ಕಾರ್ಖಾನೆ ಮಾಲೀಕರಿಗೆ ಸಿಹಿ, ರೈತನಿಗೆ ಸಿಪ್ಪೆ !

ಮತ್ತೀಕೆರೆ ಜಯರಾಮ್ ಮಂಡ್ಯ
ಭರಿಸಲಾಗದಷ್ಟು ನಷ್ಟ, ಮಿತಿ ಮೀರಿದ ಸಾಲ, ಬೆಟ್ಟದೆತ್ತರಕ್ಕೆ ಬೆಳೆದು ನಿಂತಿರುವ ಬಡ್ಡಿಯ ಹೊರೆಯಿಂದ ನಲುಗಿರುವ ಸರಕಾರಿ ಸ್ವಾಮ್ಯದ ಮೈಷುಗರ‍್ಸ್‌ನ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯಲು ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಸರಕಾರವೇ ಮುಂದಾಗಿದೆ.
೨೦೧೦-೧೧ನೇ ಸಾಲಿನ ದರ ನಿಗದಿ ಸಂಬಂಧ ನಡೆಸುತ್ತಿರುವ ಚೌಕಾಶಿ, ೨೦೦೯- ೧೦ನೇ ಸಾಲಿನ ಬಾಕಿ ಪಾವತಿಗೆ ನಿರಾಕರಿಸುವ ಮೂಲಕ ಆಡಳಿತ ಮಂಡಳಿ ಮತ್ತು ಸರಕಾರ ರೈತರನ್ನು ಕಾರ್ಖಾನೆ ಯಿಂದ ದೂರ ಸರಿಯುವಂತೆ ಮಾಡಿದೆ.
ರೈತರಿಗಾಗಿ ಕಣ್ಣೀರು ಸುರಿಸುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮೈಷುಗರ‍್ಸ್ ಅಧ್ಯಕ್ಷ ನಾಗರಾಜಪ್ಪರಿಂದ ಬೆಳೆಗಾರರಲ್ಲಿ ಕಣ್ಣೀರು ಬರುತ್ತಿದೆ. ಈ ಮೂಲಕ ಪರೋಕ್ಷವಾಗಿ ಖಾಸಗಿ ಕಾರ್ಖಾನೆಗಳ ನೆರವಿಗೆ ನಿಂತಿರುವುದು ರೈತರನ್ನು ರೊಚ್ಚಿಗೆಬ್ಬಿಸಿದ್ದು ಚಳವಳಿಗೆ ಸಿದ್ಧತೆ ನಡೆಸಿದ್ದಾರೆ.
ರೈತರಿಗೆ ವಂಚನೆ: ಈ ಸಾಲಿನಲ್ಲಿ ಪೂರೈಸುವ ಪ್ರತಿ ಟನ್ ಕಬ್ಬಿಗೆ ೧೬೫೦ ರೂ. ಮುಂಗಡ ದರ ನಿಗದಿ ಯೊಂದಿಗೆ ಕಬ್ಬು ಅರೆಯಲು ಸಜ್ಜಾಗಿರುವ ಮೈಷು ಗರ‍್ಸ್, ಕಳೆದ ಸಾಲಿನಲ್ಲಿ ಪೂರೈಕೆಯಾದ ೧.೨೩ ಲಕ್ಷ ಟನ್ ಕಬ್ಬಿಗೆ ೧೫೦೦ ರೂ.ಗಿಂತ ಹೆಚ್ಚಿನ ದರ ಪಾವತಿ ನಿರಾಕರಿಸಿದೆ. ಈ ಹಿಂದಿನ ಸಾಲಿನ ಪ್ರತಿ ಟನ್ ಕಬ್ಬಿಗೆ ಜಿಲ್ಲಾಧಿಕಾರಿ ನೇತೃತ್ವದ ಸಭೆ ೧೯೫೦ ರೂ. ದರ ನಿಗದಿಪಡಿಸಿತ್ತು.  ಇದರ ಪಾಲನೆಗೆ ಖಾಸಗಿ ಸಕ್ಕರೆ ಕಾರ್ಖಾನೆಗಳು ಬದ್ಧ. ಎರಡು ಕಾರ್ಖಾನೆಗಳು ಬಾಕಿ ಪಾವತಿ ಪ್ರಾರಂಭಿಸಿವೆ. ಆದರೆ, ಮೈಷು ಗರ‍್ಸ್ ಮಾತ್ರ ಮುಂಗಡ ಎಂದು ಘೋಷಿಸಿದ್ದ ೧೫೦೦ ರೂ. ದರವೇ ಅಂತಿಮ ಎನ್ನುತ್ತಿದೆ. ಮೈಷುಗರ‍್ಸ್‌ನ ದರವನ್ನೇ ಉಳಿದ ಕಾರ್ಖಾನೆಗಳು ಪಾಲಿಸುತ್ತಿದ್ದವು. ಕಬ್ಬಿನ ಕೊರತೆ ಯಿಂದ ೩ ವರ್ಷದಿಂದೀಚೆಗೆ ದರ ಸಮರದಿಂದ ಖಾಸಗಿ ಕಾರ್ಖಾನೆಗಳು ರೈತರಿಗೆ ಹೆಚ್ಚು ದರ ನೀಡುತ್ತಿವೆ.
ಸಬೂಬು ಕೇಳೋರಿಲ್ಲ: ಮೈಷುಗರ‍್ಸ್ ನಷ್ಟ ದಲ್ಲಿದ್ದು, ಸಾಲ ಮತ್ತು ಬಡ್ಡಿ ಹೆಚ್ಚಿದೆ. ಕಾರ್ಖಾನೆ ಯಲ್ಲಿ ಕೋ ಜನರೇಷನ್, ಡಿಸ್ಟಿಲರಿ ಇಲ್ಲ. ಹಾಗಾಗಿ ಹೆಚ್ಚು ಬೆಲೆ ನೀಡಲಾಗದೆಂಬ ಆಡಳಿತ ಮಂಡಳಿ ಸಬೂಬನ್ನು ಕೇಳುವವರಿಲ್ಲ. ತಮ್ಮ ಬೆಳೆಗೆ ಒಳ್ಳೆಯ ಬೆಲೆ ಸಿಗಬೇಕೆನ್ನುವುದು ರೈತರ ನಿಲುವು. ಹೆಗ್ಗಣಗಳಂತೆ ತಿಂದು ತೇಗಿದ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯಿಂದ ಉಂಟಾದ ನಷ್ಟಕ್ಕೆ ತಾವೇಕೆ ದಂಡ ತೆರಬೇಕೆನ್ನುವುದು ರೈತರ ಪ್ರಶ್ನೆ. ಕಬ್ಬು ಸಾಗಣೆಗೆ ವ್ಯಾಪ್ತಿ ನಿರ್ಬಂಧವಿಲ್ಲ. ಹೆಚ್ಚು ದರ ಹಾಗೂ ಸಕಾಲದಲ್ಲಿ  ಪಾವತಿಸುವ ಕಾರ್ಖಾನೆಗೆ ಕಬ್ಬು ಹರಿಸ ಬಹುದು. ಹಾಗಾಗಿ ಈ ಬಾರಿಯೂ ಮೈಷುಗರ‍್ಸ್‌ಗೆ ಕಬ್ಬಿನ ಕೊರತೆ ಎದುರಾಗಲಿದೆ.
ಹೋರಾಟಕ್ಕೆ ನಾಂದಿ: ಕಳೆದ ವರ್ಷ ಪೂರೈಸಿದ ಕಬ್ಬಿಗೆ ೪೫೦ ರೂ. ಬಾಕಿ ಪಾವತಿ, ಪ್ರಸಕ್ತ ವರ್ಷ ಪ್ರತಿ ಟನ್ ಕಬ್ಬಿಗೆ ೨ ಸಾವಿರ ರೂ. ನಿಗದಿಯೊಂದಿಗೆ ಜುಲೈ ಮೊದಲ ವಾರದಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭಿಸ ಬೇಕೆಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಎಚ್ಚರಿಸಿತ್ತು. ಸಮಿತಿ ಅಧ್ಯಕ್ಷ ಜಿ.ಮಾದೇಗೌಡರು ಮತ್ತೊಂದು ವಾರ ಗಡುವು ವಿಸ್ತರಿಸಿದ್ದಾರೆ. ಜು. ೧೦ ಅಥವಾ ೧೧ ರಂದು ಸಭೆ ನಡೆಯಲಿದ್ದು, ಮೈಷುಗರ‍್ಸ್ ನಿರ್ಧಾರಕ್ಕೆ ಸಮ್ಮತಿಸುವುದು ಅಸಾಧ್ಯ ಎನ್ನುವಂಥ ಸ್ಥಿತಿ ಇದೆ.ಸಮಿತಿ ಸಭೆಯಲ್ಲಿ ಜಾ.ದಳ ಮುಖಂಡರು ಸಕ್ರಿಯರಾದ ಬೆನ್ನಲ್ಲೇ ರೈತ ಸಂಘ ದೂರ ಸರಿದು ಪ್ರತ್ಯೇಕ ಚಳವಳಿಗೆ ವೇದಿಕೆ ಸಿದ್ಧಗೊಳಿಸುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ