ಆಸ್ಪತ್ರೆಗಳ ಕಥೆ-ವ್ಯಥೆ

ಜೆ.ಶಿವಣ್ಣ ಮೈಸೂರು
ಸರಕಾರಿ ಆಸ್ಪತ್ರೆಗಳೆಂದರೆ ಇವತ್ತಿಗೂ ಜನ ಜನ ಮೂಗು ಮುರಿಯುತ್ತಾರೆ. ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆ, ಅನೈರ್ಮಲ್ಯ, ಮೂಲ ಸೌಲಭ್ಯಗಳ ಕೊರತೆ, ವೈದ್ಯ-ಸಿಬ್ಬಂದಿಗಳ ಅವಜ್ಞೆ, ಸುಲಿಗೆ... ಇತ್ಯಾದಿಗಳು ಇದಕ್ಕೆಲ್ಲಾ ಪ್ರಮುಖ ಕಾರಣ.
ಇದರಿಂದ ಬಡವರಿಗೆ ಮಾತ್ರ ಸರಕಾರಿ ಆಸ್ಪತ್ರೆ ಮೀಸಲು ಎನ್ನುವ ಸ್ಥಿತಿಯಾಗಿದೆ. ಅನಕ್ಷರಸ್ಥರು, ಪ್ರಶ್ನಿಸುವ, ತಮ್ಮ ಹಕ್ಕನ್ನು ಪ್ರತಿಪಾದಿ ಸುವ ಕಸುವು ಕಳೆದುಕೊಂಡವರಷ್ಟೇ ಇದರ ಫಲಾನುಭವಿಗಳು. ಇದನ್ನೇ ಬಂಡವಾಳ ಮಾಡಿಕೊಂಡು ವೈದ್ಯ -ಸಿಬ್ಬಂದಿ ಸೇವೆ ಬಿಟ್ಟು  ಸುಲಿಗೆ ಆರಂಭಿಸುತ್ತಾರೆ. ಅರೋಗ್ಯ ಇಲಾಖೆಯಿಂದ ಆರಂಭವಾಗಿ ಆಸ್ಪತ್ರೆವರೆಗೂ ಭ್ರಷ್ಟಾಚಾರದ ಕಬಂಧಬಾಹು ವ್ಯಾಪಿಸಿದೆ.
ಹತ್ತು ಹಲವು ಆರೋಗ್ಯ ಯೋಜನೆಗಳ ಮೂಲಕ ಎಷ್ಟೇ ಪ್ರಮಾಣದಲ್ಲಿ ಹಣ ಪೂರೈಸಿದರೂ ಭ್ರಷ್ಟ ಕೈಗಳ ಕೈಚಳಕದಿಂದ ನುಂಗಣ್ಣರ ಜೇಬು ಸೇರುತ್ತಿದೆ. ಜೀವ ರಕ್ಷಕ ಔಷಧಗಳು, ಚುಚ್ಚುಮದ್ದು, ವೈದ್ಯಕೀಯ ಸೌಲಭ್ಯಗಳಲ್ಲೂ ವಂಚನೆ ನಡೆಸುವ ದುರುಳರು ಹಿಂದೆಯೂ ಇದ್ದರು, ಇವತ್ತೂ ಇದ್ದಾರೆ. ಯಾವುದೇ ಸರಕಾರಿ ಯೋಜನೆಗಳ ಲಾಭ ಮೊದಲು ತಲುಪುವುದು ಭ್ರಷ್ಟರ ಕೈಗೇ. ಹಾಗಾಗಿಯೇ  ಇಂದಿಗೂ ಗ್ರಾಮೀಣ ಭಾಗಗಳು ಆರೋಗ್ಯ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಡೇಂಗ್ಯು, ಚಿಕುನ್‌ಗುನ್ಯಾ, ಮಲೇರಿಯಾ, ಹಂದಿಜ್ವರ ಮೊದಲಾದ ಮಾರಕ ಕಾಯಿಲೆಗಳು ಇವತ್ತಿಗೂ ದಿಢೀರ್ ಕಾಣಿಸಿಕೊಂಡು ದಂಗು ಬಡಿಸುತ್ತವೆ.
ಇದರಿಂದ ಗ್ರಾಮೀಣ ಜನರಿಗೆ ಅರೋಗ್ಯ ಸೇವೆ ಒದಗಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಆರ್‌ಎಚ್‌ಎಂ) ಹೊರತಾ ಗಿಲ್ಲ. ನುಂಗಿ ನೊಣೆಯುವವರಿಗೆ ಹುಂಡಿ ಮುಂದಿಟ್ಟಂತಾಗಿದೆ.
ಎನ್‌ಆರ್‌ಎಚ್‌ಎಂ ಅಡಿಯಲ್ಲಿ ಮೈಸೂರು ಜಿಲ್ಲೆಯ ೭ ತಾಲೂಕು ಗಳ ಗ್ರಾಮೀಣ ಭಾಗದ ೨೫ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಇದಕ್ಕಾಗಿ ಲಕ್ಷಾಂತರ ರೂ. ವ್ಯಯಿಸಲಾಗಿದೆ. ಇಲ್ಲಿ ೨೪ ಗಂಟೆಯೂ ಆರೋಗ್ಯ ಸೇವೆ ಲಭ್ಯ. ಆದರೆ ೨೪ ಗಂಟೆ ಆಸ್ಪತ್ರೆ ಎನ್ನುವ ಲೇಬಲ್ ಹಚ್ಚಲಾಗಿದೆಯೇ ಹೊರತು ಸರಕಾರಿ ಆಸ್ಪತ್ರೆಗಳೆಂದರೆ ಕೊರತೆಗಳ ಕೂಪ ಎನ್ನುವ ಅಪವಾದದಿಂದ ಮುಕ್ತ ವಾಗಿಲ್ಲ. ಇಲ್ಲಿ ಸೌಲಭ್ಯಗಳು ಸಿಗುತ್ತಿವೆಯೇ ? ಇಲ್ಲ. ಇಲ್ಲವೇ ಇಲ್ಲ. ಅದಕ್ಕೆ ಅನೇಕ ಆಸ್ಪತ್ರೆಗಳನ್ನು ಉದಾಹರಣೆಯಾಗಿ ನೀಡಬಹುದು.
ತಾಜಾ ಉದಾಹರಣೆ ಎಂದರೆ ಎಚ್.ಡಿ.ಕೋಟೆಯ ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರ. ಕೇವಲ ೨೪ಗಿ೭ ಎಂದು ನಮೂದಿಸಿದಷ್ಟೇ ಹೊಸತು, ಅದೇ ಹಳತು ವ್ಯವಸ್ಥೆ . ಜಿ.ಪಂ. ಉಪಾಧ್ಯಕ್ಷೆ ನಂದಿನಿ ಚಂದ್ರಶೇಖರ್ ಅಣ್ಣೂರು ಕೇಂದ್ರಕ್ಕೆ ೧೭.೨.೧೦ ರಂದು ದಿಢೀರ್ ಭೇಟಿ ನೀಡಿದ್ದಾಗ  ೨೪ಗಿ೭ ಆಸ್ಪತ್ರೆ ಬಣ್ಣ ಬಯಲಾಯಿತು. ವೈದ್ಯರಿಲ್ಲ. ಔಷಧ ಇಲ್ಲ. ಕೇಳಿದರೆ ಹೊರಗಿನಿಂದ  ತನ್ನಿ ಎನ್ನುತ್ತಾರೆ. ಆದರೆ ಜನಪ್ರತಿನಿಧಿಗಳು ಬಂದಾಗ ಎಲ್ಲಾ ಔಷಧಗಳು ಇವೆ ಎನ್ನುತ್ತಾರೆ. ವಾರದಲ್ಲಿ ೩ ದಿನಕ್ಕೆ ಒಬ್ಬರಂತೆ ಇಬ್ಬರು ವೈದ್ಯರನ್ನು ನೇಮಿಸಿದ್ದು, ಈ ದಿನ ಕರ್ತವ್ಯದಲ್ಲಿರಬೇಕಾದ ವೈದ್ಯರು ಬಂದಿಲ್ಲ. ಈ ಬಗ್ಗೆ  ಕೇಳಿದರೆ  ಸಬೂಬು  ಹೇಳುತ್ತಾರೆ. ೨೪ಗಿ೭ ಆಸ್ಪತ್ರೆಯಾದರೂ  ಒಂದು ದಿನವೂ ವೈದ್ಯರು ವಾಸ್ತವ್ಯ ಹೂಡಿಲ್ಲ ಎನ್ನುವ ದೂರುಗಳ ಸುರಿಮಳೆಯನ್ನೇ ಗ್ರಾಮಸ್ಥರಿಂದ ಎದುರಿಸುವಂತಾಯಿತು. 
ಇದು ಕೇವಲ ಒಂದು ಉದಾಹರಣೆ ಅಷ್ಟೇ. ಅಣ್ಣೂರು ಸೇರಿದಂತೆ ಹಂಪಾಪುರ, ಬಿ.ಮಟಕೆರೆ, ಮುಳ್ಳೂರು. ಹುಣಸೂರಿನ ಬಿಳಿಕೆರೆ, ಗಾವಡಗೆರೆ ಸೇರಿದಂತೆ ಬಹುತೇಕ ಕೇಂದ್ರಗಳಲ್ಲಿ ೨೪ ಗಂಟೆ ವೈದ್ಯರು ಸಿಗುವುದಿಲ್ಲ. ಹಾಗಾಗಿ ೨೪ ಗಂಟೆ ಸೇವೆ ಎನ್ನುವ ಉದ್ದೇಶವೇ ವಿಫಲವಾಗಿದೆ. ಈ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿದ್ದರೂ ಪ್ರಯೋಜನವಿಲ್ಲ. ೮.೧.೨೦೧೦ ರಲ್ಲಿ ಯೋಜನೆಯ ಸಾಧನೆಯನ್ನು ತೋರಲು ಅಚ್ಚುಕಟ್ಟಾಗಿ ಸಜ್ಜುಗೊಳಿಸಿದ್ದ ಕಡಕೊಳ ಮತ್ತು ಹುಲ್ಲಹಳ್ಳಿಯ ಕೇಂದ್ರಗಳ ದರ್ಶನ ಮಾಡಿಸಲಾಗಿತ್ತು. ಆದರೆ ಒಟ್ಟಾರೆಯಾಗಿ ಗಮನಿಸಿದಾಗ ಅವುಗಳ ಸ್ಥಿತಿ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ ಎನ್ನುವುದಕ್ಕೆ ಅನೇಕ ನಿದರ್ಶನಗಳನ್ನು ನೀಡಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ