ನಗರದ ಕಸ ಗುಡಿಸಲು ಬರಲಿವೆ ಯಂತ್ರ

ವಿಕ ಸುದ್ದಿಲೋಕ ಮೈಸೂರು
ಇನ್ನೊಂದು ತಿಂಗಳಲ್ಲಿ ‘ಹಸಿರು ನಗರ ’ದ  ಸ್ವಚ್ಛತೆಗೆ  ಕಸಗುಡಿಸುವ ಯಂತ್ರಗಳು ಬರಲಿವೆ. ನಂತರ,ಪ್ರಮುಖ ರಸ್ತೆಗಳ ಸ್ವಚ್ಛತಾ ಕಾರ‍್ಯಾಚರಣೆ ರಾತ್ರಿ ವೇಳೆ ನಡೆಯಲಿದೆ.
ಒಂದು ಟ್ರಕ್ ಮೌಂಟೆಡ್ ಸ್ವಚ್ಛತಾ ಯಂತ್ರ ,೨ ಪಾದಚಾರಿ ಮಾರ್ಗ ಸ್ವಚ್ಛತಾ ಯಂತ್ರಗಳ ಖರೀದಿಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದ್ದು,ಅಂತಿಮ ಹಂತದ ಪ್ರಕ್ರಿಯೆ ಗಳಷ್ಟೇ  ಬಾಕಿ. ಒಂದು-ಒಂದೂವರೆ ತಿಂಗಳಲ್ಲಿ ಯಂತ್ರ ಕಾರ‍್ಯಾಚರಣೆ ಆರಂಭವಾಗ ಲಿದೆ ಎಂದು ಮೇಯರ್ ಸಂದೇಶ್ ಸ್ವಾಮಿ ಹೇಳಿದ್ದಾರೆ.
ಜಿಲ್ಲಾ ಪತ್ರಕರ್ತರ ಸಂಘ ಗುರುವಾರ ಆಯೋಜಿಸಿದ್ದ  ‘ಮಾಧ್ಯಮ ಸಂವಾದ’ದಲ್ಲಿ ಪಾಲ್ಗೊಂಡ ಅವರು, ಈ ಯಂತ್ರಗಳು ಗಂಟೆಗೆ ೫ ರಿಂದ ೭ ಕಿ.ಮೀ. ವರೆಗೆ ಕಸ ಗುಡಿಸುತ್ತವೆ. ರಸ್ತೆ ವಿಭಜಕ ಇದ್ದರೆ ಎರಡೂ ಕಡೆ ಪ್ರತ್ಯೇಕ ಕಾರ‍್ಯಾಚರಣೆ ಅಗತ್ಯವಾದ್ದರಿಂದ ೨ರಿಂದ ೩ ಕಿ.ಮೀ. ಸ್ವಚ್ಛತೆ  ಸಾಧ್ಯ ಎಂದರು.
೧೨ ತಾಸು ಕಾರ‍್ಯ ನಿರ್ವಹಣೆ: ರಾತ್ರಿ ೯ ರಿಂದ ಶುರುವಾಗಿ ೧೨ ತಾಸು ಯಂತ್ರಗಳು ಕಾರ‍್ಯನಿರ್ವಹಿಸಲಿದ್ದು, ನಿರ್ವಹಣೆ ಹೊಣೆಯನ್ನು ಮಾಸಿಕ  ಸುಮಾರು ೩ ಲಕ್ಷ ರೂ.ಗೆ ಯಂತ್ರ ನಿರ್ಮಾಣ ಕಂಪನಿಗೇ ವಹಿಸಲಾಗುತ್ತದೆ. ನಗರದ ಹೃದಯ ಭಾಗದ ಮುಖ್ಯ ರಸ್ತೆಗಳ  ಜತೆಗೆ ಪ್ರಮುಖ ಬಡಾವಣೆಗಳ ಕೆಲ ವಿಶಾಲ ರಸ್ತೆಗಳೂ ಯಂತ್ರ ಸ್ವಚ್ಛತೆಗೆ ಒಳಗೊಳ್ಳಲಿವೆ ಎಂದು ವಿವರಿಸಿದರು.
ಮುಡಾ ಹೇರಿದ ಹೊರೆ: ಪಾಲಿಕೆಯಲ್ಲಿ ಬೇಕಾದಷ್ಟು  ಸಮಸ್ಯೆಗಳಿದ್ದರೂ ಕುಡಿಯುವ ನೀರು,ರಸ್ತೆ ದುರಸ್ತಿ, ಬೀದಿ ದೀಪಗಳ ನಿರ್ವಹಣೆ ಮತ್ತು ಸ್ವಚ್ಛತೆ,ಕಸ ವಿಲೇವಾರಿಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಆದರೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ  ಅವೈಜ್ಞಾನಿಕ ಕ್ರಮಗಳಿಂದ ರೆವಿನ್ಯೂ ಬಡಾವಣೆಗಳ ಸಂಖ್ಯೆ ಹೆಚ್ಚುತ್ತಿರುವುದು ‘ಹೊರೆ’ಯಾಗಿ ಪರಿಣಮಿಸಿದೆ ಎಂದು ಆಕ್ಷೇಪಿಸಿದರು.
ಖಾಸಗಿ ಡೆವಲಪರ್‌ಗಳು ಬಡಾವಣೆಯನ್ನು ನಕ್ಷೆಯಂತೆ  ಸಕಲ ಮೂಲಸೌಲಭ್ಯಗಳೊಂದಿಗೆ ರೂಪಿಸ ದಿದ್ದರೂ ಮುಡಾ ಶೇ.೬೦ರಷ್ಟು ನಿವೇಶನ ಹಂಚಿಕೆಗೆ ಅವಕಾಶ ನೀಡುತ್ತಿರುವುದು ಸಮಸ್ಯೆಗೆ ಕಾರಣ. ಪಾಲಿಕೆಗೆ  ಹಸ್ತಾಂತರ ಆಗದಿದ್ದರೂ, ಅಲ್ಲಿಂದ ನಿರೀಕ್ಷಿತ ತೆರಿಗೆ ಬರದಿದ್ದರೂ ಮನೆ ನಿರ್ಮಿಸಿಕೊಂಡವರಿಗೆ ಮಾನವೀಯ ದೃಷ್ಟಿಯಿಂದ ನೀರು, ಯುಜಿಡಿ ಮತ್ತಿತರ ಮೂಲ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಮುಡಾ ಅಧಿಕಾರಿಗಳ ತಪ್ಪಿನಿಂದ ಪಾಲಿಕೆ ಕೋಟಿಗಟ್ಟಲೆ ಬೆಲೆ ತೆರಬೇಕು ಎಂದು ದೂರಿದರು.
ಮುಂದಿನ ದಿನಗಳಲ್ಲಿ ಈ ಸಂಬಂಧ ಪಾಲಿಕೆ ಕಠಿಣವಾಗಿ ವರ್ತಿಸುವುದು ಅನಿವಾರ‍್ಯ. ರೆವಿನ್ಯೂ ಬಡವಾಣೆಗಳಲ್ಲಿ ಸುಮಾರು ೨ ಲಕ್ಷ ಆಸ್ತಿಗಳನ್ನು ಗುರುತಿಸಿದ್ದು, ಕಟ್ಟುನಿಟ್ಟಾಗಿ ದುಪ್ಪಟ್ಟು ತೆರಿಗೆ ಸಂಗ್ರಹ ವಸೂಲಿ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಹಸುರೀಕರಣ: ‘ನಗರ ಹಸುರೀಕರಣ’ ಆಶಯದೊಂದಿಗೆ  ೬೦ ಸಾವಿರ ಸಸಿಗಳನ್ನು ಬೆಳೆಸಿದ್ದು,ನಗರದ ವಿವಿಧೆಡೆ ಸಾರ್ವ ಜನಿಕ ಸ್ಥಳ, ರಸ್ತೆ ಬದಿ ನೆಡುವ ಪ್ರಕ್ರಿಯೆ ಆರಂಭವಾಗಿದೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.
ಭವಿಷ್ಯದಲ್ಲಿ ರಸ್ತೆ ಅಗಲೀಕರಣಕ್ಕೆ ಮರಗಳನ್ನು ಕಡಿಯುವುದು ಅನಿವಾರ‍್ಯವಾದರೆ ಈಗ್ಯಾಕೆ  ಸಸಿ ನೆಡುವ ಶ್ರಮ ತೆಗೆದುಕೊಳ್ಳುತ್ತೀರಿ ಎಂಬ ಮಾರ್ಮಿಕ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಭವಿಷ್ಯದಲ್ಲಿ ರಸ್ತೆ ವಿಸ್ತರಣೆಗೆ ಬಾಧಕವಾಗದಂತೆ ಸಸಿ ನೆಡಲಾಗುವುದು ಎಂದು ‘ಅಭಯ’ ನೀಡಿದರು. ಸಾಲು ಮರ ಕಡಿದು ಲಲಿತ ಮಹಲ್ ರಸ್ತೆ ಅಗಲೀಕರಣ ಮಾಡುವ ವಿಷಯ ‘ಮರ ನ್ಯಾಯಾಲಯ’ದ ಮುಂದಿದ್ದು, ಸಾರ್ವಜನಿಕರು,ಪರಿಸರ ಪ್ರೇಮಿಗಳ ಅಭಿಪ್ರಾಯ ಪಡೆದು ಮುಂದಡಿ ಇಡಲಾಗುವುದು ಎಂದು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ನೆಲಮಾಳಿಗೆ ಪಾರ್ಕಿಂಗ್: ನಗರ ವಾಣಿಜ್ಯಕಟ್ಟಡಗಳ ನೆಲಮಾಳಿಗೆಗಳನ್ನು ಕಡ್ಡಾಯ ವಾಗಿ ಪಾರ್ಕಿಂಗ್‌ಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಅವರು ಹೇಳಿದರು.
ಕಡ್ಡಾಯಗೊಳಿಸುವ ಹಿಂದಿನ  ಪ್ರಸ್ತಾಪ ಜಾರಿಯಾಗಿಲ್ಲ. ನೆಲಮಾಳಿಗೆಗಳನ್ನು ಗೋದಾಮು ಆಗಿ ಬಳಸಿಕೊಳ್ಳಲು ಕೆಲವರಿಗೆ ಪಾಲಿಕೆಯೇ ಅನುಮತಿ ನೀಡಿರುವುದು ಸಮಸ್ಯೆಯಾಗಿದೆ. ಆ ಅನುಮತಿಗಳನ್ನು ವಾಪಸ್ ಪಡೆಯುವ ಕುರಿತಂತೆ  ಸಮಿತಿ ಚರ್ಚಿಸಿ ತೀರ್ಮಾನಿಸಲಿದೆ. ಅದಕ್ಕೆ ಮೊದಲು ನೆಲಮಾಳಿಗೆ ಹೊಂದಿದ ವಾಣಿಜ್ಯ ಕಟ್ಟಡಗಳ ಪಟ್ಟಿಯನ್ನು ತಯಾರಿಸಲಾಗುವುದು ಎಂದರು. ಸಂಘದ ಅಧ್ಯಕ್ಷ ಕೆ.ಶಿವಕುಮಾರ್, ಪ್ರಧಾನ ಕಾರ‍್ಯದಾರ್ಶಿ ಬಿ.ಎಸ್.ಪ್ರಭುರಾಜನ್ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ