ಮುಡಾ: ಸದ್ಬಳಕೆ ಮಾತಿಲ್ಲ, ದುರ್ಬಳಕೆಯೇ ಎಲ್ಲ ...

ವಿಕ ಸುದ್ದಿಲೋಕ ಮೈಸೂರು
ಜನಪ್ರತಿನಿಧಿಗಳು,ಅಧಿಕಾರಿಗಳು ಹೊಸ ಕಟ್ಟಡ ಕಟ್ಟಿಸಲು,ಒಡೆದು ಕಟ್ಟಲು, ಕಾಮಗಾರಿ ನೆಪದಲ್ಲಿ ಲಕ್ಷಾಂತರ ರೂ.`ಖರ್ಚು'ಮಾಡಲು ತೋರುವಷ್ಟು ಉತ್ಸಾಹ, ಅತ್ಯಾಸಕ್ತಿಯನ್ನು ನಿರ್ವಹಣೆ,ಸದ್ಬಳಕೆಗೆ ವಹಿಸುವುದಿಲ್ಲ ಎನ್ನುವುದು ಅನೇಕ ಬಾರಿ ಸಾಬೀತಾಗಿದೆ. ಇಂಥ  ನಿರ್ಮಾಣಗಳು ಬಳಕೆಗೆ ಮುನ್ನವೇ ಉದುರಿಬಿದ್ದ ಉದಾಹರಣೆಗಳಿಗೂ ಕೊರತೆ ಇಲ್ಲ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಲಕ್ಷಾಂತರ ರೂ.ವೆಚ್ಚದಲ್ಲಿ ನಿರ್ಮಿಸಿದ ಮಿನಿ ತರಕಾರಿ ಮಾರುಕಟ್ಟೆಗಳದ್ದು ಹೆಚ್ಚೂ ಕಡಿಮೆ ಇದೇ ಸ್ಥಿತಿ. ಎರಡು ವರ್ಷದ ಹಿಂದೆ ನಿರ್ಮಿಸಿದ,ಇನ್ನೂ ಬಳಕೆಯ ಭಾಗ್ಯ ಕಾಣದ `ರೈತ ಸಂತೆ ಕಟ್ಟಡ'ವೂ ಭವಿಷ್ಯದಲ್ಲಿ ಹೀಗೇ ಆಗುವ `ಮುನ್ಸೂಚನೆ' ನೀಡಿದೆ.
ತಲೆ ಬೇನೆ: ಉತ್ತಮ ಉದ್ದೇಶವನ್ನಿಟ್ಟುಕೊಂಡು, ಸಾರ್ವಜನಿಕರ  ತೆರಿಗೆ ಹಣವನ್ನು ಹಲವು ಲಕ್ಷಗಳ ಲೆಕ್ಕದಲ್ಲಿ ವೆಚ್ಚಮಾಡಿ ನಿರ್ಮಿಸಿದ ಆವರಣಗಳು  ಸದುಪಯೋಗವಾಗುವುದು ಒತ್ತಟ್ಟಿಗಿರಲಿ,ಅದೇ ತೆರಿಗೆದಾರ  ಜನರಿಗೆ ತಲೆಬೇನೆಯಾಗಿ ಪರಿಣಮಿಸಿರುವುದು ವಿಪರ್ಯಾಸ.
ರಾಮಕೃಷ್ಣನಗರ ಐ ಬ್ಲಾಕ್, ವಿಜಯನಗರ ೨ನೇ ಹಂತ, ಕಲ್ಯಾಣಗಿರಿ ನಗರದ ಡಾ.ರಾಜಕುಮಾರ್ ರಸ್ತೆ, ಗೋಕುಲಂ,ಸಿದ್ಧಾರ್ಥನಗರ  ಮತ್ತಿತರ ಕಡೆ ಮುಡಾ ಐದಾರು ವರ್ಷದ ಹಿಂದೆ ನಿರ್ಮಿಸಿರುವ  ಮಿನಿ ಮಾರುಕಟ್ಟೆಗಳು ಕಳೆ,ಪೊದೆಮಯ.`ಗತಕಾಲ'ದ ಪಳೆಯುಳಿಕೆಗಳಂತೆ ವಿರಾಜಿಸುತ್ತಿರುವ ಈ ಆವರಣಗಳು ಅನೈತಿಕ ಚಟುವಟಿಕೆಗಳ ಆಗರವೂ ಹೌದು.ಅಕ್ಕಪಕ್ಕದ ನಿವಾಸಿಗಳಿಗೆ ಗರಿಷ್ಠ `ಪೀಡನೆ 'ಯ ಬೋನಸ್ ಧಾರಾಳ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ