ಹಿರಿಯ ಸಾಹಿತಿ ಶಿಕಾರಿಪುರ ಹರಿಹರೇಶ್ವರ ಇನ್ನಿಲ್ಲ

ಹರಿಹರೇಶ್ವರ ಅವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ದಲ್ಲಿ ೧೯೩೬ರಲ್ಲಿ. ಅಲ್ಲಿಯೇ ಪ್ರಾಥಮಿಕ, ಪ್ರೌಢಶಿಕ್ಷಣ. ದಾವಣಗೆರೆ ಯಲ್ಲಿ ಕಾಲೇಜು.ಬಳಿಕ ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉನ್ನತ ಅಧ್ಯಯನ. ಬಳಿಕ ತಮಿಳುನಾಡಿನ ನೈವೇಲಿ ಯಲ್ಲಿ ಎಂಜಿನಿಯರ್ ಆಗಿ ವೃತ್ತಿ ಬದುಕು ಆರಂಭ. ಬೆಂಗಳೂರಿನಲ್ಲಿ ಕೆಲ ವರ್ಷ ಉಪನ್ಯಾಸಕರಾಗಿ ಸೇವೆ. ಇದೇ ವೇಳೆ ಅವರಲ್ಲಿ ಮೊಳೆತದ್ದು  ಕನ್ನಡದ ಪ್ರೀತಿ. ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಬೆಂಗಳೂರಿನ ಛಾಯಾ ರವಿ ಕಲಾವಿದರೊಂದಿಗೆ ಗುರುತಿಸಿಕೊಂಡರು. ಬೆಂಗಳೂರು ಆಕಾಶವಾಣಿಯ ಹಲವು ನಾಟಕಗಳಲ್ಲಿ  ಪಾತ್ರ ನಿರ್ವಹಣೆ.ನಾಗಲಕ್ಷ್ಮಿ ಅವರೊಂದಿಗೆ ವಿವಾಹವಾದ ನಂತರ ಹರಿಹೇಶ್ವರ ಅವರ ಕನ್ನಡ ಪ್ರೇಮದ ಧ್ಯೇಯಕ್ಕೆ ಇಮ್ಮಡಿ ಶಕ್ತಿ.
೭೦-೮೦ರ ದಶಕದಲ್ಲಿ ಉದ್ಯೋಗ ಅರಸಿ ಅವರು ಹೊರಟದ್ದು ಮೊದಲು ಇರಾನ್‌ಗೆ. ಅಲ್ಲಿಂದ ಹಾರಿದ್ದು ಅಮೆರಿಕಕ್ಕೆ. ಒಂದೆರಡು ವರ್ಷದಲ್ಲಿ ಅವರಿಗೆ ಅಮೆರಿಕಾವೇ ಕನ್ನಡದ ಮನೆಯಾಯಿತು. ಕನ್ನಡದ ಕೆಲಸ ನಿರಂತರ. ವೃತ್ತಿಯ ಜತೆ ಜತೆಯಲ್ಲಿ ಪ್ರವೃತ್ತಿಗೂ ಮಹತ್ವ ನೀಡುತ್ತಾ ಹೋದರು.
ಹರಿಹರೇಶ್ವರರ  ‘ಕನ್ನಡ ಉಳಿಸಿ ಬೆಳಸುವ ಬಗೆ ’ ಈ ನಿಟ್ಟಿನಲ್ಲಿ ಕನ್ನಡಿಗರನ್ನು ಜಾಗೃತಿಗೊಳಿಸುವಲ್ಲಿ ಸಫಲ. ಅಮೆರಿಕನ್ನಡಿಗರಲ್ಲಿ ಕನ್ನಡ ಪುಸ್ತಕಗಳನ್ನು ಕೊಂಡು ಓದುವುದು, ಕನ್ನಡಿಗರಿರುವಾಗ ಅವರ ಜತೆ ಕನ್ನಡದಲ್ಲೇ ಮಾತನಾಡುವುದು, ಅಮೆರಿಕನ್ನಡ ಪತ್ರಿಕೆಯ ಮೂಲಕ ಕನ್ನಡ ಪಾಠ ಮಾಡುವುದು, ಕನ್ನಡ ಶಾಲೆ ತೆರೆಯುವುದು, ಕನ್ನಡದಲ್ಲಿ ಕಥೆ, ಕವನ ಬರೆಯಲು ಉತ್ತೇಜಿಸುವುದು ಅವರ ಮುಖ್ಯ ಧ್ಯೇಯ.
ಬಹುತೇಕರಿಗೆ ಡಾಲರ್ ಮುಂದೆ ಕನ್ನಡ ಕಾಣುವುದಿಲ್ಲ. ಆದರೆ ವಿದೇಶದಲ್ಲಿದ್ದೂ ಕನ್ನಡವನ್ನೇ ಉಸಿರನ್ನಾಗಿಸಿಕೊಂಡ ಹರಿಹರೇಶ್ವರರು ಕನ್ನಡಕ್ಕಾಗಿ ಶ್ರಮಿಸಿದ್ದಾರೆ. ‘ಕರ್ನಾಟಕದಿಂದ ಅಮೆರಿಕಕ್ಕೆ ಹೋದವರೆ ಲ್ಲರೂ ನಯಾಗರ, ಸ್ಟ್ಯಾಚು ಆಫ್ ಲಿಬರ್ಟಿ, ವಾಷಿಂಗ್‌ಟನ್ ಡಿಸಿ., ಕ್ಯಾಲಿಫೋರ್ನಿಯಾ ನೋಡದೇ ಬರಬಹುದು.ಹರಿಹರೇಶ್ವರರನ್ನು ಭೇಟಿ ಯಾಗದೇ ಬರುವುದಿಲ್ಲ’ ಎನ್ನುವುದು ಅವರ ಪ್ರೀತಿಯನ್ನು ಅನುಭವಿಸಿ ಬಂದವರು ಹೇಳಿದ ಮಾತು.ಅಷ್ಟರ ಮಟ್ಟಿಗೆ ಕನ್ನಡದ ದಿಗ್ಗಜ ಸಾಹಿತಿ ಗಳು. ಚಲನಚಿತ್ರ ನಿರ್ದೇಶಕರು. ನಾಟಕಕಾರರು. ಪತ್ರಕರ್ತರು... ಹೀಗೆ ಎಲ್ಲಾ ಕ್ಷೇತ್ರದವರೊಂದಿಗೆ ಅವರ ಒಡನಾಟ.ರಸ್ತೆ, ಸೇತುವೆಯ ನಿರ್ಮಾಣಕ್ಕೆ ಅಚ್ಚುಕಟ್ಟಾದ ವಿನ್ಯಾಸಗಳನ್ನು ರೂಪಿಸುತ್ತಿದ್ದ ಹರಿಹರೇಶ್ವರ ಅಷ್ಟೇ ದೊಡ್ಡ ಪ್ರೀತಿ ಸೌಧವನ್ನು ಕಟ್ಟಿಕೊಂಡಿದ್ದರು.
ಅಕ್ಕ ಯಶಸ್ಸಿನ ರೂವಾರಿ
೨೦೦೦ರಲ್ಲಿ ನಡೆದ ಮೊದಲನೇ ಅಕ್ಕ ಸಮ್ಮೇಳನದ ಹಿಂದೆ ನಿಂತು ಯಶಸ್ವಿಯಾಗಿ ದುಡಿದವರು ಇದೇ ಹರಿಹರೇಶ್ವರ. ಅಕ್ಕ ಸಮ್ಮೇಳನದ ಸ್ಮರಣ ಸಂಚಿಕೆ  ಸಂಪಾದಕರಾಗಿದ್ದರು. ಅಮೆರಿಕನ್ನಡ ಎನ್ನುವ ಪತ್ರಿಕೆ ಸಂಪಾದಕರಾಗಿ ಕಕ್ಕುಲತೆಯಿಂದಲೇ ಅದನ್ನು ಹೊರತರುತ್ತಿದ್ದರು. ಅನಿವಾಸಿ ಕನ್ನಡಿಗನ ಸಾಧನೆ
ಪರಿಗಣಿಸಿ ೧೯೯೯ರಲ್ಲಿ ಕರ್ನಾಟಕ ಸರಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ೨೦ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಇವರ ‘ಮಾತಿನ ಚಾವಡಿ’ ಇತ್ತೀಚಿಗಷ್ಟೇ ಲೋಕಾರ್ಪಣೆಗೊಂಡಿತ್ತು.
ಏಳೆಂಟು ವರ್ಷದ ಹಿಂದೆ ಸ್ವದೇಶಕ್ಕೆ ವಾಪಸಾದ ಅವರು, ನಗರದ ಸರಸ್ವತಿಪುರಂನಲ್ಲಿ ಪತ್ನಿಯೊಂದಿಗೆ ನೆಲೆಸಿದ್ದರು. ನಗರದಲ್ಲಿ ನಡೆಯುವ ಬಹುತೇಕ ಸಾಹಿತ್ಯಕ ಕಾರ‍್ಯಕ್ರಮಗಳಿಗೆ ತಪ್ಪದೇ ಹಾಜರಾಗುತ್ತಿದ್ದರಲ್ಲದೆ, ಕನ್ನಡದ ಕಾರ್ಯಕ್ರಮಗಳಿಗೆ ಉದಾರ ನೆರವಿನ ಹಸ್ತವನ್ನೂ ಚಾಚುತ್ತಿದ್ದರು. ರಂಗಭೂಮಿ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನೃಪತುಂಗ ಕನ್ನಡ ಶಾಲೆಯ ಧರ್ಮದರ್ಶಿಯೂ ಹೌದು.

1 ಕಾಮೆಂಟ್‌: