ಇಳೆಗೆ ಬಿದ್ದ ಮಳೆ, ಕೃಷಿ ಚಟುವಟಿಕೆಗೆ ಕಳೆ !

ನವೀನ್ ಮಂಡ್ಯ
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಗಳು ಆರಂಭಗೊಂಡಿವೆ. ಮಳೆ ಎಟುಕಿಸಿಕೊಂಡಿರುವುದ ರಿಂದ ಭತ್ತದ ಬೆಳೆಗೆ ಪೂರಕವಾಗಿ ಭೂಮಿಯನ್ನು ಹದ ಗೊಳಿಸಿ, ಸಸಿ ಮಡಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.
ಸಾಮಾನ್ಯವಾಗಿ ಜಿಲ್ಲೆಯಲ್ಲಿ ಜುಲೈ ೩ನೇ ವಾರದಲ್ಲಿ ಮುಂಗಾರು ಕೃಷಿ ಚಟುವಟಿಕೆ ಆರಂಭಗೊಳ್ಳುವುದು ವಾಡಿಕೆ. ಹಾಗೆಯೇ ಈ ಬಾರಿಯೂ ನಡೆದಿದೆ. ಜತೆಗೆ, ಜೂನ್ ತಿಂಗಳು ಮತ್ತು ಜುಲೈನ ಮೊದಲೆರಡು ವಾರಗಳಲ್ಲಿ ಉತ್ತಮ ಮಳೆಯಾಗಿರುವುದು ರೈತರಿಗೆ ಸಹಕಾರಿಯಾಗಿದೆ. ಭೂಮಿ ಸಿದ್ಧತೆ, ಬಿತ್ತನೆ, ನಾಟಿ, ಅಂತರ ಬೇಸಾಯ ಹಾಗೂ ಕಬ್ಬಿನ ಕಟಾವು ಕಾರ್ಯ ಮುಂದು ವರಿದಿದೆ. ಖುಷ್ಕಿ ಪ್ರದೇಶದಲ್ಲಿ ರಾಗಿ ಬೆಳೆ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ಕಬ್ಬು ಬೆಳೆಯು ವಿವಿಧ ಹಂತದಲ್ಲಿದ್ದು, ಮಧ್ಯಂತರ ಬೇಸಾಯ ನಡೆಯುತ್ತಿದೆ. ಕೂಳೆ ಬೆಳೆ ನಿರ್ವಹಣೆಯೂ ಸಾಗಿದೆ.
ಎಣ್ಣೆಕಾಳು ಬೆಳೆಗಳಲ್ಲಿ ನೆಲಗಡಲೆ, ಹುಚ್ಚೆಳ್ಳು ಮತ್ತು ಹರಳು ಬೆಳೆಗಳ ಬಿತ್ತನೆ ಮುಂದುವರಿದಿದ್ದು, ಮುಂದುವರಿದ ಬೆಳೆಗಳು ವಿವಿಧ ಬೆಳವಣಿಗೆ ಹಂತದಲ್ಲಿವೆ. ಹಾಲಿ ಇರುವ ಬೆಳೆಗಳು ಉತ್ತಮ ಸ್ಥಿತಿಯಲ್ಲಿವೆ. ದ್ವಿದಳ ಬೆಳೆಗಳಾದ ಅಲಸಂದೆ, ಹೆಸರು, ಉದ್ದು ಬೆಳೆಗಳ ಕಾಯಿ ಬಲಿತು ಅಲ್ಲಲ್ಲಿ ಕಟಾವು ಆರಂಭಗೊಂಡಿದೆ.
ಜಿಲ್ಲೆಯಲ್ಲಿ ೨,೧೧,೩೦೦ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಬೆಳೆ ಬೆಳೆಯಲು ಕೃಷಿ ಇಲಾಖೆ ಗುರಿ ಹಾಕಿಕೊಂಡು, ಆ ನಿಟ್ಟಿನಲ್ಲಿ ರೈತರನ್ನು ಪ್ರೇರೇಪಿಸುತ್ತಿದೆ. ಇದಕ್ಕೆ ಪೂರಕವಾಗಿ ಜುಲೈ ೨ನೇ ವಾರಾಂತ್ಯಕ್ಕೆ ಈಗಾಗಲೇ ಶೇ೧೩.೨ರಷ್ಟು ಅಂದರೆ ೨೭,೮೩೩ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, ಜೋಳ ರಾಗಿ, ಎಳ್ಳು, ತೊಗರಿ ಸೇರಿದಂತೆ ದ್ವಿದಳ ಧಾನ್ಯಗಳ ಬಿತ್ತನೆ, ನಾಟಿ ಕಾರ್ಯ ಮುಗಿದಿದೆ.
ಪ್ರಮುಖವಾಗಿ ೨೫೦೦೦ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯುವ ಗುರಿ ಹೊಂದಿದ್ದು, ೧೧,೩೬೮ ಹೆಕ್ಟೇರ್‌ನಲ್ಲಿ ಈಗಾಗಲೇ ಕಬ್ಬಿನ ಬಿತ್ತನೆ ಕಾರ್ಯ ನಡೆ ದಿದೆ. ಈ ಪೈಕಿ ೫೬೬೦ ಹೆಕ್ಟೇರ್ ಪ್ರದೇಶದಲ್ಲಿ ತನಿ ಕಬ್ಬು ಹಾಗೂ ೫೭೦೮ ಹೆಕ್ಟೇರ್‌ನಲ್ಲಿ ಕೂಳೆ ಕಬ್ಬು ಇದೆ.
ಎಳ್ಳು ಬಿತ್ತನೆಯಲ್ಲಿ ಗುರಿ(೪೫೦೦ ಹೆಕ್ಟೇರ್) ಮೀರಿದ ಸಾಧನೆ(೫೬೬೨ ಹೆಕ್ಟೇರ್) ಮಾಡಲಾಗಿದೆ. ಏಕದಳ, ದ್ವಿದಳ ಮತ್ತು ಎಣ್ಣೆಕಾಳುಗಳ ಬೆಳೆಯ ಬಿತ್ತನೆ ಕಾರ್ಯವೂ ಸಾಕಷ್ಟು ಪ್ರಗತಿ ಕಂಡು ಬಂದಿದೆ. ದ್ವಿದಳ ಧಾನ್ಯದ ಪೈಕಿ ೨೩೧೫೦ ಹೆಕ್ಟೇರ್ ಗುರಿಯ ಪೈಕಿ ೯೫೭೬ ಹೆಕ್ಟೇರ್‌ನಲ್ಲಿ ಹಾಗೂ ಎಣ್ಣೆಕಾಳುಗಳ ಬೆಳೆಯಲ್ಲಿ ೧೦೮೦೦ ಹೆಕ್ಟೇರ್‌ನಲ್ಲಿ ೬೬೮೩ ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ.
ಏಕದಳ ಧಾನ್ಯಗಳಲ್ಲಿ ಪ್ರಮುಖವಾಗಿ ಭತ್ತಕ್ಕೆ ಆದ್ಯತೆ ನೀಡಲಾಗಿದೆ. ಈ ಬಾರಿ ಮುಂಗಾರು ಹಂಗಾಮಿನಲ್ಲಿ ಒಟ್ಟು ೭೦,೦೦೦ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಾಗಿದೆ. ಈಗ ತಾನೇ ಭೂಮಿಯನ್ನು ಹದಗೊಳಿಸಿ, ಒಟ್ಲುಪಾತಿ(ಸಸಿಮಡಿ) ಸಿದ್ಧಪಡಿಸುವ ಕಾರ್ಯ ಸಾಗಿದೆ. ಇದಕ್ಕೆ ಪೂರಕವಾಗಿ ವಿವಿಧ ತಳಿಯ ಬಿತ್ತನೆ ಭತ್ತವನ್ನು ಕೃಷಿ ಇಲಾಖೆ ವಿತರಿಸುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ