿರಂತರ ಪರಿವೇಷ್ಟಕ ಗಾಳಿಯ ಗುಣಮಟ್ಟ ಮಾಲಿನ್ಯ ಮಾಪನ ಯಂತ್ರ ಎಂತಲೂ ಕರೆಯುತ್ತಾರೆ. ಗಾಳಿ ಯಲ್ಲಿರುವ ಮಾಲಿನ್ಯಕಾರಿ ಅಂಶಗಳನ್ನು ಸುಲಭವಾಗಿ ಪತ್ತೆ ಮಾಡಲಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಇಂಗಾಲದ ಡೈ ಆಕ್ಸೈಡ್, ಇಂಗಾಲದ ಮಾನಾಕ್ಸೈಡ್‌ಗಳ ಮಟ್ಟವನ್ನು ಸುಲಭವಾಗಿ ಈ ಯಂತ್ರ ಅಳೆಯಲಿದೆ. ಇದರೊಟ್ಟಿಗೆ ಗಂಧಕದ ಡೈ ಆಕ್ಸೈಡ್, ಸಾರಜನಕದ ಡೈ ಆಕ್ಸೈಡ್, ಉಸಿರಾಡುವ ತೇಲುವ ಕಣಗಳು ಹಾಗೂ ತೇಲಾಡುವ ಧೂಳಿನ ಕಣಗಳ ಪ್ರಮಾಣವನ್ನು ಪಡೆದುಕೊಳ್ಳಬಹುದು. ಈ ಯಂತ್ರದ ವಿಶೇಷ ಎಂದರೆ ವರ್ಷದ ೩೬೫ ದಿನವೂ ಕಾರ‍್ಯನಿರ್ವಹಿಸಲಿದೆ. ಆಯಾ ಸಮಯದಲ್ಲಿ ಯಾವ ಅಂಶಗಳು ಎಂಬ ಮಾಹಿತಿಯನ್ನು ಪ್ರದರ್ಶಿಸಲಿದೆ. ಇದರಿಂದ ಸಾರ್ವಜನಿಕರು ನಿಖರ ಮಾಹಿತಿಯನ್ನು ಬೇಕಾದಾಗ ಪಡೆದುಕೊಳ್ಳಬಹುದು. ಹಿಂದೆ ಮ್ಯಾನುಯಲ್ ಆಧಾರದಲ್ಲಿ ಮಾಪನ ಮಾಡಲಾಗುತ್ತಿತ್ತು. ಕೆಲವು ವಸ್ತುಗಳ ವಿವರ ಮಾತ್ರ ಪಡೆದುಕೊಳ್ಳುವ ಅವಕಾಶವಿತ್ತು. ಅದೂ ವಾರದಲ್ಲಿ ಎರಡು ದಿನ ಮಾತ್ರ. ಇದರಿಂದ ನಿಖರ ಮಾಹಿತಿಯನ್ನು ಪಡೆಯಲು ಸಾರ್ವ ಜನಿಕರು ಇರಲಿ, ಮಾಲಿನ್ಯ ನಿಯಂತ್ರಣ ಮಂಡಳಿಯವರೇ ಹರ ಸಾಹಸ ಮಾಡಬೇಕಿತ್ತು. ಇದರ ಬೆಲೆ ಸುಮಾರು ಒಂದೂವರೆ ಕೋಟಿ. ಬೆಂಗಳೂರಿನ ರೈಲ್ವೆ ನಿಲ್ದಾಣ ಹಾಗೂ ರಾಜಾಜಿನಗರದಲ್ಲಿ ಈ ಯಂತ್ರಗಳು ಕಾರ‍್ಯ ನಿರ್ವಹಿಸುತ್ತಿವೆ. ಹಿಂದೆಲ್ಲಾ ಮಾಲಿನ್ಯದ ವಿವರ ಪಡೆಯಲು ಕಷ್ಟಪಡಬೇಕಿತ್ತು. ಈಗ ಅತ್ಯಾಧುನಿಕ ಯಂತ್ರ ಬಳಸು ವುದರಿಂದ ಪ್ರಮುಖ ನಗರಗಳ ಮಾಲಿನ್ಯವಿವರ ಕ್ಷಣಾರ್ಧದಲ್ಲಿ ಲಭ್ಯವಾಗಲಿದೆ.

ಪಶುಪಾಲನೆಗೆ ಅನುದಾನ ಕೊರತೆ, ಹುದ್ದೆಗಳು ಖಾಲಿ...

ಜೆ.ಶಿವಣ್ಣ ಮೈಸೂರು
ಜಿಲ್ಲೆಯ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪಶುಗಳಿಗಿಂತಲೂ ಕಡೆಯಾಗಿ ಬಿಟ್ಟಿದೆ. ಒಂದೆಡೆ ವೈದ್ಯ, ಸಿಬ್ಬಂದಿ ಕೊರತೆ, ಇನ್ನೊಂದೆಡೆ ಅನುದಾನದ ಕೊರತೆ. ಈ ಎರಡು ಕೊರತೆಗಳ ನಡುವೆ ಇಲಾಖೆ ಕಸಾಯಿ ಖಾನೆ ಸೇರುವ ಶಕ್ತಿಹೀನ ರಾಸುವಿನಂತಾಗಿದೆ.
೨೦೦೭-೦೮ ನೇ ಸಾಲಿನ ಗಣತಿ ಪ್ರಕಾರ ೧೨ ಲಕ್ಷ ಜಾನುವಾರುಗಳು ಜಿಲ್ಲೆಯಲ್ಲಿವೆ. ಆದರೆ ಅವುಗಳ ಆರೋಗ್ಯ ಸೇವೆಗೆ ಅಗತ್ಯವಿರುವ ಔಷಧ, ಲಸಿಕೆ, ಚಿಕಿತ್ಸೆ ಇತ್ಯಾದಿಗಳಿಗೆ ನೀಡಲಾಗುವ ಅನುದಾನ ಮಾತ್ರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ವರ್ಷಕ್ಕೆ ಒಂದು ಹಸುವಿಗೆ ಕೇವಲ ೧ ರಿಂದ ೧.೫೦ ರೂ. ಮಾತ್ರ ಔಷಧ ವೆಚ್ಚಕ್ಕೆ ನೀಡಲಾಗು ತ್ತಿದೆ. ಹಸು, ಹಂದಿ, ಕುರಿ, ಮೇಕೆ ತಾನೇ ಎನ್ನುವ ಉದಾ ಸೀನ ಇದಕ್ಕೆ ಕಾರಣ ಇರ ಬಹುದೇ ?
ಸಮಾಧಾನಕರ ಸಂಗತಿ ಎಂದರೆ, ತೀವ್ರಸ್ವರೂಪದ ರೋಗ ಬಾಧೆ ಭೀತಿ ಜಿಲ್ಲೆಯಲ್ಲಿ ಇಲ್ಲ. ರಾಸುಗಳಿಗೆ ತೀವ್ರ ಸ್ವರೂಪದಲ್ಲಿ ಕಾಡುತ್ತಿದ್ದ ಕಾಲು ಬಾಯಿ ಜ್ವರ, ಚಪ್ಪೆರೋಗ ಶೇ.೯೦ ರಷ್ಟು ನಿಯಂತ್ರಣಕ್ಕೆ ಬಂದಿದೆ. ಫಲವಾಗಿ ಹಾಲು ಉತ್ಪಾದನೆ ದ್ವಿಗುಣಗೊಂಡಿದೆ. ಮೈಮುಲ್‌ನಲ್ಲಿ ದಾಖಲೆ ಪ್ರಮಾಣ ದಲ್ಲಿ ಹಾಲು ಸಂಗ್ರಹವಾಗಿರುವುದೇ ಇದಕ್ಕೆ ಸಾಕ್ಷಿ. ವೈದ್ಯ, ಸಿಬ್ಬಂದಿ ಕೊರತೆಯ ನಡುವೆಯೂ ಇದು ಆಶಾದಾಯಕ ಬೆಳವಣಿಗೆ ಎನ್ನಲಡ್ಡಿಯಿಲ್ಲ.
ಹುದ್ದೆಗಳು ಖಾಲಿ ಖಾಲಿ
ಜಿಲ್ಲೆಯಲ್ಲಿ ಒಟ್ಟು ೧೮ ಪಶು ಆಸ್ಪತ್ರೆಗಳು ಹಾಗೂ ೭೩ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಗಳಿವೆ. ಇದರಲ್ಲಿ ಹಲವು ಆಸ್ಪತ್ರೆ, ಚಿಕಿತ್ಸಾ ಕೇಂದ್ರಗಳು ಥೇಟ್ ದೊಡ್ಡಿ ಗಳಿಂತಿದ್ದು, ಇಂದಿಗೂ ಹಳೆಯ ವ್ಯವಸ್ಥೆ ಯಲ್ಲೇ ಮುಂದುವರಿದಿವೆ. ‘ಹೈಟೆಕ್ ಸ್ಪರ್ಶ’ ಇನ್ನೂ ಆಗಿಲ್ಲ. ಜತೆಗೆ ಹುದ್ದೆಗಳ ಕೊರತೆ. ಮಂಜೂರು ಹುದ್ದೆಗಳು ೬೮೭. ಹಲ ವರ್ಷಗಳಿಂದ ಭರ್ತಿ ಯಾಗದೇ ಉಳಿದಿರುವ ಹುದ್ದೆಗಳ ಸಂಖ್ಯೆ ೧೪೩. ಅದರಲ್ಲೂ ೮೬ ಪಶು ವೈದ್ಯಾಧಿಕಾರಿಗಳಲ್ಲಿ ೨೩ ಹುದ್ದೆಗಳು ಖಾಲಿ ಬಿದ್ದಿರುವುದು ಶೋಚನೀಯ.
ಹಿರಿಯ ಪಶು ವೈದ್ಯ ಪರೀಕ್ಷರ ೧೫ ಹುದ್ದೆಗಳು (ಒಟ್ಟು ೧೦೦), ಕಿರಿಯ ಪಶು ವೈದ್ಯ ಪರೀಕ್ಷರ ಹುದ್ದೆಗಳು -೧೭ (ಒಟ್ಟು ೬೪) ಹುದ್ದೆಗಳು, ಪಶು ವೈದ್ಯ ಸಹಾಯಕರು ಹುದ್ದೆ ಗಳು -೧೧ (ಒಟ್ಟು ೮೧), ಡಿ- ಗ್ರೂಪ್ ನೌಕರರು ಹುದ್ದೆಗಳು ೬೮ (ಒಟ್ಟು ೨೭೬) ಖಾಲಿ ಉಳಿದಿವೆ. ಪಶು ಮೇಲ್ವಿಚಾರಕ ಹುದ್ದೆಗಳು ಸೇರಿದಂತೆ ಇನ್ನೂ ಕೆಲ ಹುದ್ದೆಗಳ ಕೊರತೆಯಿದೆ.
ವೈದ್ಯರ ಕೊರತೆಯಿಂದ ೨-೩ ಪಶು ಆಸ್ಪತ್ರೆಗಳನ್ನು ಒಬ್ಬರೇ ವೈದ್ಯರು ನೋಡಿಕೊಳ್ಳುವ ಅಥವಾ ಪಶು ವೈದ್ಯ ಪರೀಕ್ಷಕರೇ ನಿರ್ವಹಿಸುವ ಸ್ಥಿತಿಯಿದೆ. ಇದರಿಂದ ಸೇವೆ ಯಲ್ಲಿ ದೊಡ್ಡ ಪ್ರಮಾಣದ ವ್ಯತ್ಯಯ, ಪರಿಣಾಮ ಇಲ್ಲವಾದರೂ ಹುದ್ದೆಗಳ ಭರ್ತಿಗೆ ಕ್ರಮವಹಿಸದಿರುವುದು ವಾಸ್ತವ.
ಅನುದಾನದ ಕೊರತೆ
ಜಿಲ್ಲೆಯಲ್ಲಿ ಇಲಾಖೆಗೆ ದೊರೆಯುವ ಅನುದಾನ         ಅತ್ಯಲ್ಪ. ನೆರೆಯ ಜಿಲ್ಲೆ ಮಂಡ್ಯಕ್ಕೆ ಹೆಚ್ಚು ಅನುದಾನ ನೀಡಲಾಗುತ್ತಿದ್ದರೆ, ಮೈಸೂರಿಗೆ ದಕ್ಕುವುದು ಅದರಲ್ಲಿ ಮೂರನೇ ಒಂದು ಭಾಗ ಮಾತ್ರ. ಅಂದರೆ ಅಂದಾಜು ೨೪-೨೫ ಲಕ್ಷ ರೂ ಮಾತ್ರ. ಜಿಲ್ಲಾ ಪಂಚಾಯಿತಿ ಮೂಲಕ ಸರಕಾರದಿಂದ ಸಿಗುವ ಈ ಅಲ್ಪ ಅನುದಾನದಲ್ಲಿ ವೈದ್ಯರು, ಸಿಬ್ಬಂದಿಯ ಕೊರತೆಯ ನಡುವೆಯೇ ಇಲಾಖೆಯನ್ನು ಸಂಭಾಳಿಸಲಾಗುತ್ತಿದೆ.
೨೦೦೭-೦೮ ನೇ ಸಾಲಿನ ಗಣತಿ ಪ್ರಕಾರ ಕೋಳಿಯನ್ನು ಹೊರತುಪಡಿಸಿ ಹಸು, ಕುರಿ, ಮೇಕೆ, ಎಮ್ಮೆ, ಹಂದಿ, ನಾಯಿ ಸೇರಿದಂತೆ ಸುಮಾರು ೧೨ ಲಕ್ಷ ವಿವಿಧ ಸಾಕು ಪ್ರಾಣಿಗಳು ಜಿಲ್ಲೆಯಲ್ಲಿವೆ. ಅನುದಾನ ಕಡಿಮೆ ಲಭಿಸುವುದ ರಿಂದ ಔಷಧಗಳಿಗೆ ಸದಾ ಸಮಸ್ಯೆ. ಅನುದಾನದಲ್ಲಿ ಬಹುತೇಕ ಮೊತ್ತ ರಾಸುಗಳ ಆರೋಗ್ಯ ಸೇವೆಗೆ ವಿನಿಯೋಗವಾಗುತ್ತದೆ. ಅದರಲ್ಲೂ ಕೃತಕ ಗರ್ಭಧಾರಣಾ ಕೇಂದ್ರ ನಿರ್ವಹಣೆಗೆ ಅಧಿಕ ವೆಚ್ಚವಾಗುತ್ತಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಈ ನಡುವೆಯೂ ಇಲಾಖೆ ಕಾರ್ಯತ್ಪರವಾಗಿದ್ದು, ೨೩೫ ಗ್ರಾಮಗಳಲ್ಲಿಯೂ ಶಿಬಿರ ನಡೆಸಿ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಮುಂಗಾರು ಪೂರ್ವ ಮತ್ತು ಬಳಿಕ ರೋಗಗಳು ಹೆಚ್ಚು ಕಾಣಿಸಿಕೊಳ್ಳುವುದರಿಂದ ಮುಂಜಾಗ್ರತಾ ಕ್ರಮವಾಗಿ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯ ಮಾಡಲಾಗುತ್ತಿದೆ. ಮೈಮುಲ್ ಸಹಭಾಗಿತ್ವದಲ್ಲಿ ಜೂನ್‌ನಿಂದ ಜುಲೈವರೆಗೆ ಕಾಲುಬಾಯಿ ಜ್ವರಕ್ಕೆ ಲಸಿಕೆ ನೀಡುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ಮಹಿಳಾ ಮೀಸಲಿಗೆ ಮಂಗಳಾರತಿ

ಮತ್ತೀಕೆರೆ ಜಯರಾಮ್ ಮಂಡ್ಯ
ಸ್ತ್ರೀ ಸಬಲೀಕರಣದ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲು ಜಾರಿಯಾಗಿದೆ. ಆದರೆ ಚಲಾಯಿಸುತ್ತಿರುವವರು ಅವರ ಪತಿ ಮಹಾಶಯರು. ಅದಕ್ಕೆ ತಾಜಾ ನಿದರ್ಶನ ಮಂಡ್ಯ ತಾಲೂಕಿನ ಕೋಣನಹಳ್ಳಿ ಗ್ರಾಮದ್ದು.
ಗ್ರಾಮದ ಗ್ರಾ.ಪಂ. ಸದಸ್ಯೆ ಎಂ.ಆರ್.ಮಂಗಳಮ್ಮ ವರಿಷ್ಠರ ಚುನಾವಣೆಯಲ್ಲಿ ಪತಿಯ ‘ವಿಪ್’ ಉಲ್ಲಂಘಿಸಿದ್ದಕ್ಕೆ ಎದುರಾದ ಕೌಟುಂಬಿಕ ಕಲಹದಿಂದ ಬೇಸತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸುದ್ದಿಯಾಗಿದ್ದಾರೆ. ಮಂಡ್ಯ ಗ್ರಾಮಾಂತರ ಗ್ರಾ.ಪಂ.ನ ಕೋಣನಹಳ್ಳಿ ವಾರ್ಡ್ ಸದಸ್ಯೆ ಮಂಗಳಮ್ಮ ಗ್ರಾ.ಪಂ. ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗೆ ಗುರುವಾರ ರಾಜೀನಾಮೆ ಪತ್ರ ಸಲ್ಲಿಸಿದರು.
ರಾಜಕೀಯವೇ ಉಸಿರಾಗಿರುವ ಜಿಲ್ಲೆಯಲ್ಲಿ ನಡೆದ ಗ್ರಾ.ಪಂ. ಚುನಾವಣೆಯಿಂದ ಸಾಕಷ್ಟು ಮನೆ, ಮನ ಒಡೆದಿವೆ. ಮಂಗಳಮ್ಮ ರಾಜೀನಾಮೆಗೂ ಕೌಟುಂಬಿಕ ಮತ್ತು ರಾಜಕೀಯ ಕಲಹವೇ ಕಾರಣ ಎನ್ನುವುದು ಗ್ರಾಮಸ್ಥರ ಆರೋಪ.
ಅನಿವಾರ್ಯ ಮತ್ತು ವೈಯಕ್ತಿಕ ಸಮಸ್ಯೆಯಿಂದ ಗ್ರಾ.ಪಂ.ನ ಕೆಲಸ ನಿರ್ವಹಿಸಲು ಸಾಧ್ಯವಾಗದ್ದರಿಂದ ಸ್ವಇಚ್ಛೆಯಿಂದ ಪದತ್ಯಾಗ ಮಾಡುತ್ತಿರುವುದಾಗಿ ಮಂಗಳಮ್ಮ ರಾಜೀನಾಮೆಯಲ್ಲಿ ತಿಳಿಸಿರುವ ನೆವ. ಯಾವುದೇ ಒತ್ತಡಕ್ಕೆ ಮಣಿದಿಲ್ಲ ಎಂದಿದ್ದರೂ ಅದರ ಹಿಂದೆ ಕಾಣುತ್ತಿರುವ ನೆರಳು ಮಾತ್ರ ರಾಜಕಾರಣದ್ದೇ.
ಮಂಗಳಮ್ಮ ಅವರು ಕೋಣನಹಳ್ಳಿಯ ಜಾ.ದಳ ಕಾರ್ಯಕರ್ತ ಜಯರಾಮು ಅವರ ಪತ್ನಿ. ಹಾಗೆಯೇ ಮಂಡ್ಯ ಜಿಲ್ಲಾ ಕಾಂಗ್ರೆಸ್‌ನ ಹಿರಿಯ ಮುಖಂಡ, ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಎನ್. ರಾಜು ಅವರ ಪುತ್ರಿಯೂ ಹೌದು.
ಪತಿಯ ಫರ್ಮಾನು: ೨೧ ಸದಸ್ಯ ಬಲದ ಮಂಡ್ಯ ಗ್ರಾಮಾಂತರ ಗ್ರಾ.ಪಂ. ವರಿಷ್ಠರ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಿತು. ಜಿದ್ದಾಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಪುರುಷೋತ್ತಮ್ ಮತ್ತು ಕುಮಾರ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಒಂದು ಮತದ ಅಂತರದಿಂದ ಗೆದ್ದರು.
ಜಾ.ದಳ ಬೆಂಬಲಿತ ಅಭ್ಯರ್ಥಿಗಳಾಗಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಜು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಉಮಾದೇವಿ ಕಣಕ್ಕಿಳಿದಿದ್ದರು. ಜಾ.ದಳ ಅಭ್ಯರ್ಥಿಗಳಿಗೇ ಮತ ಹಾಕುವಂತೆ ಮಂಗಳಮ್ಮ ಅವರಿಗೆ ಪತಿ ಜಯರಾಮು ‘ವಿಪ್’ ಹೊರಡಿಸಿದ್ದರು. ಅದರಂತೆ ಮಂಗಳಮ್ಮ ಜಾ.ದಳ ಸದಸ್ಯರ ಗುಂಪಿನೊಂದಿಗೆ ಆಗಮಿಸಿ ಅಧ್ಯಕ್ಷ ಸ್ಥಾನಕ್ಕೆ ಜಾ.ದಳ ಅಭ್ಯರ್ಥಿಗೇ ಮತ ಹಾಕಿದರು. ಆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸ್ವಗ್ರಾಮದ ಅಭ್ಯರ್ಥಿ ಎಂದು ಕಾಂಗ್ರೆಸ್ ಬೆಂಬಲಿತ ಕುಮಾರ್‌ಗೆ ಮತ ಹಾಕಿದರು. ಇದು ಪತಿ ಮತ್ತು ಕುಟುಂಬಕ್ಕೆ ಅಪಥ್ಯವೆನಿಸಿದ್ದರಿಂದ ಮರು ದಿನವೇ ಮಂಗಳಮ್ಮ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಸುಂದರ ಸಂಸಾರಕ್ಕೆ ಪಂಚಾಯಿತಿ ಮತ್ತು ಪಕ್ಷ ರಾಜಕಾರಣ ಹುಳಿ ಹಿಂಡಿದೆ. ಸೋಲಿನಿಂದ ಕಂಗೆಟ್ಟ ಜಾ.ದಳ ಕಾಯಕರ್ತರು ಇದನ್ನೇ ವಿಜಯೋತ್ಸವವಾಗಿ ಆಚರಿಸಿದ್ದೂ ಗುಟ್ಟಲ್ಲ.
ಗ್ರಾಮಸ್ಥರ ವಿರೋಧ: ಕೋಣನಹಳ್ಳಿ ಗ್ರಾಮಸ್ಥರು ಸದಸ್ಯರಾಗಿ ಮಂಗಳಮ್ಮ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದರು. ಪಕ್ಷ ರಾಜಕಾರಣದಿಂದಲ್ಲ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಜೀನಾಮೆ ಕೊಟ್ಟ ಬಗ್ಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಜಯರಾಮು ಅವರು ಗ್ರಾಮಸ್ಥರನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಹೊರಗಿನವರ ಮಾತು ಕೇಳಿ ಪತ್ನಿಯಿಂದ ರಾಜೀನಾಮೆ ಕೊಡಿಸಿ ದ್ದಾರೆ. ಇಂಥ ಬೆಳವಣಿಗೆ ಆಗಬಾರದಿತ್ತು. ಇದು, ಗ್ರಾಮಸ್ಥರಿಗೆ ಮಾಡಿದ ಅಪಮಾನ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಕೋಣನಹಳ್ಳಿ ಗ್ರಾಮಸ್ಥರೊಬ್ಬರು ಟೀಕಿಸುತ್ತಾರೆ.
ಮಂಡ್ಯ ನಗರಸಭೆಯಲ್ಲಿ ಪಕ್ಷಾಂತರದಿಂದ ಸದಸ್ಯತ್ವ ಅನೂರ್ಜಿತ ಭೀತಿಯಲ್ಲಿರುವ ಪುರಪಿತೃ ಕೆ.ಎಲ್. ನಾಗೇಂದ್ರ ಮತ್ತು ಬೆಂಬಲಿಗರು ಜಾ.ದಳ ಅಭ್ಯರ್ಥಿ ಪರ ಸಕ್ರಿಯವಾಗಿದ್ದರು. ಮಂಗಳಮ್ಮ ರಾಜೀನಾಮೆ ವೇಳೆ ನಾಗೇಂದ್ರ ಮತ್ತು ಬೆಂಬಲಿಗರಿದ್ದರು. ಇದು, ಗ್ರಾಮಸ್ಥರ ವಿರೋಧಕ್ಕೆ ಪ್ರಮುಖ ಕಾರಣ.
ಒಂದೊಮ್ಮೆ ಮಂಗಳಮ್ಮ ರಾಜೀನಾಮೆ ಹಿಂಪಡೆಯದೆ, ಅಂಗೀ ಕಾರಗೊಂಡಲ್ಲಿ ಮರು ಚುನಾವಣೆ ಖಚಿತ. ಈ ಹಿನ್ನೆಲೆಯಲ್ಲಿ ಈಗಾಗಲೇ ಅಭ್ಯರ್ಥಿ ಹುಡುಕಾಟವೂ ನಡೆದಿದೆ.

‘ಕರ್ಣ ಕಠೋರ’ ವಾಹನಗಳಿಗೆ ದಂಡ

ವಿಕ ಸುದ್ದಿಲೋಕ ಮೈಸೂರು
ಕರ್ಣ ಕಠೋರ ಹಾರ್ನ್‌ನೊಂದಿಗೆ ವಾಹನ ಓಡಿಸುವವರಿಗೆ ಸಾರಿಗೆ ಇಲಾಖೆ ಬ್ರಹ್ಮಾಸ್ತ್ರ ಬೀರಿದೆ.
ಆಟೋ ರಿಕ್ಷಾ ಇಲ್ಲವೇ ದ್ವಿಚಕ್ರವಾಹನ ಓಡಿಸು ವವರು ಮಿತಿ ಮೀರಿದ ಶಬ್ದ ಮಾಡುತ್ತಾ ಹೋದರೆ ದಂಡ ಖಚಿತ.
ನಗರದಾದ್ಯಂತ ವಿವಿಧ ವರ್ಗದ ವಾಹನ ಮಾಲೀಕರು ಹಾಗೂ ವಾಹನ ಚಾಲಕರು ಎಸಗು ತ್ತಿರುವ ವಿವಿಧ ಅಪರಾಧಗಳನ್ನು ಪತ್ತೆ ಹೆಚ್ಚಿ ತಡೆಗಟ್ಟುವ ಹಾಗೂ ವಿವಿಧ ವಾಹನಗಳು, ಸಾರ್ವಜನಿಕರ ರಸ್ತೆ ಸುರಕ್ಷತೆ ಬಗ್ಗೆ ಗಮನಹರಿಸಲು ಸಾರಿಗೆ ಇಲಾಖೆ ವಿಶೇಷ ತಪಾಸಣೆಯನ್ನು ಒಂದು ತಿಂಗಳಿನಿಂದ ಚುರುಕುಗೊಳಿಸಿದೆ.
ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಸಂಚಾರ ಅವಘಡಗಳು ಹೆಚ್ಚಾಗುತ್ತಿದೆ. ಇದರಿಂದ ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಪರಿಶೀಲನೆ ಭಾಗವಾಗಿ ವಾಹನಗಳ ಶಬ್ದಮಾಲಿನ ಪ್ರಮಾಣವನ್ನೂ ಪ್ರಮುಖವಾಗಿ ತಪಾಸಣೆ ಮಾಡ ಲಾಗುತ್ತಿದೆ. ಸಾರ್ವಜನಿಕ ಸಾಗಣೆ ವಾಹನಗಳಲ್ಲಿ ಆಟೋರಿಕ್ಷಾ, ಖಾಸಗಿ ಬಸ್ ಇಲ್ಲವೇ ಕಾರುಗಳಲ್ಲಿ  ಮಿತಿ ಮೀರಿದ ಶಬ್ದ ಹೊರ ಹಾಕುವ ಸ್ಟಿರಿಯೋ ಬಳಸುವ ಹಾಗಿಲ್ಲ. ಅದೇ ರೀತಿ ದ್ವಿಚಕ್ರವಾಹನಗಳು ೯೦ ಡೆಸಿಬಲ್‌ಗೂ ಕಡಿಮೆ ಇರುವ ಹಾರ್ನ್ ಬಳಸಬೇಕು ಇದನ್ನು ಮೀರಿದ ಹಾರ್ನ್ ಇದ್ದರೆ ದಂಡ ಕಟ್ಟಿಸಿಕೊಳ್ಳುವ ಜತೆಗೆ ಹಾರ್ನ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಹೀಗೊಂದು ವಿಲಾಸಿ ಆಟೋ ರಿಕ್ಷಾ: ಇದು ಹಠವಾದಿಯೊಬ್ಬ ಕಲಾವಿದ ರೀತಿಯಲ್ಲಿ ಆಟೋ ರಿಕ್ಷಾ ಅಣಿಪಡಿಸಿಕೊಂಡು ರಸ್ತೆಗೆ ಇಳಿಸಿದಾಗ ಸಾರಿಗೆ ಇಲಾಖೆ ಅಧಿಕಾರಿಗೆ ಸಿಕ್ಕಿಬಿದ್ದಿದ್ದಾನೆ.
ಜೋರಾಗಿ ಆಡಿಯೋ ಹಾಕಿಕೊಂಡು ಹೊರಟಿದ್ದ ಆಟೋ ರಿಕ್ಷಾವನ್ನು ಗಮನಿಸಿದ ಸಾರಿಗೆ ಉಪ ಆಯುಕ್ತ ಸಿ.ಪಿ.ನಾರಾಯಣಸ್ವಾಮಿ ಅವರು ರಸ್ತೆಮಧ್ಯೆಯೇ ನಿಲ್ಲಿಸಿದ್ದಾರೆ. ಅದರಲ್ಲಿ ದೊಡ್ಡ ಸ್ಟೀರಿಯೋ, ಸೈಡ್‌ಬಾರ್ ಬದಲು ಚೈನ್ ಅನ್ನು ಅಳವಡಿಸಿರುವುದು ಪತ್ತೆಯಾಗಿದೆ. ಮುಂಭಾಗದ ಗ್ಲಾಸ್‌ನಲ್ಲಿ ದೊಡ್ಡ ಸ್ಟಿಕ್ಕರ್‌ಗಳು. ಹಾರ್ನ್ ಪಕ್ಕದಲ್ಲಿದ್ದ ವೈರ್. ಹೀಗೆ ಸಾರಿಗೆ ನಿಯಮವನ್ನು ಉಲ್ಲಂಘಿಸಿದ ಆಟೋರಿಕ್ಷಾವನ್ನು ಅವರು ವಶಪಡಿಸಿಕೊಂಡು ತಮ್ಮ ಕಚೇರಿಗೆ ತಂದರು. ರಿಕ್ಷಾ ಚಾಲಕನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಹೆಚ್ಚುವರಿಯಾಗಿ ಅಳವಡಿಸಿದ್ದ ವಸ್ತುಗಳನ್ನು ಸಾರಿಗೆ ಇನ್ಸ್‌ಪೆಕ್ಟರ್ ಚಾರ್ಲ್ಸ್ ವಶಪಡಿಸಿಕೊಂಡಿದ್ದಾರೆ.
ಚುರುಕುಗೊಂಡ ತನಿಖೆ: ನಗರದ ಪೂರ್ವ ಹಾಗೂ ಪಶ್ಚಿಮ ವಲಯ ಸಾರಿಗೆ ಅಧಿಕಾರಿಗಳು ಉಪ ಆಯುಕ್ತರ ಮಾರ್ಗದರ್ಶನದಲ್ಲಿ ದಾಳಿ ಚುರುಕು ಗೊಳಿಸಿದ್ದಾರೆ. ಎರಡೂ ಕಡೆಯಲ್ಲಿ ಮಿತಿಗಿಂತ ಜೋರಾಗಿ ಚಲಾಯಿಸಿದ ೨೫೯ ವಾಹನಗಳಿಂದ ೨,೧೩,೩೫೮ ರೂ. ದಂಡ ವಶಪಡಿಸಿಕೊಂಡಿದ್ದಾರೆ. ಕಳೆದ ತಿಂಗಳಲ್ಲಿ ಒಂದು ವಾರ ತಪಾಸಣೆ ನಡೆಸಿ ೧೨೫೮ ಮೊಕದ್ದಮೆ ದಾಖಲಿಸಿ ೨,೬೩,೬೩೭ ರೂ. ದಂಡ ಸಂಗ್ರಹ ಮಾಡಲಾಗಿದೆ.
ಡಿಎಲ್, ಹೆಲ್ಮೆಟ್, ವಾಹನದ ದಾಖಲೆ, ವಿಮೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಯಾಣಿಕರ ಸಾಗಣೆ, ದೋಷಪೂರಿತ ನಾಮಫಲಕ, ವಾಯು ಮಾಲಿನ್ಯ ಪ್ರಮಾಣ ಪತ್ರಗಳನ್ನು ತಪಾಸಣೆ ವೇಳೆ ಪರೀಕ್ಷಿಸಲಾಗುತ್ತಿದೆ.

ಕಾರ್ಖಾನೆ ಮಾಲೀಕರಿಗೆ ಸಿಹಿ, ರೈತನಿಗೆ ಸಿಪ್ಪೆ !

ಮತ್ತೀಕೆರೆ ಜಯರಾಮ್ ಮಂಡ್ಯ
ಭರಿಸಲಾಗದಷ್ಟು ನಷ್ಟ, ಮಿತಿ ಮೀರಿದ ಸಾಲ, ಬೆಟ್ಟದೆತ್ತರಕ್ಕೆ ಬೆಳೆದು ನಿಂತಿರುವ ಬಡ್ಡಿಯ ಹೊರೆಯಿಂದ ನಲುಗಿರುವ ಸರಕಾರಿ ಸ್ವಾಮ್ಯದ ಮೈಷುಗರ‍್ಸ್‌ನ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯಲು ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಸರಕಾರವೇ ಮುಂದಾಗಿದೆ.
೨೦೧೦-೧೧ನೇ ಸಾಲಿನ ದರ ನಿಗದಿ ಸಂಬಂಧ ನಡೆಸುತ್ತಿರುವ ಚೌಕಾಶಿ, ೨೦೦೯- ೧೦ನೇ ಸಾಲಿನ ಬಾಕಿ ಪಾವತಿಗೆ ನಿರಾಕರಿಸುವ ಮೂಲಕ ಆಡಳಿತ ಮಂಡಳಿ ಮತ್ತು ಸರಕಾರ ರೈತರನ್ನು ಕಾರ್ಖಾನೆ ಯಿಂದ ದೂರ ಸರಿಯುವಂತೆ ಮಾಡಿದೆ.
ರೈತರಿಗಾಗಿ ಕಣ್ಣೀರು ಸುರಿಸುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮೈಷುಗರ‍್ಸ್ ಅಧ್ಯಕ್ಷ ನಾಗರಾಜಪ್ಪರಿಂದ ಬೆಳೆಗಾರರಲ್ಲಿ ಕಣ್ಣೀರು ಬರುತ್ತಿದೆ. ಈ ಮೂಲಕ ಪರೋಕ್ಷವಾಗಿ ಖಾಸಗಿ ಕಾರ್ಖಾನೆಗಳ ನೆರವಿಗೆ ನಿಂತಿರುವುದು ರೈತರನ್ನು ರೊಚ್ಚಿಗೆಬ್ಬಿಸಿದ್ದು ಚಳವಳಿಗೆ ಸಿದ್ಧತೆ ನಡೆಸಿದ್ದಾರೆ.
ರೈತರಿಗೆ ವಂಚನೆ: ಈ ಸಾಲಿನಲ್ಲಿ ಪೂರೈಸುವ ಪ್ರತಿ ಟನ್ ಕಬ್ಬಿಗೆ ೧೬೫೦ ರೂ. ಮುಂಗಡ ದರ ನಿಗದಿ ಯೊಂದಿಗೆ ಕಬ್ಬು ಅರೆಯಲು ಸಜ್ಜಾಗಿರುವ ಮೈಷು ಗರ‍್ಸ್, ಕಳೆದ ಸಾಲಿನಲ್ಲಿ ಪೂರೈಕೆಯಾದ ೧.೨೩ ಲಕ್ಷ ಟನ್ ಕಬ್ಬಿಗೆ ೧೫೦೦ ರೂ.ಗಿಂತ ಹೆಚ್ಚಿನ ದರ ಪಾವತಿ ನಿರಾಕರಿಸಿದೆ. ಈ ಹಿಂದಿನ ಸಾಲಿನ ಪ್ರತಿ ಟನ್ ಕಬ್ಬಿಗೆ ಜಿಲ್ಲಾಧಿಕಾರಿ ನೇತೃತ್ವದ ಸಭೆ ೧೯೫೦ ರೂ. ದರ ನಿಗದಿಪಡಿಸಿತ್ತು.  ಇದರ ಪಾಲನೆಗೆ ಖಾಸಗಿ ಸಕ್ಕರೆ ಕಾರ್ಖಾನೆಗಳು ಬದ್ಧ. ಎರಡು ಕಾರ್ಖಾನೆಗಳು ಬಾಕಿ ಪಾವತಿ ಪ್ರಾರಂಭಿಸಿವೆ. ಆದರೆ, ಮೈಷು ಗರ‍್ಸ್ ಮಾತ್ರ ಮುಂಗಡ ಎಂದು ಘೋಷಿಸಿದ್ದ ೧೫೦೦ ರೂ. ದರವೇ ಅಂತಿಮ ಎನ್ನುತ್ತಿದೆ. ಮೈಷುಗರ‍್ಸ್‌ನ ದರವನ್ನೇ ಉಳಿದ ಕಾರ್ಖಾನೆಗಳು ಪಾಲಿಸುತ್ತಿದ್ದವು. ಕಬ್ಬಿನ ಕೊರತೆ ಯಿಂದ ೩ ವರ್ಷದಿಂದೀಚೆಗೆ ದರ ಸಮರದಿಂದ ಖಾಸಗಿ ಕಾರ್ಖಾನೆಗಳು ರೈತರಿಗೆ ಹೆಚ್ಚು ದರ ನೀಡುತ್ತಿವೆ.
ಸಬೂಬು ಕೇಳೋರಿಲ್ಲ: ಮೈಷುಗರ‍್ಸ್ ನಷ್ಟ ದಲ್ಲಿದ್ದು, ಸಾಲ ಮತ್ತು ಬಡ್ಡಿ ಹೆಚ್ಚಿದೆ. ಕಾರ್ಖಾನೆ ಯಲ್ಲಿ ಕೋ ಜನರೇಷನ್, ಡಿಸ್ಟಿಲರಿ ಇಲ್ಲ. ಹಾಗಾಗಿ ಹೆಚ್ಚು ಬೆಲೆ ನೀಡಲಾಗದೆಂಬ ಆಡಳಿತ ಮಂಡಳಿ ಸಬೂಬನ್ನು ಕೇಳುವವರಿಲ್ಲ. ತಮ್ಮ ಬೆಳೆಗೆ ಒಳ್ಳೆಯ ಬೆಲೆ ಸಿಗಬೇಕೆನ್ನುವುದು ರೈತರ ನಿಲುವು. ಹೆಗ್ಗಣಗಳಂತೆ ತಿಂದು ತೇಗಿದ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯಿಂದ ಉಂಟಾದ ನಷ್ಟಕ್ಕೆ ತಾವೇಕೆ ದಂಡ ತೆರಬೇಕೆನ್ನುವುದು ರೈತರ ಪ್ರಶ್ನೆ. ಕಬ್ಬು ಸಾಗಣೆಗೆ ವ್ಯಾಪ್ತಿ ನಿರ್ಬಂಧವಿಲ್ಲ. ಹೆಚ್ಚು ದರ ಹಾಗೂ ಸಕಾಲದಲ್ಲಿ  ಪಾವತಿಸುವ ಕಾರ್ಖಾನೆಗೆ ಕಬ್ಬು ಹರಿಸ ಬಹುದು. ಹಾಗಾಗಿ ಈ ಬಾರಿಯೂ ಮೈಷುಗರ‍್ಸ್‌ಗೆ ಕಬ್ಬಿನ ಕೊರತೆ ಎದುರಾಗಲಿದೆ.
ಹೋರಾಟಕ್ಕೆ ನಾಂದಿ: ಕಳೆದ ವರ್ಷ ಪೂರೈಸಿದ ಕಬ್ಬಿಗೆ ೪೫೦ ರೂ. ಬಾಕಿ ಪಾವತಿ, ಪ್ರಸಕ್ತ ವರ್ಷ ಪ್ರತಿ ಟನ್ ಕಬ್ಬಿಗೆ ೨ ಸಾವಿರ ರೂ. ನಿಗದಿಯೊಂದಿಗೆ ಜುಲೈ ಮೊದಲ ವಾರದಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭಿಸ ಬೇಕೆಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಎಚ್ಚರಿಸಿತ್ತು. ಸಮಿತಿ ಅಧ್ಯಕ್ಷ ಜಿ.ಮಾದೇಗೌಡರು ಮತ್ತೊಂದು ವಾರ ಗಡುವು ವಿಸ್ತರಿಸಿದ್ದಾರೆ. ಜು. ೧೦ ಅಥವಾ ೧೧ ರಂದು ಸಭೆ ನಡೆಯಲಿದ್ದು, ಮೈಷುಗರ‍್ಸ್ ನಿರ್ಧಾರಕ್ಕೆ ಸಮ್ಮತಿಸುವುದು ಅಸಾಧ್ಯ ಎನ್ನುವಂಥ ಸ್ಥಿತಿ ಇದೆ.ಸಮಿತಿ ಸಭೆಯಲ್ಲಿ ಜಾ.ದಳ ಮುಖಂಡರು ಸಕ್ರಿಯರಾದ ಬೆನ್ನಲ್ಲೇ ರೈತ ಸಂಘ ದೂರ ಸರಿದು ಪ್ರತ್ಯೇಕ ಚಳವಳಿಗೆ ವೇದಿಕೆ ಸಿದ್ಧಗೊಳಿಸುತ್ತಿದೆ.

ಮಾದರಿ ಶಾಲೆ ಸೇರಲು ೧೮೪೧ ವಿದ್ಯಾರ್ಥಿಗಳ ಅರ್ಜಿ !

ವಿಕ ವಿಶೇಷ ಮೈಸೂರು
ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ ಆರಂಭವಾಗು ತ್ತಿರುವ ಆರು ಮಾದರಿ ಶಾಲೆಗಳಿಗೆ ಪ್ರವೇಶ ಬಯಸಿ ೧೮೪೧ ವಿದ್ಯಾರ್ಥಿಗಳು ಸಾಮಾನ್ಯ ಪರೀಕ್ಷೆ ಬರೆದಿದ್ದಾರೆ.
ಒಂದು ಶಾಲೆಗೆ ೮೦ ವಿದ್ಯಾರ್ಥಿಗಳನ್ನು ದಾಖಲಿಸಿ ಕೊಳ್ಳಲು ಅವಕಾಶವಿದ್ದು, ಒಟ್ಟು ೪೮೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಶೈಕ್ಷಣಿಕವಾಗಿ ಹಿಂದುಳಿದ  ತಾಲೂಕುಗಳಲ್ಲಿ ಆರಂಭಿಸುತ್ತಿರುವ ಈ ಶಾಲೆಗಳು ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿರಲಿವೆ. ೬ ರಿಂದ ೧೦ನೇ ತರಗತಿವರೆಗೆ ಸಂಪೂರ್ಣ ಉಚಿತವಾಗಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುವುದು. ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಆಟದ ಮೈದಾನ, ಪದವಿ ಹಾಗೂ ಸ್ನಾತ ಕೋತ್ತರ ಪದವಿಯೊಂದಿಗೆ ತರಬೇತಿ ಪಡೆದ ಶಿಕ್ಷಕರನ್ನು ಒಳಗೊಂಡಿರುವ ಈ ಶಾಲೆಗಳು ಒಂದರ್ಥದಲ್ಲಿ ಗ್ರಾಮೀಣ ಮಕ್ಕಳ ಹಾಗೂ ಪೋಷಕರ ಇಂಗ್ಲಿಷ್ ಮಾಧ್ಯಮದ ಹಸಿವನ್ನು ನೀಗಿಸಲೆಂದೇ ಆರಂಭವಾಗು ತ್ತಿವೆ. ಶಾಲೆಗಳು ಕೇಂದ್ರೀಯ ಮಾದರಿಯಲ್ಲಿ ಇರುತ್ತವೆ ಯಾದರೂ, ಪಠ್ಯಕ್ರಮ ಮಾತ್ರ ರಾಜ್ಯದ್ದೇ ಆಗಿರುತ್ತದೆ.
ಇಷ್ಟೆಲ್ಲಾ ಮಹತ್ವ ಹೊಂದಿರುವ ಹಾಗೂ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿರುವ ಈ ಶಾಲೆಗಳಿಗೆ ಪ್ರವೇಶ ಬಯಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ಜಿಲ್ಲೆಯಲ್ಲಿ ಕಡಿಮೆ ಎಂದೇ ಹೇಳಬೇಕು. ಲಭ್ಯ ಒಂದು ಸೀಟಿಗೆ ಸರಾಸರಿ ನಾಲ್ವರು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದಾರೆ.
‘ಇದೇ ವರ್ಷ ಮಾದರಿ ಶಾಲೆಗಳು ಆರಂಭವಾಗುತ್ತಿ ರುವುದರಿಂದ, ಪೋಷಕರಿಗೆ ಈ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಇದಲ್ಲದೆ. ಮೊದಲ ವರ್ಷ ವಸತಿ ನೀಡುತ್ತಿಲ್ಲ. ಹಾಗಾಗಿ ಬಹಳಷ್ಟು ಪೋಷಕರು ಮಕ್ಕಳನ್ನು ಈ ಶಾಲೆಗೆ ಕಳುಹಿಸಲು ಬಯಸುತ್ತಿಲ್ಲ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗೇಂದ್ರ ಕುಮಾರ್ ವಿಜಯ ಕರ್ನಾಟಕಕ್ಕೆ ತಿಳಿಸಿದರು.
‘ಪ್ರಸಕ್ತ ೨೦೧೦-೧೧ನೇ ಸಾಲಿನಿಂದ ೬ನೇ ತರಗತಿ  ಮಾತ್ರ ಆರಂಭಿಸುತ್ತಿದ್ದು, ನಂತರದ ವರ್ಷಗಳಲ್ಲಿ ಸ್ವಾಭಾವಿಕ ಬೆಳವಣಿಗೆಯಲ್ಲಿ ೧೦ನೇ ತರಗತಿವರೆಗೆ ಶಾಲೆ ರೂಪುಗೊಳ್ಳಲಿದೆ. ಈ ವರ್ಷದ ಶಾಲೆ ವಸತಿ ರಹಿತ ವಾಗಿದ್ದು, ಕ್ರಮೇಣ ವಸತಿ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಯ ಆರು ಶಾಲೆಗಳಿಗೆ  ತಲಾ ಮೂವರು ಶಿಕ್ಷಕರಂತೆ ೧೮ ಜನ ಶಿಕ್ಷಕರನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ಅರ್ಹ ಶಿಕ್ಷಕರ ಸಂದ ರ್ಶನ ಮಾಡಲಾಗಿದೆ. ಜು.೧೫ಕ್ಕೆ ಶಾಲೆ ಆರಂಭಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.
ಸರ್ವಶಿಕ್ಷಣ ಅಭಿಯಾನದ ಮುಕ್ತಾಯದ ಹಂತಕ್ಕೆ ಬಂದಿದ್ದು, ಇದರ ಮುಂದುವರಿದ ಭಾಗವಾಗಿ ಕೇಂದ್ರ ಸರಕಾರ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ವನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯಡಿಯಲ್ಲಿ ಪ್ರೌಢಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಬೇಕೆಂಬುದು ಸರಕಾರಗಳ ಚಿಂತನೆ. ಈ ಹಿನ್ನೆಲೆಯಲ್ಲಿ ರಾಷ್ಟ್ರದ ಎಲ್ಲ ಹಿಂದುಳಿದ ತಾಲೂಕುಗಳಲ್ಲಿ ೬೦೦೦ ಕೇಂದ್ರೀಯ ವಿದ್ಯಾಲಯ ಮಾದರಿಯ ಶಾಲೆಗಳನ್ನು ಆರಂಭಿಸುತ್ತಿದೆ.

ಪರಿಷತ್ ಚುನಾವಣೆ: ಶೇ.೫೩.೦೬ಮತದಾನ

ವಿಕ ಸುದ್ದಿಲೋಕ ಮೈಸೂರು
ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಬುಧವಾರ ನಡೆದ ಚುನಾವಣೆ ಯಲ್ಲಿ ಶೇ.೫೩.೦೬ ಮತದಾನ ನಡೆದಿದೆ.
ಪಟ್ಟಿಯಲ್ಲಿ ಹೆಸರಿಲ್ಲ ಎಂದು ನಗರದ ಶ್ರೀರಾಂಪುರ ಮತಗಟ್ಟೆಯಲ್ಲಿ,ಮುಖ್ಯ ಮಂತ್ರಿ‘ಕೈ ಮುಗಿಯುವ ಚಿತ್ರ’ ಇರುವ ಜಾಹೀರು ಫಲಕ  ಮುಚ್ಚಲು ಆಗ್ರಹಿಸಿ ಕೆ.ಆರ್.ನಗರ ಮತಗಟ್ಟೆ ಎದುರು ಪ್ರತಿಭಟನೆ, ಮಾತಿನ ಚಕಮಕಿ ನಡೆ ದಿದ್ದರ ಹೊರತು ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು.
ಮೈಸೂರು, ಮಂಡ್ಯ, ಚಾಮರಾಜ ನಗರ ಹಾಗೂ ಹಾಸನ ಜಿಲ್ಲೆಯನ್ನೊಳ ಗೊಂಡ ಕ್ಷೇತ್ರದ  ಒಟ್ಟು ೮೮,೨೮೩ ಮತ ದಾರ ಪೈಕಿ ೪೬,೮೪೭ಮಂದಿ ಹಕ್ಕು ಚಲಾ ಯಿಸಿದ್ದಾರೆ. ಶೇ.೪೬ರಷ್ಟು ಪ್ರಜ್ಞಾವಂತ ಮತದಾರರು ಜವಾಬ್ದಾರಿ ಮರೆತು ಮನೆಯಲ್ಲೇ ಕುಳಿತಿದ್ದರು. ಈ ಪೈಕಿ ಹಲವರು ಸರಕಾರ ನೀಡಿದ ‘ಸಾಂದರ್ಭಿಕ ರಜೆ’ ಸೌಲಭ್ಯವನ್ನು ಸದ್ಬಳಕೆ ಮಾಡಿ ಕೊಂಡಿದ್ದಾರೆ  ಎನ್ನುವುದು ವಿಪರ್ಯಾಸ.
ಚಾ.ನಗರ ಹೆಚ್ಚು: ಚಾಮರಾಜನಗರ ದಲ್ಲಿ ಅತಿ ಹೆಚ್ಚು ಶೇ. ೬೧.೬೨ರಷ್ಟು ಮಂದಿ (ಒಟ್ಟು:೫,೮೪೫, ಚಲಾಯಿಸಿದ ವರು: ೩,೬೦೨)ಹಕ್ಕು ಚಲಾಯಿಸಿದ್ದಾರೆ. ಅತಿ ಹೆಚ್ಚು ಮತದಾರರನ್ನು ಹೊಂದಿ ರುವ ಮೈಸೂರು ಜಿಲ್ಲೆಯಲ್ಲಿ (೪೩,೭೮೪ ) ಅತಿ ಕಡಿಮೆ ಶೇ.೪೭.೯೯ರಷ್ಟು (೨೧,೦೧೭) ಮತದಾನವಾಗಿದೆ.
ಮಂಡ್ಯ ಜಿಲ್ಲೆಯ ೨೧,೧೦೬ ಮತ ದಾರ ಪೈಕಿ  ೧೨,೧೪೨ ಮಂದಿ (ಶೇ.೫೭.೦೫) ಹಕ್ಕು ಚಲಾಯಿಸಿದ್ದಾರೆ. ಹಾಸನ ಜಿಲ್ಲೆಯ ೧೭,೫೪೮ ಮತದಾರರ ಪೈಕಿ  ೧೦,೦೮೬ ಮಂದಿ ಮತದಾನ (ಶೇ.೫೭.೪೭ರಷ್ಟು ) ಮಾಡಿದ್ದಾರೆ.
ಆಕ್ಷೇಪ, ಪ್ರತಿಭಟನೆ: ಮತಪಟ್ಟಿ ಕುರಿತಂತೆ ನಾಲ್ಕು ಜಿಲ್ಲೆಯ ಬಹುತೇಕ ಎಲ್ಲಾ ಮತಗಟ್ಟೆಗಳ ಮುಂದೆ ತೀವ್ರ ಆಕ್ಷೇಪ  ಸಾಮಾನ್ಯವಾಗಿತ್ತು. ವಿವಿಧೆಡೆ ಪ್ರತಿಭಟನೆಯೂ ನಡೆಯಿತು. ಮತ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿದೆ, ಬದುಕಿರುವ ಮತದಾರರ ಹೆಸರಿನ ಮುಂದೆ ‘ನಿಧನ’ವನ್ನು ನಮೂದಿಸ ಲಾಗಿದೆ ಎಂಬಿತ್ಯಾದಿ ಆರೋಪ, ಸ್ವಂತ ಮನೆಯಲ್ಲಿದ್ದರೂ ಪಟ್ಟಿಯ ಪ್ರಕಾರ  ‘ಮನೆ ಖಾಲಿ’ಮಾಡಿಸಿದ ನೂರಾರು ನಿದರ್ಶನಗಳು ವರದಿಯಾಗಿವೆ. ಇದೇ ಕಾರಣಕ್ಕೆ ಹಕ್ಕು ವಂಚಿತರಾದವರ ಸಂಖ್ಯೆ ದೊಡ್ಡದಿತ್ತು.
ಹೊರಗೆ ಕಾವು: ಉಳಿದಂತೆ, ಎಲ್ಲಾ ಮತಗಟ್ಟೆಗಳ ಮುಂದೆ ಮತದಾರರಲ್ಲದ ರಾಜಕಾರಣಿಗಳ ಜಾತ್ರೆಯೇ ನೆರೆದಿತ್ತು. ಅಭ್ಯರ್ಥಿಗಳ ಕಟ್ಟಾ ಬೆಂಬಲಿಗರು, ಪಕ್ಷ ನಿಷ್ಠ ಕಾರ‍್ಯಕರ್ತರು ಕೊನೆಯ ಹಂತದ ಮನವೊಲಿಕೆ ಪ್ರಯತ್ನ ನಿರತರಾಗಿದ್ದರು. ಕೆಲವೆಡೆ ಜನಪ್ರತಿನಿಧಿಗಳು,ಮುಂಚೂಣಿ ಮುಖಂಡರೇ ‘ಚೀಟಿ ಹಂಚುವ’ ಚಪ್ಪರ ಗಳಡಿ ನಿಂತು ಸ್ಪರ್ಧೆಗೆ ಕಾವು ನೀಡಿ ದರು. ಕೆಲವೆಡೆ ಬೆಳಗ್ಗೆ  ಸ್ವಲ್ಪ ಹೊತ್ತು ಮಳೆ ಸಿಂಚನವಾಯಿತಾದರೂ ಮತದಾನದ ಉತ್ಸಾಹವನ್ನು ಕುಂದಿಸಲಿಲ್ಲ.
ಜು.೩ಕ್ಕೆ ಎಣಿಕೆ: ಪ್ರಮುಖ ಪಕ್ಷಗಳ ನಾಲ್ವರು, ಕಠಿಣ ಸ್ಪರ್ಧೆ ನೀಡಿದ ಕೆಲವು ಪಕ್ಷೇತರರು ಸೇರಿದಂತೆ ೨೫ ಅಭ್ಯರ್ಥಿಗಳ ಹಣೆ ಬರಹ  ಮತಪೆಟ್ಟಿಗೆಯಲ್ಲಿ ಅಡ ಗಿದ್ದು, ಜು.೩ರಂದು ಪ್ರಕಟವಾಗಲಿದೆ. ಅಂದು ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನಲ್ಲಿ  ಎಣಿಕೆ ಪ್ರಕ್ರಿಯೆ ನಡೆಯಲಿದೆ.