ಎಲ್ಲೆಲ್ಲೂ ಬೆಂಕಿ

ನೂರಾರು ಎಕರೆ ಕುರುಚಲು ಕಾಡು ಬೆಂಕಿಗೆ ಆಹುತಿ
ವಿಕ ಸುದ್ದಿಲೋಕ ಯಳಂದೂರು

ಬಿಳಿಗಿರಿರಂಗನಬೆಟ್ಟದ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು ವ್ಯಾಪಿಸಿದ್ದು, ನೂರಾರು ಎಕರೆ ಕುರುಚಲು  ಕಾಡು ಬೆಂಕಿಗೆ ಆಹುತಿಯಾ ಗಿದೆ.
ಬಿಆರ್‌ಟಿ ವನ್ಯಧಾಮದ ಕೃಷ್ಣಯ್ಯನಕಟ್ಟೆ ಹಾಗೂ ಸಾಲುಬೆಟ್ಟ, ಜೇನುಗುಡ್ಡ  ಪ್ರದೇಶ ದಲ್ಲಿ ಏಕ ಕಾಲದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಒಂದೇ ವೇಳೆ ಮೂರು ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವುದರಿಂದ ಇದು ಕಿಡಿಗೇಡಿ ಕೃತ್ಯವೆಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಕಾಳ್ಗಿಚ್ಚು ಸ್ವಾಭಾವಿಕವಾಗಿದ್ದರೆ ಒಂದೇ ಪ್ರದೇಶದಿಂದ ಹರಡುತ್ತಿತ್ತು. ಆದರೆ  ಈಗ ಮೂರು ಕಡೆಗಳಿಂದ ಬೆಂಕಿ ವ್ಯಾಪಿಸಿಕೊಂಡು ಬರುತ್ತಿದೆ. ಹೀಗಾಗಿ ಇದು ಕಿಡಿಗೇಡಿಗಳ ಕೃತ್ಯ. ಬೆಂಕಿ ಕಾಣಿಸಿಕೊಂಡ ತಕ್ಷಣ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಿಆರ್‌ಟಿ ವನ್ಯಧಾಮದ ಎಲ್ಲ ಸಿಬ್ಬಂದಿಯನ್ನು ಕರೆಸಿಕೊಂಡು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುಮಾರು ೨೦೦ಕ್ಕೂ ಹೆಚ್ಚು  ಮಂದಿಯನ್ನು ಬೆಂಕಿ ನಂದಿಸುವ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ.
ಕುರುಚಲು ಕಾಡು ಮಾತ್ರ: ಬೆಂಕಿ ಭಾರಿ ಗಾತ್ರದ ಮರಗಳಿಗೆ ವ್ಯಾಪಿಸಿಲ್ಲ. ಒಣಗಿರುವ ಹುಲ್ಲು, ಲಾಂಟೆನಾ ಸೇರಿದಂತೆ ಕುರುಚಲು ಗಿಡಗಳು ಮಾತ್ರ ಹೊತ್ತಿ ಉರಿಯುತ್ತಿವೆ. ಮರಗಳು ಇನ್ನೂ ಹಸಿರಿರುವ ಕಾರಣ ಬೆಂಕಿ ಮೇಲ್ಭಾಗಕ್ಕೆ ವ್ಯಾಪಿಸಿಲ್ಲ. ಒಟ್ಟಾರೆ ನೂರಾರು ಎಕರೆ  ಅರಣ್ಯ ಪ್ರದೇಶದಲ್ಲಿ ಬೆಂಕಿ ಹರಡಿ ಕೊಂಡಿದೆ. ಸಿಬ್ಬಂದಿ ನಿರಂತರವಾಗಿ ಹಸಿ ಸೊಪ್ಪಿನಿಂದ ಬೆಂಕಿಯನ್ನು ಬಡಿದು ನಂದಿಸುವ ಕಾರ್ಯದಲ್ಲಿ ನಿರತರಾಗಿರುವ ಕಾರಣ ಕ್ರಮೇಣ ಹತೋಟಿಗೆ ಬರುತ್ತಿದೆ.
ಅಪರೂಪದ ಸಂಕುಲ: ಬಿಆರ್‌ಟಿ ವನ್ಯಧಾಮ ದಲ್ಲಿ ಅಪರೂಪದ ಸಸ್ಯ ಹಾಗೂ ಪ್ರಾಣಿ ಸಂಕುಲವಿದೆ. ಔಷಧ ಗುಣದ ಸಸ್ಯಗಳಿವೆ. ಅದೃಷ್ಟವಶಾತ್ ಬೆಂಕಿ ಪ್ರಾಣಿಗಳು ಹಾಗೂ ಅಪರೂಪದ ಸಸ್ಯ ಸಂಕುಲ ಇರುವ ಕಡೆಗೆ  ವ್ಯಾಪಿಸಿಲ್ಲ. ಅಲ್ಲಿಗೆ ಹರಡುವುದನ್ನು ತಡೆಯಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿಶ್ವಜಿತ್ ಮಿಶ್ರಾ, ಕೆ. ಗುಡಿ ಆರ್‌ಎಫ್‌ಒ ಶಶಿಧರ್ ಸೇರಿದಂತೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ತಾವು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಹಾಲ್ತಿ ಬೆಟ್ಟದಲ್ಲೂ ಮರಗಳು ಭಸ್ಮ
ಸಿ.ಎನ್. ಮಂಜುನಾಥ್ ನಾಗಮಂಗಲ
ಬೇಸಿಗೆಯಲ್ಲಿ ಕಾಳ್ಗಿಚ್ಚು ಹರಡುವುದನ್ನು ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲಗೊಂಡ ಪರಿಣಾಮ ತಾಲೂಕು ವ್ಯಾಪ್ತಿಯ ಬಹುತೇಕ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗುತ್ತಿದೆ. ಬೆಲೆ ಬಾಳುವ ಮರಗಳು, ಅಪರೂಪದ, ಔಷಧೀಯ ಗುಣವುಳ್ಳ ಸಸ್ಯಗಳು ಹಾಗೂ ಪ್ರಾಣಿ ಪಕ್ಷಿಗಳು ಸಿಲುಕಿ ದಹನವಾಗುತ್ತಿವೆ.
ಹಾಲ್ತಿ ಬೆಟ್ಟದ ಅರಣ್ಯ ಪ್ರದೇಶ, ಎಚ್.ಎನ್. ಕಾವಲ್, ನಾಗನಕೆರೆ, ಬಸವನಕಲ್ಲು ಅರಣ್ಯ ಸೇರಿದಂತೆ ನಾನಾ ಕಡೆ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಈ ಬಾರಿ ಬೆಂಕಿ ಕಾಣಿಸಿ ಕೊಂಡಿದೆ. ಕುರುಚಲು ಗಿಡಗಳು ಹಾಗೂ ಪೊದೆಗಳು ಸಂಪೂರ್ಣ ಸುಟ್ಟು ಹೋಗಿವೆ. ನೀಲಗಿರಿ, ಹರ್ಕ್ಯೂಲೆಸ್ ಮರಗಳು ಬಹುತೇಕ ಸುಟ್ಟು ಹೋಗಿವೆ. ಕಾಳ್ಗಿಚ್ಚು ಹರಡು ವುದನ್ನು ತಡೆಗಟ್ಟವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಈ ಅವಘಡಕ್ಕೆ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ. ಒಂದೆಡೆ ಕಾಡುಗಳ್ಳರ ಹಾವಳಿ, ಮತ್ತೊಂದೆಡೆ ಬೆಂಕಿಯಿಂದ ನಾಶವಾಗುತ್ತಿರುವ ಕಾಡಿನಿಂದಾಗಿ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಜತೆಗೆ, ಅರಣ್ಯ ಇಲಾಖೆಗೆ ಲಕ್ಷಾಂತರ ರೂ. ನಷ್ಟ ವಾಗುತ್ತಿದೆ.
ಬೆಂಕಿಗೆ ಕಾರಣವೇನು: ಅರಣ್ಯ ಪ್ರದೇಶದ ಬಹುತೇಕ ಭಾಗ ಅಂಚಿಹುಲ್ಲು ಹಾಗೂ ಕುರುಚಲು ಗಿಡಗಳಿಂದ ಆವೃತವಾಗಿದೆ. ಇದಕ್ಕೆ ಸಣ್ಣ ಬೆಂಕಿ ಕಿಡಿ ತಗುಲಿದರೂ ಬಹುಬೇಗ ಬೆಂಕಿಗೆ ಜ್ವಾಲೆಗಳು ವ್ಯಾಪಿಸು ತ್ತವೆ. ಆ ಪರಿಸ್ಥಿತಿಯಲ್ಲಿ ಬೆಂಕಿ ಆರಿಸುವುದು ತುಂಬಾ ಕಷ್ಟ. ಇದನ್ನು ಅರಣ್ಯ ಇಲಾಖೆ ಸಿಬ್ಬಂದಿಯೇ ಒಪ್ಪಿಕೊಳ್ಳುತ್ತಾರೆ.ಅಂಚಿಹುಲ್ಲು ಹಾಗೂ ಕುರುಚಲು ಗಿಡಗಳಿಂದ ಕೂಡಿರುವ ತಾಲೂಕಿನ ಅರಣ್ಯದಲ್ಲಿ ಬೇಸಿಗೆ ವೇಳೆ ನೈಸರ್ಗಿಕವಾಗಿ ಬೆಂಕಿ ಹೊತ್ತಿಕೊಳ್ಳುವುದು ಸ್ವಲ್ಪ ಕಡಿಮೆ. ಆದರೆ, ಕಾಡಿನಲ್ಲಿ ಅಡ್ಡಾಡುವ ವರು, ದನಗಾಹಿಗಳು ಬೀಡಿ, ಸಿಗರೇಟ್ ಸೇದಿ ಎಸೆಯುವ ಬೆಂಕಿ ಕಿಡಿ ಅನಾಹುತಕ್ಕೆ ಕಾರಣವಾಗುತ್ತದೆ. ಕೆಲವು ಕಿಡಿಗೇಡಿಗಳು ಬೇಕೆಂದೇ ಬೆಂಕಿ ಹಚ್ಚುತ್ತಾರೆ.
ತಡೆ ಹೇಗೆ: ಬೇಸಿಗೆಯಲ್ಲಿ ಅರಣ್ಯ ಪ್ರದೇಶಕ್ಕೆ ಜಾನುವಾರುಗಳನ್ನು ಮೇಯಿಸಲು ಹೋಗುವ ದನಗಾಹಿಗಳಿಗೆ ತಡೆಯೊಡ್ಡ ಬೇಕು.ಬೆಂಕಿ ಕಂಡ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಬೇಕು. ಅರಣ್ಯ ವ್ಯಾಪ್ತಿಯ ಹಳ್ಳ-ಕೊಳ್ಳಗಳಿಗೆ ನೀರು ಪೂರಣೆ ಮತ್ತು ಸಂಗ್ರಹ ವ್ಯವಸ್ಥೆ ಮಾಡಬೇಕು. ಇದರಿಂದ ಬೆಂಕಿ ಬಿದ್ದಾಗ ಆ ನೀರನ್ನು ಬಳಸಿಕೊಳ್ಳಬಹುದು.

ಛಬ್ಬಿ ಗುಡ್ಡದಲ್ಲೂ ಅಗ್ನಿ
ವಿಕ ಸುದ್ದಿಲೋಕ ಶಿರಹಟ್ಟಿ
ತಾಲೂಕಿನ ಅರಣ್ಯ ವ್ಯಾಪ್ತಿ ಛಬ್ಬಿ ಮತ್ತು ಕುಂದ್ರಳ್ಳಿ ಗ್ರಾಮಗಳ ಬಳಿಯ ಗುಡ್ಡದಲ್ಲಿ ಸೋಮವಾರ ಬೆಳಗ್ಗೆ ಹತ್ತಿದ ಬೆಂಕಿ ಪಕ್ಕದ ಗುಡ್ಡಕ್ಕೂ ಪಸರಿಸಿ ಕೆನ್ನಾಲಿಗೆ ಚಾಚಿದ್ದರಿಂದ ಛಬ್ಬಿ ಗ್ರಾಮಸ್ಥರಿಗೆ ಆಘಾತ ತಂದೊಡ್ಡಿದೆ.
ಸಸ್ಯಕಾಶಿ ಮತ್ತು ಖನಿಜ ಸಂಪತ್ತಿನ ಆಗರವಾಗಿ ರುವ ಕಪ್ಪತ್ತಗುಡ್ಡ ಪಕ್ಕದ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಮತ್ತು ನಾರಾಯಣಪುರ ಅಲ್ಲದೇ ಶಿರಹಟ್ಟಿ ತಾಲೂಕಿನ ಛಬ್ಬಿ, ಕುಂದ್ರಳ್ಳಿ ಮತ್ತು ಶೆಟ್ಟಿಕೇರಿ ಅರಣ್ಯ ವ್ಯಾಪ್ತಿಯ ಗುಡ್ಡಕ್ಕೆ ಪ್ರತಿ ವರ್ಷ ಬೇಸಿಗೆಯ ದಿನಗಳಲ್ಲಿ ಬೆಂಕಿ ಹಚ್ಚುವುದರಿಂದ ನೂರಾರು ಹೆಕ್ಟೇರ್ ಪ್ರದೇಶದ ಅರಣ್ಯ ಸಂಪತ್ತು ಸುಟ್ಟು ಕರಕಲಾಗುತ್ತಿದೆ. ಬೆಂಕಿ ಇನ್ನೂ ಧಗಧಗಿಸು ತ್ತಿರುವುದರಿಂದ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಗುಡ್ಡವೀಗ ಕರಿ ಮಣ್ಣಿನ ಗುಂಪೆಯಂತೆ ಕಾಣುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದು ಏನಾದರೂ ಕ್ರಮ ಕೈಗೊಂಡಿ ದ್ದರೆ ಅರಣ್ಯ ಸಂಪತ್ತು ರಕ್ಷಿಸಬಹುದಾಗಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ