ಪಶುಪಾಲನೆಗೆ ಅನುದಾನ ಕೊರತೆ, ಹುದ್ದೆಗಳು ಖಾಲಿ...

ಜೆ.ಶಿವಣ್ಣ ಮೈಸೂರು
ಜಿಲ್ಲೆಯ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪಶುಗಳಿಗಿಂತಲೂ ಕಡೆಯಾಗಿ ಬಿಟ್ಟಿದೆ. ಒಂದೆಡೆ ವೈದ್ಯ, ಸಿಬ್ಬಂದಿ ಕೊರತೆ, ಇನ್ನೊಂದೆಡೆ ಅನುದಾನದ ಕೊರತೆ. ಈ ಎರಡು ಕೊರತೆಗಳ ನಡುವೆ ಇಲಾಖೆ ಕಸಾಯಿ ಖಾನೆ ಸೇರುವ ಶಕ್ತಿಹೀನ ರಾಸುವಿನಂತಾಗಿದೆ.
೨೦೦೭-೦೮ ನೇ ಸಾಲಿನ ಗಣತಿ ಪ್ರಕಾರ ೧೨ ಲಕ್ಷ ಜಾನುವಾರುಗಳು ಜಿಲ್ಲೆಯಲ್ಲಿವೆ. ಆದರೆ ಅವುಗಳ ಆರೋಗ್ಯ ಸೇವೆಗೆ ಅಗತ್ಯವಿರುವ ಔಷಧ, ಲಸಿಕೆ, ಚಿಕಿತ್ಸೆ ಇತ್ಯಾದಿಗಳಿಗೆ ನೀಡಲಾಗುವ ಅನುದಾನ ಮಾತ್ರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ವರ್ಷಕ್ಕೆ ಒಂದು ಹಸುವಿಗೆ ಕೇವಲ ೧ ರಿಂದ ೧.೫೦ ರೂ. ಮಾತ್ರ ಔಷಧ ವೆಚ್ಚಕ್ಕೆ ನೀಡಲಾಗು ತ್ತಿದೆ. ಹಸು, ಹಂದಿ, ಕುರಿ, ಮೇಕೆ ತಾನೇ ಎನ್ನುವ ಉದಾ ಸೀನ ಇದಕ್ಕೆ ಕಾರಣ ಇರ ಬಹುದೇ ?
ಸಮಾಧಾನಕರ ಸಂಗತಿ ಎಂದರೆ, ತೀವ್ರಸ್ವರೂಪದ ರೋಗ ಬಾಧೆ ಭೀತಿ ಜಿಲ್ಲೆಯಲ್ಲಿ ಇಲ್ಲ. ರಾಸುಗಳಿಗೆ ತೀವ್ರ ಸ್ವರೂಪದಲ್ಲಿ ಕಾಡುತ್ತಿದ್ದ ಕಾಲು ಬಾಯಿ ಜ್ವರ, ಚಪ್ಪೆರೋಗ ಶೇ.೯೦ ರಷ್ಟು ನಿಯಂತ್ರಣಕ್ಕೆ ಬಂದಿದೆ. ಫಲವಾಗಿ ಹಾಲು ಉತ್ಪಾದನೆ ದ್ವಿಗುಣಗೊಂಡಿದೆ. ಮೈಮುಲ್‌ನಲ್ಲಿ ದಾಖಲೆ ಪ್ರಮಾಣ ದಲ್ಲಿ ಹಾಲು ಸಂಗ್ರಹವಾಗಿರುವುದೇ ಇದಕ್ಕೆ ಸಾಕ್ಷಿ. ವೈದ್ಯ, ಸಿಬ್ಬಂದಿ ಕೊರತೆಯ ನಡುವೆಯೂ ಇದು ಆಶಾದಾಯಕ ಬೆಳವಣಿಗೆ ಎನ್ನಲಡ್ಡಿಯಿಲ್ಲ.
ಹುದ್ದೆಗಳು ಖಾಲಿ ಖಾಲಿ
ಜಿಲ್ಲೆಯಲ್ಲಿ ಒಟ್ಟು ೧೮ ಪಶು ಆಸ್ಪತ್ರೆಗಳು ಹಾಗೂ ೭೩ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಗಳಿವೆ. ಇದರಲ್ಲಿ ಹಲವು ಆಸ್ಪತ್ರೆ, ಚಿಕಿತ್ಸಾ ಕೇಂದ್ರಗಳು ಥೇಟ್ ದೊಡ್ಡಿ ಗಳಿಂತಿದ್ದು, ಇಂದಿಗೂ ಹಳೆಯ ವ್ಯವಸ್ಥೆ ಯಲ್ಲೇ ಮುಂದುವರಿದಿವೆ. ‘ಹೈಟೆಕ್ ಸ್ಪರ್ಶ’ ಇನ್ನೂ ಆಗಿಲ್ಲ. ಜತೆಗೆ ಹುದ್ದೆಗಳ ಕೊರತೆ. ಮಂಜೂರು ಹುದ್ದೆಗಳು ೬೮೭. ಹಲ ವರ್ಷಗಳಿಂದ ಭರ್ತಿ ಯಾಗದೇ ಉಳಿದಿರುವ ಹುದ್ದೆಗಳ ಸಂಖ್ಯೆ ೧೪೩. ಅದರಲ್ಲೂ ೮೬ ಪಶು ವೈದ್ಯಾಧಿಕಾರಿಗಳಲ್ಲಿ ೨೩ ಹುದ್ದೆಗಳು ಖಾಲಿ ಬಿದ್ದಿರುವುದು ಶೋಚನೀಯ.
ಹಿರಿಯ ಪಶು ವೈದ್ಯ ಪರೀಕ್ಷರ ೧೫ ಹುದ್ದೆಗಳು (ಒಟ್ಟು ೧೦೦), ಕಿರಿಯ ಪಶು ವೈದ್ಯ ಪರೀಕ್ಷರ ಹುದ್ದೆಗಳು -೧೭ (ಒಟ್ಟು ೬೪) ಹುದ್ದೆಗಳು, ಪಶು ವೈದ್ಯ ಸಹಾಯಕರು ಹುದ್ದೆ ಗಳು -೧೧ (ಒಟ್ಟು ೮೧), ಡಿ- ಗ್ರೂಪ್ ನೌಕರರು ಹುದ್ದೆಗಳು ೬೮ (ಒಟ್ಟು ೨೭೬) ಖಾಲಿ ಉಳಿದಿವೆ. ಪಶು ಮೇಲ್ವಿಚಾರಕ ಹುದ್ದೆಗಳು ಸೇರಿದಂತೆ ಇನ್ನೂ ಕೆಲ ಹುದ್ದೆಗಳ ಕೊರತೆಯಿದೆ.
ವೈದ್ಯರ ಕೊರತೆಯಿಂದ ೨-೩ ಪಶು ಆಸ್ಪತ್ರೆಗಳನ್ನು ಒಬ್ಬರೇ ವೈದ್ಯರು ನೋಡಿಕೊಳ್ಳುವ ಅಥವಾ ಪಶು ವೈದ್ಯ ಪರೀಕ್ಷಕರೇ ನಿರ್ವಹಿಸುವ ಸ್ಥಿತಿಯಿದೆ. ಇದರಿಂದ ಸೇವೆ ಯಲ್ಲಿ ದೊಡ್ಡ ಪ್ರಮಾಣದ ವ್ಯತ್ಯಯ, ಪರಿಣಾಮ ಇಲ್ಲವಾದರೂ ಹುದ್ದೆಗಳ ಭರ್ತಿಗೆ ಕ್ರಮವಹಿಸದಿರುವುದು ವಾಸ್ತವ.
ಅನುದಾನದ ಕೊರತೆ
ಜಿಲ್ಲೆಯಲ್ಲಿ ಇಲಾಖೆಗೆ ದೊರೆಯುವ ಅನುದಾನ         ಅತ್ಯಲ್ಪ. ನೆರೆಯ ಜಿಲ್ಲೆ ಮಂಡ್ಯಕ್ಕೆ ಹೆಚ್ಚು ಅನುದಾನ ನೀಡಲಾಗುತ್ತಿದ್ದರೆ, ಮೈಸೂರಿಗೆ ದಕ್ಕುವುದು ಅದರಲ್ಲಿ ಮೂರನೇ ಒಂದು ಭಾಗ ಮಾತ್ರ. ಅಂದರೆ ಅಂದಾಜು ೨೪-೨೫ ಲಕ್ಷ ರೂ ಮಾತ್ರ. ಜಿಲ್ಲಾ ಪಂಚಾಯಿತಿ ಮೂಲಕ ಸರಕಾರದಿಂದ ಸಿಗುವ ಈ ಅಲ್ಪ ಅನುದಾನದಲ್ಲಿ ವೈದ್ಯರು, ಸಿಬ್ಬಂದಿಯ ಕೊರತೆಯ ನಡುವೆಯೇ ಇಲಾಖೆಯನ್ನು ಸಂಭಾಳಿಸಲಾಗುತ್ತಿದೆ.
೨೦೦೭-೦೮ ನೇ ಸಾಲಿನ ಗಣತಿ ಪ್ರಕಾರ ಕೋಳಿಯನ್ನು ಹೊರತುಪಡಿಸಿ ಹಸು, ಕುರಿ, ಮೇಕೆ, ಎಮ್ಮೆ, ಹಂದಿ, ನಾಯಿ ಸೇರಿದಂತೆ ಸುಮಾರು ೧೨ ಲಕ್ಷ ವಿವಿಧ ಸಾಕು ಪ್ರಾಣಿಗಳು ಜಿಲ್ಲೆಯಲ್ಲಿವೆ. ಅನುದಾನ ಕಡಿಮೆ ಲಭಿಸುವುದ ರಿಂದ ಔಷಧಗಳಿಗೆ ಸದಾ ಸಮಸ್ಯೆ. ಅನುದಾನದಲ್ಲಿ ಬಹುತೇಕ ಮೊತ್ತ ರಾಸುಗಳ ಆರೋಗ್ಯ ಸೇವೆಗೆ ವಿನಿಯೋಗವಾಗುತ್ತದೆ. ಅದರಲ್ಲೂ ಕೃತಕ ಗರ್ಭಧಾರಣಾ ಕೇಂದ್ರ ನಿರ್ವಹಣೆಗೆ ಅಧಿಕ ವೆಚ್ಚವಾಗುತ್ತಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಈ ನಡುವೆಯೂ ಇಲಾಖೆ ಕಾರ್ಯತ್ಪರವಾಗಿದ್ದು, ೨೩೫ ಗ್ರಾಮಗಳಲ್ಲಿಯೂ ಶಿಬಿರ ನಡೆಸಿ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಮುಂಗಾರು ಪೂರ್ವ ಮತ್ತು ಬಳಿಕ ರೋಗಗಳು ಹೆಚ್ಚು ಕಾಣಿಸಿಕೊಳ್ಳುವುದರಿಂದ ಮುಂಜಾಗ್ರತಾ ಕ್ರಮವಾಗಿ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯ ಮಾಡಲಾಗುತ್ತಿದೆ. ಮೈಮುಲ್ ಸಹಭಾಗಿತ್ವದಲ್ಲಿ ಜೂನ್‌ನಿಂದ ಜುಲೈವರೆಗೆ ಕಾಲುಬಾಯಿ ಜ್ವರಕ್ಕೆ ಲಸಿಕೆ ನೀಡುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ