ಗುಜರಿ ಬದಲು ವಿದೇಶಕ್ಕೆ

ಈಚನೂರು ಕುಮಾರ್
ಮ್ಮ ಮನೆಯಲ್ಲಿ ಓಬೀರಾಯನ ಕಾಲದ ರೇಡಿಯೊ ಇದೆಯೇ? ಅದನ್ನು ಕೇಳುವರು ಇಲ್ಲವೆಂದು ಬಿಸಾಡಲು ನಿರ್ಧರಿಸಿದ್ದೀರಾ? ತುಸು ನಿಲ್ಲಿ, ಮೈಸೂರಿನ ಎಂ.ಬಿ.ರಾಮರಾವ್ ಕಾಸು ಕೊಟ್ಟು ಅದನ್ನು ಕೊಳ್ಳುತ್ತಾರೆ !
ಟಿ.ವಿ, ಎಫ್.ಎಂ ಯುಗದಲ್ಲಿ ರೇಡಿಯೊಗಳಿಗೂ ಬೆಲೆ ತಂದುಕೊಟ್ಟಿದ್ದಾರೆ ನಮ್ಮ ರಾಯರು. ಯಾವ ಭಾಗವೇ ಹಾಳಾಗಿರಲಿ, ಕ್ಷಣಮಾತ್ರದಲ್ಲಿ ರಿಪೇರಿ ಮಾಡಿ ಹೊಚ್ಚಹೊಸದರಂತೆ ಮಾಡುತ್ತಾರೆ. ಅಂತಹ ರೇಡಿಯೊ ಕೊಳ್ಳಲು ಇರಾನಿ ಪ್ರಜೆಗಳು ಕೆ.ಆರ್. ಮೊಹಲ್ಲಾದಲ್ಲಿರುವ ಅವರ ವಿನಾಯಕ ಎಲೆಕ್ಟ್ರಾನಿಕ್ಸ್ ಮುಂದೆ ಸಾಲುಗಟ್ಟಿ ನಿಂತಿರುತ್ತಾರೆ!
‘ಕಾಸು ಎಷ್ಟಾದರೂ ಪರವಾಗಿಲ್ಲ, ನಮಗೊಂದು ಒಳ್ಳೆಯ ರೇಡಿಯೊ ಕೊಡಿ’ ಎಂದು ಗೋಗರೆಯುವವರಿಗೇನೂ ಕಮ್ಮಿ ಯಿಲ್ಲ. ಇಂತಹುದೇ ಬ್ರ್ಯಾಂಡ್ ಬೇಕೆಂದು ಕೇಳುವವರೂ ಇದ್ದಾರೆಂದರೆ ಅಚ್ಚರಿಯಾದೀತಲ್ಲವೆ? ೩೫೦ ರೂ. ಆರಂಭಿಕ ಬೆಲೆಯಿಂದ ಸಾವಿರಾರು ರೂಪಾಯಿ ಮೌಲ್ಯದ ರೇಡಿಯೊ ಗಳು ಇವರಲ್ಲಿ ಸಿಗುತ್ತವೆ. ರಾಮರಾವ್ ಅವರಿಗೆ ಈಗ ೮೪. ವಯಸ್ಸು ೨೦ ಆಗಿದ್ದಾಗನಿಂದಲೂ ಹೊಟ್ಟೆಪಾಡಿಗೆ ರೇಡಿಯೊವನ್ನೇ ನಂಬಿ ಕೊಂಡಿದ್ದಾರೆ. ಅದರಿಂದ ಮೋಸವೇನೂ ಆಗಿಲ್ಲವೆನ್ನಿ.
ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ರಾಮರಾವ್ ಓದಿದ್ದು ಉಡುಪಿಯಲ್ಲಿ. ನಂತರ ಮುಂಬಯಿಗೆ ಹೋಗಿ ಅಲ್ಲಿ ಅಣ್ಣಾಜಿರಾವ್ ಬಳಿ ರೇಡಿಯೋ ದುರಸ್ತಿ ಕಲಿತು ಪಳಗಿದರು.  ೧೯೪೪-೪೫ರ ಆಸುಪಾಸು ಬೆಸ್ಟ್ ರೇಡಿಯೊ ಶಾಪ್ ಸರ್ವೀಸ್‌ನಲ್ಲಿದ್ದು ಗಿರಿಗಾಂವ್‌ನಲ್ಲೇ ‘ಬೆಸ್ಟ್’ ಎನ್ನಿಸಿಕೊಂಡರು. ಅಣ್ಣಾಜಿಯವರೋ ಜಪಾನ್ ಮತ್ತು ಜರ್ಮನ್ ಸೆಟ್, ಬುಶ್ ನ್ಯಾಶನಲ್ ಎಕೊ, ಜೆನಿತ್, ಪೈಲಟ್, ಮರ್ಫಿ, ಫಿಲಿಪ್ಸ್ ಮೊದಲಾದ ಹೆಸರಾಂತ ಕಂಪನಿಗಳ ರೇಡಿಯೊಗಳನ್ನೇ ತರಿಸುತ್ತಿದ್ದರು.
೧೯೪೬ರಲ್ಲಿ ರಾಮರಾವ್ ಮೈಸೂರಿಗೆ ಬಂದರು. ಓಲ್ಡ್ ಬ್ಯಾಂಕ್ ರಸ್ತೆ ಎಂದು ಕರೆಯುತ್ತಿದ್ದ ಸರ್ದಾರ್ ಪಟೇಲ್ ರಸ್ತೆಯಲ್ಲಿ ಆಗಿನ ನಿಯಮಗಳಂತೆ ಕಾನೂನುಬದ್ಧವಾಗಿಯೇ ರೇಡಿಯೊ ಮಾರಾಟದ ಅಂಗಡಿ ತೆರೆದರು.  ನಂತರ ಕಾಳಮ್ಮನ ಗುಡಿ ರಸ್ತೆ, ಮುಂದೆ ಸಯ್ಯಾಜಿರಾವ್ ರಸ್ತೆಗೆ ಸ್ಥಳಾಂತರ. ರಾಜೀವ್‌ಗಾಂಧಿಯವರು ರೇಡಿಯೊ ಮಾರಾಟದ ಲೈಸೆನ್ಸ್ ತೆಗೆದು ಹಾಕುವವರೆಗೆ ಚೆನ್ನಾಗಿಯೇ ವ್ಯಾಪಾರ-ವ್ಯವಹಾರ ನಡೆಸಿದರು. ೩, ೪, ೫ ಬ್ಯಾಂಡ್ ರೇಡಿಯೊಗಳ ವ್ಯವಹಾರ. ಬಿಡಿಭಾಗಗಳನ್ನು ಜೋಡಿಸಿ ಸಿದ್ಧಪಡಿಸಿದ ಡೆಲ್ಲಿ ಸೆಟ್‌ಗಳು ಬೀದಿಗೆ ಇಳಿದವಲ್ಲ, ಬಹುತೇಕ ರೇಡಿಯೊ ಮಾರಾಟಗಾರರು ನಡುರಸ್ತೆಯಲ್ಲಿ ನಿಲ್ಲುವಂತಾಯಿತು. ಆಗ ಹಳೆ ರೇಡಿಯೊಗಳಿಗೆ ಹೊಸ ರೂಪ ನೀಡಿ ಮಾರಾಟ ಮಾಡಲು ಶುರುವಿಟ್ಟುಕೊಂಡರು. ಅರಮನೆ ನಗರಿಗೆ ಬರುವ ಇರಾನಿಗಳಿಗೆ ಹಳೆ ರೇಡಿಯೊಗಳೆಂಂದರೆ ಅದೇನು ಮೋಹವೋ? ಇವರ ಅಂಗಡಿ ಹುಡುಕಿಕೊಂಡು ಬಂದು ರೇಡಿಯೊ ಒಯ್ಯುತ್ತಾರೆ.
‘ಜಗತ್ತಿನ ಪ್ರಸಿದ್ಧ ಕಂಪನಿಗಳ ರೇಡಿಯೊ ಬಿಡಿಭಾಗಳನ್ನು ಅಸೆಂಬಲ್ ಮಾಡುವುದು ಅಥವಾ ಹಾಳಾಗಿರುವ ರೇಡಿಯೊ ಸರಿ ಮಾಡುವುದು ಹೇಗೆ ಸಾಧ್ಯವಾಯಿತು’ ಎಂದು ಪ್ರಶ್ನಿಸಿದರೆ,  ‘ಟ್ರಬಲ್ ಶೂಟರ‍್ಸ್ ಮ್ಯಾನ್ಯುಯೆಲ್’ ಎಂಬ ೧೫ ಸಂಪುಟಗಳ ಕೃತಿಯತ್ತ ಬೊಟ್ಟು ಮಾಡುತ್ತಾರೆ. ಜಾನ್ ಎಫ್. ರೈಡರ್ ರಚಿಸಿದ ಕೃತಿಯಲ್ಲಿ ೧೯೧೯ರಿಂದ ೧೯೪೬ ರವರೆಗಿನ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇದೇ ಇವರಿಗೆ ಇಂದಿಗೂ ದಾರಿದೀಪ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ