ಮಾಲಿನ್ಯ ಪತ್ತೆ ಯಂತ್ರ ಅಳವಡಿಕೆಗೆ ಇಲ್ಲ ಜಾಗ

ಕುಂದೂರು ಉಮೇಶಭಟ್ಟ, ಮೈಸೂರು
ವಾಯುಮಾಲಿನ್ಯ ನಿಖರತೆ ಪತ್ತೆಗೆ ೧೦೧೦ ಜಾಗ ನೀಡುವ ಯೋಗ್ಯತೆ ಮಹಾನಗರ ಪಾಲಿಕೆಗೆ ಇಲ್ಲವೇ ?
ಗರುಡಾ ಮಾಲ್‌ಗೆ ಜಾಗ ನೀಡುವ ವಿಚಾರದಲ್ಲಿ ಪಾಲಿಕೆ ಸದಸ್ಯರು ತೋರಿದ ಆಸಕ್ತಿ, ಜಸ್ಕೋಗೆ ಕುಡಿಯುವ ನೀರಿನ ಆಧುನೀಕರಣ ಗುತ್ತಿಗೆ ವಹಿಸಲು ಪ್ರವಾಸ ಕೈಗೊಳ್ಳುವಾಗ ಇದ್ದ ಉತ್ಸಾಹ ಇಂಥ ವಿಷಯದಲ್ಲಿ ಏಕೆ ಇಲ್ಲ ಎನ್ನುವ ಪ್ರಶ್ನೆ ಈಗ ಎದುರಾಗಿದೆ.
ಪರಿಸರ ಮಾಲಿನ್ಯ ತಡೆಗೆ ಹಳೆಯ ಪದ್ಧತಿಗೆ ಗುಡ್‌ಬೈ ಹೇಳಿ ಅತ್ಯಾಧುನಿಕ ಯಂತ್ರ ಅಳವಡಿಸುವ ಯೋಜನೆಗೆ ೨ ವರ್ಷದಿಂದ ಸಣ್ಣ ಜಾಗವೇ ಸಿಕ್ಕಿಲ್ಲ.
ನಗರದ ಹೃದಯ ಭಾಗವಾದ ಪುರಭವನ ಎದುರಿನಲ್ಲಿ ಸುಮಾರು ೬೦-೭೦ ಲಕ್ಷ ರೂ. ಬೆಲೆ ಬಾಳುವ ಮಾಲಿನ್ಯ ಪತ್ತೆ ಯಂತ್ರ ಅಳವಡಿಸಲು ೧೦೧೦ ಜಾಗವನ್ನು ಪರಿಸರ ಮಾಲಿನ್ಯ ಮಂಡಳಿ ಕೇಳಿದೆ. ಪಾಲಿಕೆ ಇದಕ್ಕೆ ಅನುಮತಿ ನೀಡಬೇಕಾಗಿದೆ. ನಾ ಕೊಡೆ, ನೀ ಬಿಡೆ ಎನ್ನುವಂತೆ, ಇತ್ತ ಭೂಮಿ ನೀಡಲು ಪಾಲಿಕೆ ಕಣಿ ಮಾಡುತ್ತಿದ್ದರೆ, ಪರಿಸರ ಮಾಲಿನ್ಯ ಮಂಡಳಿ ಸ್ಥಳೀಯ ಅಧಿಕಾರಿಗಳು ಅನುಮತಿ ಪಡೆಯಲು ಪ್ರಾಮಾಣಿಕವಾಗಿ ಯತ್ನಿಸದೇ ಕಾಲ ದೂಡುವ ಕೆಲಸ ಮಾಡುತ್ತಿದ್ದಾರೆ. ಇದರ ನಷ್ಟ ಆಗುತ್ತಿರುವುದು ಮಾತ್ರ ಮೈಸೂರಿನ ಜನತೆಗೆ.
ಪತ್ರ ಬರೆದರೂ ಫಲವಿಲ್ಲ: ಬೆಂಗಳೂರಿನಲ್ಲಿ ಮೂರು ವರ್ಷದ ಹಿಂದೆಯೇ  ಮಾಲಿನ್ಯ ಪತ್ತೆ ಯಂತ್ರ ಅಳವಡಿಸಿ ಅದನ್ನು ಸಮರ್ಪಕ ವಾಗಿ ಬಳಕೆ ಮಾಡಲಾಗುತ್ತಿದೆ. ಇದೇ ಯಂತ್ರಗಳನ್ನು ಮೈಸೂರು, ಹುಬ್ಬಳ್ಳಿ,  ಮಂಗಳೂರಿನಲ್ಲೂ ಅಳವಡಿಸಲು ನಿರ್ಧರಿಸಲಾಯಿತು. ಇದಕ್ಕಾಗಿ ಹಣವನ್ನೂ ಮೀಸಲಿಟ್ಟು ಮಂಡಳಿಗೂ ಬಿಡುಗಡೆ ಮಾಡ ಲಾಯಿತು. ಅದರಂತೆ ಮಂಡಳಿ ಸ್ಥಳೀಯ ಅಧಿಕಾರಿಗಳು ಯೋಜನೆ ರೂಪಿಸಿದರು. ಪರಿಸರ ಮಾಲಿನ್ಯ ಪ್ರಮಾಣವನ್ನು ಪತ್ತೆ ಮಾಡಲು ನಗರದ ಕೇಂದ್ರ ಭಾಗದಲ್ಲಿ ಯಂತ್ರ ಅಳವಡಿಸಲು ನಿರ್ಧರಿಸಿ ಪುರ ಭವನ ಆವರಣದಲ್ಲಿ ಜಾಗಕ್ಕೆ ಕೋರಿದರು. ೨ ವರ್ಷದ ಹಿಂದೆಯೇ ಈ ಸಂಬಂಧ ಪಾಲಿಕೆಗೆ ಪತ್ರವೂ ಮಂಡಳಿಯಿಂದ ಬಂದಿದೆ. ಮೂರ‍್ನಾಲ್ಕು ತಿಂಗಳಲ್ಲೇ ಈ ಯಂತ್ರವನ್ನು ಅಳವಡಿಸಿ ೨ ವರ್ಷದ ಹಿಂದಿನ ದಸರೆ ವೇಳೆ ಅಣಿಯಾಗಬೇಕಾಗಿತ್ತು. ಆದರೆ ಪಾಲಿಕೆ ಅನುಮತಿ ನೀಡಲು ಇನ್ನೂ ಮೀನ ಮೇಷ ಎಣಿಸುತ್ತಲೇ ಇದೆ.
ಏನಿದು ಯಂತ್ರ: ಇದು ಟವರ್ ಮಾದರಿಯಲ್ಲಿ ಅಳವಡಿಸುವ ಯಂತ್ರ. ಇದಕ್ಕೆ ನಿರಂತರ ಪರಿವೇಷ್ಟಕ ಗಾಳಿಯ ಗುಣಮಟ್ಟ ಮಾಲಿನ್ಯ ಮಾಪನ ಯಂತ್ರ ಎಂತಲೂ ಕರೆಯುತ್ತಾರೆ. ಗಾಳಿ ಯಲ್ಲಿರುವ ಮಾಲಿನ್ಯಕಾರಿ ಅಂಶಗಳನ್ನು ಸುಲಭವಾಗಿ ಪತ್ತೆ ಮಾಡಲಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಇಂಗಾಲದ ಡೈ ಆಕ್ಸೈಡ್, ಇಂಗಾಲದ ಮಾನಾಕ್ಸೈಡ್‌ಗಳ ಮಟ್ಟವನ್ನು ಸುಲಭವಾಗಿ ಈ ಯಂತ್ರ ಅಳೆಯಲಿದೆ. ಇದರೊಟ್ಟಿಗೆ ಗಂಧಕದ ಡೈ ಆಕ್ಸೈಡ್, ಸಾರಜನಕದ ಡೈ ಆಕ್ಸೈಡ್, ಉಸಿರಾಡುವ ತೇಲುವ ಕಣಗಳು ಹಾಗೂ ತೇಲಾಡುವ ಧೂಳಿನ ಕಣಗಳ ಪ್ರಮಾಣವನ್ನು ಪಡೆದುಕೊಳ್ಳಬಹುದು. ಈ ಯಂತ್ರದ ವಿಶೇಷ ಎಂದರೆ ವರ್ಷದ ೩೬೫ ದಿನವೂ ಕಾರ‍್ಯನಿರ್ವಹಿಸಲಿದೆ. ಆಯಾ ಸಮಯದಲ್ಲಿ ಯಾವ ಅಂಶಗಳು ಎಂಬ ಮಾಹಿತಿಯನ್ನು ಪ್ರದರ್ಶಿಸಲಿದೆ. ಇದರಿಂದ ಸಾರ್ವಜನಿಕರು ನಿಖರ ಮಾಹಿತಿಯನ್ನು ಬೇಕಾದಾಗ ಪಡೆದುಕೊಳ್ಳಬಹುದು. ಹಿಂದೆ ಮ್ಯಾನುಯಲ್ ಆಧಾರದಲ್ಲಿ ಮಾಪನ ಮಾಡಲಾಗುತ್ತಿತ್ತು. ಕೆಲವು ವಸ್ತುಗಳ ವಿವರ ಮಾತ್ರ ಪಡೆದುಕೊಳ್ಳುವ ಅವಕಾಶವಿತ್ತು. ಅದೂ ವಾರದಲ್ಲಿ ಎರಡು ದಿನ ಮಾತ್ರ. ಇದರಿಂದ ನಿಖರ ಮಾಹಿತಿಯನ್ನು ಪಡೆಯಲು ಸಾರ್ವ ಜನಿಕರು ಇರಲಿ, ಮಾಲಿನ್ಯ ನಿಯಂತ್ರಣ ಮಂಡಳಿಯವರೇ ಹರ ಸಾಹಸ ಮಾಡಬೇಕಿತ್ತು. ಇದರ ಬೆಲೆ ಸುಮಾರು ಒಂದೂವರೆ ಕೋಟಿ. ಬೆಂಗಳೂರಿನ ರೈಲ್ವೆ ನಿಲ್ದಾಣ ಹಾಗೂ ರಾಜಾಜಿನಗರದಲ್ಲಿ ಈ ಯಂತ್ರಗಳು ಕಾರ‍್ಯ ನಿರ್ವಹಿಸುತ್ತಿವೆ. ಹಿಂದೆಲ್ಲಾ ಮಾಲಿನ್ಯದ ವಿವರ ಪಡೆಯಲು ಕಷ್ಟಪಡಬೇಕಿತ್ತು. ಈಗ ಅತ್ಯಾಧುನಿಕ ಯಂತ್ರ ಬಳಸು ವುದರಿಂದ ಪ್ರಮುಖ ನಗರಗಳ ಮಾಲಿನ್ಯವಿವರ ಕ್ಷಣಾರ್ಧದಲ್ಲಿ ಲಭ್ಯವಾಗಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ