ಮಹಿಳಾ ಮೀಸಲಿಗೆ ಮಂಗಳಾರತಿ

ಮತ್ತೀಕೆರೆ ಜಯರಾಮ್ ಮಂಡ್ಯ
ಸ್ತ್ರೀ ಸಬಲೀಕರಣದ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲು ಜಾರಿಯಾಗಿದೆ. ಆದರೆ ಚಲಾಯಿಸುತ್ತಿರುವವರು ಅವರ ಪತಿ ಮಹಾಶಯರು. ಅದಕ್ಕೆ ತಾಜಾ ನಿದರ್ಶನ ಮಂಡ್ಯ ತಾಲೂಕಿನ ಕೋಣನಹಳ್ಳಿ ಗ್ರಾಮದ್ದು.
ಗ್ರಾಮದ ಗ್ರಾ.ಪಂ. ಸದಸ್ಯೆ ಎಂ.ಆರ್.ಮಂಗಳಮ್ಮ ವರಿಷ್ಠರ ಚುನಾವಣೆಯಲ್ಲಿ ಪತಿಯ ‘ವಿಪ್’ ಉಲ್ಲಂಘಿಸಿದ್ದಕ್ಕೆ ಎದುರಾದ ಕೌಟುಂಬಿಕ ಕಲಹದಿಂದ ಬೇಸತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಸುದ್ದಿಯಾಗಿದ್ದಾರೆ. ಮಂಡ್ಯ ಗ್ರಾಮಾಂತರ ಗ್ರಾ.ಪಂ.ನ ಕೋಣನಹಳ್ಳಿ ವಾರ್ಡ್ ಸದಸ್ಯೆ ಮಂಗಳಮ್ಮ ಗ್ರಾ.ಪಂ. ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗೆ ಗುರುವಾರ ರಾಜೀನಾಮೆ ಪತ್ರ ಸಲ್ಲಿಸಿದರು.
ರಾಜಕೀಯವೇ ಉಸಿರಾಗಿರುವ ಜಿಲ್ಲೆಯಲ್ಲಿ ನಡೆದ ಗ್ರಾ.ಪಂ. ಚುನಾವಣೆಯಿಂದ ಸಾಕಷ್ಟು ಮನೆ, ಮನ ಒಡೆದಿವೆ. ಮಂಗಳಮ್ಮ ರಾಜೀನಾಮೆಗೂ ಕೌಟುಂಬಿಕ ಮತ್ತು ರಾಜಕೀಯ ಕಲಹವೇ ಕಾರಣ ಎನ್ನುವುದು ಗ್ರಾಮಸ್ಥರ ಆರೋಪ.
ಅನಿವಾರ್ಯ ಮತ್ತು ವೈಯಕ್ತಿಕ ಸಮಸ್ಯೆಯಿಂದ ಗ್ರಾ.ಪಂ.ನ ಕೆಲಸ ನಿರ್ವಹಿಸಲು ಸಾಧ್ಯವಾಗದ್ದರಿಂದ ಸ್ವಇಚ್ಛೆಯಿಂದ ಪದತ್ಯಾಗ ಮಾಡುತ್ತಿರುವುದಾಗಿ ಮಂಗಳಮ್ಮ ರಾಜೀನಾಮೆಯಲ್ಲಿ ತಿಳಿಸಿರುವ ನೆವ. ಯಾವುದೇ ಒತ್ತಡಕ್ಕೆ ಮಣಿದಿಲ್ಲ ಎಂದಿದ್ದರೂ ಅದರ ಹಿಂದೆ ಕಾಣುತ್ತಿರುವ ನೆರಳು ಮಾತ್ರ ರಾಜಕಾರಣದ್ದೇ.
ಮಂಗಳಮ್ಮ ಅವರು ಕೋಣನಹಳ್ಳಿಯ ಜಾ.ದಳ ಕಾರ್ಯಕರ್ತ ಜಯರಾಮು ಅವರ ಪತ್ನಿ. ಹಾಗೆಯೇ ಮಂಡ್ಯ ಜಿಲ್ಲಾ ಕಾಂಗ್ರೆಸ್‌ನ ಹಿರಿಯ ಮುಖಂಡ, ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಎನ್. ರಾಜು ಅವರ ಪುತ್ರಿಯೂ ಹೌದು.
ಪತಿಯ ಫರ್ಮಾನು: ೨೧ ಸದಸ್ಯ ಬಲದ ಮಂಡ್ಯ ಗ್ರಾಮಾಂತರ ಗ್ರಾ.ಪಂ. ವರಿಷ್ಠರ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಿತು. ಜಿದ್ದಾಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಪುರುಷೋತ್ತಮ್ ಮತ್ತು ಕುಮಾರ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಒಂದು ಮತದ ಅಂತರದಿಂದ ಗೆದ್ದರು.
ಜಾ.ದಳ ಬೆಂಬಲಿತ ಅಭ್ಯರ್ಥಿಗಳಾಗಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಜು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಉಮಾದೇವಿ ಕಣಕ್ಕಿಳಿದಿದ್ದರು. ಜಾ.ದಳ ಅಭ್ಯರ್ಥಿಗಳಿಗೇ ಮತ ಹಾಕುವಂತೆ ಮಂಗಳಮ್ಮ ಅವರಿಗೆ ಪತಿ ಜಯರಾಮು ‘ವಿಪ್’ ಹೊರಡಿಸಿದ್ದರು. ಅದರಂತೆ ಮಂಗಳಮ್ಮ ಜಾ.ದಳ ಸದಸ್ಯರ ಗುಂಪಿನೊಂದಿಗೆ ಆಗಮಿಸಿ ಅಧ್ಯಕ್ಷ ಸ್ಥಾನಕ್ಕೆ ಜಾ.ದಳ ಅಭ್ಯರ್ಥಿಗೇ ಮತ ಹಾಕಿದರು. ಆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸ್ವಗ್ರಾಮದ ಅಭ್ಯರ್ಥಿ ಎಂದು ಕಾಂಗ್ರೆಸ್ ಬೆಂಬಲಿತ ಕುಮಾರ್‌ಗೆ ಮತ ಹಾಕಿದರು. ಇದು ಪತಿ ಮತ್ತು ಕುಟುಂಬಕ್ಕೆ ಅಪಥ್ಯವೆನಿಸಿದ್ದರಿಂದ ಮರು ದಿನವೇ ಮಂಗಳಮ್ಮ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಸುಂದರ ಸಂಸಾರಕ್ಕೆ ಪಂಚಾಯಿತಿ ಮತ್ತು ಪಕ್ಷ ರಾಜಕಾರಣ ಹುಳಿ ಹಿಂಡಿದೆ. ಸೋಲಿನಿಂದ ಕಂಗೆಟ್ಟ ಜಾ.ದಳ ಕಾಯಕರ್ತರು ಇದನ್ನೇ ವಿಜಯೋತ್ಸವವಾಗಿ ಆಚರಿಸಿದ್ದೂ ಗುಟ್ಟಲ್ಲ.
ಗ್ರಾಮಸ್ಥರ ವಿರೋಧ: ಕೋಣನಹಳ್ಳಿ ಗ್ರಾಮಸ್ಥರು ಸದಸ್ಯರಾಗಿ ಮಂಗಳಮ್ಮ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದರು. ಪಕ್ಷ ರಾಜಕಾರಣದಿಂದಲ್ಲ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಜೀನಾಮೆ ಕೊಟ್ಟ ಬಗ್ಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಜಯರಾಮು ಅವರು ಗ್ರಾಮಸ್ಥರನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಹೊರಗಿನವರ ಮಾತು ಕೇಳಿ ಪತ್ನಿಯಿಂದ ರಾಜೀನಾಮೆ ಕೊಡಿಸಿ ದ್ದಾರೆ. ಇಂಥ ಬೆಳವಣಿಗೆ ಆಗಬಾರದಿತ್ತು. ಇದು, ಗ್ರಾಮಸ್ಥರಿಗೆ ಮಾಡಿದ ಅಪಮಾನ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಕೋಣನಹಳ್ಳಿ ಗ್ರಾಮಸ್ಥರೊಬ್ಬರು ಟೀಕಿಸುತ್ತಾರೆ.
ಮಂಡ್ಯ ನಗರಸಭೆಯಲ್ಲಿ ಪಕ್ಷಾಂತರದಿಂದ ಸದಸ್ಯತ್ವ ಅನೂರ್ಜಿತ ಭೀತಿಯಲ್ಲಿರುವ ಪುರಪಿತೃ ಕೆ.ಎಲ್. ನಾಗೇಂದ್ರ ಮತ್ತು ಬೆಂಬಲಿಗರು ಜಾ.ದಳ ಅಭ್ಯರ್ಥಿ ಪರ ಸಕ್ರಿಯವಾಗಿದ್ದರು. ಮಂಗಳಮ್ಮ ರಾಜೀನಾಮೆ ವೇಳೆ ನಾಗೇಂದ್ರ ಮತ್ತು ಬೆಂಬಲಿಗರಿದ್ದರು. ಇದು, ಗ್ರಾಮಸ್ಥರ ವಿರೋಧಕ್ಕೆ ಪ್ರಮುಖ ಕಾರಣ.
ಒಂದೊಮ್ಮೆ ಮಂಗಳಮ್ಮ ರಾಜೀನಾಮೆ ಹಿಂಪಡೆಯದೆ, ಅಂಗೀ ಕಾರಗೊಂಡಲ್ಲಿ ಮರು ಚುನಾವಣೆ ಖಚಿತ. ಈ ಹಿನ್ನೆಲೆಯಲ್ಲಿ ಈಗಾಗಲೇ ಅಭ್ಯರ್ಥಿ ಹುಡುಕಾಟವೂ ನಡೆದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ