ಮಾದರಿ ಶಾಲೆ ಸೇರಲು ೧೮೪೧ ವಿದ್ಯಾರ್ಥಿಗಳ ಅರ್ಜಿ !

ವಿಕ ವಿಶೇಷ ಮೈಸೂರು
ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ ಆರಂಭವಾಗು ತ್ತಿರುವ ಆರು ಮಾದರಿ ಶಾಲೆಗಳಿಗೆ ಪ್ರವೇಶ ಬಯಸಿ ೧೮೪೧ ವಿದ್ಯಾರ್ಥಿಗಳು ಸಾಮಾನ್ಯ ಪರೀಕ್ಷೆ ಬರೆದಿದ್ದಾರೆ.
ಒಂದು ಶಾಲೆಗೆ ೮೦ ವಿದ್ಯಾರ್ಥಿಗಳನ್ನು ದಾಖಲಿಸಿ ಕೊಳ್ಳಲು ಅವಕಾಶವಿದ್ದು, ಒಟ್ಟು ೪೮೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಶೈಕ್ಷಣಿಕವಾಗಿ ಹಿಂದುಳಿದ  ತಾಲೂಕುಗಳಲ್ಲಿ ಆರಂಭಿಸುತ್ತಿರುವ ಈ ಶಾಲೆಗಳು ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿರಲಿವೆ. ೬ ರಿಂದ ೧೦ನೇ ತರಗತಿವರೆಗೆ ಸಂಪೂರ್ಣ ಉಚಿತವಾಗಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುವುದು. ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಆಟದ ಮೈದಾನ, ಪದವಿ ಹಾಗೂ ಸ್ನಾತ ಕೋತ್ತರ ಪದವಿಯೊಂದಿಗೆ ತರಬೇತಿ ಪಡೆದ ಶಿಕ್ಷಕರನ್ನು ಒಳಗೊಂಡಿರುವ ಈ ಶಾಲೆಗಳು ಒಂದರ್ಥದಲ್ಲಿ ಗ್ರಾಮೀಣ ಮಕ್ಕಳ ಹಾಗೂ ಪೋಷಕರ ಇಂಗ್ಲಿಷ್ ಮಾಧ್ಯಮದ ಹಸಿವನ್ನು ನೀಗಿಸಲೆಂದೇ ಆರಂಭವಾಗು ತ್ತಿವೆ. ಶಾಲೆಗಳು ಕೇಂದ್ರೀಯ ಮಾದರಿಯಲ್ಲಿ ಇರುತ್ತವೆ ಯಾದರೂ, ಪಠ್ಯಕ್ರಮ ಮಾತ್ರ ರಾಜ್ಯದ್ದೇ ಆಗಿರುತ್ತದೆ.
ಇಷ್ಟೆಲ್ಲಾ ಮಹತ್ವ ಹೊಂದಿರುವ ಹಾಗೂ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿರುವ ಈ ಶಾಲೆಗಳಿಗೆ ಪ್ರವೇಶ ಬಯಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ಜಿಲ್ಲೆಯಲ್ಲಿ ಕಡಿಮೆ ಎಂದೇ ಹೇಳಬೇಕು. ಲಭ್ಯ ಒಂದು ಸೀಟಿಗೆ ಸರಾಸರಿ ನಾಲ್ವರು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದಾರೆ.
‘ಇದೇ ವರ್ಷ ಮಾದರಿ ಶಾಲೆಗಳು ಆರಂಭವಾಗುತ್ತಿ ರುವುದರಿಂದ, ಪೋಷಕರಿಗೆ ಈ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಇದಲ್ಲದೆ. ಮೊದಲ ವರ್ಷ ವಸತಿ ನೀಡುತ್ತಿಲ್ಲ. ಹಾಗಾಗಿ ಬಹಳಷ್ಟು ಪೋಷಕರು ಮಕ್ಕಳನ್ನು ಈ ಶಾಲೆಗೆ ಕಳುಹಿಸಲು ಬಯಸುತ್ತಿಲ್ಲ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗೇಂದ್ರ ಕುಮಾರ್ ವಿಜಯ ಕರ್ನಾಟಕಕ್ಕೆ ತಿಳಿಸಿದರು.
‘ಪ್ರಸಕ್ತ ೨೦೧೦-೧೧ನೇ ಸಾಲಿನಿಂದ ೬ನೇ ತರಗತಿ  ಮಾತ್ರ ಆರಂಭಿಸುತ್ತಿದ್ದು, ನಂತರದ ವರ್ಷಗಳಲ್ಲಿ ಸ್ವಾಭಾವಿಕ ಬೆಳವಣಿಗೆಯಲ್ಲಿ ೧೦ನೇ ತರಗತಿವರೆಗೆ ಶಾಲೆ ರೂಪುಗೊಳ್ಳಲಿದೆ. ಈ ವರ್ಷದ ಶಾಲೆ ವಸತಿ ರಹಿತ ವಾಗಿದ್ದು, ಕ್ರಮೇಣ ವಸತಿ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಯ ಆರು ಶಾಲೆಗಳಿಗೆ  ತಲಾ ಮೂವರು ಶಿಕ್ಷಕರಂತೆ ೧೮ ಜನ ಶಿಕ್ಷಕರನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ಅರ್ಹ ಶಿಕ್ಷಕರ ಸಂದ ರ್ಶನ ಮಾಡಲಾಗಿದೆ. ಜು.೧೫ಕ್ಕೆ ಶಾಲೆ ಆರಂಭಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.
ಸರ್ವಶಿಕ್ಷಣ ಅಭಿಯಾನದ ಮುಕ್ತಾಯದ ಹಂತಕ್ಕೆ ಬಂದಿದ್ದು, ಇದರ ಮುಂದುವರಿದ ಭಾಗವಾಗಿ ಕೇಂದ್ರ ಸರಕಾರ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ವನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯಡಿಯಲ್ಲಿ ಪ್ರೌಢಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಬೇಕೆಂಬುದು ಸರಕಾರಗಳ ಚಿಂತನೆ. ಈ ಹಿನ್ನೆಲೆಯಲ್ಲಿ ರಾಷ್ಟ್ರದ ಎಲ್ಲ ಹಿಂದುಳಿದ ತಾಲೂಕುಗಳಲ್ಲಿ ೬೦೦೦ ಕೇಂದ್ರೀಯ ವಿದ್ಯಾಲಯ ಮಾದರಿಯ ಶಾಲೆಗಳನ್ನು ಆರಂಭಿಸುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ