ನೀರು ಪೂರೈಸುವಲ್ಲಿ ಸೋತ ಪಾಲಿಕೆ

ಮೇಯರ್‌ರಿಂದಲೇ ಪ್ರತಿಭಟನೆ ಎಚ್ಚರಿಕೆ
ವಿಕ ಸುದ್ದಿಲೋಕ ಮೈಸೂರು
‘ನಗರದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಕೊಡಲು ವಿಫಲರಾಗಿದ್ದೇವೆ. ಜನರಿಗೆ ಉತ್ತರಿಸಲು ಆಗುತ್ತಿಲ್ಲ’
-ಹೀಗೆಂದು ಅಸಹಾಯಕತೆ ತೋಡಿಕೊಂಡವರು ನಗರದ ಪ್ರಥಮ ಪ್ರಜೆ ಮೇಯರ್ ಪುರುಷೋತ್ತಮ್.
‘೪-೫ ದಿನಗಳಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಕ್ರಮವಹಿಸದಿದ್ದರೆ ಮೇಯರ್ ಸ್ಥಾನವನ್ನು ಬದಿಗಿರಿಸಿ ಸಾಮಾನ್ಯನಂತೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎನ್ನುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ಎದುರು  ಪ್ರಕಟಿಸಿದರು. ಅವರ ಈ ಮಾತುಗಳು ನೀರಿನ ಬವಣೆಗೆ ಹಿಡಿದ ಕನ್ನಡಿ.
ಮೈಸೂರಿನ ಕಳಕಳಿಯುಳ್ಳ ಪ್ರಜ್ಞಾವಂತ ನಾಗರಿಕರ ವೇದಿಕೆ (ಎಸಿ ಐಸಿಎಂ) ಜಿಲ್ಲಾಡಳಿತ, ಜಸ್ಕೋ, ಇನ್ಸ್‌ಟಿಟ್ಯೂಷನ್ ಆಫ್ ಎಂಜಿನಿಯರ‍್ಸ್ ಸಹ ಭಾಗಿತ್ವದಲ್ಲಿ ಸೋಮವಾರ ವಾಣಿವಿಲಾಸ ನೀರು ಸರಬರಾಜು ಕೇಂದ್ರದಲ್ಲಿ ‘ಆರೋಗ್ಯಕರವಾದ ಪ್ರಪಂಚಕ್ಕೆ ಪರಿಶುದ್ಧ ವಾದ ನೀರು’ ಘೋಷಣೆಯಡಿ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಿತ್ಯ ಯಾವುದಾದರೂ ಮೂಲೆಯಲ್ಲಿ ನೀರಿಗಾಗಿ ಖಾಲಿ ಕೊಡಗಳ ಪ್ರದರ್ಶನ, ಪ್ರತಿಭಟನೆ, ಗಲಾಟೆ  ನಡೆದಿದೆ. ದಿನದಲ್ಲಿ ಕನಿಷ್ಠ ೨-೩ ಗಂಟೆ ನೀರು ಪೂರೈಸಲು ಆಗುತ್ತಿಲ್ಲ ಎಂದರು.
ನೂರು ವರ್ಷಗಳ ದೂರದೃಷ್ಟಿ ಯೊಂದಿಗೆ ಕೆಆರ್‌ಎಸ್ ಅಣೆಕಟ್ಟೆಯನ್ನು ಕೇವಲ ೯೦ ಲಕ್ಷ ರೂ. ಗಳಲ್ಲಿ ನಿರ್ಮಿಸಲಾಗಿತ್ತು. ಆದರೆ ಇವತ್ತು ನರ್ಮ್ ಅಡಿಯಲ್ಲಿ ೬೦೦ ಕೋಟಿ ರೂ. ವ್ಯಯಿಸಿದರೂ ನೀರು ಪೂರೈಕೆ  ಸಾಧ್ಯವಾಗುತ್ತಿಲ್ಲ. ಜಸ್ಕೋ ಕಂಪನಿಗೆ ನೀರು ನಿರ್ವಹಣೆ ಜವಾಬ್ದಾರಿ ನೀಲಾಗಿದೆ. ಪ್ರತಿ ತಿಂಗಳು ೯೦ ಲಕ್ಷ ರೂ.ಗಳನ್ನು ನಿರ್ವಹಣೆಗೆ ನೀಡಿದರೂ ಪ್ರಯೋಜನ ವಿಲ್ಲ. ಜಸ್ಕೋ ಮತ್ತು ವಾಣಿವಿಲಾಸ ನೀರು ಸರಬರಾಜು ಸಿಬ್ಬಂದಿ ನಡುವೆ ಹೊಂದಾಣಿಕೆಯಿಲ್ಲ ಎಂದು ಬೇಸರಿಸಿದರು.
ನಗರಕ್ಕೆ ದಿನಕ್ಕೆ ೧೮೦ ಎಂಎಲ್‌ಡಿ ನೀರು ಸಾಕು. ಒಂದೇ ರೀತಿಯ ನೀರು ಪೂರೈಕೆ ವ್ಯವಸ್ಥೆ ಇದ್ದರೂ ೧೫-೨೦ ವಾರ್ಡ್‌ಗಳಿಗೆ ೫-೬ ಗಂಟೆ ನೀರು ಲಭ್ಯ. ಕೆಲವೆಡೆ ೨೪ ಗಂಟೆಯೂ ಸಿಗುತ್ತದೆ. ಉಳಿದೆಡೆ ತತ್ವಾರ. ನೀರಿನ ಲಭ್ಯತೆ ಇದ್ದರೂ ಪೂರೈಸಲು ಇರುವ ಅಡ್ಡಿಯಾದರೂ ಏನು ? ಕಾರಣ ರಾರು? ಮಾಹಿತಿ ಕೇಳಿದರೆ ಯಾರಿಂದಲೂ ಸಮರ್ಪಕ ಉತ್ತರ ಸಿಗುತ್ತಿಲ್ಲ.
ಸಂಸದರಾದ ಎಚ್.ವಿಶ್ವನಾಥ್, ಆರ್. ಧ್ರುವ ನಾರಾಯಣ್ ಕಚೇರಿಗೆ ಒಂದು ವಾರದಿಂದ ನೀರಿಲ್ಲ. ವಿದ್ಯುತ್ ಸಮಸ್ಯೆಯಿರುವುದ ರಿಂದ ಜನ ರೇಟರ್ ಖರೀದಿಗೆ ಸೂಚಿಸಿದರೂ ಆಗಿಲ್ಲ. ೪೦-೫೦ ನೀರಿನ ಲಾರಿಗಳು ಬೇಕಾದರೂ ಅಷ್ಟಿಲ್ಲ. ಜಿಲ್ಲಾಧಿಕಾರಿ, ಆಯುಕ್ತರೊಡನೆ ಸಭೆ ನಡೆಸಿ ಸಮಸ್ಯೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದರು.
ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ಮಾತನಾಡಿ, ನೀರು ಪೂರೈಕೆ ಜಾಲದ ಸಮಸ್ಯೆ ಮತ್ತು ಸಿಬ್ಬಂದಿ ಸಮಸ್ಯೆ ಕಾರಣವಾಗಿ ನೀರು  ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ೨೪೭ ಮಾಡಿದರೂ ಸಮಸ್ಯೆಯಿದೆ. ಜಸ್ಕೋ ಮತ್ತು ವಾಣಿ ವಿಲಾಸ ಸಿಬ್ಬಂದಿ ಒಂದೇ ಎನ್ನುವ ಮನೋಭಾವ ಬರಬೇಕು. ನಿಯತ್ತಿನಿಂದ ನೌಕರರು ಕೆಲಸ ಮಾಡಿದರೆ ಸಮಸ್ಯೆ ಕಡಿಮೆ ಮಾಡಬಹುದು ಎಂದರು.
ಜಿಲ್ಲಾಧಿಕಾರಿ ಪಿ.ಮಣಿವಣ್ಣನ್ ಮಾತನಾಡಿ, ಪಾಲಿಕೆ ಸದಸ್ಯ ಅಥವಾ ಇನ್ಯಾರೇ ಆದರೂ ನೀರು ಸರಬರಾಜು ಸಿಬ್ಬಂದಿ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕೇಸು ದಾಖಲಿಸಲಾಗುವುದು. ನೀರಿನ ಸಮಸ್ಯೆಯನ್ನು ಚರ್ಚೆ ಮೂಲಕ ಬಗೆಹರಿಸಿಕೊಳ್ಳಬೇಕು. ಸಿಬ್ಬಂದಿಗೆ ಸೂಕ್ತ ರಕ್ಷಣೆಗೆ ಮುಂದಿನ ವಾರ ಪೊಲೀಸ್ ಆಯುಕ್ತರೊಂದಿಗೆ  ಸಭೆ ನಡೆಸಿ ಚರ್ಚಿಸುವೆ ಎಂದರು.
ಕಾರ್ಯಕ್ರಮದಲ್ಲಿ ವಾಣಿ ವಿಲಾಸ ನೀರು ಪೂರೈಕೆ ಕೇಂದ್ರದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ, ನರ್ಮ್ ಅಧೀಕ್ಷಕ ಎಂಜಿನಿಯರ್ ಸುರೇಶ್‌ಬಾಬು, ಜಸ್ಕೋ ಅಧಿಕಾರಿ ಪುರೋಹಿತ್, ಎಂಜಿನಿಯರ್ ಸುಬ್ಬೇಗೌಡ, ಸುಬ್ರಹ್ಮಣ್ಯ, ಎ.ಎನ್.ಸತೀಶ್ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ