ಬನ್ನೇರುಘಟ್ಟ ಎಷ್ಟು ಸುರಕ್ಷಿತ !

ಚೀ.ಜ.ರಾಜೀವ ಮೈಸೂರು
ಸುಸಜ್ಜಿತ ಚಿರತೆ ಮನೆ ನಿರ್ಮಿಸುವ ಒಂದೇ ಉದ್ದೇಶದಿಂದ ಮೈಸೂರು ಮೃಗಾಲಯದ ಎಂಟು ಚಿರತೆಗಳನ್ನು ಬನ್ನೇರುಘಟ್ಟ ಉದ್ಯಾನಕ್ಕೆ ಸ್ಥಳಾಂತರಿಸಿರುವುದು ಅಚ್ಚರಿ ಮೂಡಿಸಿದೆ.
ವನ್ಯಜೀವಿ ಪ್ರಿಯರಲ್ಲಿ ಇಂಥದ್ದೊಂದು ಪ್ರಶ್ನೆ  ಮೂಡಿದೆ. ನಾಲ್ಕೈದು ತಿಂಗಳ ಹಿಂದೆಯಷ್ಟೇ  `ಪ್ರಾಣಿಗಳ ಸಾವಿನ ಮನೆ' ಎಂಬುವಷ್ಟರ ಮಟ್ಟಿಗೆ ಸದ್ದು ಮಾಡಿದ್ದ  ಬನ್ನೇರು ಘಟ್ಟಕ್ಕೆ ಹೋಗುವುದು ಸರಿಯಲ್ಲ ಎಂಬುದು ಒಂದು ವಾದವಾದರೆ, ಮೈಸೂರು ಮೃಗಾಲಯ ತಾತ್ಕಾಲಿಕವಾಗಿ ಯಾದರೂ  ಚಿರತೆಗಳ ಆಕರ್ಷಣೆಯಿಂದ ವಂಚಿತವಾಗುವುದು ಸರಿಯೇ ಎಂಬ ಸಂಗತಿಯೂ ಚರ್ಚೆಗೆ ಕಾರಣವಾಗಿದೆ.
ಈ ವರ್ಷವಿಡೀ ಬನ್ನೇರುಘಟ್ಟ ಉದ್ಯಾನದ ವನ್ಯಧಾಮ ಪ್ರಾಣಿಗಳ ಸಾವಿನಿಂದಲೇ ಸುದ್ದಿ ಮಾಡಿತು. ಹನ್ನೊಂದೂವರೆ ತಿಂಗಳಲ್ಲಿ ಅಲ್ಲಿ ಸತ್ತ ಪ್ರಾಣಿಗಳ ಸಂಖ್ಯೆ ೧೬. ಬಹುತೇಕ ಪ್ರಾಣಿಗಳು ಸ್ವಾಭಾವಿಕವಾಗಿ ಮೃತಪಟ್ಟವು ಎಂಬುದು ಅಧಿಕಾರಿಗಳು ಹಾಗೂ ಮಂತ್ರಿಗಳ ವಾದವಾದರೂ, ಉದ್ಯಾನದ ವಾತಾವರಣ ಹಾಗೂ ಅಲ್ಲಿನ ಕಳಪೆ ಮಾಂಸವೇ ಪ್ರಾಣಿಗಳ ಸಾವಿಗೆ ಕಾರಣ ಎಂಬುದು  ತಜ್ಞರ ಅಭಿಪ್ರಾಯ.
ಸೆಪ್ಟೆಂಬರ್‌ನ ಮೊದಲ ವಾರದಲ್ಲಿ  ಮೂರು ಹುಲಿಗಳು, ಎರಡು ಸಿಂಹಗಳು ಸಾವಿಗೀಡಾದವು. ಇಷ್ಟು ಕಡಿಮೆ ದಿನಗಳ ಅಂತರದಲ್ಲಿ ಪ್ರಾಣಿಗಳು ಸಾಯುತ್ತಿರು ವುದು ಸಹಜವಲ್ಲ ಎಂದು ಪ್ರಾಣಿ ಪ್ರಿಯರು ವಾದಿಸಿದ್ದರು.  ಈ ಅಕಾಲಿಕ ಸಾವುಗಳಿಗೆ  ಸಮರ್ಪಕ ಉತ್ತರ ನೀಡಿರಲಿಲ್ಲ.  ಇಂಥ ಬನ್ನೇರುಘಟ್ಟಕ್ಕೆ ನಮ್ಮ ಚಿರತೆಗಳು ಹೋಗುವುದು ಎಷ್ಟರ ಮಟ್ಟಿಗೆ ಸರಿ ?, ಅವುಗಳ ಸುರಕ್ಷತೆಗೆ ಏನು ಗ್ಯಾರಂಟಿ ಎಂಬುದು ಪ್ರಾಣಿ ಪ್ರಿಯರ ಪ್ರಶ್ನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ