ಪ್ರತಿಭಟನಾಕಾರರಿಗೆ ಹರ್ಷಗುಪ್ತಾ ಮನವಿ


ವಿಕ ಸುದ್ದಿಲೋಕ ಮೈಸೂರು
‘ಜಿಲ್ಲಾಡಳಿತ ಬಗೆಹರಿಸಬಹುದಾದ  ಎಲ್ಲ  ಸಮಸ್ಯೆಗಳ ಕುರಿತು ಗಮನಸೆಳೆಯಲು  ಪ್ರತಿಭಟನೆ, ಧರಣಿ ನಡೆಸುವುದಷ್ಟೇ  ಮಾರ್ಗವಲ್ಲ. ಅದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ಗಳೊಂದಿಗೆ ಚರ್ಚೆಗೆ ಬನ್ನಿ. ನ್ಯಾಯ ಸಮ್ಮತವಾದ ಎಲ್ಲ  ಸಮಸ್ಯೆ ಗಳಿಗೆ  ಜಿಲ್ಲಾಧಿಕಾರಿ ಕಚೇರಿ ಆ ಹಂತದಲ್ಲಿಯೇ  ಪರಿಹಾರ  ದೊರಕಿಸಿಕೊಡಲು ಯತ್ನಿಸುತ್ತದೆ. ನೀವು ನಮ್ಮೊಂದಿಗೆ ಸಹಕರಿಸಿ... !’
ಇದು ಜಿಲ್ಲಾಧಿಕಾರಿ ಹರ್ಷ ಗುಪ್ತಾ ಅವರು ಜಿಲ್ಲೆಯ ನಾಗರಿಕರಿಗೆ ಮಾಡಿಕೊಂಡಿರುವ ಮನವಿ.  ಭಾನುವಾರ ವಿಜಯ ಕರ್ನಾಟಕ ಮೈಸೂರು ಆವೃತ್ತಿಯಲ್ಲಿ  ನಡೆದ  ‘ಫೋನ್ ಇನ್ ಕಾರ್ಯಕ್ರಮ’ದಲ್ಲಿ ಭಾಗವಹಿಸಿದ್ದ ಅವರು, ‘ಜಿಲ್ಲಾಧಿಕಾರಿ ಕಚೇರಿ ಜನರ ಕಚೇರಿ. ಇದು  ಜಿಲ್ಲಾಡಳಿತದ  ಮುಖ. ಈ ಕಚೇರಿಯಿಂದ  ತಮಗೆ  ಪರಿಹಾರ ದೊರಕ ಬಲ್ಲದು ಎಂದು ಬಹಳಷ್ಟು ಜನ ಈಗಲೂ ನಂಬಿದ್ದಾರೆ. ಅದನ್ನು ಉಳಿಸಿಕೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.
ಅಧಿಕಾರ ವಹಿಸಿಕೊಂಡ ತಕ್ಷಣ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಜಿಲ್ಲೆಯ ಗ್ರಾಮೀಣ ಹಾಗೂ ನಗರ  ಬದುಕಿನ ಕಷ್ಟ-ಸುಖಗಳಿಗೆ ಕಿವಿಕೊಟ್ಟಿರುವ  ಹರ್ಷಗುಪ್ತಾ ಅವರಿಗೆ, ಮೈಸೂರು ಜಿಲ್ಲೆಯ ಸಮಸ್ಯೆ-ಸವಾಲು ಹಾಗೂ ಸಾಮರ್ಥ್ಯಗಳು ಗೊತ್ತಾಗಿದೆ.  ಜತೆಗೆ ಜಿಲ್ಲಾಧಿಕಾರಿ ಕಚೇರಿಯ ಮಿತಿಯೂ !
‘ನಮ್ಮ  ಕಚೇರಿ ಮುಂದೆ ನಿತ್ಯವೂ ೨-೩ ಪ್ರತಿಭಟನೆ ನಡೆಯು ತ್ತಲೇ ಇರುತ್ತದೆ. ಸಾಂಕೇತಿಕವಾಗಿ ಪ್ರತಿಭಟನೆ ನಡೆಸುವುದು ಸರಿ, ಆದರೆ, ಎಲ್ಲದಕ್ಕೂ ಅದೇ ಹಾದಿ ತುಳಿಯುವುದು ಸರಿಯಲ್ಲ. ರಾಜ್ಯ, ಕೇಂದ್ರ ಸರಕಾರಕ್ಕೆ ಸಂಬಂಧಿಸಿದ್ದು, ಒಮ್ಮೊಮ್ಮೆ  ಜಾಗತಿಕ ವಿಷಯಗಳನ್ನು ಮುಂದಿಟ್ಟುಕೊಂಡು ಯಾವುದಾದರೂ ಸಂಘಟನೆ, ವ್ಯಕ್ತಿಗಳು ಪ್ರತಿಭಟನೆ ನಡೆಸುತ್ತಲೇ ಇರುತ್ತಾರೆ. ಇದರಿಂದ ನಮ್ಮ ಕಚೇರಿಗೆ ಅನವಶ್ಯವಾಗಿ ತೊಂದರೆಯಾಗುತ್ತಿದೆ. ಹೀಗೆ  ಸಾಲು- ಸಾಲು ಪ್ರತಿಭಟನೆ ನಡೆಸಿದರೆ, ಜಿಲ್ಲಾಡಳಿತದ ಬಗ್ಗೆ  ಪ್ರತಿಭಟನೆ ನಡೆಸುವವರಿಗೆ ನಂಬಿಕೆಯೂ ಇಲ್ಲ, ವಿಶ್ವಾಸವೂ  ಇಲ್ಲ ಎಂದರ್ಥ.  ತಂದೆ-ತಾಯಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ ಎಂದು, ಮಕ್ಕಳ್ಯಾರೂ  ಅವರ    ಇಮೇಜ್  ಹಾಳು ಮಾಡುವುದಿಲ್ಲ. ಅದೇ ರೀತಿ  ಜಿಲ್ಲಾಧಿಕಾರಿ  ಕಚೇರಿ ಕುರಿತು ಜನಸಾಮಾನ್ಯರಲ್ಲಿರುವ ಕಲ್ಪನೆಯನ್ನು(ಇಮೇಜ್) ಯಾರೂ ಹಾಳು ಮಾಡಬಾರದು.  ಜಿಲ್ಲಾಡಳಿತದ್ದು ನಿಷ್ಪಕ್ಷಪಾತ  ನೀತಿ. ಹಾಗಾಗಿ ನಮ್ಮ ಬಗ್ಗೆ  ನಂಬಿಕೆ ಇಡಬೇಕು’ ಎಂದು ಮನವಿ ಮಾಡಿಕೊಂಡರು.
‘ಪ್ರತಿಭಟನೆಯಲ್ಲಿ  ದುಷ್ಟ ಶಕ್ತಿಗಳು ಲಾಭ ಪಡುವ ಅವಕಾಶ ಇರುತ್ತದೆ. ಕೆಲವರ ಬೇಡಿಕೆ ಸರಿಯಾಗಿಯೇ  ಇರುತ್ತದೆ. ಆದರೆ, ಅದನ್ನು ಇಡುವ ರೀತಿ ಸರಿ ಇರುವುದಿಲ್ಲ’ ಎಂದು ಪ್ರತಿಭಟನಕಾರರಿಗೆ ಕಿವಿಮಾತು ಹೇಳಿದರು.
‘ಕೆಲವು ಮೂಲ ಸಮಸ್ಯೆಗಳು ರಾತ್ರೋರಾತ್ರಿ ಬದಲಾವಣೆ  ಆಗುತ್ತದೆ ಎಂದು ಭಾವಿಸಬೇಡಿ. ತಾಲೂಕು ಕಚೇರಿಗೆ ಅಲೆದಾಟ ತಪ್ಪಿಸುವಂಥ ವಾತಾವರಣ ನಿರ್ಮಿಸುವುದು ಸೇರಿದಂತೆ ಒಂದಿಷ್ಟು ಸುಧಾರಣೆಗೆ ಕಾಲಾವಕಾಶ ಬೇಕು. ನಾನೂ ಒಂದಿಷ್ಟು ಸಿದ್ಧತೆ ಮಾಡಿಕೊಳ್ಳಬೇಕಿದೆ.  ಇದಕ್ಕಾಗಿ ಆರು ತಿಂಗಳು ಸಮಯ ಬೇಕು’ ಎಂದರು. ಯಾವುದಾದರೊಂದು ಒಳ್ಳೆಯ ಕೆಲಸ ಮಾಡಲು ಜನರ ಸಹಕಾರ ಅಗತ್ಯ. ಜನರ ಪಾಲುದಾರಿಕೆ ಇಲ್ಲದೇ ಸುಧಾರಣೆ ಸಾಧ್ಯವಿಲ್ಲ. ಹಾಗಾಗಿ ಜನರೂ ತ್ಯಾಗಕ್ಕೂ ಸಿದ್ಧವಾಗಬೇಕಿದೆ ಎಂದು ನುಡಿದರು.
೬೫೫ ಗಿರಿಜನರಿಗೆ ಅರಣ್ಯ ಹಕ್ಕು
ಜಿಲ್ಲೆಯಲ್ಲಿರುವ ಮೂಲನಿವಾಸಿ ಗಿರಿಜನ ಕುಟುಂಬಗಳಿಗೆ ಅರಣ್ಯ ಹಕ್ಕು ಮಾನ್ಯತೆ ಕಾಯ್ದೆ -೨೦೦೬ರ  ಅನ್ವಯ ಯಾವುದೇ ಸೌಲಭ್ಯವನ್ನು ಜಿಲ್ಲಾಡಳಿತ ಒದಗಿಸಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಹುಣಸೂರು ತಾಲೂಕು ವೀರನಹೊಸಳ್ಳಿ ಪ್ರಕಾಶ್ ಎಂಬುವವರ ಅಹವಾಲು.
‘ಅರಣ್ಯ ಹಕ್ಕಿನ ಅನ್ವಯ ಸೌಲಭ್ಯ ನೀಡಿ ಎಂದು ೪೩೦೦ ಜನ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಎಲ್ಲವನ್ನೂ ಪರಿಶೀಲಿಸಿ- ೬೫೦ ಗಿರಿಜನರಿಗೆ ಅರ್ಹತೆಗೆ ಅನುಸಾರವಾಗಿ ಅರಣ್ಯ ಭೂಮಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಶನಿವಾರ ಇಲ್ಲವೇ ಭಾನುವಾರ ಎಚ್.ಡಿ.ಕೋಟೆ ತಾಲೂಕಿನ ಯಾವುದಾದರ ರೊಂದು ಹಾಡಿಯಲ್ಲಿ ಸಮಾರಂಭ ಮಾಡಿ,ಎಲ್ಲರಿಗೂ ಹಕ್ಕು ಪತ್ರ ನೀಡಲಾಗುವುದು. ರ್ಜಿ ತಿರಸ್ಕೃತಗೊಂಡವರು ತಮ್ಮ ಅರ್ಜಿ ನ್ಯಾಯ ಸಮ್ಮತವಾಗಿದೆ ಎಂದು ಸಾಬೀತು ಪಡಿಸು ವುದು ಸೇರಿದಂತೆ ಯಾವುದೇ ರೀತಿಯ ಆಕ್ಷೇಪ ಸಲ್ಲಿಸಲು ೬೦ ದಿನ ಕಾಲಾವಕಾಶ ನೀಡಲಾಗಿದೆ’ ಎಂದು ತಿಳಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ