ಈ ವರ್ಷದಿಂದಲೇ ಪಿಜಿ ಕೋರ್ಸ್‌ಗೆ ಸಿಬಿಸಿಎಸ್ ಜಾರಿ

ವಿಕ ಸುದ್ದಿಲೋಕ ಮೈಸೂರು
ಪ್ರಸಕ್ತ  ಶೈಕ್ಷಣಿಕ ವರ್ಷದಿಂದಲೇ (೨೦೧೦-೧೧) ಮೈಸೂರು ವಿಶ್ವವಿದ್ಯಾ ನಿಲಯದ  ಸ್ನಾತಕೋತ್ತರ  ವಿಭಾಗಗಳಲ್ಲಿ ಆಯ್ಕೆ ಮತ್ತು ಮೊತ್ತಾಂಶ ಆಧಾರಿತ  ಪದ್ಧತಿ (ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್-ಸಿಬಿಸಿಎಸ್) ಜಾರಿಗೆ ಬರಲಿದೆ. ಮುಂದಿನ ವರ್ಷದಿಂದ ಪದವಿಗೂ ವಿಸ್ತರಣೆಯಾಗಲಿದೆ.
ವಿದ್ಯಾರ್ಥಿಗಳ ನಿರಂತರ  ಮೌಲ್ಯಮಾಪನಕ್ಕೆ ಅವಕಾಶ ನೀಡುವ ಈ ಪದ್ಧತಿ  ಆಳದಲ್ಲಿ  ಉನ್ನತ ಶಿಕ್ಷಣದ  ಗುಣಮಟ್ಟ ಹೆಚ್ಚಿಸುವ ಹಾಗೂ ಅಂತರ್ ಶಿಸ್ತೀಯ ಅಧ್ಯಯನಕ್ಕೆ ಒತ್ತು ನೀಡುವ ಪ್ರಬಲ ಎಳೆಯನ್ನು ಹೊಂದಿದೆ ಎಂಬುದು ವಿವಿಯ ನಿಲುವು. 
ಕುಲಪತಿ ಪ್ರೊ. ವಿ.ಜಿ.ತಳವಾರ್  ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಶಿಕ್ಷಣ ಮಂಡಳಿ ಸಾಮಾನ್ಯ ಸಭೆ ಹೊಸ ಪದ್ಧತಿಗೆ ಅನುಮೋದನೆ ನೀಡಿತು. ಸಿಬಿಸಿಎಸ್  ಈಗಾಗಲೇ ಕೆಲವು ವಿವಿಗಳಲ್ಲಿ ಜಾರಿಯಲ್ಲಿದೆ. ಹಾಗಾಗಿ ಈ ಪದ್ಧತಿ ಜಾರಿಗೆ ತರುತ್ತಿರುವ ಮೊದಲ ವಿವಿ ಎಂಬ ಅಗ್ಗಳಿಕೆ ಮೈಸೂರು ವಿವಿಗೆ ಸಲ್ಲುವುದಿಲ್ಲ. ಆದರೆ,  ಕಲಿಯುವ ವಿದ್ಯಾರ್ಥಿಯನ್ನು ಕೇಂದ್ರೀಕರಿಸಿ ರೂಪಿಸಿರುವ ಎಲ್‌ಟಿಪಿ(ಲೆಕ್ಚರ‍್ಸ್ -ಟ್ಯುಟೋರಿ ಯಲ್ಸ್ -ಪ್ರಾಕ್ಟಿಕಲ್ಸ್) ಎಂಬ ಹೊಸ ಮಾದರಿಯ ಶೈಕ್ಷಣಿಕ ಅಭ್ಯಾಸದ ಮೂಲಕವೇ ಸಿಬಿಸಿಎಸ್ ಅನುಷ್ಠಾನ ಮಾಡಲು ಹೊರಟಿರುವುದು ಮೈಸೂರು ವಿವಿಯ ಅಗ್ಗಳಿಕೆ. 
‘ಇದು ವಿದ್ಯಾರ್ಥಿ ಸ್ನೇಹಿ ಪದ್ಧತಿ.  ತಾನು ಬಯಸಿದ ವಿಷಯವನ್ನು ಕಲಿಯಲು ಹೇರಳ ಅವಕಾಶಗಳಂಟು. ವಿದ್ಯಾರ್ಥಿ ಆಯ್ದುಕೊಂಡ  ಪ್ರಮುಖ ವಿಷಯಗಳ ಜತೆ, ಬೇರೆ ಶಿಸ್ತಿನ ಒಂದು ವಿಷಯವನ್ನೂ ಕಲಿಯಬಹುದು.  ಅಂತರ್ ಶಿಸ್ತೀಯ ಕಲಿಕೆಯನ್ನು ಪ್ರೋತ್ಸಾಹಿಸುವ ಈ  ಪದ್ಧತಿಯಲ್ಲಿ  ಕಲಿಕೆಗೆ  ಮುಕ್ತ ಅವಕಾಶಗಳಂಟು’ ಎಂದು ಪ್ರೊ. ತಳವಾರ್ ಹೇಳಿದರು.
‘ಈ ಕಲಿಕಾ ಪದ್ಧತಿಯಲ್ಲಿ ವಿದ್ಯಾರ್ಥಿ ಬಯಸಿದ ಎಲ್ಲ ವಿಷಯಗಳನ್ನು ಆಯ್ಕೆ ಮಾಡಬಹುದು ಎಂಬುದು ಸ್ವಾಗ ತಾರ್ಹ. ಆದರೆ, ಪಠ್ಯೇತರ ಚಟುವಟಿಕೆಗಳಿಗೆ ಇಲ್ಲಿ ಸ್ಥಾನವೇ ಇಲ್ಲ. ಇದನ್ನು ಪರಿಗಣಿಸಬೇಕು’ ಎಂದು ದೈಹಿಕ ಶಿಕ್ಷಣ ವಿಭಾಗದ  ನಿರ್ದೇಶಕ  ಡಾ.ಸಿ.ಕೃಷ್ಣ ಸಲಹೆ ನೀಡಿದರು. ಇದನ್ನು ಸ್ವಾಗತಿಸಿದ ಕುಲಪತಿ, ಈ ಬಗ್ಗೆ  ಕೂಲಂಕಷವಾಗಿ ಚರ್ಚೆ ನಡೆಸಿ, ವರದಿ ಸಲ್ಲಿಸಲು ಸಮಿತಿಯನ್ನು ರಚಿಸಿದರು. 
ಸಂಶೋಧನಾ ನಿರ್ದೇಶನಾಲಯ ಸ್ಥಾಪನೆ:  ಪಿಎಚ್.ಡಿಗೆ ಸಂಬಂಧಿಸಿದಂತೆ ಯುಜಿಸಿ ನೀಡಿರುವ ಹೊಸ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ರಚಿಸಿರುವ ‘ಪಿಎಚ್.ಡಿ ರೆಗ್ಯೂಲೇಷನ್ -೨೦೧೦’ಗೆ ಸಭೆ ಅನುಮೋದನೆ ನೀಡಿತು. ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರ ಅಂಕಿತ ಬಿದ್ದ ತಕ್ಷಣ, ಪಿಎಚ್.ಡಿಗೆ ಹೊಸ ನಿಯಮಾವಳಿಗಳು ಜಾರಿಗೆ ಬರಲಿವೆ ಎಂದು ಕುಲಪತಿ ಪ್ರೊ. ತಳವಾರ್ ತಿಳಿಸಿದರು.
ಹಾಲಿ ಜಾರಿಯಲ್ಲಿರುವ ಪಿಎಚ್.ಡಿ -೨೦೦೪ ರೆಗ್ಯೂ ಲೇಷನ್‌ಗಳನ್ನು ಪರಿಷ್ಕರಿಸುವ ಸಂಬಂಧ ಪ್ರೊ. ಸಿ.ಪಿ. ಸಿದ್ದಾಶ್ರಮ ಅಧ್ಯಕ್ಷತೆಯಲ್ಲಿ  ತಜ್ಞರ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಸುದೀರ್ಘ ಕಾಲ ಅಧ್ಯಯನ ನಡೆಸಿ, ನೀಡಿರುವ ವರದಿಗೆ  ಶಿಕ್ಷಣ ಮಂಡಳಿ ಸಭೆ ಸಮ್ಮತಿ ಸೂಚಿಸಿತು.
‘ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ  ಸಂಶೋಧನಾ ನಿರ್ದೇಶನಾಲಯ ವನ್ನು ಸ್ಥಾಪಿಸಲಾಗುವುದು. ಈ ನಿರ್ದೇಶನಾಲಯ ಪೂರ್ಣಾ ವಧಿ ನಿರ್ದೇಶಕರನ್ನು ಹೊಂದಿರುತ್ತದೆ. ಪಿಎಚ್.ಡಿ ನೋಂದಣಿಗೆ ಸಂಬಂಧಿಸಿದಂತೆ  ಎಲ್ಲ ರೀತಿಯ ಕಚೇರಿ ವ್ಯವಹಾರಗಳನ್ನು ಹೊಸ ನಿರ್ದೇಶನಾಲಯ ನಿಭಾಯಿಸು ತ್ತದೆ. ಇದರಿಂದ ಸಂಶೋಧನಾ ವಿದ್ಯಾರ್ಥಿಗಳು ಎರಡು- ಮೂರು ಕಚೇರಿಯ ಅಲೆದಾಡುವುದು ತಪ್ಪುತ್ತದೆ’ ಎಂದು ತಳವಾರ್ ತಿಳಿಸಿದರು.
ಪ್ರತಿ ಕೋರ್ಸಿಗೆ ಶೇ. ೭೫ ಹಾಜರಿ ಬೇಕಿಲ್ಲ: ಇನ್ನು ಮುಂದೆ ಪದವಿ ವಿದ್ಯಾರ್ಥಿಗಳು  ಒಂದು ಸೆಮಿಸ್ಟರ್‌ನಲ್ಲಿ ಸರಾಸರಿ ಶೇ. ೭೫ರಷ್ಟು ಹಾಜರಾತಿ ಹೊಂದಿದ್ದರೆ, ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ. ಈ ಹಿಂದಿನಂತೆ ಸೆಮಿಸ್ಟರ್‌ನ ಪ್ರತಿ ವಿಷಯದಲ್ಲೂ ಶೇ. ೭೫ರಷ್ಟು ಹಾಜರಾತಿ ಹೊಂದಿರಬೇಕು ಎಂಬ ರೆಗ್ಯೂಲೇಷನ್‌ಗೆ  ತಿದ್ದುಪಡಿ ತರಲಾಗಿದೆ.  ವಿವಿಯ ಈ ಪ್ರಸ್ತಾವನೆಗೆ ಶಿಕ್ಷಣ ಮಂಡಳಿ ಸಾಮಾನ್ಯ ಸಭೆ  ಅನುಮೋದನೆ ನೀಡಿತು.
ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ  ಈಗಾಗಲೇ  ಈ ನಿಯಮ ಜಾರಿಯಲ್ಲಿದೆ. ಇನ್ನು ಮುಂದೆ ಪದವಿಗೂ ಈ ನೀತಿಯನ್ನು ಜಾರಿಗೆ ತರುವ ಮೂಲಕ ಏಕರೂಪ ಹಾಜರಾತಿ ನಿಯಮ ಅಳವಡಿಸಿಕೊಳ್ಳಲು ತೀರ್ಮಾನಿಸಲಾಯಿತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ  ಈ ತಿದ್ದುಪಡಿ ಸಮಂಜಸವಾಗಿದೆ ಎಂದು ಸಭೆ ಅಭಿಪ್ರಾಯ ಪಟ್ಟಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ