ಸರಕಾರಿ ಆಸ್ಪತ್ರೆಗೆ ಬಂದಿದೆ ದತ್ತು ಯೋಜನೆ

ಕುಂದೂರು ಉಮೇಶಭಟ್ಟ ಮೈಸೂರು
ಗಾಲಯದಲ್ಲಿ ಪ್ರಾಣಿ ದತ್ತು ನಿಮಗೆ ಗೊತ್ತು, ಈಗ ಸರಕಾರಿ ಆಸ್ಪ್ರತ್ರೆಯಲ್ಲಿ ಹಾಸಿಗೆಯನ್ನು ದತ್ತು ತೆಗೆಯುವ ವಿಶಿಷ್ಟ ಯೋಜನೆ ಮೈಸೂರಿನಲ್ಲಿ ಆರಂಭಗೊಳ್ಳುತ್ತಿದೆ.
೫೦೦ ರೂ. ನೀಡಿ ಒಂದು ತಿಂಗಳಿಗೆ ಬೆಡ್(ಹಾಸಿಗೆ) ಒಂದನ್ನು ದತ್ತು ತೆಗೆದುಕೊಳ್ಳಿ, ಆಸ್ಪತ್ರೆ ಅಭಿವೃದ್ಧಿಗೆ ನೆರವಾಗಿ... ಎನ್ನುವ ಮನವಿಯೊಂದಿಗೆ ಶತಮಾನದ ಇತಿಹಾಸವಿರುವ ಮೈಸೂರಿನ ಚಲುವಾಂಬ ಸರಕಾರಿ ಆಸ್ಪತ್ರೆ ದತ್ತು ಯೋಜನೆಗೆ ಚಾಲನೆ ನೀಡಲಿದೆ.
ಇದು ಮಹಿಳೆ ಹಾಗೂ ಮಕ್ಕಳಿಗೆಂದೇ ಮಹಾರಾಜರು ರೂಪಿಸಿದ್ದ ಮಹಾ ಆಸ್ಪತ್ರೆ. ಸರಕಾರ ಸಾಕಷ್ಟು ಅನುದಾನ ನೀಡಿದರೂ ಈ ಆಸ್ಪತ್ರೆಯನ್ನು ಕಾಡುತ್ತಿರುವುದು ಆರ್ಥಿಕ ಸಂಪನ್ಮೂಲದ ಕೊರತೆ.  ಹಣದ ಕೊರತೆಯ ನೆಪವನ್ನಾಗಿಟ್ಟುಕೊಂಡು ಆಸ್ಪತ್ರೆಗೆ ಬರುವವರಿಗೆ ಸೇವೆ ನೀಡುವುದರಲ್ಲಿ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದಲೇ ಆರಂಭವಾಗುತ್ತಿದೆ ದತ್ತು ಯೋಜನೆ. ಯೋಜನೆ ರೂಪಿಸಿದವರು ಮೈಸೂರು ಜಿಲ್ಲಾಧಿಕಾರಿ ಮಣಿವಣ್ಣನ್. ಎಲ್ಲವೂ ಅಂದುಕೊಂಡಂತೆ ಆದರೆ ಏಪ್ರಿಲ್ ಮೊದಲ ವಾರದಲ್ಲಿ ಒಂದು ಹಾಸಿಗೆ ದತ್ತು ತೆಗೆದುಕೊಳ್ಳಿ ಎನ್ನುವ ಯೋಜನೆ ಆರಂಭಗೊಳ್ಳಲಿದೆ.
ಹಣದ್ದೇ ಕೊರತೆ: ಆಸ್ಪತ್ರೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಆಸ್ಪತ್ರೆಗೆ ಪ್ರತಿ ವರ್ಷ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುವ  ಮಹಿಳೆಯರು ೮೦ ಸಾವಿರ, ಮಕ್ಕಳ ಸಂಖ್ಯೆ ೪೦ ಸಾವಿರ, ಒಳರೋಗಿಯಾಗಿ ದಾಖಲಾಗುವ ಮಹಿಳೆಯರ ಪ್ರಮಾಣ ೧೮ ಸಾವಿರ,  ಮಕ್ಕಳ ಸಂಖ್ಯೆ ೭ ಸಾವಿರ. ಇದರಲ್ಲಿ ಹೆರಿಗೆ ಪ್ರಮಾಣ ೧೦ ಸಾವಿರಕ್ಕೂ ಹೆಚ್ಚು, ಶಸ್ತ್ರಚಿಕಿತ್ಸೆ ಪ್ರಮಾಣ ೫ ಸಾವಿರದಷ್ಟು. ಇಲ್ಲಿರುವ ಹಾಸಿಗೆ ಗಳ ಸಂಖ್ಯೆ ೪೦೦. ನಿತ್ಯ ಇಲ್ಲಿಗೆ ಹೆರಿಗೆ ಇಲ್ಲವೇ ಚಿಕಿತ್ಸೆಗೆಂದು ಬರುವವರಿಗೆ ಬಾಗಿಲು ಬಂದ್ ಆಗುವುದೇ ಇಲ್ಲ. ಬಿಪಿಎಲ್ ಕಾರ್ಡ್‌ದಾರರಿಗೆ ಚಿಕಿತ್ಸೆ, ಔಷಧ ಎಲ್ಲಾ ಉಚಿತ. ಅದೇ ಬಿಪಿಎಲ್ ಕಾರ್ಡ್‌ದಾರರಿಗೆ ಒಂದು ಹೆರಿಗೆಗೆ ೩೦೦ ರೂ, ಸಿಜೆರಿಯನ್ ಆದರೆ ೧೦೦೦ ರೂ. ಶುಲ್ಕ ವಿಧಿಸಲಾಗುತ್ತದೆ. ಈ ಕಾರ್ಡ್ ಇಲ್ಲ ದಿರುವವರಿಗೂ ಚಿಕಿತ್ಸೆ ಇದೇ ದರದಲ್ಲಿ ಲಭ್ಯ. ಇತ್ತೀಚಿಗೆ ಆಸ್ಪತ್ರೆ ಯನ್ನು ಸರಕಾರವೇ ಸ್ವಾಯತ್ತ ಸಂಸ್ಥೆಯಾಗಿ ರೂಪಿಸಿದೆ. ಇದರಿಂದ ಸಂಬಳ ಹೊರತುಪಡಿಸಿ ಹೆಚ್ಚಿನ ಅನುದಾನವೇನೂ ಆಸ್ಪತ್ರೆಗೆ ಸಿಗುತ್ತಿಲ್ಲ. ಇದಕ್ಕಾಗಿಯೇ ರೂಪುಗೊಂಡಿದೆ ದತ್ತು ಯೋಜನೆ. ಇದರಿಂದ ಬರುವ ಆದಾಯವನ್ನು ಆಸ್ಪತ್ರೆಯ ಸೌಲಭ್ಯಗಳ ಸುಧಾರಣೆ ಮತ್ತಿತರ ಕಾರ‍್ಯಗಳಿಗೆ ಬಳಸಲಾಗುವುದು.
ರಾಜ್ಯದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರು ಈಗಲೂ ಅವಲಂಬಿಸಿರುವುದು ಸರಕಾರಿ ಆಸ್ಪತ್ರೆಗಳನ್ನೇ. ಅಲ್ಲಿಯೇ ಉತ್ತಮ ಸೌಲಭ್ಯ ಸಿಗುತ್ತದೆ ಎನ್ನುವ ಭಾವನೆಯೂ ಮನೆ ಮಾಡಿದೆ. ಮೈಸೂರಿನಲ್ಲಿ ಆರಂಭವಾಗುತ್ತಿರುವ ದತ್ತು ಯೋಜನೆ ರಾಜ್ಯಕ್ಕೆ ಮಾದರಿಯಾಗಲಿದೆ.
ಶತಮಾನದ ಆಸ್ಪತ್ರೆ: ಲಕ್ಷಾಂತರ ಮಹಿಳೆಯರು ಹಾಗೂ ಮಕ್ಕಳ ಆಶಾಕಿರಣವೆನಿಸಿರುವ ಈ ಆಸ್ಪತ್ರೆ ಇತಿಹಾಸ ಬರೋಬ್ಬರಿ ೧೩೦ ವರ್ಷ. ೧೮೮೦ರಲ್ಲಿ ವಾಣಿವಿಲಾಸ ಆಸ್ಪತ್ರೆಯಾಗಿ ೨೪ ಹಾಸಿಗೆಯೊಂದಿಗೆ ಆರಂಭ. ಅಲ್ಲಿಂದ ಈಗಿರುವ ಸ್ಥಳದಲ್ಲಿ ೧೯೩೯ರಲ್ಲಿ ವಿಶಾಲ ಕಟ್ಟಡಕ್ಕೆ ಸ್ಥಳಾಂತರ. ಅದಕ್ಕೆ ನೀಡಿದ ಹೆಸರು ಚೆಲುವಾಂಬ. ೧೯೫೪ರಲ್ಲಿ ಮಕ್ಕಳ ಪ್ರತ್ಯೇಕ ಆಸ್ಪತ್ರೆ ಪಕ್ಕದಲ್ಲೇ ಆರಂಭ. ಸದ್ಯ ಮಹಿಳೆಯರು ಹಾಗೂ ಮಕ್ಕಳ ಆಸ್ಪತ್ರೆಗಳು ಚಲುವಾಂಬ ಆಸ್ಪತ್ರೆಯಡಿ ಕಾರ‍್ಯನಿರ್ವಹಿಸುತ್ತಿವೆ. ಆಸ್ಪತ್ರೆ ಆರಂಭವಾದಾಗ ಇದ್ದ ಮೈಸೂರು ನಗರ ಜನಸಂಖ್ಯೆ ೬೯ಸಾವಿರ. ಈಗ ೧೨ ಲಕ್ಷ ತಲುಪಿದೆ. ಇಲ್ಲಿನ ಆಸ್ಪತ್ರೆಯ ಅಚ್ಚುಕಟ್ಟಾದ ಸೇವೆಯ ಫಲ ಮೈಸೂರು ಮಾತ್ರವಲ್ಲದೇ  ಪಕ್ಕದ ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಯವರಿಗೂ ವಿಸ್ತರಣೆ ಗೊಂಡಿತು. ಇದರಿಂದ ೩೦ ಲಕ್ಷಕ್ಕೂ ಹೆಚ್ಚು ಜನರಿಗೆ ಈಗಲೂ ಇದೇ ಪ್ರಮುಖ ಹೆರಿಗೆ ಆಸ್ಪತ್ರೆ.
ನೀವು ದತ್ತು ಪಡೆಯಬೇಕೇ,  ಕರೆ ಮಾಡಿ -  ೯೪೪೮೦೫೭೦೦೭ (ಡಾ.ಕೃಷ್ಣಮೂರ್ತಿ).

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ