ಅನುದಾನ ಬಳಕೆಯೊಂದೇ ಸಾಧನೆ

ಜೆ.ಶಿವಣ್ಣ  ಮೈಸೂರು
ಜೆಎನ್-ನರ್ಮ್ ಹಣವನ್ನು ಮೈಸೂರು ನಗರ ಸಾರಿಗೆ ವಿಭಾಗ ಸಂಪೂರ್ಣವಾಗಿ ಬಳಸಿಕೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಂದು `ಸಾರಿಗೆ ಸೇವೆ' ಉತ್ತಮಗೊಂಡಿದೆಯೇ ಎಂದರೆ, ಉಹುಂ ಎಂದು ಯಾವುದೇ ತಕರಾರಿಲ್ಲದೆ ಹೇಳಬಹುದು.
ಹೌದು, ಸಾರಿಗೆ ಸೇವೆ ಕಿಂಚಿತ್ ಬದಲಾಗಿಲ್ಲ, ಪ್ರಯಾಣಿಕರು ಬಸ್‌ಗಾಗಿ ಕಾಯುವುದು ತಪ್ಪಿಲ್ಲ. ಮಿಗಿಲಾಗಿ ಪಾರಂಪರಿಕ ನಗರಿ ಎನ್ನುವ ಕಾರಣಕ್ಕೆ ನರ್ಮ್ ಸಿಕ್ಕಿದೆಯಾದರೂ  ಬಸ್ ನಿಲ್ದಾಣಗಳಲ್ಲಿ ಪಾರಂಪರಿಕ ಚಹರೆ ಸಿಗುವು ದಿಲ್ಲ. ಬಸ್ ನಿಲ್ದಾಣಗಳು `ಹೈಟೆಕ್ ಸ್ವರೂಪ' ಪಡೆದುಕೊಂಡಿರುವುದು, ಪ್ರಯಾಣಿಕರಿಗೆ ಸೇವೆ ಒದಗಿಸಲು ಹೈಟೆಕ್ ಬಸ್‌ಗಳು ರಸ್ತೆಗಳಿದಿ ರುವುದು ಯೋಜನೆಯ ಫಲಿತವಾಗಿ ಗೋಚರಿಸುತ್ತವೆ.  ಸಮಯಕ್ಕೆ ಬಾರದ ಬಸ್ಸುಗಳು, ಶೆಲ್ಟರ್ ಇಲ್ಲದೇ ರಸ್ತೆಬದಿ ಕಾಯುವುದು, ನಿಲುಗಡೆ ಸ್ಥಳ ಬಿಟ್ಟು  ಎಲ್ಲೋ ನಿಲ್ಲುವ ಬಸ್‌ಗಳು ತಪ್ಪಿಲ್ಲ.

ನಾಲ್ಕು ಜಿಲ್ಲೆಗಳ ದೂರು-ದೃಷ್ಟಿ



 
ಸಾರ್ವಜನಿಕರ ಕುಂದು-ಕೊರತೆ, ಸಮಸ್ಯೆಗಳ ಕುರಿತು ಬೆಳಕು ಚೆಲ್ಲಲು ದೂರು-ದೃಷ್ಟಿ ಅಂಕಣವನ್ನು ರೀ ಲಾಂಚ್ ಮಾಡುತ್ತಿದ್ದೇವೆ. ಪತ್ರಿಕೆಯಲ್ಲಿ ಪ್ರಕಟಗೊಂಡ ನಂತರವಾದರೂ ಅಧಿಕಾರಿಗಳು, ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುವರೇ?

ಮೈಸೂರು ಆವೃತ್ತಿಯಿಂದ ಹೊಸ ಅಂಕಣ


ನಮ್ಮೂರಿನ ವಿಶೇಷ ಹಾಗೂ ಅಲ್ಲಿರುವ ವಿಶೇಷ ವ್ಯಕ್ತಿಗಳ ಬಗ್ಗೆ ಬೆಳಕು ಚೆಲ್ಲುವ ಸಲುವಾಗಿ ನಮ್ಮೂರು-ನಮ್ಮವರು ಎಂಬ ಹೊಸ ಅಂಕಣವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಹೇಗಿದೆ, ನಿಮ್ಮಗೇನನಿಸಿತು... ಅದನ್ನು ನಮ್ಮ ಜತೆ ಹಂಚಿಕೊಳ್ಳಿ...

ಆರಂಭದಲ್ಲೇ ಜನರ ವಿಶ್ವಾಸಕ್ಕೆ ಧಕ್ಕೆ

ಚೀ.ಜ.ರಾಜೀವ  ಮೈಸೂರು
ಅದು ವಾರ್ಡ್ ಸಂಖ್ಯೆ ೨೦. ಸರಸ್ವತಿಪುರಂ ಹಾಗೂ ಕುಕ್ಕರಹಳ್ಳಿ ಪ್ರದೇಶ. ಕುಡಿಯುವ ನೀರಿನ ಪೂರೈಕೆ ಎಂಬುದು ಇಲ್ಲಿನ ಜನರಿಗೆ ಇತ್ತೀಚಿನವರೆಗೂ ಅಷ್ಟೊಂದು ಸಮಸ್ಯೆ ಆಗಿರಲಿಲ್ಲ.  ಪ್ರತಿ ದಿನ ಮಧ್ಯ ರಾತ್ರಿ ೧೨ ರಿಂದ ಬೆಳಗ್ಗೆ  ೧೧ರವರೆಗೆ  ಎಲ್ಲ ಮನೆಗಳ ಸಂಪುಗಳಿಗೆ ನೀರು ತುಂಬುತ್ತಿತ್ತು.  ಈ ವಾರ್ಡ್ ಪ್ರತಿ ನಿಧಿಸಿದ  ಪಾಲಿಕೆ ಸದಸ್ಯರು  `ನಮ್ಮ ಮನೆಗೆ ನೀರು ಬಂದಿಲ್ಲ...' ಎಂಬ ಸಾರ್ವಜನಿಕ ದೂರನ್ನು ಕೇಳಿಸಿ ಕೊಂಡಿದ್ದು  ಕಡಿಮೆ.
ಆದರೆ ಮೂರು ತಿಂಗಳಿನಿಂದ ವಾರ್ಡ್‌ನಲ್ಲಿನ  ನೀರಿನ ಪೂರೈಕೆ ಚಿತ್ರಣವೇ ಬದಲಾಗಿದೆ.  ವಾರ್ಡಿನ ಎಲ್ಲ ೨೫೦೦ ಮನೆಗಳಿಗೂ ನೀರಿನ ಹೊಸ ಲೈನುಗಳನ್ನು ಜೋಡಿಸಲಾಗಿದೆ. ದಿನದ ಎಲ್ಲ  ಹೊತ್ತಲ್ಲೂ  ನಲ್ಲಿ ಗಳಿಂದಲೇ (ಸಂಪು ಮೂಲಕ ಅಲ್ಲ) ನೇರವಾಗಿ ನೀರು ಪೂರೈಸಲು  ಜೆಎನ್-ನರ್ಮ್ ನಡಿ ಪಾಲಿಕೆ ರೂಪಿಸಿ ರುವ  ಮಹತ್ವಾಕಾಂಕ್ಷಿ ೨೪೭ ಯೋಜನೆ ಪ್ರಾಯೋಗಿಕ ವಾಗಿ   ಜಾರಿಗೊಂಡಿದೆ.  ಸ್ವಾರಸ್ಯ ಅಂದ್ರೆ ಯೋಜನೆ ಜಾರಿಯ ಮರು ದಿನದಿಂದಲೇ, `ನಮ್ಮ ಮನೆಗೆ ನೀರು ಬಂದಿಲ್ಲ...!` ಎಂಬ ಕೂಗು ವಾರ್ಡ್‌ಗಳಲ್ಲಿ  ಎದ್ದಿದೆ  !

ವಿಕ ರಿಯಾಲಿಟಿ ಚೆಕ್

ಕೂಡ್ಲಿ ಗುರುರಾಜ ಮೈಸೂರು
ಅದು ಕೇಂದ್ರ ಸರಕಾರದ ಯೋಜನೆ. ಅನುಷ್ಠಾನದ ಹೊಣೆ ರಾಜ್ಯ ಸರಕಾರದ್ದು. ಅದರಲ್ಲೂ ಮುಖ್ಯವಾಗಿ ಸ್ಥಳೀಯ ಸಂಸ್ಥೆ ಗಳದ್ದು. ಆದರೆ, ದುರಂತ ಎಂದರೆ ಕೇಂದ್ರ ಅನುದಾನ ನೀಡಿದರೂ ಯೋಜನೆ ಜಾರಿ ವೇಗ ಪಡೆದುಕೊಳ್ಳದಿದ್ದರೆ ಏನಾಗುತ್ತದೆ ಎಂಬುದಕ್ಕೆ ಮೈಸೂರಿನಲ್ಲಿ ನಡೆದಿರುವ ಜೆಎನ್-ನರ್ಮ್ ಯೋಜನೆ ಒಂದು  ನಿದರ್ಶನ.
ಜವಾಹರ ಲಾಲ್ ನೆಹರು ರಾಷ್ಟ್ರೀಯ ನಗರ ಪುನರುಜ್ಜೀವನ ಯೋಜನೆ ಸಂಕ್ಷಿಪ್ತ ನಾಮವೇ ಜೆಎನ್- ನರ್ಮ್. ಯೋಜನೆಗೆ ಕೇಂದ್ರ ಸರಕಾರದಿಂದ ಹಣ ಬಂದಿದೆ. ಇದು ಅನುದಾನ. ಸಾಲ ಅಲ್ಲ. ನಿಗದಿತ ಅವಧಿಯೊಳಗೆ  ಯೋಜನೆ ಕಂಪ್ಲೀಟ್ ಆಗಬೇಕು. ಇಲ್ಲದಿದ್ದರೆ ದುಡ್ಡು ವಾಪಸ್ ಹೋಗುತ್ತದೆ. ಪರಿಸ್ಥಿತಿ ಹೀಗಿರುವಾಗ ಮೈಸೂರಿನಲ್ಲಿ ಈ ಯೋಜನೆ ಅನುಷ್ಠಾನ ಹೇಗೆ ನಡೆದಿದೆ?

ಅಂಚೆಯ ಮನೆ ಅವಸಾನದ ಅಂಚಿಗೆ

 ಜಿ.ಎನ್. ರವೀಶ್‌ಗೌಡ ಶ್ರೀರಂಗಪಟ್ಟಣ
ಜಗದ್ವಿಖ್ಯಾತ ಪಟ್ಟಣದ ಐತಿಹಾಸಿಕ ಕೋಟೆ ಕೊತ್ತಲಗಳಂತೆ ಮತ್ತೊಂದು ಸ್ಮಾರಕ ಸದ್ದಿಲ್ಲದೆ ಜೀರ್ಣಗೊಳ್ಳು ತ್ತಿದೆ. ಅದು ಟಿಪ್ಪು ಕಾಲದ ಡವ್ ಕೋಟ್. ಅಂದರೆ ಪಾರಿವಾಳದ ವಾಸಸ್ಥಾನ.
ಟಿಪ್ಪು ಆಡಳಿತಾವಧಿಯಲ್ಲಿ ಅಂಚೆ ಪತ್ರ ರವಾನೆಗೆ ಪಾರಿವಾಳಗಳನ್ನು ಬಳಸಲಾಗುತ್ತಿತ್ತು.ಅಂಚೆಯಣ್ಣನ ಸೇವೆ ಇಲ್ಲದ ಆ ಕಾಲದಲ್ಲಿ  ಪಾರಿವಾಳಗಳೇ ಕೊರಿ ಯರ್ ಪಾತ್ರ ನಿರ್ವಹಿಸು ತ್ತಿದ್ದವು. ಅದಕ್ಕಾಗಿಯೇ ತರಬೇತಿ ಪಡೆದ ಪಾರಿ ವಾಳಗಳಿಗೆ ಯೋಗ್ಯ ರಾಜಾ ತಿಥ್ಯ ನೀಡಿ ಸೂಕ್ತ ವಸತಿಯನ್ನೂ ಕಲ್ಪಿಸಲಾಗಿತ್ತು.
ತನ್ನ ದುಸ್ಥಿತಿಯಲ್ಲೂ ದೇಶವಿದೇಶಗಳ ಪ್ರವಾಸಿಗರನ್ನು ಕೈಬೀಸಿ ಕರೆಯುವ ಶ್ರೀರಂಗ ಪಟ್ಟಣದಲ್ಲಿ ಇತಿ ಹಾಸದ ಅಧ್ಯಯನಕ್ಕೆ ಅತ್ಯುತ್ತಮ ಉದಾಹರಣೆ ಡವ್‌ಕೋಟ್. ಪ್ರವಾಸೋದ್ಯಮ ಮತ್ತು ಸ್ಮಾರಕ ರಕ್ಷಣೆಗೆ ಸರಕಾರ, ಪ್ರವಾಸೋದ್ಯಮ ಇಲಾಖೆ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನೇಕ ಸ್ಮಾರಕಗಳು ಅವಸಾನದ ಅಂಚು ತಲುಪಿವೆ. ಅವುಗಳ ಪೈಕಿ ಡವ್ ಕೋಟ್ ಒಂದು.

ಮೈಸೂರಲ್ಲಿ ಪ್ರವಾಸಿಗರು ಎಷ್ಟು ಸೇಫ್?

ಶೀರ್ಷಿಕೆ ಸೇರಿಸಿ
ಆರ್. ಕೃಷ್ಣ ಮೈಸೂರು
ಮೈಸೂರಿಗೆ ಬರುವ ಪ್ರವಾಸಿಗರು ಎಷ್ಟು `ಸೇಫ್' ಎನ್ನುವ ಪ್ರಶ್ನೆ ಎದ್ದಿದೆ.
ದೂರದ ಊರಿನಿಂದ ಪ್ರವಾಸಿ ತಾಣದ ಸೊಬಗು ಸವಿಯಲು ಬರುವವರನ್ನು ವಂಚಿಸುವ, ಸುಲಿಗೆ ಮಾಡುವ  ಪ್ರಕರಣಗಳು ವರದಿಯಾಗುತ್ತಿವೆ.
ಇತ್ತೀಚೆಗೆ ಹೆಚ್ಚು ಹುಟ್ಟಿಕೊಳ್ಳುತ್ತಿರುವ `ನಕಲಿ ಪ್ರವಾಸಿ ಮಾರ್ಗದರ್ಶಕರು  ಕಡಿಮೆ ಬೆಲೆಯಲ್ಲಿ ಕೊಠಡಿಗಳ ಬಾಡಿಗೆ ಕೊಡಿಸುತ್ತೇವೆ ಎಂದು, ಮೋಜು ಮಸ್ತಿ ಆಸೆ ಇಟ್ಟುಕೊಂಡು ಬರುವ ವರಿಗೆ `ಕರೆವೆಣ್ಣು' ಆಮಿಷ ಒಡ್ಡಿ ಸೆಳೆಯುವುದು ಬೆಳಕಿಗೆ ಬಂದಿದೆ.
ಆಮಿಷ ಒಡ್ಡುವವರ ವಂಚನೆ ತಿಳಿಯದೆ ಜಾಲಕ್ಕೆ ಬೀಳುವ ಪ್ರವಾಸಿಗರು ಹಣ, ಒಡವೆ , ಮೊಬೈಲ್ ಕಳೆದುಕೊಂಡು ತಮ್ಮೂರಿಗೆ ಹಿಂದಿರುಗುವ ಪರಿಸ್ಥಿತಿ ಇದೆ. `ಕರೆವೆಣ್ಣು' ಆಸೆಗೆ ಬಿದ್ದು, ನಗ-ನಗದು ಕಳೆದುಕೊಂಡವರು ಮಾನಕ್ಕೆ ಅಂಜಿ ಪೊಲೀಸರಿಗೆ ದೂರು ನೀಡದೆ ವಾಪಸಾದರೆ, ಧೈರ್‍ಯ ಮಾಡಿ ಕೆಲವರು ದೂರು ನೀಡಿದರೂ ವಂಚಕರ ಪತ್ತೆಯಾಗುತ್ತಿಲ್ಲ. ಕೆಲವು ಪ್ರಕರಣಗಳನ್ನು ಭೇದಿಸಲಾಗಿದೆ.

ಆಟೋರಿಕ್ಷಾ ಚಾಲಕರ ಹರಾಕಿರಿ...

ಜೆ.ಶಿವಣ್ಣ  ಮೈಸೂರು
ನಗರದಲ್ಲಿ ಆಟೋರಿಕ್ಷಾ ಕಿರಿಕಿರಿ ಮತ್ತೆ ಶುರುವಾಗಿದೆ.
ಮೀಟರ್ ಹಾಕದೆ ಹೆಚ್ಚು ಹಣ ಕೇಳುವುದು, ಮೀಟರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ `ತಿದ್ದಿ' ಕೊಳ್ಳುವುದು (ಟ್ಯಾಂಪರಿಂಗ್), ಪ್ರಶ್ನಿಸಿದರೆ ಜಗಳಕ್ಕೆ ನಿಲ್ಲುವ ಪ್ರಕರಣಗಳು ಹೆಚ್ಚುತ್ತಿವೆ.
ಇಂಥದ್ದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ,ಕಾನೂನು ಮಾಪನಶಾಸ್ತ್ರ ಇಲಾಖೆ ಅನೇಕ ಬಿಗಿಕ್ರಮ ಕೈಗೊಂಡರೂ ಪ್ರಯೋಜನವಾಗಿಲ್ಲ. ಒಂದಿಷ್ಟು ಕಾಲ ಪಾಲನೆ,ಮತ್ತೆ ಹಳೆ ಚಾಳಿ ಶುರು.

ವಿದ್ಯುತ್ ಹರಿಯದಿದ್ದರೂ ಭಾರಿ ಶಾಕ್!

ಮೈಸೂರು ನಗರ
ವಿದ್ಯುತ್ ಲೈನಿನ ಮೇಲೆ ಶನಿವಾರ ಮಧ್ಯಾಹ್ನ  ಹೊಂಗೆ ಮರವೊಂದು ಬಿದ್ದು ಆರು ವಿದ್ಯುತ್ ಕಂಬಗಳು ನೆಲಕ್ಕುರುಳಿ, ಎರಡು ಕಾರು ಹಾಗೂ ಎರಡು ದ್ವಿಚಕ್ರವಾಹನಗಳು ಜಖಂಗೊಂಡು ದಾರಿಹೋಕರಲ್ಲಿ ಆತಂಕ ಸೃಷ್ಟಿಸಿತು.
ಘಟನೆ ನಡೆದ  ಹೊತ್ತು ಇಡೀ  ವಿದ್ಯುತ್  ಮಾರ್ಗದಲ್ಲಿ ವಿದ್ಯುತ್ ಪ್ರವಾಹ ಇರಲಿಲ್ಲ. ಹಾಗಾಗಿ  ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ, ಕಾರಿನೊಳಗಿದ್ದ ಪ್ರಯಾಣಿಕರು ಹಾಗೂ  ಇಬ್ಬರು ದ್ವಿಚಕ್ರವಾಹನ ಸವಾರರು ಅಚಾನಕ್ ತಮ್ಮ ಮೇಲೆ  ವಿದ್ಯುತ್ ಲೈನ್‌ಗಳು ಬಿದ್ದಿದ್ದರಿಂದ  `ಶಾಕ್'ಗೆ ಒಳಗಾದರು. ಒಂದು ಕಾರಿನ ಮೇಲೆ ವಿದ್ಯುತ್ ಕಂಬ ಬಿದ್ದರೆ, ಇನ್ನುಳಿದ ಮೂರು ವಾಹನಗಳ ಮೇಲೆ ವಿದ್ಯುತ್ ಲೈನ್‌ಗಳು ಉರುಳಿದವು. ಸೆಸ್ಕ್ ಅಧಿಕಾರಿಗಳು ಮತ್ತು  ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ,ವಿದ್ಯುತ್ ಕಂಬಗಳನ್ನು ತೆರವುಗೊಳಿಸಿದರು.

ಅರಮನೆಗಳ ನಗರಿಗೆ ಪ್ರವಾಸಿಗರ ಲಗ್ಗೆ

*ಜೆ.ಶಿವಣ್ಣ ಮೈಸೂರು
ಪಾರಂಪರಿಕ ನಗರಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ.
ವಿಶ್ವವಿಖ್ಯಾತ ಮೈಸೂರು ಅರಮನೆ ಪಾರಂಪರಿಕ ಸೌಂದರ್‍ಯವನ್ನು ೨೦೧೦-೧೧ನೇ ಸಾಲಿನಲ್ಲಿ ಕಣ್ತುಂಬಿಸಿಕೊಂಡ ಪ್ರವಾಸಿಗರ ಸಂಖ್ಯೆ ೩೨ ಲಕ್ಷಕ್ಕೂ ಮೀರಿದೆ. ಮತ್ತೊಂದು ಮೆಚ್ಚಿನ ತಾಣ ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ ಬಂದವರ ಸಂಖ್ಯೆ ೨೬ ಲಕ್ಷ. ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿ ನೆಲೆವೀಡು ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟವರು ೫೩ ಲಕ್ಷ ಮಂದಿ.
ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ವಿಶಿಷ್ಟ ಸ್ಥಾನವಿದ್ದು, ನ್ಯೂಯಾರ್ಕ್ ಟೈಮ್ಸ್ ೨೦೧೦ರ  ಶಿಫಾರಸು ಪಟ್ಟಿಯಂತೆ ವಿಶ್ವದಲ್ಲಿ ನೋಡಲೇಬೇಕಾದ ೪೦ ಪ್ರೇಕ್ಷಣೀಯ ಸ್ಥಳಗಳಲ್ಲಿ ಮೈಸೂರು ನಾಲ್ಕನೆಯದು. ಅದಕ್ಕೆ ಪುಷ್ಟಿ ನೀಡುವಂತೆ ಪ್ರವಾಸಿಗರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಏರುಮುಖವಾಗಿ ಸಾಗುತ್ತಲೇ ಇದೆ.
ಮೈಸೂರು ಎವರ್ ಗ್ರೀನ್ ಪ್ರವಾಸಿ ಸ್ಥಳ. ಯಾವ ಹಂಗಾಮಿನಲ್ಲಿ ಬಂದರೂ ಕಣ್ಮನ ತಣಿಸಿಕೊಳ್ಳಲು ಪ್ರೇಕ್ಷಣೀಯ ತಾಣಗಳಿಗೆ ಬರವಿಲ್ಲ, ಅರಮನೆ, ಐತಿಹಾಸಿಕ- ಪಾರಂಪರಿಕ ಸ್ಮಾರಕಗಳು, ಪಕ್ಷಿ ಧಾಮ, ಜಲತಾಣ, ದೇವಸ್ಥಾನ, ವಸ್ತುಸಂಗ್ರಹಾಲಯ, ಪ್ರಾಣಿ ಸಂಗ್ರಹಾಲಯ, ವನ್ಯಜೀವಿಗಳ ತಾಣ...ಹೀಗೆ ಸುತ್ತಮುತ್ತ ಹೃನ್ಮನ ಸೆಳೆಯುವ ಪ್ರೇಕ್ಷಣಿಯ ತಾಣಗಳಿಗೆ ಕೊರತೆಯಿಲ್ಲ. ಇತ್ತೀಚೆಗೆ ಯೋಗ, ಆಯುರ್ವೇದವೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಯೋಗ ನಗರಿ ಎನ್ನುವ ಪಟ್ಟ ಬೇರೆ ದಕ್ಕಿದೆ.

ತಮಸೋಮಾ ಜ್ಯೋತಿರ್ಗಮಯ

*ವಿಕ ಸುದ್ದಿಲೋಕ ಮೈಸೂರು
ಅಂತೂ, ಅರಮನೆ `ಧ್ವನಿ-ಬೆಳಕು'ಯೋಜನೆಯ ಮೇಲೆ ಆವರಿಸಿದ್ದ `ಕತ್ತಲು' ಸರಿದಿದೆ. ಆದರೆ, ಆರಂಭದಿಂದಲೂ ಯೋಜನೆಗೆ ಅಂಟಿಕೊಂಡಿದ್ದ ವಿವಾದ ಸಂಪೂರ್ಣ ಮರೆಗೆ ಸರಿದಂತಿಲ್ಲ.
ಎರಡು ವರ್ಷದ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಉದ್ಘಾಟನೆಯ ಭಾಗ್ಯ ಕಂಡು, ವಿವಾದದ ಕಾರಣ ಮರು ದಿನವೇ ಕತ್ತಲಿಗೆ ಸರಿದಿದ್ದ ಯೋಜನೆ, ಹೆಚ್ಚೂ ಕಡಿಮೆ ಅದೇ ಸ್ಥಿತಿಯಲ್ಲಿ ಮತ್ತೆ ಬೆಳಕಿಗೆ ಬಂದಿದೆ.
ಅರಮನೆಯ ವೈಭವ, ಆವರಣದ ಸೊಬಗನ್ನು ಮೈಸೂರಿಗೆ ಸಂಬಂಧಿಸಿದ ಪುರಾಣ, ಇತಿಹಾಸದ ಬೆಡಗಿನೊಂದಿಗೆ ೪೫ ನಿಮಿಷದಲ್ಲಿ ಶ್ರೀಮಂತ ಧ್ವನಿ,ಕಣ್ಮನ ಸೆಳೆಯುವ ಬೆಳಕಿನ ಮೂಲಕ ಕಟ್ಟಿಕೊಟ್ಟ ಪ್ರದರ್ಶನ ಮೊದಲು ನೋಡಿದವರಿಗೆ ಸಂಪೂರ್ಣ ಖುಷಿ ನೀಡಿತು. ಆದರೆ, ಹಿಂದಿನ  ಪ್ರದರ್ಶನ ವೀಕ್ಷಿಸಿದವರು ಬೇಸರವನ್ನು ಮುಖಕ್ಕೆಳೆದುಕೊಳ್ಳದೆ ಇರಲಿಲ್ಲ.

ಜೈಲಿನಲ್ಲಿ ಶೂಟ್‌ಔಟ್: ದಾರಿ ತಪ್ಪಿದ ತನಿಖೆ

*ಆರ್.ಕೃಷ್ಣ, ಮೈಸೂರು
ಕೇಂದ್ರ ಕಾರಾಗೃಹದಲ್ಲಿ ಗುಂಡಿನ ಸದ್ದು ಮೊಳಗಿದ್ದ ಪ್ರಕರಣ ದಿಕ್ಕು ತಪ್ಪಿದೆ.
ಬೆತ್ತನಗೆರೆ ಶ್ರೀನಿವಾಸ್ ಅಲಿಯಾಸ್ ಸೀನನ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದ ಪ್ರಕರಣ ವನ್ನು ದಡ ಸೇರಿಸಲು ಪೊಲೀಸ ರಿಗೆ ಇನ್ನು ಸಾಧ್ಯವಾಗಿಲ್ಲ.
ಹಳೆ ದ್ವೇಷದ ಹಿನ್ನೆಲೆ ಯಲ್ಲಿ ಬೆತ್ತನಗೆರೆ ಸೀನನ ಮೇಲೆ ಆತನ ದಾಯಾದಿ ಗಳಿಂದ ಸುಫಾರಿ ಪಡೆದ ಬಾಲಾಜಿರಾವ್ ಅಲಿ ಯಾಸ್ ಟಿಬೆಟ್ ಕಳೆದ ಮಾರ್ಚ್ ೧೦ರಂದು ಜೈಲಿನ ಆವರಣದಲ್ಲಿಯೇ ಗುಂಡು ಹಾರಿಸಿ ಗಾಯಗೊಳಿಸಿದ್ದ. ಘಟನೆ ನಡೆದು ಎರಡು ತಿಂಗಳಾದರೂ ಪ್ರಕರಣ ನಿಗೂಢವಾಗಿಯೇ ಇದೆ.
ಗುಂಡೇಟು ತಿಂದವನು, ಗುಂಡು ಹಾರಿಸಲು ಸುಫಾರಿ ಕೊಟ್ಟವರು  ಜೈಲಿನಲ್ಲಿಯೇ ಇದ್ದರೂ ಪಿಸ್ತೂಲು ಜೈಲಿನ ಒಳಗೆ ಹೇಗೆ ಹೋಯ್ತು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಭಾರತೀಯ ಸೇನೆ, ಪೊಲೀಸರು ಮಾತ್ರ ಬಳಸುವ ೦.೩೮ ಗುಂಡುಗಳ ಮಾರಾಟ ನಿಷೇಧ ಇದ್ದರೂ ಆರು ಗುಂಡುಗಳು ದುಷ್ಕೃತ್ಯಕ್ಕೆ ಬಳಕೆಯಾಗಿದ್ದು ಹೇಗೆ ಎನ್ನುವುದು ಬಯಲಾಗಿಲ್ಲ.


ಯಡ್ಡಿಗಲ್ಲ, ಬಿಜೆಪಿಗೆ ಮತ

*ಕುಂದೂರು ಉಮೇಶಭಟ್ಟ, ಮೈಸೂರು
ವಿಪ್ ಜಾರಿ ಮಾಡಿದರೆ ಯಡಿಯೂರಪ್ಪ ಅವರ ಪರವಾಗಿಯೇ ಮತಹಾಕುತ್ತೇನೆ, ಅದು ಪಕ್ಷದ ಕಾರಣಕ್ಕೆ ಮಾತ್ರ. ವಿಧಾನ ಸೌಧದ ಒಳಗೆ ನಾನು ಬಿಜೆಪಿ, ಹೊರಗೆ ಅವರೊಂದಿಗೆ ಇರುವುದಿಲ್ಲ, ಮೈಸೂರಿನಲ್ಲಿ ಪ್ರತಿಭಟನೆಯಲ್ಲೂ ಪಾಲ್ಗೊಳ್ಳುವುದಿಲ್ಲ....
ಇದು ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿಯಿಂದ ನಾಲ್ಕು ಬಾರಿ ಆಯ್ಕೆಯಾಗಿ ಬಂಡೆದ್ದಿರುವ ಶಾಸಕ ಎಚ್.ಎಸ್.ಶಂಕರಲಿಂಗೇಗೌಡ ಅವರ ಖಚಿತ ನುಡಿ.

ಗ್ರಾಮೀಣ ಮಕ್ಕಳೊಂದಿಗೆ ವಿದೇಶಿಯರ ಆಟ-ಪಾಠ

*ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಡಿಕೇರಿ
ಕಬ್ಬಿಣದ ಕಡಲೆ ಎಂಬ ಗ್ರಾಮೀಣ ಭಾಗದ ಮಕ್ಕಳ ಮನದ ಆತಂಕಕಾರಿ ಭಾವನೆ ದೂರ ಮಾಡಿ ಇಂಗ್ಲಿಷ್ ವ್ಯಾಮೋಹ ಹುಟ್ಟುಹಾಕಿದರು... ಜನರೊಂದಿಗೆ ಮುಕ್ತ ವಾಗಿ ಬೆರೆಯುವ ಗುಣ ಕಲಿಸಿದರು.... ಬೆತ್ತ ಹಿಡಿದು ಸದಾ ಹೊಡೆಯುವ ನಮ್ಮೂರ ಮೇಷ್ಟ್ರುಗಿಂತ ವಿಭಿನ್ನವಾಗಿ ಆಟದೊಂದಿಗೆ ಪಾಠ ಮಾಡಿದ ಗುರುಗಳ ಬಗ್ಗೆ ಹೃದಯದಾಳದ ಪ್ರೀತಿ ಬೆಳೆಸಿದ್ದಾರೆ...
ಇದು ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಒಂದಾಗಿರುವ ಕಣಿವೆಯಲ್ಲಿ `ವಿದೇಶಿ ಗುರು'ಗಳು ಮಾಡಿದ ಚಮತ್ಕಾರ.
ಐದು ತಿಂಗಳ ಅವಧಿಗೆ ಭಾರತ ಪ್ರವಾಸಕ್ಕೆ ಬಂದಿರುವ ವಿದೇಶಿ ವಿದ್ಯಾರ್ಥಿಗಳಾದ ಇಟಲಿಯ ರೇಕಾರ್ಡೋ, ಬೆಲ್ಜಿಯಂನ ಮೇರಿ, ಅಮೆರಿಕದ ಜೂಲಿಯಸ್, ಜರ್ಮನಿಯ ಯ್ಯಾನಾ, ಬೆಲ್ಜಿಯಂ ಪೆನ್ನಿ ಕೊಡಗಿನ ಕಣಿವೆಯಲ್ಲಿ ಒಂದು ತಿಂಗಳ ಕಾಲ ಗ್ರಾಮೀಣ ಭಾಗದ ಮಕ್ಕಳಿಗೆ ಇಂಗ್ಲಿಷ್ ಕಲಿಸಿದು, ಮಕ್ಕಳಿಂದ ತವು ಅಷ್ಟಿಷ್ಟು ಕನ್ನಡ ಕಲಿತರು. ಗುರುಗಳ ಬಗೆಗೆ ಭಯ ಭಕ್ತಿಗಿಂತ ಭಾವನಾತ್ಮಕ ಸಂಬಂಧ  ಬೆಳೆಸಿದರು. ಒಂದು ತಿಂಗಳ ಆಟಪಾಠ ಮುಗಿಸಿ `ವಿದೇಶಿ ಗುರು' ಗಳು ಹೊರಟು ನಿಂತಾಗ ವಿದ್ಯಾರ್ಥಿ ಗಳು ಕಣ್ಣೀರು ಹರಿಸುತ್ತ ಬೀಳ್ಕೊಟ್ಟದ್ದು ಪರಸ್ಪರ ಬೆಳೆದಿದ್ದ ಸಂಬಂಧವನ್ನು ತೋರಿಸುವಂತಿತ್ತು.

ಇತಿಹಾಸದ ಪುಟ ಸೇರಿದ ಮೂರು ಕೋರ್ಸ್

ಚೀ.ಜ.ರಾಜೀವ ಮೈಸೂರು
ಮೈಸೂರು ವಿಶ್ವವಿದ್ಯಾನಿಲಯದ ಮೂರು ಅಧ್ಯಯನ ವಿಭಾಗಗಳು ಈ ವರ್ಷದಿಂದಲೇ ಮಾಸ್ಟರ್ ಆಫ್ ಫಿಲಾಸಫಿ(ಎಂ.ಫಿಲ್) ಪದವಿಗೆ ಮಂಗಳ ಹಾಡಿವೆ !
ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ) ಪದವಿಗೆ ಹದವಾದ  ಭೂಮಿಕೆ  ಸಿದ್ಧ ಪಡಿಸುತ್ತಿದ್ದ  ಎಂ.ಫಿಲ್ ತನ್ನ ಆಕರ್ಷಣೆ ಕಳೆದುಕೊಂಡಿದೆ.  ಹಾಗಾಗಿ ಎಂ.ಫಿಲ್ ಕೋರ್ಸ್ ಮುಚ್ಚುವಂತೆ  ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ  ಹಾಗೂ ಇತಿಹಾಸ ಅಧ್ಯಯನ ವಿಭಾಗದ ಮುಖ್ಯಸ್ಥರು ಸಲ್ಲಿಸಿದ ಪ್ರಸ್ತಾವನೆಗೆ  ವಿವಿಯ ಸಿಂಡಿಕೇಟ್ ಹೆಚ್ಚು ಚರ್ಚೆ ಇಲ್ಲದೇ ಅಸ್ತು  ಎಂದಿದೆ.

ಸಾವಿನ ನಂತರ ದೇಹದಾನ ಸಾವಿರದ ನೋಂದಣಿ

ಕುಂದೂರು ಉಮೇಶಭಟ್ಟ ಮೈಸೂರು
ರಕ್ತದಾನ ಹಾಗೂ ನೇತ್ರದಾನದ ಬಳಿಕ ಮೈಸೂರಿನಲ್ಲಿ ದೇಹದಾನಿಗಳ ಬಳಗ ಸದ್ದಿಲ್ಲದೇ ಹೆಚ್ಚತೊಡಗಿದೆ. ಜೆಎಸ್‌ಎಸ್ ದೇಹದಾನ ಸಂಸ್ಥೆ  ೧೫ ವರ್ಷದಿಂದ ಇಂಥದೊಂದು ಮಾನವೀಯ ನೆಲೆಯ, ವೈಜ್ಞಾನಿಕ ಸಂಶೋಧನೆಗೆ ಸಹಕರಿಸುವ ಸೇವೆಯಲ್ಲಿ  ತೊಡಗಿಸಿಕೊಳ್ಳಲು ಜನತೆಯನ್ನು ಪ್ರೇರೇಪಿಸುತ್ತಿದ್ದು ಅದು ನಿರೀಕ್ಷೆ ಮೀರಿದ ಫಲ ನೀಡುತ್ತಿದೆ. 
ಒಂದು ಕಾಲಕ್ಕೆ ದೇಹಕ್ಕಾಗಿ ಹುಡುಕಾಡುವ ಸ್ಥಿತಿಯಿತ್ತು. ಈಗ ಜನರೇ ಸ್ವಯಂ ಸ್ಫೂರ್ತಿಯಿಂದ ಇದಕ್ಕೆ ಮುಂದೆ ಬರುತ್ತಿದ್ದಾರೆ. ಇದುವರೆಗೂ ಜೆಎಸ್‌ಎಸ್ ದೇಹ ದಾನ ಸಂಸ್ಥೆಯಲ್ಲಿ ೧೦೪೫ ಮಂದಿ ತಮ್ಮ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಇದರಲ್ಲಿ  ೧೦೭ ದೇಹಗಳ ಹಸ್ತಾಂತರವಾಗಿವೆ.

ಮೃಗಾಲಯ ಸಂಘಟನೆಗೆ ಹತ್ತೊಂಬತ್ತರ ಹರಯ

ಜೆ.ಶಿವಣ್ಣ ಮೈಸೂರು
ಮೈಸೂರಿನ ಮೃಗಾಲಯಕ್ಕೆ ನೀವು ಭೇಟಿ ನೀಡಿ ದ್ದರೆ ಕೆಲವರು ಪ್ರಾಣಿಗಳನ್ನು ಕೆರಳಿಸುವುದು, ಕಿರಿಕಿರಿ ಹುಟ್ಟಿಸುವುದನ್ನು ಕಂಡಿರಬಹುದು. ಮೃಗಾಲಯ ಸಿಬ್ಬಂದಿ ಈ ಬಗ್ಗೆ ಎಚ್ಚರಿಕೆ ನೀಡಿದರೂ ಇಂತಹ ಕೀಟಲೆ ನಡೆಯುತ್ತಲೇ ಇರುತ್ತದೆ. ಇಂಥವಕ್ಕೆ ಬ್ರೇಕ್ ಹಾಕಲು ಹಾಗೂ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಲು ಮೃಗಾಲಯ ಸಿಬ್ಬಂದಿ ರೂಪಿಸಿದ್ದೇ ಮೃಗಾಲಯ ಶಿಕ್ಷಣ-`ಯುವ ಸಂಘ ಟನೆ` (ಯೂತ್ ಕ್ಲಬ್). ಈ ಕಾರ್ಯ ಕ್ರಮಕ್ಕೆ ಇದೀಗ ೧೯ ವರ್ಷಗಳು.

ಗರಿಷ್ಠ ಅಂಕ ಸಾಧಕರಿಗಷ್ಟೇ ಪ್ರವೇಶ

ವಿಕ ವಿಶೇಷ ಮೈಸೂರು
ಪ್ರತಿಷ್ಠಿತ ಸರಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಪ್ರವೇಶ ಪಡೆಯಲು  ಈ ಬಾರಿ ಪಾಲಕರು ಹಾಗೂ ವಿದ್ಯಾರ್ಥಿಗಳು ದೊಡ್ಡ ಕಸರತ್ತನ್ನೇ ಮಾಡಬೇಕಿದೆ !
ಏಕೆಂದರೆ ಈ ಕಾಲೇಜುಗಳಲ್ಲಿನ ಪ್ರವೇಶಕ್ಕೆ ನಿಗದಿಯಾಗುವ ಅಂಕಗಳಿಕೆಯ ಕನಿಷ್ಠ ಶೇಕಡವಾರು ಪ್ರಮಾಣ (ಕಟ್ ಆಫ್ ಪರ್ಸಂಟೇಜ್) ಹೆಚ್ಚಾಗಲಿದೆ. ಒಂದು ಅಂದಾಜಿನ ಪ್ರಕಾರ ವಿಜ್ಞಾನ ವಿದ್ಯಾರ್ಥಿಗಳಿಗೆ  ಶೇ. ೮೫ ರಿಂದ ಶೇ.೯೦, ವಾಣಿಜ್ಯ ವಿದ್ಯಾರ್ಥಿಗಳಿಗೆ ಶೇ. ೭೦ ರಿಂದ ೮೫ ಹಾಗೂ ಕಲಾ ವಿದ್ಯಾರ್ಥಿಗಳಿಗೆ ಶೇ. ೫೦ ರಿಂದ ೬೦ಕ್ಕೆ  ನಿಲ್ಲುವ ಸಾಧ್ಯತೆಯೇ ಹೆಚ್ಚು.  ಎಸ್‌ಎಸ್‌ಎಲ್‌ಸಿಯಲ್ಲಿ ದಾಖಲೆಯ ಫಲಿತಾಂಶ ಬಂದಿರುವುದು ಸಹಜವಾಗಿಯೇ ಪ್ರತಿಷ್ಠಿತ ಕಾಲೇಜುಗಳಲ್ಲಿ ಪಾಲಕರ ಸರದಿಯನ್ನು ಹೆಚ್ಚಿಸಿದೆಯಲ್ಲದೆ, ಸೀಟು ನೀಡುವ  ಆಡಳಿತ ಮಂಡಳಿ ಸದಸ್ಯರಿಗೂ `ಬೇಡಿಕೆ' ಸೃಷ್ಟಿಯಾಗಿದೆ.
ಈ ಬಾರಿ ಜಿಲ್ಲೆಯಲ್ಲಿ ಒಟ್ಟು  ೩೦,೭೪೯ ಅಭ್ಯರ್ಥಿಗಳು  ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ೭೧೩೫ ಹೆಚ್ಚು. ಈ ಬಾರಿ ಜಿಲ್ಲೆಯ ೨೪೯೧ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೧೦,೮೫೧ ವಿದ್ಯಾರ್ಥಿಗಳು ಪ್ರಥಮ ದರ್ಜೆಯ ಅಂಕಗಳೊಂದಿಗೆ ಕಾಲೇಜುಗಳಿಗೆ ಅರ್ಜಿ ಸಲ್ಲಿಸಿದ್ದಾರೆ !

ಅಮ್ಮ ಕೊಟ್ಟಳೇ ಜಯಮಾಲೆ ?

*ಕುಂದೂರು ಉಮೇಶಭಟ್ಟ ಮೈಸೂರು
ತಮಿಳುನಾಡಿನ ಮುಖ್ಯಮಂತ್ರಿ ಗಾದಿಗೆ ಏರಲು ಸಿದ್ಧವಾಗಿ ರುವ  ಜಯಲಲಿತಾ ಅವರಿಗೂ ಮೈಸೂರಿನ ಚಾಮುಂಡಿ ಬೆಟ್ಟಕ್ಕೂ ವಿಶೇಷ ನಂಟು. ಇದೇ `ಜಯ'ಮಾಲೆ ಧರಿಸಲು ಕಾರಣವಾಗಿರಬಹುದೇ?
ಮುಖ್ಯಮಂತ್ರಿಯಾಗಿರಲಿ, ಇಲ್ಲದೇ ಇರಲಿ ಅವರು ಬಂದು ಹೋಗುವುದು ಚಾಮುಂಡಿಬೆಟ್ಟಕ್ಕೆ. ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವುದು ಅವರು ನಡೆಸಿಕೊಂಡು ಬಂದ ಪರಿಪಾಠ. ಅದೂ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷ ಜಯಲಲಿತಾ ಅವರೇ ಪೂಜೆ ಸಲ್ಲಿಸಿ ಹೋಗುತ್ತಾರೆ. ಅವರು ಬಂದಿಲ್ಲ ಎಂದರೆ ಸ್ನೇಹಿತರು ಇಲ್ಲವೇ ಬೆಂಬಲಿಗರು ಯಾರಾದರೂ ಪೂಜೆ ಸಲ್ಲಿಸುವುದು  ವಾಡಿಕೆ.
ಈ ಬಾರಿ ತಮಿಳುನಾಡು ಚುನಾವಣೆ ಕಾರಣಕ್ಕೋ ಏನೋ ತಾವೇ ಅಮ್ಮನಿಗೆ ಪೂಜೆ ಸಲ್ಲಿಸಿ ಹೋಗಿದ್ದರು ತಮಿಳುನಾಡಿನ ಅಮ್ಮ. ಪೂಜಾಫಲವೇನೋ ಎಂಬಂತೆ ಅವರಿಗೆ ನಾಲ್ಕನೇ ಬಾರಿ ಮುಖ್ಯಮಂತ್ರಿ ಗಾದಿ ಒಲಿದಿದೆ.

ನಿಗೂಢ ಕಾಯಿಲೆಗೆ ಬಾಲ್ಯವೇ ನಿರ್ನಾಮ

*ಜಿ.ಎನ್. ರವೀಶ್‌ಗೌಡ ಶ್ರೀರಂಗಪಟ್ಟಣ
ಆತನ ವಯಸ್ಸಿನ್ನೂ ೧೪. ಎಲ್ಲ ಮಕ್ಕಳಂತೆ ಆಟವಾಡಬೇಕೆಂಬ ಬಯಕೆ ಈತನಿಗೂ ಇದೆ. ಆದರೆ, ಅದಕ್ಕೆ ಆತನ ಕೈ, ಕಾಲು ಸ್ಪಂದಿಸುತ್ತಿಲ್ಲ. ದೇಹ ನಿಸ್ತೇಜಗೊಂಡಿದೆ. ಊಟ, ಶೌಚಕ್ಕೂ ಪೋಷಕರನ್ನು ಅವಲಂಬಿಸಬೇಕಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿಯ ಸೋಮಶೇಖರ್ ಅವರ ಪುತ್ರ ನವೀನ್‌ಕುಮಾರ್‌ನ  ಕರುಣಾಜನಕ ಸ್ಥಿತಿಯಿದು. ಎಲ್ಲರಂತೆ ಬದುಕಬೇಕಾದ ಈತ ಮೂರು ವರ್ಷಗಳಿಂದ ನಿಗೂಢ ಕಾಯಿಲೆಗೆ ತುತ್ತಾಗಿ ನರಕಯಾತನೆ ಅನುಭವಿಸುತ್ತಿದ್ದಾನೆ.


ಕಠಿಣ ಪರಿಶ್ರಮ ಬೇಕು, ಮನೆಪಾಠ ಅನಿವಾರ್ಯವೇನಲ್ಲ

* ವಿಕ ಸುದ್ದಿಲೋಕ ಮೈಸೂರು
ಪಿಯುಸಿ ಪರೀಕ್ಷೆಯಲ್ಲಿ  ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ ರಾಗಿ ಅಗ್ರ ಶ್ರೇಯಾಂಕಿತರಾಗುವುದು ಹೇಗೆ?  ರಾಜ್ಯಕ್ಕೆ- ಜಿಲ್ಲೆಗೆ ಟಾಪರ್ ಆಗಲು ಏನು ಮಾಡಬೇಕು?
ಇಂಥದ್ದೊಂದು ಪ್ರಶ್ನೆ ಮುಂದಿಟ್ಟರೆ ಕಷ್ಟಪಟ್ಟು ಓದ ಬೇಕು, ಹೆಸರು ಮಾಡಿದ  ಕಾಲೇಜಿಗೆ ಸೇರಬೇಕು, ಮೊದ ಲಿಂದಲೂ ಇಂಗ್ಲಿಷ್ ಮೀಡಿಯಂನಲ್ಲಿ ಓದಿರ ಬೇಕು, ಕಡ್ಡಾಯವಾಗಿ ಟ್ಯೂಷನ್‌ಗೆ ಹೋಗಿರಬೇಕು, ಸರಕಾರಿ ಕಾಲೇಜು ಬದಲು ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡಬೇಕು... ಹೀಗೆ ನಾನಾ ರೀತಿಯ ಅಭಿಪ್ರಾಯಗಳನ್ನು ಸಾಮಾನ್ಯ ವಿದ್ಯಾರ್ಥಿಗಳು ಮುಂದಿಡುತ್ತಾರೆ. ಆದರೆ, ಈ ಎಲ್ಲವೂ ಅರ್ಧ ಸತ್ಯ ಎನ್ನುತ್ತಾರೆ ಸಾಧಕರು.
ಶುಕ್ರವಾರ ಮೈಸೂರು ವಿಜಯ ಕರ್ನಾಟಕ ಕಚೇರಿ ಯಲ್ಲಿ ನಡೆದ  ನಾಲ್ಕು ಜಿಲ್ಲೆಯ ಟಾಪರ್ ವಿದ್ಯಾರ್ಥಿ ಗಳ ಮುಕ್ತ ಸಂವಾದದಲ್ಲಿ ಇಂಥದ್ದೊಂದು ಅಭಿಪ್ರಾಯ ವ್ಯಕ್ತವಾಯಿತು. ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಕೊಡಗು ಜಿಲ್ಲೆಯ ಪಿಯುಸಿ  ಸಾಧಕರ  ಪಟ್ಟಿಯಲ್ಲಿ  ಅಗ್ರ ಸ್ಥಾನ ಪಡೆದು, ಆಯಾಯ ಜಿಲ್ಲೆಯ ಮೊದಲಿಗರು ಎಂಬ ಕಿರೀಟ ತೊಟ್ಟಿರುವ ಆರು ಜನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಅವರ ಪಾಲಕರು  ಮುಕ್ತ ಸಂವಾದದಲ್ಲಿ  ಭಾಗವಹಿಸಿ, ಎರಡು ಗಂಟೆ ಕಾಲ ಮುಕ್ತವಾಗಿ ಚರ್ಚೆ ನಡೆಸಿದರು.

ಲಿಂಗಾಂಬುಧಿ ಕೆರೆಯಲ್ಲಿ ಕೊನರಿದ ಆಲದ ಮರ

* ಈಚನೂರು ಕುಮಾರ್ ಮೈಸೂರು
ಆ ದೇವನೊಲಿದರೆ ಕೊರಡು ಕೊನರುವುದಯ್ಯಾ... ಎಂಬುದು  ಆಸ್ತಿಕರ ನಂಬಿಕೆ. ಕಾಳಜಿ ,ಕಳಕಳಿ,ಆರೈಕೆಯ ಪ್ರೀತಿಯಿದ್ದರೆ ಬೇರುಸಹಿತ ನೆಲಕ್ಕುರುಳಿದ ಆಲದ ಮರಕ್ಕೂ ಮರುಜನ್ಮ ನೀಡಬಹುದು ಎಂಬುದು ಪರಿಸರ ಪ್ರೇಮಿಗಳ ಅಚಲ ನಂಬಿಕೆ. ಆ  ನಂಬಿಕೆ ನಿಜವಾದ ರೋಚಕ ಕಥೆಯಿದು.
ಬೋಗಾದಿ-ಮಾನಂದವಾಡಿ ರಸ್ತೆಯಲ್ಲೊಂದು ಶತಾಯುಷಿ ಆಲದ ಮರ ವರ್ತುಲ ರಸ್ತೆ ವಿಸ್ತರಣೆಯಲ್ಲಿ ಬುಡಮೇಲಾಯಿತು. ಈ ಗಜಗಾತ್ರದ ದೊಡ್ಡ ೮-೯ ಕೊಂಬೆಗಳನ್ನು ಕತ್ತರಿಸಲಾಯಿತು. ಬೇರು ಸಮೇತ ಇದ್ದ ಈ ಮರ ನೋಡಿ ವೃಕ್ಷಪ್ರಿಯರು, ಪರಿಸರ ಪ್ರೇಮಿಗಳು ಇದೇ ಮರವನ್ನು ಬೇರೊಂದು ಸ್ಥಳಕ್ಕೆ ಸಾಗಿಸಿ ನೆಟ್ಟರೆ ನೆರಳು-ಗಾಳಿ ಸಿಗಬಹುದೆಂದು ಯೋಜನೆ ಹಾಕಿದರು. ಈ ಪ್ರಯತ್ನವೇ ಯಶಸ್ವಿ ಆಲದ ಮರ ಸ್ಥಳಾಂತರ.
ಎರಡು ಕಿ.ಮೀ. ಪ್ರಯಾಣಿಸಿದ ಮರಕ್ಕೆ ಸೂಕ್ತ ಸ್ಥಳ ಲಿಂಗಾಂಬುಧಿ ಕೆರೆಯ ಒಂದು ತುದಿಯಲ್ಲಿ ಸಿಕ್ಕಿತು. ಅಲ್ಲಿ ವೈಜ್ಞಾನಿಕವಾಗಿಯೇ ಸ್ಥಾಪನೆ ಆಗಿ ಈ ತಿಂಗಳ ೧೮ರಂದು ಸರಿಯಾಗಿ ಎರಡು ತಿಂಗಳು ಭರ್ತಿ. ಈಗ ಇದೇ ಆಲ ಕೊನರಿದೆ (ಚಿಗುರಿದೆ). ಹಸಿರೆಲೆಯ ಗೊಂಚಲು ಕಣ್ಣಿಗೆ ಆನಂದ ಕೊಡುತ್ತಿದೆ. ಈ ಮರದ ನೆರವಿಗೆ ನೀರಿನ ಆಸರೆ ಇದೆ. ಮೈಸೂರು ನಗರದಲ್ಲಿ ಬೃಹತ್ ಮರವನ್ನೇ ಸ್ಥಳಾಂತರಿ ಸಿದ ಘಟನೆ ಇದೇ ಮೊದಲು. ಅಂತೂ ವೃಕ್ಷ ಪರಂಪರೆಗೆ ಸಂರಕ್ಷಣೆಯ ಪರಂಪರೆಯೂ ಸೇರಿಕೊಂಡಿದೆ.


ಗಾಯಾಳು ಆನೆ ಚೇತರಿಕೆ, ಮರಳಿ ಅರಣ್ಯಕ್ಕೆ

* ವಿಕ ಸುದ್ದಿಲೋಕ ಎಚ್.ಡಿ.ಕೋಟೆ
ಮೈಸೂರು ಜಿಲ್ಲೆ  ನಾಗರಹೊಳೆ ಅಭಯಾರಣ್ಯದ ಮೇಟಿಕುಪ್ಪೆ ವನ್ಯ ಜೀವಿ ವಲಯ ವ್ಯಾಪ್ತಿಯ ಮೇಟಿಕುಪ್ಪೆ  ಜಮೀನೊಂದರಲ್ಲಿ  ಶುಶ್ರೂಷೆ ಪಡೆಯುತ್ತಿದ್ದ  ಗಾಯಾಳು ಗಂಡಾನೆ ಚೇತರಿಸಿಕೊಂಡು ಗುರುವಾರ ಮಧ್ಯಾಹ್ನ ಕಾಡು ಸೇರಿತು.
ಬಸವರಾಜಪ್ಪ ಎಂಬುವವರ ಜಮೀನಿನಲ್ಲಿ ಬುಧವಾರ ದಿಂದಲೂ ತೀವ್ರ ಗಾಯಗೊಂಡು ಗಂಡಾನೆ ನರಳುತ್ತಿತ್ತು.
ಬಳ್ಳೆ ಕ್ಯಾಂಪ್‌ನಿಂದ ತರಲಾದ ಸಾಕಾನೆ ಅರ್ಜುನ  ಮಾವುತರಾದ ಮಾಸ್ತಿ ಮತ್ತು ಮಹದೇವನ ಸೂಚನೆ ಯಂತೆ ಮೇಲೇಳಲಾಗದೆ  ಬಿದ್ದಿದ್ದ ಆನೆಯನ್ನು ತನ್ನ  ಸೊಂಡಿಲು ಮತ್ತು ಕೊಂಬುಗಳಿಂದ ಉಪಯೋಗಿಸಿ ಎತ್ತಿ ನಿಲ್ಲಿಸಿತು. ಘೀಳಿಡುತ್ತ  ೪-೫ ನಿಮಿಷಗಳ ಕಾಲ ಸ್ಥಳದಲ್ಲೇ ನಿಂತ ಆನೆ ನಂತರ ನಿಧಾನವಾಗಿ ನಡೆದಾಡಲು ಶುರುಮಾಡಿತು. ಅರ್ಜುನ ಆನೆ, ಮಾವುತರು, ಮೇಟಿಕುಪ್ಪೆ ವನ್ಯಜೀವಿ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ ಸಂತೋಷ್ ನಾಯಕ್ ಮತ್ತು ಸಿಬ್ಬಂದಿ, ಅರಣ್ಯ ಸಂಚಾರಿ ದಳದ ಪೇದೆಗಳಾದ ಶಿವನಂಜಪ್ಪ, ಅಚ್ಯುತ್ ಮತ್ತು ಇತರರು ಆನೆಯನ್ನು ಹಿಂಬಾಲಿಸಿದರು.

ವರುಣಾದಲ್ಲಿ ಕಾಂಚಾಣ ಝಣಝಣ !

* ಕೂಡ್ಲಿ ಗುರುರಾಜ ಮೈಸೂರು
ಕೆಲವೇ ಕೆಲವು ವರ್ಷಗಳ ಹಿಂದೆ ಆತ ಏನೂ ಅಲ್ಲ. ಇವತ್ತು ಆತ ಬಂದರೆ ಸಕ್ಕರೆಗೆ ಇರುವೆ ಮುತ್ತುವಂತೆ ಜನ ಆತನನ್ನು ಮುತ್ತಿಕೊಳ್ಳುತ್ತಾರೆ. ಮದುವೆ,  ಸಭೆ, ಸಮಾರಂಭ, ಕ್ರೀಡಾಕೂಟ ಅಂದವರಿಗೆ ಕಿಸೆಯಿಂದ ಸಾವಿರದ ನೋಟು ಎಳೆದು ಕೈಗಿಡುವುದೇ. ಈತನ ಫೋಟೋ ಇಲ್ಲದ ಫ್ಲೆಕ್ಸ್‌ಗಳನ್ನು ಹುಡುಕಬೇಕು. ಈತನಿಗೆ ಹೇಳಿದರೆ ಮುಖ್ಯಮಂತ್ರಿ ಬಳಿ ಯಾವುದೇ ಕೆಲಸ ಸಲೀಸು ಎಂಬ ಭಾವನೆ. ಈತ ಯಾರೂ ಅಂತ ಗೊತ್ತಾಯಿತಾ? ಬೇರ್‍ಯಾರೂ ಅಲ್ಲ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಸಹಾಯಕ ಕಾ.ಪು.ಸಿದ್ದಲಿಂಗಸ್ವಾಮಿ.
ಸಿದ್ದಲಿಂಗಸ್ವಾಮಿ ಇವತ್ತು ಮೈಸೂರಿನ ರಾಜಕಾರಣ ದಲ್ಲಿ  ತೀವ್ರ ಚರ್ಚಿತ ವ್ಯಕ್ತಿ. ಪ್ರತಿಪಕ್ಷದವರು ಈತನ ಕರಾಮತ್ತಿಗೆ  ದಂಗಾಗಿದ್ದಾರೆ. ಘಟಾನುಘಟಿ ರಾಜ ಕಾರಣಿಗಳೇ ಆತಂಕ ಪಟ್ಟಿದ್ದಾರೆ. ಸಾತ್ವಿಕರು ಅಸಹ್ಯಪಟ್ಟಿ ದ್ದಾರೆ. ಈತನ ಲೆಕ್ಕಾಚಾರ ಎಷ್ಟರಮಟ್ಟಿಗೆಂದರೆ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ  ವರುಣಾ ಕ್ಷೇತ್ರದಲ್ಲಿ  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ  ತೊಡೆ ತಟ್ಟಬೇಕೆಂಬ ಗುರಿ. ಆ ನಿಟ್ಟಿನಲ್ಲೇ ಈತನ ನಡೆ.
ಯಾರು ಈ ಸಿದ್ದಲಿಂಗಸ್ವಾಮಿ? ನಂಜನಗೂಡು ತಾಲೂಕು ಕಾರ್ಯದ ಸಿದ್ದಲಿಂಗಸ್ವಾಮಿ ಪ್ರಾರಂಭ ದಲ್ಲಿ ಸುತ್ತೂರು ಮಠದಲ್ಲಿ ಸಣ್ಣಪುಟ್ಟ ಚಾಕರಿ ಮಾಡಿಕೊಂಡಿದ್ದವರು. ಯಡಿಯೂರಪ್ಪ ನವರ ಕಣ್ಣಿಗೆ ಬಿದ್ದ ಮೇಲೆ ಸಿದ್ದಲಿಂಗಸ್ವಾಮಿ ಖದರ್ರೇ ಬದಲಾಯಿತು. ಯಡಿಯೂರಪ್ಪ ಬೆಳೆದಂತೆ ಈತನೂ ಬೆಳೆದ.  ಅವರ ಆಪ್ತನಾದ.

ಸರಳ ಜೀವನ, ಉನ್ನತ ಚಿಂತನ


*ಡಿ.ಆರ್.ಅಶೋಕ ರಾಮ್/ ಪಿ.ಓಂಕಾರ್
`ಸಂಸತ್ತಿನಲ್ಲಿ ಚೆನ್ನಾಗಿ ಮಾತನಾಡುವವರು, ಪ್ರಶ್ನೆ ಕೇಳುವವರು ಒಳ್ಳೆಯ ಸಂಸದರು. ಜನರಿಗೆ ಇಂಥವರೇ ಬೇಕು, ಇವರಿದ್ದರೇ ಅಭಿವೃದ್ಧಿ' ಇಂತಹ ಮಾತುಗಳು ಹಳೆಯ ಕಾಲದ್ದು . ಈ ಕಾಲದಲ್ಲಿ ಇದೆಲ್ಲಾ ರಾಜಕಾರಣಿಗೆ ಅರ್ಹತೆಯಲ್ಲ ಅನ್ನೋ ಮಾತುಗಳು ಸಾಮಾನ್ಯ. ಆದರೆ, ಇವಿಷ್ಟು  ಗುಣವಿದ್ದರೂ  ಐದೂವರೆ ದಶಕಗಳ ಹಿಂದೆಯೂ ಚುನಾವಣೆಯಲ್ಲಿ ಸೋತವರು ಈಗ ಬದುಕಿನಿಂದಲೂ ಹೊರ ನಡೆದಿದ್ದಾರೆ. ಮೈಸೂರಿನಿಂದ ಮೊದಲ ಲೋಕಸಭೆ ಪ್ರವೇಶಿಸಿ ಘಟಾನುಘಟಿಗಳ ನಡುವೆ ನಿಂತು ಹೆಸರು ಮಾಡಿದ ಎಂ.ಎಸ್. ಗುರುಪಾದಸ್ವಾಮಿ ಅವರೇ ಈ ರಾಜಕಾರಣಿ.
೧೯೫೨ ರಲ್ಲಿ ಮೈಸೂರು ದ್ವಿಸದಸ್ಯ ಕ್ಷೇತ್ರದಿಂದ  ಅಂದಿನ ಹಣಕಾಸು ಸಚಿವ ಎಚ್.ಸಿ.ದಾಸಪ್ಪ  ಅವರ ವಿರುದ್ಧ  ಸ್ಪರ್ಧಿಸಿದಾಗ ಮಾಲಂಗಿ ಶಿವಲಿಂಗ ಗುರುಪಾದಸ್ವಾಮಿ ಅವರಿಗೆ ಕೇವಲ ೨೯ ವರ್ಷ. ಕಿಸಾನ್ ಮೋರ್ಚಾ ಪ್ರಜಾಪಾರ್ಟಿ ಅಭ್ಯರ್ಥಿಯಾಗಿದ್ದ  ಗುರುಪಾದಸ್ವಾಮಿ ಎಲ್ಲರೂ ಅಚ್ಚರಿಗೊಳ್ಳುವಂತೆ ಗೆದ್ದರು. ನಂತರ ೧೯೫೬ ರಲ್ಲಿ  ಪ್ರಜಾ ಸೋಷಿಯಲಿಸ್ಟ್  ಪಾರ್ಟಿಯಿಂದ ಸ್ಪರ್ಧಿಸಿ ಎಲ್ಲರೂ ಅಚ್ಚರಿಗೊಳ್ಳು ವಂತೆ ಸೋತರು. ಪಿಎಸ್‌ಪಿಯ ರಾಜ್ಯ ಅಧ್ಯಕ್ಷರೂ ಆಗಿದ್ದರು.



ಎಲ್ಲಿಯ ದಾಸಪ್ಪ ಎಲ್ಲಿಯ ಗುರುಪಾದ?
*ಚೀ.ಜ.ರಾಜೀವ
ಸ್ವಾತಂತ್ರ್ಯ ಭಾರತದ  ಮೊದಲ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು ಕಳೆದ ಲೋಕಸಭೆ ಚುನಾವಣೆಯನ್ನು ಕಂಡಿರುವ,  ಈ ಎಲ್ಲ ಚುನಾವಣೆಗಳಲ್ಲಿ ಭೌತಿಕವಾಗಿ ಇಲ್ಲವೇ ಬೌದ್ಧಿಕವಾಗಿ ತೊಡಗಿಸಿಕೊಂಡಿದ್ದ ದೇಶದ ಬೆರಳೆಣಿಕೆ ರಾಜಕಾರಣಿಗಳ ಪೈಕಿ ಎಂ. ಎಸ್. ಗುರುಪಾದಸ್ವಾಮಿ ಒಬ್ಬರು. ಹಾಗಾಗಿಯೇ ಏನೋ ಗುರುಪಾದಸ್ವಾಮಿ  ಅವರೊಂದಿಗೆ ಮಾತಿಗಿಳಿದರೆ ರಾಜಕೀಯದಲ್ಲಿ ದೇಶ ಪರ್ಯಟನೆ ಮಾತ್ರವಲ್ಲ, ವಿಶ್ವ ಪರ್ಯಟನೆಯನ್ನೇ ಮಾಡಿಕೊಂಡು ಬರಬಹುದಿತ್ತು.

ಸಂಪನ್ಮೂಲ ವ್ಯಕ್ತಿಗಳಿಗೆ ಸಂಪನ್ಮೂಲವಿಲ್ಲ

*ಚೀ.ಜ.ರಾಜೀವ ಮೈಸೂರು
ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರ ಆಯ್ಕೆಗೆ ತಾನೇ ರೂಪಿಸಿದ ನಿಯಮ ಅದು. ಆದರೆ, ಈ ಮಾನದಂಡದ ಅನ್ವಯ ಶಿಕ್ಷಕರೇ ನಿರೀಕ್ಷಿತ ಸಂಖ್ಯೆಯಲ್ಲಿ ಆಯ್ಕೆ ಆಗದಿದ್ದರೆ ಹೇಗೆ? ಅದಕ್ಕೆಂದೇ ಇಲಾಖೆ ಮಾಡಿದ್ದೇನು ಗೊತ್ತೇ. ತನ್ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಿದೆ. ಸಮೂಹ ಹಾಗೂ ಬ್ಲಾಕ್  ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಪರೀಕ್ಷೆಗಾಗಿ ನಡೆದ ವಿದ್ಯಮಾನ ಇದು.
ನಿಗದಿಯಾದ ಕನಿಷ್ಠ ಅಂಕಗಳನ್ನೂ ಪಡೆಯಲು ವಿಫಲರಾಗಿರುವ  ಶಿಕ್ಷಕ ಅಭ್ಯರ್ಥಿಗಳಿಗಾಗಿ ಆದ ರಾಜಿ  ಶೈಕ್ಷಣಿಕ ವಲಯದಲ್ಲಿ ಚರ್ಚೆಯ ವಸ್ತು.  ಮಕ್ಕಳ ಕಲಿಕಾ ಸಾಮರ್ಥ್ಯವನ್ನು  ಹೆಚ್ಚಿಸಲೆಂದೇ  ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಸಮೂಹ ಸಂಪನ್ಮೂಲ ವ್ಯಕಿ (ಸಿಆರ್‌ಪಿ) ಹಾಗೂ ಬ್ಲಾಕ್ ಸಂಪನ್ಮೂಲ ವ್ಯಕ್ತಿ (ಬಿಆರ್‌ಪಿ) ಎಂಬ ಹುದ್ದೆಗಳನ್ನು  ಇಲಾಖೆ ಸೃಷ್ಟಿಸಿದೆ.  ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿರುವ  ಶಿಕ್ಷಕರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುವಂಥ  ಜವಾಬ್ದಾರಿ ಹೊಂದಿರುವ  ಈ ಹುದ್ದೆಗಳಿಗೆ ಪರೀಕ್ಷೆ ನಡೆಸಿರುವ ಇಲಾಖೆ, ದೊರೆತಿರುವ ಫಲಿತಾಂಶದಿಂದ ಕಂಗಾಲಾಗಿದೆ. ಅರ್ಹತೆಗೆ ನಿಗದಿಯಾಗಿದ್ದ ಕನಿಷ್ಠ ಅಂಕಗಳನ್ನು ಪಡೆಯಲು ಬಹುತೇಕ ಅಭ್ಯರ್ಥಿಗಳು ವಿಫಲವಾಗಿದ್ದಾರೆ.  ಪರಿಣಾಮ- ಶಿಕ್ಷಕರನ್ನು ಸಬಲೀಕರಣ ಮಾಡುವ ಉದ್ದೇಶದಿಂದ ರೂಪುಗೊಂಡಿರುವ  ಈ ಹುದ್ದೆಗಳಿಗೆ ಸಾಧಾರಣ ಹಾಗೂ ಕಳಪೆ ಸಾಧನೆ ಮಾಡಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮುಂದಾಗಿದೆ. ಇದು ಯೋಜನೆಯ ಮೂಲ ಉದ್ದೇಶವನ್ನೇ ಅಣಕಿಸುತ್ತಿದೆ !


ಪ್ಯಾಟೆ ಟೆಕ್ಕಿಗಳ ಹಳ್ಳಿ `ಸೇವೆ ' ಲೈಫು...

*ಕುಂದೂರು ಉಮೇಶಭಟ್ಟ, ಮೈಸೂರು
ಇದು ಬೆಂಗಳೂರು ಹಾಗೂ ಮೈಸೂರಿನ ಟೆಕ್ಕಿಗಳಿಗೆ ಹಳ್ಳಿ ಲೈಫಿನ ಅನುಭವ. ಬಿಡುವಿನ ವೇಳೆಯಲ್ಲಿ ಗ್ರಾಮೀಣ ಮಕ್ಕಳ ಜ್ಞಾನದ ಹರವು ವಿಸ್ತರಿಸುವ ವಿಭಿನ್ನ ಸೇವೆ...
ಪ್ರಮುಖ ಸಾಫ್ಟ್‌ವೇರ್ ಕಂಪನಿಗಳಲ್ಲಿ ಲಕ್ಷ ಲಕ್ಷ ಸಂಬಳ ಪಡೆಯುವ ಎಂಜಿನಿ ಯರ್‌ಗಳಿಗೆ ವಾರಾಂತ್ಯವನ್ನು ಹಳ್ಳಿ ಮಕ್ಕಳೊಂದಿಗೆ ಕಳೆಯುವ ಮೂಲಕ ಸಮಾಜಕ್ಕೆ ಮಾದರಿ ಕೆಲಸದಲ್ಲಿ ನಿರತ ರಾಗಿದ್ದಾರೆ. ತಮ್ಮ ವೇತನದ ಸಣ್ಣ ಭಾಗ ವನ್ನು ಸಮಾಜಕ್ಕಾಗಿಯೇ ಬಳಸುವ ದೊಡ್ಡತನವನ್ನು ಎಂಜಿನಿಯರ್‌ಗಳು ತೋರಿದ್ದಾರೆ. ನಾಲ್ಕು ವರ್ಷದ ಹಿಂದೆ ಆರಂಭಗೊಂಡ ಆಶಾಯೇ ಫೌಂಡೇಷನ್ ಮೂಲಕ ೭೫ಕ್ಕೂ ಹೆಚ್ಚು ಟೆಕ್ಕಿಗಳು ಬೆಂಗಳೂರು ಹಾಗೂ ಮೈಸೂರು ಜಿಲ್ಲೆಯಲ್ಲಿ ಮಕ್ಕಳ ಮೂಲಕ ಸೇವೆ ಮಾಡಿದ್ದಾರೆ.


ಎಂಥಾ ಮರುಳಯ್ಯ ಇದು ಎಂಥಾ ಮರಳು ...

*ಪಿ. ಓಂಕಾರ್ ಮೈಸೂರು
ಹತ್ತು ವರ್ಷದ ಹಿಂದೆ ೧,೨೦೦ ರೂ., ೫ ವರ್ಷದ ಹಿಂದೆ ೧,೭೫೦ ರೂ. ಇದ್ದ ಒಂದು ಲಾರಿ (೩೦೦ಸಿಎಫ್‌ಟಿ)ಮರಳು ಬೆಲೆ  ಈಗ ಬರೋಬ್ಬರಿ ೧೬ ಸಾವಿರ !
ಬಹುಶಃ ಬಂಗಾರ, ಅದಿರು ಹೊರತು ಯಾವುದೇ ಸರಕಿನ ಬೆಲೆ  ಇಷ್ಟೊಂದು ದೊಡ್ಡ  ಪ್ರಮಾಣದಲ್ಲಿ ಗಗನ ಮುಖಿಯಾಗಿದ್ದಕ್ಕೆ ನಿದರ್ಶನವಿಲ್ಲ. ಸ್ವಂತ ಸೂರು ಕಟ್ಟುವ ಕನಸನ್ನು ಭಾರೀ ದುಬಾರಿಗೊಳಿಸುತ್ತಿರುವ ಕುಖ್ಯಾತಿಯೂ ಮರಳಿನದ್ದೆ.
ಮನೆ, ಕಟ್ಟಡ ಕಟ್ಟುವವರಿಗೆ  ಐದು ಹತ್ತು ವರ್ಷಗಳ ಹಿಂದೆ ಮರಳು ಸಮಸ್ಯೆಯೇ ಅಲ್ಲ. ಬೇಡಿಕೆ ಹೆಚ್ಚಿದಂತೆ, ನದಿ ಪಾತ್ರದಿಂದ ಮರಳು ತೆಗೆಯುವುದು, ಸಾಗಿಸುವುದು `ಮಾಫಿಯಾ' ಮಾದರಿ ಕಾರ್‍ಯನಿರ್ವಹಿಸಲು ಆರಂಭಿಸಿದ ನಂತರವೇ ದರ ಹೆಚ್ಚಳದ ಆರ್ಭಟ ಶುರುವಾಗಿದ್ದು.

ಪಶು ಮೇವು ಅಭಿವೃದ್ಧಿ ಯಶಸ್ವಿ

*ಪ್ರಸಾದ್ ಲಕ್ಕೂರು ಚಾಮರಾಜನಗರ
ಪಶುಪಾಲನೆ ಇಲಾಖೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಕೈಗೆತ್ತಿಕೊಂಡ ಪಶು ಮೇವು ಅಭಿವೃದ್ಧಿ ಯೋಜನೆ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ವಿಸ್ತರಿಸಲು ಚಿಂತನೆ ನಡೆಸಿದೆ.
ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪಶುಪಾಲನೆ ಇಲಾಖೆ ಜಿಲ್ಲೆಯಲ್ಲಿ ಪಶು ಹಸಿರು ಮೇವು ಬೆಳೆದಿದೆ. ಈ ಯೋಜನೆಯಡಿ ಆಂಧ್ರಪ್ರದೇಶ ಪ್ರಥಮವಾಗಿ ಹಸಿರು ಮೇವು ಬೆಳೆಯಲು ಆರಂಭಿಸಿತು.  ನಂತರ ರಾಜ್ಯದಲ್ಲಿ ಚಾಮರಾಜನಗರ ಜಿಲ್ಲೆ ಪ್ರಥಮ ಬಾರಿಗೆ ಪ್ರಯೋಗಿಸಿ ಯಶಸ್ವಿಯಾಗಿದೆ.
ಇದರಿಂದ ಆಕರ್ಷಿತರಾದ ಪಶುಪಾಲನೆ ಇಲಾಖೆ ಕಾರ್ಯದರ್ಶಿಯವರು ರಾಜ್ಯಾದ್ಯಂತ ವಿಸ್ತರಿಸಲು ಚಿಂತಿಸಿದ್ದಾರೆ. ಈ ಹಿಂದೆ ಸಿದ್ಧಪಡಿಸಿದ್ದ ಕ್ರಿಯಾ ಯೋಜನೆ ಕಳುಹಿಸುವಂತೆ ಜಿಲ್ಲಾ ಪಶುಪಾಲನೆ ಉಪ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಇನ್ನೆಲ್ಲಿಯ ಸಮಾಜವಾದದ ವೇದಾಂತ ?

ಸರಳ ಜೀವನ, ನೇರ ನುಡಿಗೆ ಮತ್ತೊಂದು ಹೆಸರು ವೇದಾಂತ ಹೆಮ್ಮಿಗೆ. ಹೋರಾಟಗಾರ, ಕಟ್ಟಾ ಸಮಾಜವಾದಿ, ಸ್ವಾತಂತ್ರ್ಯ ಸೇನಾನಿ, ಕಾರ್ಮಿಕರ ನಾಯಕರಾಗಿಯೂ ದುಡಿದವರು.
ಮೈಸೂರಿನ ಸೌಂದರ್ಯ ಕಾಪಾಡಲು ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುತ್ತಿದ್ದವರು ವೇದಾಂತ ಹೆಮ್ಮಿಗೆ.
ಮೈಸೂರಿನ ನ್ಯಾಯಾಲಯಗಳ ಆವರಣದಲ್ಲಿ ಬೃಹತ್ ಕಟ್ಟಡ ನಿರ್ಮಿಸುವ ಪ್ರಸ್ತಾಪ  ಬಂದಾಗ ಅಂದಿನ ಕಾನೂನು ಸಚಿವ ಲಕ್ಷ್ಮೀಸಾಗರ್ ವಿರುದ್ಧ  ಪ್ರತಿಭಟಿಸಿದವರು. ಅಷ್ಟೆ ಏಕೆ ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಚಿವರೆದುರೇ ನಿಷ್ಠುರವಾಗಿ ಮಾತನಾಡಿದವರು. ಬಹಳ ಹಿಂದಿನ ಕಾಲಕ್ಕೇ ಅಂತರ್ಜಾತಿ ವಿವಾಹವಾಗಿ ತಮ್ಮವರಿಂದ ದೂರವಾದವರು. ಶಾಸಕರಾಗಿ, ಪತ್ರಕರ್ತರಾಗಿ, ೧೬ವರ್ಷಗಳ ವರೆಗೆ ಪುರಸಭಾ ಸದಸ್ಯರಾಗಿದ್ದ ವರು. ಶ್ರೀಮಂತ ಕುಟುಂಬದಿಂದ ಬಂದವರಾದರೂ ಬಡವರ ಬಗ್ಗೆ ಮಿಡಿದರು.  ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾದ ಇವರು ಅನೇಕ ಬಾರಿ ಜೈಲುವಾಸ ಅನುಭವಿಸಿದರು.ತುರ್ತು ಪರಿಸ್ಥಿತಿ ವಿರುದ್ಧದ ಜೆಪಿ ಚಳವಳಿ, ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಗೋವಾ ವಿಮೋಚನಾ ಚಳವಳಿಯಲ್ಲಿ ಭಾಗವಹಿಸಿ  ಪೊಲೀಸರ ಲಾಠಿ ಹೊಡೆತ ತಿಂದಿದ್ದನ್ನು ಆಗಾಗ ಸ್ಮರಿಸಿಕೊಳ್ಳುತ್ತಾರೆ.

ರಾಮದಾಸ್ ನಿರ್ಲಕ್ಷ್ಯ,ಕಾರ್‍ಯಕರ್ತರೂ ಅಲಕ್ಷ್ಯ

* ಕುಂದೂರು ಉಮೇಶಭಟ್ಟ ಮೈಸೂರು
ಮೈಸೂರು ಜಿಲ್ಲೆಯಲ್ಲಿ  ಬಿಜೆಪಿ ಭಿನ್ನಮತದಿಂದ ಕಾರ್‍ಯಕರ್ತರಷ್ಟೇ ಅಲ್ಲ , ಸಚಿವರೂ ಮೂಲೆಗುಂಪು...
ಹುಣಸೂರಿನಲ್ಲಿ ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾನಾ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿರುವ ಕಾರ್‍ಯಕ್ರಮಗಳ ಸಿದ್ಧತೆ ಯಿಂದ ಜಿಲ್ಲಾ ಉಸ್ತುವಾರಿ ಸಚಿವ ರಾಮದಾಸ್ ಅವರೇ ದೂರ ಉಳಿದಿದ್ದಾರೆ. ಇದು ಪಕ್ಷದಲ್ಲಿ  ಗುಪ್ತ ಗಾಮಿನಿಯಂತಿರುವ ಭಿನ್ನಮತಕ್ಕೆ ಪುಷ್ಟಿ ನೀಡಿದೆ.
ಇನ್ನು ವರ್ಗಾವಣೆ ಮಾಸವೆಂದು ಸರಕಾರವೇ ಘೋಷಿಸಿ ರುವುದರಿಂದ ತಮ್ಮ ಕಡೆಯವರ ವರ್ಗಾ ವಣೆ ಮೂಲಕ ಒಂದಿಷ್ಟು ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಮುಂದಾದ ಕಾರ್‍ಯಕರ್ತರಿಗೆ ಮಾತ್ರ ಅತ್ತ ಸಚಿವರ ಶಿಫಾರಸು ಇಲ್ಲ, ಶಾಸಕರ ದರ್ಶನವೇ ಇಲ್ಲ ಎನ್ನುವಂಥ ಬೇಸರದ ಸ್ಥಿತಿ.
ಸಚಿವರ ಮನೆಗೆ ತೆರಳಿದರೆ, ಬೆಂಗಳೂರಿಗೆ ಬಂದು ಪತ್ರ ತೆಗೆದುಕೊಂಡು ಹೋಗಿ ಎಂಬ ಸಿದ್ಧ ಉತ್ತರ. ಪಕ್ಷದಲ್ಲಿನ ಮುಖ್ಯಮಂತ್ರಿ ಹಾಗೂ ಎದುರಾಳಿ ಬಣದ ನಡುವೆ ನಡೆದಿರುವ ಮುಸುಕಿನ ಗುದ್ದಾಟದಿಂದ ಸಚಿವರ ಪತ್ರದಿಂದ ಏನಾದರೂ ಕೆಲಸವಾದೀತೇ ಎಂಬ ಅನುಮಾನ. ತಮ್ಮದೇ  ಸರಕಾರ ಬಂತು ಎಂದು ಬೀಗಿದ ಕಾರ್‍ಯಕರ್ತರು, ಮುಖಂಡರು ಈ ರಾಜ ಕೀಯ ಹೊಯ್ದಾಟದಿಂದ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

ರೈತರ ಜಮೀನಿಗೆ ಇನ್ನಷ್ಟು ಶಕ್ತಿ, ಈ ಮುಂಗಾರಿಗೆ ಭೂ ಚೇತನ

*ಆರ್.ಕೃಷ್ಣ ಮೈಸೂರು
ರೈತರ ಖುಷ್ಕಿ ಭೂಮಿ ಫಲವತ್ತತೆ ಹೆಚ್ಚಿಸುವ `ಭೂ ಚೇತನ' ಯೋಜನೆ ಮೈಸೂರು ಭಾಗದಲ್ಲಿ ಈ ಮುಂಗಾರಿನಿಂದ ಜಾರಿಗೊಳ್ಳಲಿದೆ.
ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆ ಸೇರಿದಂತೆ ಎಲ್ಲ ಜಿಲ್ಲೆಯಲ್ಲೂ ರೈತರ ಜೀವನ, ಆರ್ಥಿಕ ಮಟ್ಟ ಸುಧಾರಣೆಗೆ ಈ ಯೋಜನೆ. ನಾಲ್ಕು ವರ್ಷದಲ್ಲಿ ಖುಷ್ಕಿ ಜಮೀನಿನಲ್ಲಿ ಉತ್ತಮ ತಾಂತ್ರಿಕತೆ ಅಳವಡಿಸಿ ಬೆಳೆಗಳ ಇಳುವರಿ ಮಟ್ಟವನ್ನು ಕನಿಷ್ಠ ಶೇ.೨೦ರಷ್ಟಾದರೂ ಹೆಚ್ಚಿಸಬೇಕೆನ್ನುವುದು ಯೋಜನೆಯ ಗುರಿ. ಹೈದರಾಬಾದ್‌ನ ಇಕ್ರಿಸ್ಯಾಟ್ ಸಂಸ್ಥೆ, ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ವಿ ವಿ ಗಳ ಸಹಯೋಗದಲ್ಲಿ ಕೃಷಿ ಇಲಾಖೆ ಅನುಷ್ಠಾನದ ಹೊಣೆ ಹೊತ್ತಿದೆ.