ಇದ್ದೂ ಇಲ್ಲದಂತಿರುವ ದೌರ್ಜನ್ಯ ದೂರು ಸಮಿತಿ

ಚೀ.ಜ. ರಾಜೀವ ಮೈಸೂರು
‘ಹೆಣ್ಣಾದ ನಿನಗೆ ಇಷ್ಟು ಸೊಕ್ಕು ಇರುವಾಗ, ಗಂಡಾದ ನನಗೆ ಅದಿನ್ನೆಷ್ಟು ಇರೋದಿಲ್ಲ. ಸ್ವಲ್ಪ ಮೈ ಮುಟ್ಟಿದ್ದಕ್ಕೆ, ಯಾಕಿಷ್ಟು ರಂಪಾ ಮಾಡ್ತೀಯಾ ?’
ಇದು- ಮಹಿಳಾ ಹಕ್ಕುಗಳ ಗೈರು ಹಾಜರಿಯಲ್ಲಿ ನಿರ್ಮಾಣ ವಾದ ಯಾವುದೋ ಹಳೆ ಕನ್ನಡ ಸಿನಿಮಾದ ಡೈಲಾಗ್ ಅಲ್ಲ. ಮಹಿಳಾ ಹಕ್ಕಿನ ಅರಿವಿರುವ ೨೧ನೇ ಶತಮಾನದಲ್ಲಿ - ಮೈಸೂರು ವಿಶ್ವವಿದ್ಯಾನಿಲಯದ ಮಹಾಶಯರೊಬ್ಬರು, ತನ್ನ ಮಹಿಳಾ ಸಹೋದ್ಯೋಗಿ ಮೇಲೆ ಎಸೆದಿರುವ ಮಾತಿನ ದೌರ್ಜನ್ಯ !
ಹಾಗಾದರೆ ಈ ದೂರು ಮೈಸೂರು ವಿಶ್ವವಿದ್ಯಾನಿಲಯದ ಕಿವಿಗೆ ಮುಟ್ಟಿಲ್ಲವೇ ?. ಇಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ವಿವಿಯ ಪ್ರಾಧ್ಯಾಪಕಿ. ಇದಷ್ಟೇ ಅಲ್ಲ, ಇಂಥ ನೂರೆಂಟು ದೂರುಗಳು ವಿವಿಯ ಕ್ರಾಫರ್ಡ್ ಭವನವನ್ನು ಮುಟ್ಟುತ್ತಿಲ್ಲ. ಎಲ್ಲವೂ ಮಹಿಳೆಯರು ಕಾರ್ಯನಿರ್ವಹಿಸುವ ನಾಲ್ಕು ಗೋಡೆಗಳ ನಡುವೆ ಕರಗಿ ಹೋಗುತ್ತಿವೆ. ಏಕೆಂದರೆ, ವಿವಿಗೆ ದೂರು ನೀಡಿದರೆ ಪ್ರಯೋಜನ ವಾಗುವುದಿಲ್ಲ ಎಂಬ ಸತ್ಯ ಕಾರ್ಯನಿರ್ವಹಿಸುತ್ತಿರುವ ವಿವಿಯ ಮಹಿಳಾ ಸಿಬ್ಬಂದಿಗೆ ಅರ್ಥವಾಗಿದೆ.
ಮಹಿಳಾ ದೌರ್ಜನ್ಯ ಎಸಗಿದ ಆರೋಪ ಹೊತ್ತು, ಬೇರೆ ಇಲಾಖೆಗೆ ನಿಯೋಜನೆಗೊಂಡಿದ್ದ ವಿವಿಯ ಪ್ರಾಧ್ಯಾಪಕರೊಬ್ಬರು ಇತ್ತೀಚೆಗೆ ಮಾತೃ ಇಲಾಖೆಗೆ ಬಂದಿದ್ದಾರೆ. ಈ ಕ್ರಿಯೆಯನ್ನು ವಿವಿಯ ಸಿಂಡಿಕೇಟ್ ಸದಸ್ಯರೊಬ್ಬರು- ‘ಅಯ್ಯೋ, ಇದೆಲ್ಲಾ ಸಾಮಾನ್ಯ. ಇದನ್ನು ದೂರು ಅನ್ನೋಕೆ ಆಗುತ್ತೇನೆ ?’ ಎಂದು ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಗತಿ ವಿವಿಯಲ್ಲಿರುವ ಮಹಿಳಾ ದೌರ್ಜನ್ಯ ದೂರು ಸಮಿತಿಯ ಕಾರ್ಯವೈಖರಿಯ ಮುಂದೆ ಹೊಸ ಪ್ರಶ್ನೆಯನ್ನು ಇಟ್ಟಿದೆ.
ಐದು ವರ್ಷಕ್ಕೆ ೨೫ ದೂರು !: ಎಲ್ಲೆಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೋ, ಅಲ್ಲೆಲ್ಲಾ ಲೈಂಗಿಕ ದೌರ್ಜನ್ಯ ಸಂಬಂಧಿ ದೂರುಗಳನ್ನು ಆಲಿಸುವ ವ್ಯವಸ್ಥೆ ಇರಲೇಬೇಕೆಂದು ಸುಪ್ರೀಕೋರ್ಟ್ ಆದೇಶ ನೀಡಿದೆಯಲ್ಲದೆ, ಈ ಸಂಬಂಧ ತಾನೇ ಒಂದಿಷ್ಟು ಮಾರ್ಗಸೂಚಿ ಅಂಶಗಳನ್ನೂ ನೀಡಿದೆ.
ಹಾಗಾಗಿ ಮೈಸೂರು ವಿವಿ ಕೂಡ ೨೦೦೫ರಲ್ಲಿ ಮಹಿಳಾ ದೌರ್ಜನ್ಯ ದೂರು ಸಮಿತಿಯನ್ನು ರಚಿಸಿತು. ಇದರ ಮೊದಲ ಅಧ್ಯಕ್ಷೆಯಾಗಿ ಜವಾಬ್ದಾರಿ ಹೊತ್ತ ಚ. ಸರ್ವಮಂಗಳ ೨೦೦೯ರವರೆಗೆ ಕಾರ್ಯನಿರ್ವಹಿಸಿದರು. ಅವರ ಅವಧಿಯಲ್ಲಿ ಸಮಿತಿಗೆ ೧೮ ದೂರುಗಳು ಬಂದವು. ಕಳೆದ ಒಂದು ವರ್ಷದಿಂದ ಶಿಕ್ಷಣ ಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಕೆ. ಯಶೋದರ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿ ದ್ದಾರೆ. ಒಟ್ಟಾರೆ ಸಮಿತಿ ಇಲ್ಲಿಯವರೆಗೆ ೨೫ ದೂರುಗಳನ್ನು ಸ್ವೀಕರಿಸಿ, ಪ್ರಾಮಾಣಿಕವಾದ ದೂರುಗಳ ಕುರಿತು ವಿಚಾರಣೆ ನಡೆಸಿದೆ. ವಿವಿ ನೀಡುವ ಈ ಅಂಕಿ-ಅಂಶಗಳನ್ನು ಗಮನಿಸಿದರೆ, ವಿವಿಯಲ್ಲಿ ನಡೆದಿರುವ ಮಹಿಳಾ ದೌರ್ಜನ್ಯ ಪ್ರಕರಣಗಳು ವರ್ಷಕ್ಕೆ ಐದಷ್ಟೆ !
ಹಲ್ಲಿಲ್ಲದ ಸಮಿತಿ ಬಗ್ಗೆ ಯೂ ನಿರ್ಲಕ್ಷ್ಯ: ‘ನ್ಯಾಯಾಲಯದ ಮಾರ್ಗಸೂಚಿ ಪ್ರಕಾರ ದೌರ್ಜನ್ಯವನ್ನು ಪರಿಗಣಿಸುವುದಾರೆ, ವಿವಿ ವ್ಯಾಪ್ತಿಯಲ್ಲಿ ನಿತ್ಯವೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ಆದರೆ, ಯಾರೂ ದೂರು ನೀಡುವುದಿಲ್ಲ. ಮಹಿಳಾ ದೌರ್ಜನ್ಯ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂಬುದರ ಬಗ್ಗೆ ಪ್ರಚಾರದ ಕೊರತೆ, ಯಾವುದೆಲ್ಲಾ ದೌರ್ಜನ್ಯ ಎಂದು ಮಹಿಳೆಯರಿಗೆ ಇನ್ನೂ ಅರಿವು ಇಲ್ಲದಿರುವುದು, ದೂರು ನೀಡಿದರೂ ಪ್ರಯೋಜನವಾಗುವುದಿಲ್ಲ ಎಂಬುದೇ ಇದಕ್ಕೆ ಕಾರಣ’ ಎನ್ನುತ್ತಾರೆ ಸಮಿತಿಯ ಹಿಂದಿನ ಅಧ್ಯಕ್ಷೆ ಚ. ಸರ್ವಮಂಗಳ.
‘ಹಾಗೆ ನೋಡಿದರೆ, ಮಹಿಳಾ ದೌರ್ಜನ್ಯ ದೂರು ಸಮಿತಿಗೆ ಹಲ್ಲು -ಬಾಲ ಎರಡೂ ಇಲ್ಲ. ದೂರು ಆಲಿಸುವುದು, ಅದರಲ್ಲಿ ಎಳ್ಳಷ್ಟಾದರೂ ಸತ್ಯಾಂಶ ಇದೆ ಎಂದಾದರೆ, ವಿಚಾರಣೆ ನಡೆಸಿ ವರದಿ ನೀಡುವುದಷ್ಟೇ ಸಮಿತಿಯ ಕೆಲಸ. ವಿಚಾರಣೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ವಿವಿಯ ಆಡಳಿತಕ್ಕೆ ಬಿಟ್ಟ ವಿಚಾರ’ ಎಂದು ವಿಷಾದದಿಂದಲೇ ಹೇಳುತ್ತಾರೆ.
‘ಸಮಿತಿ ಸ್ವೀಕರಿಸಿರುವ ೨೫ ದೂರುಗಳ ಪೈಕಿ, ಮೂರ‍್ನಾಲ್ಕು ಪ್ರಕರಣಗಳಲ್ಲಿ ಯಾವುದೇ ಹುರುಳು ಇರಲಿಲ್ಲ. ತೇಜೋವಧೆ ಮಾಡುವ ದೃಷ್ಟಿಯಿಂದ ನೀಡಲಾಗಿತ್ತು. ಉಳಿದ ದೂರುಗಳಲ್ಲಿ ಸತ್ಯಾಂಶ ಇತ್ತು. ತಪ್ಪಿತಸ್ಥರ ಪೈಕಿ ವಿವಿ ಕೆಲವರಿಗೆ ಬುದ್ಧಿಮಾತು ಹೇಳಿದೆಯಂತೆ. ಇನ್ನೂ ಕೆಲವರಿಗೆ ವಾಗ್ದಾಂಡನೆ ವಿಧಿಸಿದೆಯಂತೆ. ತಾನು ಕೈಗೊಂಡಿರುವ ಕ್ರಮಗಳ ಬಗ್ಗೆ ಯೂ ವಿಶ್ವವಿದ್ಯಾನಿಲಯ ದೂರು ಸಮಿತಿಗೆ ಮಾಹಿತಿ ನೀಡುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಹೀಗಿದ್ದರೂ ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯಗಳ ಕುರಿತು ಸಮಿತಿಗೆ ದೂರು ನೀಡುವುದನ್ನು ನಿಲ್ಲಿಸಬಾರದು. ಕೊರತೆಗಳ ನಡುವೆಯೂ ಪರಿಸ್ಥಿತಿಯನ್ನು ಸುಧಾರಿಸಬೇಕಿದೆ ಎನ್ನುತ್ತಾರೆ ವಿವಿಯ ವಿವೇಕಿಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ