ಸಂಬಾರ ರಾಣಿಗೆ ರಾಜನ ಬೆಲೆ

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಸಂಬಾರ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಏಲಕ್ಕಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಇರುವುದು ಮತ್ತು ಕಳೆದ ವರ್ಷಕ್ಕಿಂತ ಹೆಚ್ಚುವರಿ ಇಳುವರಿ ಕೈಸೇರುವ ನಿರೀಕ್ಷೆಯಿಂದ ಕೊಡಗಿನ ಏಲಕ್ಕಿ ಬೆಳೆಗಾರರ ಮೊಗದಲ್ಲಿ ಹರ್ಷದ ಹೊನಲು ಮೂಡಿಸಿದೆ. ಬಂಪರ್ ಬೆಲೆ ಬರುತ್ತಿದ್ದಂತೆ ಕಾಫಿ ನಂಬಿ ಏಲಕ್ಕಿ ತೋಟ ನಾಶ ಮಾಡಿದ್ದೆವಲ್ಲಾ ಎಂದು ಹಲವು ಬೆಳೆಗಾರರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.
ಬಂಪರ್ ಬೆಲೆ: ಏಲಕ್ಕಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಆಗುವ ಗ್ವಾಟೆಮಾಲಾದಲ್ಲಿ ಇಳುವರಿ ತೀರಾ ಕಡಿಮೆಯಾಗಿರುವುದು ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ದೊರೆಯುವಂತೆ ಮಾಡಿದೆ. ಉತ್ತಮ ಇಳುವರಿ ಬಂದಿರುವ ಸಂದರ್ಭದಲ್ಲಿಯೇ ಬಂಪರ್ ಬೆಲೆ ಬಂದಿರುವುದು ಏಲಕ್ಕಿ ಬೆಳೆಗಾರರ ಮೊಗದಲ್ಲಿ ಸಂತಸ ಅರಳಿಸಿದೆ.
ದಾಖಲೆ ಅನ್ನುವ ರೀತಿಯಲ್ಲಿ ನೆಲ್ಯಾಣಿ ತಳಿಗೆ ೧,೮೦೦ ಹಾಗೂ ಮಂಜರಬಾದ್‌ಗೆ ೧,೫೦೦ ರೂ. (೧ ಕೆ.ಜಿ.ಗೆ) ಬಂದಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ನೆಲ್ಯಾಣಿಗೆ ೧,೧೦೦ ರಿಂದ ೧,೨೦೦ ಹಾಗೂ ಮಂಜರಬಾದ್‌ಗೆ ೯೦೦ ರಿಂದ ೧,೦೦೦ ಬೆಲೆ ಇದೆ. ಬೆಲೆ ಏರುಮುಖದಲ್ಲಿ ಸಾಗುತ್ತಿರುವುದು ಬೆಳೆಗಾರರನ್ನು ಹರ್ಷಚಿತ್ತರನ್ನಾಗಿಸಿದೆ. ಹತ್ತು ವರ್ಷಗಳ ಹಿಂದೆ ೧೨೦ ರಿಂದ ೧೫೦ ರೂ. ಇದ್ದದ್ದೇ ಹೆಚ್ಚಿನ ಬೆಲೆಯಾಗಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ