ವರ್ಗಾವಣೆ ಆದೇಶ ಪಡೆಯಲು ೨ ಸಾವಿರ ರೂ ?

ವಿಕ ಸುದ್ದಿಲೋಕ ಮೈಸೂರು
ವರ್ಗಾವಣೆ ಆದೇಶ ಪಡೆಯಲು ಡಿಡಿಪಿಐ ಕಚೇರಿ ಸಿಬ್ಬಂದಿಗೆ  ೨೦೦೦ ರೂ.  ಲಂಚ  ನೀಡಬೇಕಂತೆ...ತಕ್ಷಣ ಪಡೆಯದಿದ್ದರೆ ರಾಷ್ಟ್ರಪತಿ  ಆಳ್ವಿಕೆಯ ‘ಬಿಸಿ’  ಅನುಭವಿಸಬೇಕಂತೆ... !
ಇದು ಸರಕಾರಿ ಶಿಕ್ಷಕ ಸಮುದಾಯದ ಮಧ್ಯೆ ಶುರುವಾದ ಬಿಸಿ-ಬಿಸಿ ಚರ್ಚೆ. ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರ ವರ್ಗಾ ವಣೆ ಕೌನ್ಸಿಲಿಂಗ್ ಮುಗಿದು ೨೦ ದಿನ  ಕಳೆದರೂ, ಬಹಳಷ್ಟು ಜಿಲ್ಲೆಗಳಲ್ಲಿ  ವರ್ಗಾವಣೆ ಆದೇಶ ಸಂಬಂಧಿಸಿದ ಶಿಕ್ಷಕರ ಕೈ ಸೇರಿಲ್ಲ . ಯಾವತ್ತು ಕೈ ಸೇರುತ್ತದೆ ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ. ಹಾಗಾಗಿ ಶಿಕ್ಷಕ ವಲಯದಲ್ಲಿ ಈಗ ವರ್ಗಾವಣೆ ಆದೇಶ, ಕುರಿತು ಬಿಡುಗಡೆ ಕುರಿತ ಗೊಂದಲ, ಅನುಮಾನ, ಅಡ್ಡಿ , ಆತಂಕಗಳು ಶುರುವಾಗಿವೆ.
೨೦೧೦-೧೧ನೇ ಸಾಲಿನ ಪ್ರಾಥಮಿಕ ಹಾಗೂ  ಪ್ರೌಢಶಿಕ್ಷಣ ಶಾಲೆಗಳ ಎಲ್ಲ ಶಿಕ್ಷಕರ ಕೋರಿಕೆಯ ವರ್ಗಾವಣೆ ಹಾಗೂ ಪರಸ್ಪರ ವರ್ಗಾ ವಣೆ ಕೌನ್ಸೆಲಿಂಗ್ ಮೇ ೨೯ ರಿಂದ  ಜೂ.೩೦ರವರೆಗೆ ನಡೆಯಿತು. ಜಿಲ್ಲಾ ಹಾಗೂ ವಿಭಾಗ ಮಟ್ಟದಲ್ಲಿ ನಡೆದ ಕೌನ್ಸಿಲಿಂಗ್‌ನಲ್ಲಿ ಶಿಕ್ಷಕರು ಭಾಗವಹಿಸಿ, ವರ್ಗಾವಣೆಯಾಗಿರುವ ತಮ್ಮ ಸ್ಥಳ ಯಾವುದೆಂಬು ದನ್ನು ತಿಳಿದುಕೊಂಡರು. ವರ್ಗಾವಣೆ ಆದೇಶಗಳನ್ನು ಜೂ. ೨೧ರ ನಂತರ ಜಾರಿಗೆ ಬರುವಂತೆ ಹೊರಡಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರೇ ಸ್ಪಷ್ಟಪಡಿಸಿದ್ದರು.
ಎಲ್ಲವೂ ಮುಗಿದು ೨೦ ದಿನಗಳಾಗುತ್ತಿದ್ದರೂ ವರ್ಗಾವಣೆ ಆದೇಶಗಳು ಡಿಡಿಪಿಐ ಹಾಗೂ ಬಿಇಒ ಕಚೇರಿಗಳಿಂದ ಬಿಡುಗಡೆ ಹೊಂದುತ್ತಿಲ್ಲ. ಈ ಮಧ್ಯೆ ‘ಆ ಜಿಲ್ಲೆಯಲ್ಲಿ  ವರ್ಗಾವಣೆ ಆದೇಶ ನೀಡಿದ್ದಾರಂತೆ, ಈ ಜಿಲ್ಲೆಯಲ್ಲಿ ನೀಡಿಲ್ಲ ವಂತೆ’ಎಂಬ ಅಂತೆ-ಕಂತೆಗಳು ಎಸ್‌ಎಂಎಸ್- ಸೆಲ್ ಫೋನ್ ಮೂಲಕ ಶಿಕ್ಷಕರ ನಡುವೆ ಹರಿದಾಡಲಾರಂಭಿಸಿವೆ.
ಆದೇಶ ನೀಡುವಿಕೆಗೆ ಸಾಮಾನ್ಯ ಪ್ರಕ್ರಿಯೆ ಇಲ್ಲ : ಕೌನ್ಸೆಲಿಂಗ್ ಮುಗಿದ  ಮರುದಿನವೇ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಶಿಕ್ಷಕರ ವರ್ಗಾವಣೆ ಮಾಡಿರುವುದಾಗಿ ಸಾಮಾನ್ಯ ಜ್ಞಾಪನ ಆದೇಶವನ್ನು ಪ್ರಕಟಿಸಿತು.
‘ವರ್ಗಾವಣೆ ಹೊಂದಿದ ಶಿಕ್ಷಕರನ್ನು ಸಂಬಂಧಿಸಿದ ಅಧಿಕಾರಿಗಳು ಸಕಾಲದಲ್ಲಿ ಕರ್ತವ್ಯದಿಂದ ಬಿಡುಗಡೆ ಮಾಡಿ, ವರ್ಗಾವಣೆ ಮಾಡಿದ ಹುದ್ದೆ -ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸು ವುದು’ ಎಂದು ಇಲಾಖೆಯ ನಿರ್ದೇಶಕರು ಸ್ಪಷ್ಟವಾಗಿ ಸೂಚಿಸಿ ದ್ದರು. ವೆಬ್‌ಸೈಟ್‌ನಲ್ಲಿದ್ದ ಈ ಮಾಹಿತಿ-ಆದೇಶವಾಗಿ ಶಿಕ್ಷಕರ ಕೈ ಸೇರಲು ವಿಳಂಬವಾಗುತ್ತಿದೆ. ಈ ನಡುವೆ, ಜನಗಣತಿ ಕಾರ್ಯದಲ್ಲಿ ನಿರತರಾಗಿರುವ ಶಿಕ್ಷಕರು ವರ್ಗಾವಣೆಯಾಗಿದ್ದರೆ, ಅಂಥವರನ್ನು ಸಂಬಂಧಿಸಿದ ಜಿಲ್ಲಾಧಿಕಾರಿ ಅನುಮತಿ ಪಡೆದು ಉಪನಿರ್ದೇಶಕರು ಬಿಡುಗಡೆ ಮಾಡಬೇಕು ಎಂದು ಷರತ್ತು ವಿಧಿಸಲಾಗಿತ್ತು.  ಸಾರ್ವಜನಿಕ ಶಿಕ್ಷಣ ಇಲಾಖೆಯ ಕೆಲವು ಉಪ ನಿರ್ದೇಶಕರು(ಡಿಡಿಪಿಐ) ಹೇಳುವ ಪ್ರಕಾರ- ಈ ಷರತ್ತಿನ ಕಾರಣದಿಂದಾಗಿಯೇ ಶಿಕ್ಷಕರ ಬಿಡುಗಡೆ  ತಡವಾಗುತ್ತಿದೆ !
‘ಜನಗಣತಿ ಕಾರ್ಯದಲ್ಲಿ ನಿರತರಾಗಿರುವ ಶಿಕ್ಷಕರನ್ನು ಬಿಡುಗಡೆ ಮಾಡಿ ಎಂದು ಸರಕಾರವೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಹೀಗಿದ್ದರೂ ಕೆಲ ಜಿಲ್ಲೆಗಳಲ್ಲಿ ವಿಳಂಬವಾಯಿತು ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಡಿಡಿಪಿಐ ಪತ್ರಿಕೆ ತಿಳಿಸಿದರು.
ಇದಲ್ಲದೆ, ಬಹಳಷ್ಟು ಜಿಲ್ಲೆಗಳಲ್ಲಿ   ಡಿಡಿಪಿಐ ಗಳಿಗೆ ಈ ಪ್ರಕ್ರಿಯೆಯನ್ನು ಸರಳವಾಗಿ ಪೂರ್ಣಗೊಳಿಸಲು ಮನಸ್ಸಿಲ್ಲ. ಮೊದ ಲಿಂದಲೂ ವರ್ಗಾವಣೆ ಕ್ರಿಯೆ ಯಲ್ಲಿ  ‘ಕೈ ಬಿಸಿ’ ಮಾಡಿಕೊಳ್ಳುತ್ತಿದ್ದ ಅಧಿಕಾರಿಗಳಿಗೆ  ಕೌನ್ಸೆಲಿಂಗ್ ಕೈ ಕಚ್ಚುವಂತೆ ಮಾಡಿದೆ. ಹಾಗಾಗಿ ಬೇಕೋ- ಬೇಡವೋ ಎಂಬಂತೆ ಮಾಡುತ್ತಿದ್ದಾರೆ ಎಂಬುದು ಶಿಕ್ಷಕರ ಆರೋಪ. 
ಕೌನ್ಸೆಲಿಂಗ್‌ನಂತೆ ಬಿಡುಗಡೆ ಮಾಡುವ ಪ್ರಕ್ರಿಯೆಗೂ ವೇಳಾಪಟ್ಟಿಯನ್ನು ನಿಗದಿ ಪಡಿಸಿದ್ದರೆ, ಈ ಗೊಂದಲ ಸರಿಯಾಗುತ್ತಿತ್ತು ಎಂಬುದು ಬಿಇಒ ಒಬ್ಬರ ಅಭಿಪ್ರಾಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ