ಬಜೆಟ್:ಘೋಷಣೆಯ ‘ಗಾಳಿಪಟ’


‘ಫಲ’ನೀಡದ ಕೊಡುಗೆಗಳು
ಪಿ.ಓಂಕಾರ್
ಕಳೆದ ರಾಜ್ಯ ಬಜೆಟ್ ಸಂದರ್ಭ ಶೋಭಾ ಕರಂದ್ಲಾಜೆ  ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಆಯವ್ಯಯದಲ್ಲಿ ಮೈಸೂರು ‘ಶೋಭಿಸಿದ್ದು’ ಕಡಿಮೆ. ದೇಗುಲ, ಆಸ್ಪತ್ರೆ,ಕೆರೆ,ಕಲೆಯ ಅಭಿವೃದ್ಧಿ ಬಾಬ್ತಿನಲ್ಲಿ ಒಂದಷ್ಟು ಕೋಟಿಗಳ ‘ಅನಿರೀಕ್ಷಿತ ’ಕೊಡುಗೆ ಪ್ರಾಪ್ತವಾಗಿದ್ದಷ್ಟೇ ಸಮಾಧಾನ.ಈಗ ಮತ್ತೊಂದು ಬಜೆಟ್‌ಗೆ ಎದುರಿಗಿದೆ. ಹಿಂದಿನ ಘೋಷಣೆ-ಭರವಸೆಗಳು ಫಲ ಕೊಟ್ಟಿವೆಯಾ ಎಂದು ‘ಹಿನ್ನೋಟ’ಬೀರಿದರೆ  ಬೇಸರವೇ ಉತ್ತರ.
ಕುಕ್ಕರಹಳ್ಳಿ ಕೆರೆ: ೨೦೦೮ರ ಬಜೆಟ್‌ನಲ್ಲಿ ನೀಡಿದ್ದ ೧ಕೋಟಿ ಖರ್ಚಾಗದಿದ್ದರೂ ಕಳೆದ ಬಜೆಟ್‌ನಲ್ಲಿ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆ ಇನ್ನೆರಡು ಕೋಟಿ ರೂ.ಘೋಷಣೆ. ಅದಾಗಿ ವರ್ಷ ಕಳೆದರೂ ಕೆರೆ ಆವರಣದಲ್ಲಿ ‘ಗಬ್ಬು ನಾತ ’ಕಡಿಮೆಯಾಗಿಲ್ಲ.ಬೇಲಿ-ಬೀಗ ಹಾಕಿ,ಸಾರ್ವಜನಿಕ  ಪ್ರವೇಶವನ್ನು ಬೆಳಗ್ಗೆ,ಸಂಜೆಗೆ ನಿರ್ಬಂಧಿಸಿದ್ದಷ್ಟೇ ಮೈಸೂರು ವಿವಿ ಕೈಗೊಂಡ ‘ಸುಧಾರಣೆ ’.ಯೋಜನೆ ರೂಪಿಸಲಾಗಿದೆ,ಹಣ ಬಂದಿದೆ ಎಂದು ‘ಕತೆ ’ ಹೇಳಿದರೂ ಕಾರ‍್ಯಪ್ರಗತಿ ದಾಖಲಾಗಿಲ್ಲ.
ರಂಗಾಯಣ: ಕರ್ನಾಟಕ ನಾಟಕ ರಂಗಾಯಣದ ಅಭಿವೃದ್ಧಿಗೆ ನೀಡಿದ್ದ ೧ಕೋಟಿ ರೂ.ಗೂ ‘ಸದ್ಗತಿ’ ಸಿಕ್ಕಿಲ್ಲ.ಮೊದಲು ‘ನಿರ್ದೇಶಕರಿಲ್ಲ’ದ ಕೊರಗು.‘ಹೆಚ್ಚು ದಿನ ತಾಳಿಕೊಳ್ಳಲಿಲ್ಲ’ ಎಂಬುದು ಈಗಿನ ಬೇಸರ. ವಿವಿಧ ಅಭಿವೃದ್ಧ ಕೆಲಸ ಕೈಗೊತ್ತಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರೂ ಚಾಲನೆ ಸಿಕ್ಕಿಲ್ಲ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಮಹಾನಾಟಕವಾಗಿ ರಂಗಕ್ಕೆ ಬರುತ್ತಿರುವುದು ಸಂತಸದ ಬೆಳವಣಿಗೆ.
ಆಸ್ಪತ್ರೆಗಳ ಕತೆ: ಕೆ.ಆರ್.ಆಸ್ಪತ್ರೆಯಲ್ಲಿ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ,ಜಯದೇವ ಹೃದ್ರೋಗ ಆಸ್ಪತ್ರೆಯ ಶಾಖೆ ತೆರೆಯಲು ೧೦ ಕೋಟಿ ರೂ.ಘೋಷಣೆ. ಇತ್ತೀಚೆಗಷ್ಟೇ ಕ್ಯಾನ್ಸರ್ ಆಸ್ಪತ್ರೆ ಶಾಖೆ ಆರಂಭ.‘ಹೃದಯ’ಕ್ಕೆ ಸ್ಪಂದಿಸುವುದು ಇನ್ಯಾವಾಗಲೋ ಖಚಿತವಿಲ್ಲ.ಸರಕಾರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲು ೨ ಕೋಟಿ ರೂ.ಘೋಷಣೆ ಅಷ್ಟಕ್ಕೇ ಸೀಮಿತ.ವಿದ್ಯಾಲಯ ಆಡಳಿತ ಉದ್ದೇಶಿತ ಕಟ್ಟಡದ ನೀಲನಕ್ಷೆ, ಅಂದಾಜು ಮೊತ್ತದ ವಿವರವನ್ನೊಳಗೊಂಡ ಪ್ರಸ್ತಾವನೆಯನ್ನು ಸಲ್ಲಿಸಿ ತಿಂಗಳುಗಳೇ ಸಂದರೂ ಹಣ ಬಿಡುಗಡೆ ಆಗಿಲ್ಲ. ಪ್ರತಿಕ್ರಿಯೆಯೂ ಬಂದಿಲ್ಲ.
ಕ್ರೀಡಾಂಗಣ,ಟ್ರ್ಯಾಕ್: ಕ್ರೀಡಾಂಗಣ ನವೀಕರಣ,ಸಿಂಥೆಟಿಕ್ ಟ್ರ್ಯಾಕ್ ಸ್ಥಾಪನೆಗೆ ೧೦ ಕೋಟಿ ರೂ.ಘೋಷಿಸಿದ್ದರೂ ಇಂಥ ಯಾವುದೇ ಅಭಿವೃದ್ಧಿಗೆ ಚಾಮುಂಡಿವಿಹಾರ ಕ್ರೀಡಾಂಗಣ ಸಾಕ್ಷಿಯಾಗಿಲ್ಲ.೬ ಕೋಟಿರೂ. ಅಂದಾಜು ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್,೩ ಕೋಟಿ ರೂ.ವೆಚ್ಚದಲ್ಲಿ ಆಸ್ಟ್ರೋಟರ್ಫ್ ಹಾಕಿ ಮೈದಾನ  ನಿರ್ಮಾಣಕ್ಕೆ ಮತ್ತೆ ಪ್ರಸ್ತಾವನೆ  ಸಲ್ಲಿಸಿರುವುದು ವಿಶೇಷ.
ದೇವರಿಗೂ ಹಣವಿಲ್ಲ: ನಂಜನಗೂಡು ತಾಲೂಕು ತಗಡೂರು ಅಂಕನಾಥೇಶ್ವರ ದೇಗುಲ ಮತ್ತು ಕಾರ್ಯಸಿದ್ಧೇಶ್ವರ ಬೆಟ್ಟ ಅಭಿವೃದ್ಧಿಗೆ ತಲಾ ೨೫ ಲಕ್ಷ ರೂ.ಬಿಡುಗಡೆಯಾಗಿದೆ.ಆದರೆ,ಎಚ್.ಡಿ.ಕೋಟೆ ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನ ದ ಅಭಿವೃದ್ಧಿಗೆ ದೊರಕಿದ್ದ ೧ಕೋಟಿ ರೂ. ಭರವಸೆ ಈಡೇರಿಲ್ಲ.
ಸಂಗೀತದಲ್ಲಿವಿಷಾದ: ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಪಾಲಿಗೆ ೫ ಕೋಟಿ ರೂ.ಘೋಷಿಸಿಯೂ ಪ್ರಯೋಜನವಿಲ್ಲ. ೨೦೦೮ರ ಬಜೆಟ್ ಘೋಷಣೆ ಬಾಬ್ತು ೫ ಕೋಟಿ ರೂ.ಬಂದರೂ ಬಳಸಿಕೊಳ್ಳಲು ಭೂಮಿ ಇಲ್ಲ.ವರಕೋಡು ಬಳಿ ನೀಡಿದ್ದ ೧೦೦ ಎಕರೆ ಭೂಮಿ ಕುರಿತು  ಅರಣ್ಯ ಇಲಾಖೆ ತಕರಾರು ಎತ್ತಿರುವುದರಿಂದ ವಿವಿ ಮತ್ತೆ ‘ಬಾಲಗ್ರಹ ಪೀಡಿತ’.
ಕಾವಾ:ಸೂಕ್ತ ಜಾಗ,ಮೂಲ ಸೌಲಭ್ಯಗಳಿಂದ ಸೊರಗುತ್ತಿರುವ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ (ಕಾವಾ)ಗೆ  ‘ಪ್ರಾಣ ವಾಯು’ ಸ್ವರೂಪಿಯಾದ ೨ ಕೋಟಿ ರೂ. ಘೋಷಣೆ ಇನ್ನೂ ನಿಜವಾಗಿಲ್ಲ.ಅಕಾಡೆಮಿ ಅಗತ್ಯ ಯೋಜನೆ-ಪ್ರಸ್ತಾವನೆಗಳನ್ನು ಸಲ್ಲಿಸಿತ್ತಾದರೂ ಈಗ ೧ಕೋಟಿ ರೂ.ಬಿಡುಗಡೆಗೆ ಚಾಲನೆ ಸಿಕ್ಕಿದೆ. ಕನಸಿನಹಕ್ಕಿ:ಸಿದ್ಧ ಉಡುಪು ಸಮುಚ್ಚಯಗಳ ನಿರ್ಮಾಣಕ್ಕೆ ಉದ್ದೇಶಿತ ನಗರಗಳಲ್ಲಿ ಮೈಸೂರು ಸೇರಿತ್ತಾದರೂ ಯಾವುದೇ ಸುಳಿವಿಲ್ಲ.ವಿಮಾನ ನಿಲ್ದಾಣ ಲಘ ವಿಮಾನ ಹಾರಾಟಕ್ಕೆ ಸಜ್ಜಾಗಿದೆಯಾದರೂ,ಕಂಪನಿಗಳ ಬೇಡಿಕೆಗಳಿಗೆ ಸರಕಾರ ಸ್ಪಂದಿಸದ ಕಾರಣ ’ಕನಸಿನ ಹಕ್ಕಿ’ ಹಾರಾಟ ವಿಳಂಭವಾಗುತ್ತಿದೆ.
ಗೋಗ್ರಾಮ: ಪ್ರಾಯೋಗಿಕವಾಗಿ ಆರಂಭಿಸಲು ಉದ್ದೇಶಿಸಿದ್ದ ‘ಗೋ ಗ್ರಾಮ’ಯೋಜನೆಯ ಸದ್ದು-ಸುದ್ದಿಯೂ ಇಲ್ಲ.‘ಸ್ವಾಮಿ ವಿವೇಕಾನಂದ ಕೇಂದ್ರ’ ಸ್ಥಾಪನೆಗೆ  ೨೦೦೮ರ ಬಜೆಟ್‌ನಲ್ಲಿಯೇ ೫ ಕೋಟಿ ರೂ. ಘೋಷಿಸಲಾಗಿತ್ತಾದರೂ ಚಾಲನೆ ಸಿಕ್ಕಿಲ್ಲ.ಹಣ ಬಿಡುಗಡೆಯಾಗಿದೆಯಾದರೂ ತೊಡರುಗಾಲಾಗಿರುವ ‘ಸ್ಥಳೀಯ ರಾಜಕೀಯ’ಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆಡಳಿತ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ.
ಉಳಿದಂತೆ,ನಗರಪಾಲಿಕೆಗೆ ನೀಡಿದ ೧೦೦ ಕೋಟಿ ರೂ.ವಿಶೇಷ ಅನುದಾನದಡಿ (೨೦೦೮ ಘೋಷಣೆ)ಕಾಮಗಾರಿಗಳು ಪ್ರಗತಿಯಲ್ಲಿವೆಯಾದರೂ ವೇಗ ಆಮೆಗಿಂತ ನಿಧಾನ. ಘೊಷಣೆಯಂತೆ  ದಸರಾಗೆ ೧೦ ಕೋಟಿ ರೂ.ಬಿಡುಗಡೆ ಮಾಡಿ,‘ಹುಡಿ ಹಾರಿಸಲಾಗಿದೆ ’.

ಮಾತು ಮರೆತ ಮಂಡ್ಯದ ಮಗ
ಮತ್ತೀಕೆರೆ ಜಯರಾಮ್
ಮಾತು ಮಾತಿಗೂ ಮಂಡ್ಯದ ಮಗ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಯಡಿಯೂರಪ್ಪ  ಕಳೆದ ಎರಡೂ ಬಜೆಟ್‌ಗಳಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಂಥ ಕೊಡುಗೆ ನೀಡಿಲ್ಲ.ಮೊದಲ ಬಜೆಟ್‌ನಲ್ಲಂತೂ ಮರತೇಬಿಟ್ಟಿದ್ದರು. ಎರಡನೇ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಕೊಸರಿನಷ್ಟು ಮೊತ್ತವೂ ಬಿಡುಗಡೆಯಾಗಿಲ್ಲ.
ಕಳೆದ ಬಾರಿ ಸರಕಾರಿ ಸ್ವಾಮ್ಯದ ಮೈಷುಗರ್ ಪುನಶ್ಚೇತನಕ್ಕೆ ೫೦ ಕೋಟಿ ರೂ. ಘೋಷಣೆ. ಇಲ್ಲಿಯವರೆಗೆ ೧೦ ಕೋಟಿ ರೂ.ಬಿಡುಗಡೆಯಾಗಿದೆ.ಉಳಿದ ಹಣಕ್ಕೆ ಕಾರ್ಖಾನೆ ಆಡಳಿತ ಮಂಡಳಿ ಕಡತ ಹಿಡಿದು ವಿಧಾನಸೌಧಕ್ಕೆ ಅಲೆಯುತ್ತಿದೆ.
ಕೆಆರ್‌ಎಸ್‌ನ ಸಣ್ಣಪುಟ್ಟ ದುರಸ್ತಿಗೆ ೫ ಕೋಟಿ ರೂ.,ಹುಟ್ಟೂರು ಬೂಕನಕೆರೆ ಅಭಿವೃದ್ಧಿಗೆ ೩೦ ಕೋಟಿ ರೂ. ಮತ್ತು ಐತಿಹಾಸಿಕ ಮೇಲುಕೋಟೆಗೆ ೧ ಕೋಟಿ ರೂ. ಘೋಷಣೆಯಾಗಿತ್ತು. ಶೇ.೪೦ರಷ್ಟು ಹಣ ಬಿಡುಗಡೆ.ಕಾಮಗಾರಿ ಪ್ರಗತಿಯಲ್ಲಿದೆ.
ಮಂಡ್ಯದಲ್ಲಿ ಫುಡ್‌ಪಾರ್ಕ್ ಮತ್ತು  ಸಕ್ಕರೆ ತಂತ್ರಜ್ಞಾನ ಕೇಂದ್ರ ಸ್ಥಾಪನೆ ಸಂಬಂಧ ಎಸ್.ಎಂ. ಕೃಷ್ಣ ಅವಧಿಯ ಘೋಷಣೆ ಇನ್ನೂ ಮರೀಚಿಕೆ. ೩೦೦ ಕೋಟಿ ರೂ.ನಲ್ಲಿ ಸಮಗ್ರ ರಸ್ತೆ ಅಭಿವೃದ್ಧಿಯ ‘ಪೈಲಟ್ ಯೋಜನೆ’ ಸತ್ತು ಹೋಗಿದೆ.

ಬರಿ ಘೋಷಣೆ,ಇಲ್ಲ ಅನುಷ್ಠಾನ
ಅಜ್ಜಮಾಡ ರಮೇಶ್ ಕುಟ್ಟಪ್ಪ
ಯಡಿಯೂರಪ್ಪ ಅವರು ೪ ಬಜೆಟ್‌ನಲ್ಲಿ ಕೊಡಗಿನ ಜನತೆ ನೆನಪಿನಲ್ಲಿಟ್ಟುಕೊಳ್ಳುವ ಘೋಷಣೆ ಮಾಡಿದ್ದೇನೋ ನಿಜ.ಆದರೆ, ಅನುಷ್ಠಾನಕ್ಕೆ ಬಾರದಿರುವುದು,ಅಗ್ಗದ ಪ್ರಚಾರಕ್ಕೆ ಸೀಮಿತವಾಗಿರುವುದು ವಿಪರ‍್ಯಾಸ.
ಸ್ಮಾರಕ ಭವನ: ಜನರಲ್ ಕೆ.ಎಸ್. ತಿಮ್ಮಯ್ಯ ಜನ್ಮ ತಾಳಿದ ಮನೆ (ಸನ್ನಿಸೈಡ್)ಯನ್ನು ಸ್ಮಾರಕವನ್ನಾಗಿಸಲು ೧ ಕೋಟಿ ರೂ. ಮೊದಲ ಬಜೆಟ್‌ನಲ್ಲೇ ಘೋಷಣೆ. ೫ನೇ ಬಜೆಟ್‌ಗೆ ದಿನ ಸಮೀಪಿಸುತ್ತಿದ್ದರೂ ಅನುಷ್ಠಾನಕ್ಕೆ ಬಂದಿಲ್ಲ.ನಯಾಪೈಸೆ ಹಣ ನೀಡಿಲ್ಲ. ‘ಸನ್ನಿಸೈಡ್’ ಬಿಟ್ಟುಕೊಡಲು ಆರ್‌ಟಿಒ ಕುಂಟು ನೆಪವೊಡ್ಡುತ್ತಿದೆ.
ಸಮುಚ್ಚಯ ಭವನ: ಮಡಿಕೇರಿಯಲ್ಲಿ ‘ಸುವರ್ಣ ಮಹೋತ್ಸವ ಸಮುಚ್ಚಯ ಭವನ’ ನಿರ್ಮಾಣಕ್ಕೆ ೧.೫೦ ಕೋಟಿ ರೂ.೨೦೦೬ ರ ಘೋಷಣೆ. ಆದರೆ,ಇನ್ನೂ ಭವನಕ್ಕೆ ಜಾಗ ಗುರುತಿಸಿಲ್ಲ..ಪಿಯು ಕಾಲೇಜು ಸಮೀಪದ ಪೈಸಾರಿ ಜಾಗದಲ್ಲಿ ಹಿಂದೊಮ್ಮೆ ಭೂಮಿ ಪೂಜೆ ನೆರವೇರಿದರೂ ಎದುರಾದ ಅಡೆತಡೆ ಬಗೆಹರಿದಿಲ್ಲ.
ಹಾಕಿ ಮೈದಾನ: ಸಿಂಥೆಟಿಕ್ ಹಾಕಿ ಮೈದಾನ ನಿರ್ಮಾಣಕ್ಕೆ ೨ ಕೋಟಿ ರೂ. ಕಳೆದ ಬಜೆಟ್ ಘೋಷಣೆ. ಅಶ್ವಿನಿ ನಾಚಪ್ಪ ತಮ್ಮ ‘ಕಾಲ್ಸ್ ವಿದ್ಯಾಸಂಸ್ಥೆ ’ಮೈದಾನ ದಲ್ಲಿ ಅಳವಡಿಸಲು ಮಂಜೂರು ಪಡೆದದ್ದು ವಿವಾದಕ್ಕೆ ಈಡಾಗಿ,ಸರಕಾರ ಇತ್ತೀಚೆಗೆ ಆದೇಶ ಹಿಂಪಡೆದಿದೆ. ಈಗ ಪೊನ್ನಂಪೇಟೆ ಪಿಯು ಕಾಲೇಜು ಮೈದಾನದಲ್ಲಿ ಅಳವಡಿಸುವ ಕುರಿತು ಚರ್ಚೆ ನಡೆದಿದೆ.
ಸಾಂಸ್ಕೃತಿಕ ಕೇಂದ್ರ: ಕೊಡವ ಸಮಾಜಗಳ ಒಕ್ಕೂಟದಿಂದ ಬಾಳುಗೋಡಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೊಡವ ಸಾಂಸ್ಕೃತಿಕ ಕೇಂದ್ರಕ್ಕೆ ಕಳೆದ ಬಜೆಟ್‌ನಲ್ಲಿ ೧ ಕೋಟಿ ರೂ.ಘೋಷಣೆ. ಅನುದಾನ ಪಡೆಯುವ ಪ್ರಯತ್ನವನ್ನು  ಒಕ್ಕೂಟ ಮುಂದುವರಿಸಿದೆ.
ವಿಶೇಷ ಅನುದಾನ: ೨೦೦೮ರಲ್ಲಿ ಬಜೆಟ್ ಮೇಲಿನ ಚರ್ಚೆವೇಳೆ ಎಂ.ಸಿ.ನಾಣಯ್ಯ ಅವರ ಪ್ರಸ್ತಾಪಕ್ಕೆ ಸ್ಪಂದಿಸಿದ ಸಿಎಂ,೨೫ ಕೋಟಿ ರೂ. ವಿಶೇಷ ಅನುದಾನ  ಘೋಷಿಸಿದರು.‘ಆ ಕಾಮಗಾರಿ-ಈ ಕಾಮಗಾರಿ’ ಕೈಗೆತ್ತಿಕೊಳ್ಳಲಾಗುವುದೆಂದು ಜನಪ್ರತಿನಿಧಿಗಳು ಹೇಳುತ್ತಿದ್ದಾರಾದರೂ ಸಮರ್ಪಕ ಸದ್ಬಳಕೆ ಸಾಧ್ಯವಾಗಿಲ್ಲ.
ವಿಜ್ಞಾನ ಪಾರ್ಕ್: ವಿಜ್ಞಾನ ಪಾರ್ಕ್ ನಿರ್ಮಿಸಲು ೫೦ ಲಕ್ಷ ರೂ. ಘೋಷಣೆ. ಪಾರ್ಕ್ ಸ್ಥಾಪನೆ ಹೋಗಲಿ,ಆ ಬಗ್ಗೆ  ಚರ್ಚೆಯೂ ನಡೆಯುತ್ತಿಲ್ಲ. ಘೋಷಣೆಯನ್ನೇ ಬಹುತೇಕರು ಮರೆತಂತಿದೆ.
ಅಧ್ಯಯನ ಪೀಠ: ಮಂಗಳೂರು ವಿವಿಯಲ್ಲಿ ಕೊಡವ ಅಧ್ಯಯನ ಪೀಠ ಘೋಷಣೆ ಈಡೇರಿದೆ. ಆದರೆ, ಅಧ್ಯಯನ  ಏನು-ಎತ್ತ ಎಂಬ ಮಾಹಿತಿ ಬಹುತೇಕ ಕೊಡವರ ಅರಿವಿಗೆ ಬಂದಿಲ್ಲ. ಚಿಕ್ಕಅಳುವಾರದಲ್ಲಿ ಮಂಗಳೂರು ವಿವಿ ಸ್ನಾತಕೋತ್ತರ ಕೇಂದ್ರ ಆರಂಭಿಸುವ ಘೋಷಣೆಯೂ ನಿಜವಾಗಿಲ್ಲ.

ಹಸಿರಾಗದ ‘ಅರಿಸಿನ’ದ ಭರವಸೆ
ಫಾಲಲೋಚನ ಆರಾಧ್ಯ
ಗಡಿ ಜಿಲ್ಲೆ ಚಾಮರಾಜನಗರಕ್ಕೆ  ಸಂಬಂಧಿಸಿದ ಅವಜ್ಞೆ ಯಡಿಯೂರಪ್ಪ ಕಾಲದಲ್ಲೂ ಮುಂದುವರಿದಿದೆ.
ಚಾಮರಾಜನಗರದಲ್ಲಿ ಅರಿಶಿನ ಸಂಸ್ಕರಣ ಘಟಕ ಹಾಗೂ ದಾಸ್ತಾನು ಗೋದಾಮು ಸ್ಥಾಪಿಸಲು ೧೦ ಕೋಟಿ ರೂ.ಅನ್ನು ಕಳೆದ ಬಜೆಟ್‌ನಲ್ಲಿ ಯಡಿಯೂರಪ್ಪ ಘೋಷಿಸಿ ಗಡಿ ಜಿಲ್ಲೆಯ ಅರಿಶಿನ ಬೆಳೆಗಾರರಲ್ಲಿ ಹರ್ಷ ಮೂಡಿಸಿದ್ದರು. ವಿಪರ್ಯಾಸವೆಂದರೆ ಇದರ ಪ್ರಾಥಮಿಕ ಹಂತದ ಕಾರ್ಯವೂ ಆರಂಭವಾಗಿಲ್ಲ.
ಬಿಳಿಗಿರಿರಂಗನಬೆಟ್ಟ, ಹಿಮವದ್ ಗೋಪಾಲಸ್ವಾಮಿಬೆಟ್ಟಗಳನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸಲು ತಲಾ ೨ ಕೋಟಿ ರೂ. ಘೋಷಣೆ ಮಾಡಲಾಗಿತ್ತಾದರೂ, ಈವರೆಗೆ ಅದಕ್ಕಿಂತ ಹೆಚ್ಚಿನದು ಏನೂ ಆಗಿಲ್ಲ.
ಬಿಜೆಪಿ-ಜಾ.ದಳ ಸಮ್ಮಿಶ್ರ ಸರಕಾರದ ಬಜೆಟ್‌ನಲ್ಲಿ ಯಡಿಯೂರಪ್ಪ , ಮಲೆ ಮಹಾದೇಶ್ವರಬೆಟ್ಟದಲ್ಲಿ ಜಾನಪದ ಅಧ್ಯಯನ ಕೇಂದ್ರ ಸ್ಥಾಪಿಸಲು ೫ ಕೋಟಿ ರೂ.,ಯಡಿಯೂರು ಸಿದ್ಧಲಿಂಗೇಶ್ವರ ಜನ್ಮ ಸ್ಥಳ ಹರದನಹಳ್ಳಿ ಗ್ರಾಮದ  ಗದ್ದುಗೆ  ಅಭಿವೃದ್ಧಿಗೆ ೨ ಕೋಟಿ ರೂ. ಘೋಷಿಸಿದ್ದರು. ಈ ಪೈಕಿ ಜಾನಪದ ಅಧ್ಯಯನ ಕೇಂದ್ರದ ವಿಚಾರ  ಬಜೆಟ್ ಪ್ರತಿಯಲ್ಲೇ ಉಳಿದಿದೆ. ಹರದನಹಳ್ಳಿ ಗ್ರಾಮದಲ್ಲಿನ ಸಿದ್ದಲಿಂಗೇಶ್ವರ ಗದ್ದುಗೆ ಅಭಿವೃದ್ಧಿ ಕಾರ್ಯ ಕಳೆದ ತಿಂಗಳು ಪ್ರಾರಂಭವಾಗಿದೆ.ಮೊದಲ ಹಂತದಲ್ಲಿ ೧ ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾರ್ಯ ಭರದಿಂದ ನಡೆದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ