ಮುಂಗಾರು ಬೆಳೆಗೆ ಕುತ್ತು ತಂದ ನೀರಿನ ಕೊರತೆ

ರವಿ ಸಾವಂದಿಪುರ ಭಾರತಿನಗರ
ಮದ್ದೂರು ತಾಲೂಕು ವ್ಯಾಪ್ತಿಯಲ್ಲಿ ಬರುವ ವಿಶ್ವೇಶ್ವರಯ್ಯ ನಾಲೆಯ ಕಡೆ ಭಾಗದ ಜಮೀನುಗಳಿಗೆ ನೀರು ತಲುಪದೆ ಬೆಳೆಗಳು ಒಣಗುತ್ತಿವೆ.
ಗೌಡಯ್ಯನದೊಡ್ಡಿ ಗೇಟ್ ಬಳಿ ನಡೆಯುತ್ತಿರುವ ವಿಶ್ವೇಶ್ವರಯ್ಯ ನಾಲೆಯ ಲೋಕಸರ ಬ್ರಾಂಚ್ ೮ನೇ ವಿತರಣಾ ನಾಲೆಯ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ವಿ.ನಾಲೆಯ ಕಡೆಯ ಭಾಗದ ಜಮೀನುಗಳಿಗೆ ನೀರು ತಲುಪುತ್ತಿಲ್ಲ.
ಗೌಡಯ್ಯನದೊಡ್ಡಿ ಗೇಟ್ ಬಳಿ ಸೇತುವೆಗೆ ಹೊಂದಿಕೊಂಡಂತೆ ಇದ್ದ ವಿತರಣಾ ನಾಲೆ ಮೂಲಕ ವಿ.ನಾಲೆಯ ಕಡೆಯ ಭಾಗದ ಸುಮಾರು ೧ ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರುಣಿಸಲಾಗುತ್ತಿತ್ತು. ಆದರೆ, ಒಂದೂವರೆ ವರ್ಷದ ಹಿಂದೆಯೇ ಸೇತುವೆ ಕುಸಿದಿತ್ತು. ಸೇತುವೆ ಕುಸಿಯಲು ಪಕ್ಕದಲ್ಲಿದ್ದ ವಿತರಣಾ ನಾಲೆಯೂ ಒಂದು ರೀತಿ ಕಾರಣವಾಗಿತ್ತು. ನಾಲೆ ನೀರು ಸೇತುವೆ ಜಿನುಗಿ ಶಿಥಿಲಗೊಳ್ಳುತ್ತಾ ಬಂದಿತ್ತು.
ಕಡೆಗೂ ಸೇತುವೆ ಬಿದ್ದು ಹೋದ ಬಳಿಕ ಶಾಸಕಿ ಕಲ್ಪನಾ ಸಿದ್ದರಾಜು ಅವರ ಪ್ರಯತ್ನದ ಫಲವಾಗಿ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣಗೊಂಡಿತು. ಆ ಬಳಿಕ ಹಳೆ ಸೇತುವೆಯನ್ನು ಪೂರ್ಣವಾಗಿ ಕೆಡವಲಾಯಿತು.
ಆಗ ಸೇತುವೆಗೆ ಹೊಂದಿ ಕೊಂಡಂತಿದ್ದ ವಿತರಣಾ ನಾಲೆಯನ್ನು ಕೆಡವಲಾಯಿತು. ಅಂದಿನಿಂದ ಈ ಭಾಗದ ರೈತರು ನೀರಿನ ಅಭಾವ ಎದುರಿಸುವಂತಾಗಿದೆ. ಒಂದೂವರೆ ತಿಂಗಳ ಹಿಂದೆ ಹೊಸದಾಗಿ ವಿತರಣಾ ನಾಲೆ ಕಾಮಗಾರಿ ಅರಂಭಗೊಂಡಿದ್ದು, ಮುಗಿಯಲು ಇನ್ನೂ ಒಂದೆರಡು ತಿಂಗಳ ಕಾಲಾವಕಾಶ ಬೇಕಿದೆ. ಆ ನಂತರವಷ್ಟೇ ವಿತರಣಾ ನಾಲೆಯಲ್ಲಿ ನೀರು ಹರಿಸಿ ಆ ಭಾಗದ ಜಮೀನು ಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗು ತ್ತದೆ. ಆದರೆ, ಅಲ್ಲಿವರೆಗೆ ಮುಂಗಾರು ಬೆಳೆಯನ್ನು ಕೈ ಬಿಡಬೇಕೆ ? ಎಂಬುದು ರೈತರ ಪ್ರಶ್ನೆಯಾಗಿದೆ.
ಜತೆಗೆ, ಕಟಾವು ಹಂತ ತಲುಪಿರುವ ಕಬ್ಬಿಗೆ ಇನ್ನೊಂದು ಕಟ್ಟು ನೀರಿನ ಅವಶ್ಯಕತೆ ಇದೆ. ಆದರೆ, ನಾಲೆಯಲ್ಲಿ ನೀರು ಹರಿಯದ ಪರಿಣಾಮ ಕಬ್ಬು ಬೆಳೆಯೂ ಒಣಗುತ್ತಿದೆ. ಇದರಿಂದ ಇಳುವರಿ ಕಡಿಮೆಯಾಗುವ ಭೀತಿ ಯನ್ನು ರೈತರು ಎದುರಿಸುತ್ತಿದ್ದಾರೆ.
ರೇಷ್ಮೆ ಬೆಳೆಗೂ ನೀರಿನ ಅಭಾವ ಉಂಟಾಗಿದೆ. ಇದರಿಂದ ಬೆಳೆ ಕೈ ಕಚ್ಚುವ ಹಂತ ತಲುಪಿದ್ದು, ಕೈಗೆ ಬಂದ ತುತ್ತು ಬಾರದಾಗಿದೆ. ವರ್ಷಪೂರ್ತಿ ಕಷ್ಟಪಟ್ಟು ದುಡಿದು ಬೆಳೆದ ಬೆಳೆ ಕೈ ಸೇರದಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ
ಕುಸಿದು ಬಿದ್ದ ಸೇತುವೆ ಪಕ್ಕದಲ್ಲೇ ತಾತ್ಕಾಲಿಕವಾಗಿ ಪೈಪ್‌ಲೈನ್ ಅಳವಡಿಸಿ ವಿತರಣಾ ನಾಲೆ ವ್ಯಾಪ್ತಿಯ ರೈತರಿಗೆ ನೀರೊದಗಿಸಬಹುದಿತ್ತು. ಆದರೆ,  ಅಧಿಕಾರಿಗಳು ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ಕಾರಣ ರೈತರು ತೊಂದರೆಗೆ ಒಳಗಾಗ ಬೇಕಿದೆ.
ಪರ‍್ಯಾಯ ಏನು?: ಈಗಲೂ ಕಾಲ ಮಿಂಚಿಲ್ಲ. ತಾತ್ಕಾಲಿಕ ಪೈಪ್‌ಲೈನ್ ಅಳವಡಿಸಿ ನೀರೊಗಿಸುವ ಮೂಲಕ ಒಣಗುತ್ತಿರುವ ಬೆಳೆಗಳ ಜೀವ ಉಳಿಸಬಹುದಾಗಿದೆ. ಜತೆಗೆ, ಹೆಬ್ಬಾಳ ಚೆನ್ನಯ್ಯ ನಾಲೆಯಿಂದ ನೀರನ್ನು ಪಂಪ್‌ಮಾಡಿ ಕೊಡಬಹುದಾಗಿದೆ.
ಈ ಪರ‍್ಯಾಯ ವ್ಯವಸ್ಥೆಯನ್ನು ಅಧಿಕಾರಿಗಳು ಕೈಗೊಂಡರೆ ಬೆಳೆಗಳ ರಕ್ಷಣೆ ಖಂಡಿತಾ ಸಾಧ್ಯವಾಗುತ್ತದೆ. ಅದಕ್ಕೆ ಮನಸ್ಸು ಮಾಡಬೇಕಷ್ಟೆ. ಜತೆಗೆ, ಆ ಕೆಲಸ ಕೈಗೊಳ್ಳುವ ಇಚ್ಛಾಶಕ್ತಿಯನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ತೋರಬೇಕಿದೆ.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ