ಸಂಪನ್ಮೂಲ ವ್ಯಕ್ತಿಗಳಿಗೆ ಸಂಪನ್ಮೂಲವಿಲ್ಲ

*ಚೀ.ಜ.ರಾಜೀವ ಮೈಸೂರು
ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರ ಆಯ್ಕೆಗೆ ತಾನೇ ರೂಪಿಸಿದ ನಿಯಮ ಅದು. ಆದರೆ, ಈ ಮಾನದಂಡದ ಅನ್ವಯ ಶಿಕ್ಷಕರೇ ನಿರೀಕ್ಷಿತ ಸಂಖ್ಯೆಯಲ್ಲಿ ಆಯ್ಕೆ ಆಗದಿದ್ದರೆ ಹೇಗೆ? ಅದಕ್ಕೆಂದೇ ಇಲಾಖೆ ಮಾಡಿದ್ದೇನು ಗೊತ್ತೇ. ತನ್ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಿದೆ. ಸಮೂಹ ಹಾಗೂ ಬ್ಲಾಕ್  ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಪರೀಕ್ಷೆಗಾಗಿ ನಡೆದ ವಿದ್ಯಮಾನ ಇದು.
ನಿಗದಿಯಾದ ಕನಿಷ್ಠ ಅಂಕಗಳನ್ನೂ ಪಡೆಯಲು ವಿಫಲರಾಗಿರುವ  ಶಿಕ್ಷಕ ಅಭ್ಯರ್ಥಿಗಳಿಗಾಗಿ ಆದ ರಾಜಿ  ಶೈಕ್ಷಣಿಕ ವಲಯದಲ್ಲಿ ಚರ್ಚೆಯ ವಸ್ತು.  ಮಕ್ಕಳ ಕಲಿಕಾ ಸಾಮರ್ಥ್ಯವನ್ನು  ಹೆಚ್ಚಿಸಲೆಂದೇ  ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಸಮೂಹ ಸಂಪನ್ಮೂಲ ವ್ಯಕಿ (ಸಿಆರ್‌ಪಿ) ಹಾಗೂ ಬ್ಲಾಕ್ ಸಂಪನ್ಮೂಲ ವ್ಯಕ್ತಿ (ಬಿಆರ್‌ಪಿ) ಎಂಬ ಹುದ್ದೆಗಳನ್ನು  ಇಲಾಖೆ ಸೃಷ್ಟಿಸಿದೆ.  ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿರುವ  ಶಿಕ್ಷಕರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುವಂಥ  ಜವಾಬ್ದಾರಿ ಹೊಂದಿರುವ  ಈ ಹುದ್ದೆಗಳಿಗೆ ಪರೀಕ್ಷೆ ನಡೆಸಿರುವ ಇಲಾಖೆ, ದೊರೆತಿರುವ ಫಲಿತಾಂಶದಿಂದ ಕಂಗಾಲಾಗಿದೆ. ಅರ್ಹತೆಗೆ ನಿಗದಿಯಾಗಿದ್ದ ಕನಿಷ್ಠ ಅಂಕಗಳನ್ನು ಪಡೆಯಲು ಬಹುತೇಕ ಅಭ್ಯರ್ಥಿಗಳು ವಿಫಲವಾಗಿದ್ದಾರೆ.  ಪರಿಣಾಮ- ಶಿಕ್ಷಕರನ್ನು ಸಬಲೀಕರಣ ಮಾಡುವ ಉದ್ದೇಶದಿಂದ ರೂಪುಗೊಂಡಿರುವ  ಈ ಹುದ್ದೆಗಳಿಗೆ ಸಾಧಾರಣ ಹಾಗೂ ಕಳಪೆ ಸಾಧನೆ ಮಾಡಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮುಂದಾಗಿದೆ. ಇದು ಯೋಜನೆಯ ಮೂಲ ಉದ್ದೇಶವನ್ನೇ ಅಣಕಿಸುತ್ತಿದೆ !


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ