ನೂತನ ಐಜಿ ಬೀಸಿದ ಚಾಟಿಗೆ ಎದ್ದ ಅಧಿಕಾರಿಗಳು


ವಿಕ ಸುದ್ದಿಲೋಕ ಮೈಸೂರು
ಜಡ್ಡುಗಟ್ಟಿದ್ದ ಮೈಸೂರು ವ್ಯಾಪ್ತಿಯ ಐದು ಜಿಲ್ಲೆಯ ಪೊಲೀಸರಲ್ಲೀಗ  ಸಸ್ಪೆಂಡ್ ಸಂಚಲನ.
ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ಅಲಿಖಾನ ಶಿವನಾರಾಯಣ ಮೂರ್ತಿ ಅವರು ಎರಡೇ ತಿಂಗಳಲ್ಲಿ ಮೈಸೂರು, ಮಂಡ್ಯ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ‘ಕೆಲಸ ಮಾಡಿ ಇಲ್ಲವೇ ಶಿಕ್ಷೆ ನೋಡಿ’ ಎನ್ನುವ ಚಾಟಿ ಬೀಸಿದ್ದಾರೆ. ನೀವು ಕೆಲಸ ಮಾಡದಿದ್ದರೆ ಐಜಿ ವಿಶೇಷ ತಂಡ ದಾಳಿ ನಡೆಸುತ್ತದೆ.
ಇದರ ಫಲವಾಗಿ ತಮ್ಮ ಕೆಲಸ ಮರೆತ ಮೂವರು ಸರ್ಕಲ್ ಇನ್ಸ್‌ಪೆಕ್ಟರ್‌ಗಳು, ಸಬ್‌ಇನ್ಸ್‌ಪೆಕ್ಟರ್‌ಗಳು ಶಿಕ್ಷೆ ಅನುಭವಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಇತರೆ ಠಾಣೆಯ ಅಧಿಕಾರಿಗಳು ಕೆಲಸದ ಹಾದಿ ಹಿಡಿದಿದ್ದಾರೆ ಎನ್ನಲಾಗಿದೆ.
ಜನಸಂಪರ್ಕ ಸಭೆಯ ಫಲ:ಕಾನೂನು ಸುವ್ಯವಸ್ಥೆ ಜತೆಯಲ್ಲಿ ಅಕ್ರಮ ಚಟುವಟಿಕೆಗಳ ನಿಗ್ರಹ ಪೊಲೀಸರ ಮೊದಲ ಆದ್ಯತೆ. ಈ ಚಟುವಟಿಕೆಗಳ ಮೇಲೆ ನಿಯಂತ್ರಣವೇ ಇಲ್ಲದೇ ಹೋದರೆ ಪೊಲೀಸಿಂಗ್ ಇಲ್ಲ ಎಂದೇ ಅರ್ಥ. ಇಂಥ ವಾತಾವರಣ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ನಿಧಾನವಾಗಿ ಮೂಡತೊಡಗಿತ್ತು. ಎಲ್ಲದ್ದಕ್ಕೂ ಎಸ್ಪಿಗೆ ದೂರು ಹೋಗಬೇಕು. ಅವರಿಂದ ನಿರ್ದೇಶನ ಬಂದ ನಂತರವೇ ಕೆಲಸ ಎನ್ನುವ ಸ್ಥಿತಿ.
ಐಜಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೂರ್ತಿ, ಐದು ಜಿಲ್ಲೆ ವ್ಯಾಪ್ತಿಯ ೧೫ ಉಪವಿಭಾಗಗಳ ಪ್ರವಾಸ ಕೈಗೊಂಡರು. ಇದಾದ ನಂತರ ಜನಸಂಪರ್ಕ ಸಭೆಗಳನ್ನು ಆರಂಭಿಸಿದರು. ಉಪವಿಭಾಗ ಮಟ್ಟದಲ್ಲಿ ಸಭೆ ನಡೆದು ಸಮಸ್ಯೆಗಳ ಪಟ್ಟಿ ಮಾಡಿಕೊಂಡರು. ಇವುಗಳ ಪರಿಹಾರಕ್ಕೆ ಸಮಯವನ್ನೂ ನಿಗದಿಪಡಿಸಿದರು. ಈಗ ತಾಲೂಕು ಮಟ್ಟದಲ್ಲಿ ಜನಸಂಪರ್ಕ ಸಭೆ ಆರಂಭವಾಗಿದೆ. ಅಲ್ಲಿ ಇದೇ ರೀತಿಯ ದೂರುಗಳು ಬಂದರೆ ವಿಶೇಷ ತಂಡದಿಂದ ದಾಳಿ ನಡೆಸಿ ಬಿಗಿ ಮಾಡುವುದು. ಆನಂತರ ನಿರ್ಲಕ್ಷ್ಯ ವಹಿಸಿದ ಅಧಿಕಾರಿ/ಸಿಬ್ಬಂದಿ ವಿರುದ್ಧ ಕ್ರಮ.
ಜಿಲ್ಲೆ ವ್ಯಾಪ್ತಿಯಲ್ಲಿ ದೂರುಗಳು ಕೇಳಿ ಬಂದಾಗ ಕ್ರಮ ಕೈಗೊಳ್ಳಬೇಕು. ದೂರುಗಳು ಬಂದಾಗ ಕೆಳ ಹಂತದ ಅಧಿಕಾರಿಗಳಿಗೆ ತಿಳಿಸಬೇಕು. ನಿರ್ಲಕ್ಷ್ಯ ವಹಿಸಿದ ನಂತರ ಕ್ರಮವನ್ನೂ ನೀವೆ ಕೈಗೊಳ್ಳಿ ಎಂದು ಎಲ್ಲಾ ಎಸ್ಪಿಗಳಿಗೆ ಐಜಿಪಿ ಸೂಚಿಸಿದ್ದಾರೆ.
ಇದೇ ರೀತಿಯ ಕಾರ‍್ಯಾಚರಣೆ ಪೊಲೀಸ್ ಅಧಿಕಾರಿಗಳ ಮೇಲೆಯೇ ಐಜಿಪಿ ಅವರಿಂದ ಆಗುತ್ತಿರುವ ಎನ್ನುವ ಸಲಹೆ ಸಾರ್ವಜನಿಕರಿಂದ ಕೇಳಿ ಬಂದಿದೆ.
ಐಜಿಗೆ ನೀವೇ ದೂರು ಹೇಳಿ
ನಿಮ್ಮ ಭಾಗದಲ್ಲಿ ಪೊಲೀಸರಿಂದ ನ್ಯಾಯ ಸಿಗುತ್ತಿಲ್ಲ, ದೂರುಗಳ ಬಗ್ಗೆ ಪೊಲೀಸರಿಂದ ಸ್ಪಂದನೆ ಇಲ್ಲ ಎನ್ನಿಸಿದಾಗ ನೇರವಾಗಿಯೇ ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕರಿಗೆ ಕರೆ ಮಾಡಿ ತಿಳಿಸಬಹುದು. ಅವರ ಮೊಬೈಲ್ ಸಂಖ್ಯೆ-೯೪೮೦೮ ೦೦೦೩೧

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ