ಕಬಿನಿ ಬಲದಂಡೆ ನಾಲೆಗೆ ಮತ್ತಷ್ಟು ಆಧುನೀಕರಣ ಭಾಗ್ಯ

ಕುಂದೂರು ಉಮೇಶಭಟ್ಟ ಮೈಸೂರು
ಕಬಿನಿ ಬಲದಂಡೆ ನಾಲೆ ಇನ್ನಷ್ಟು ಆಧುನೀಕರಣ ಗೊಳ್ಳಲಿದೆ.
ಎರಡು ವರ್ಷದ ಹಿಂದಷ್ಟೇ ೪೦ ಕಿ.ಮೀ. ಉದ್ದದವರೆಗೆ ಲೈನಿಂಗ್‌ನೊಂದಿಗೆ ಹೊಸ ರೂಪ ಪಡೆದಿದ್ದ ನಾಲೆಯ ಮುಂದುವರಿದ ಭಾಗವಾಗಿ ೪೧ರಿಂದ ೧೦೦ ಕಿ.ಮೀ.ವರೆಗೆ ಆಧುನೀಕರಣ ಗೊಳ್ಳುವ ಭಾಗ್ಯ.
ಇದಕ್ಕಾಗಿ ರಾಜ್ಯ ಸರಕಾರ ೮೨ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಒಂದು ವಾರದೊಳಗೆ ಕಾಮಗಾರಿ ಆರಂಭವಾಗಲಿದೆ. ನೀರಾವರಿ ಇಲಾಖೆ ಲೆಕ್ಕಾಚಾರದಂತೆ ಜುಲೈ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
ಕಳೆದ ತಿಂಗಳು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಕೊಳ್ಳೆಗಾಲ ತಾಲೂಕು ತೆಳ್ಳನೂರು ಭಾಗಕ್ಕೆ ಭೇಟಿ ನೀಡಿ ಕಬಿನಿ ಬಲೆದಂಡೆ ನಾಲೆ ತುದಿ ಭಾಗದ ಜನರ ಕಷ್ಟಗಳನ್ನು ಕಣ್ಣಾರೆ ಕಂಡಿದ್ದರು. ಅಲ್ಲಿಗೆ ನೀರು ತಲುಪ ಬೇಕೆಂದರೆ ಮಧ್ಯ ಭಾಗ ಆಧುನೀಕರಣಗೊಳ್ಳಲೇಬೇಕು ಎನ್ನುವ ರೈತರ ಆಶೋತ್ತರಕ್ಕೆ ಸಚಿವರು ಸ್ಪಂದಿಸಿದ್ದರಿಂದ ಬೇಗನೇ ಅನುಮತಿ ದೊರೆತಿದೆ.
ಸತತ ೨ನೇ ಬಾರಿ: ಕಬಿನಿ ಜಲಾಶಯ ನಿರ್ಮಾಣಗೊಂಡು ಐದು ದಶಕ ಕಳೆದಿದೆ. ಮೂರು ದಶಕದ ಹಿಂದೆ ಬಲ ಮತ್ತು ಎಡದಂಡೆ ನಾಲೆ ನಿರ್ಮಿಸಲಾಗಿದೆ. ಅದರಲ್ಲಿ ಬಲದಂಡೆ ನಾಲೆ ಮೈಸೂರು-ಚಾಮರಾಜನಗರ ಜಿಲ್ಲೆಯ ಜೀವನಾಡಿ. ಈ ನಾಲೆಗಳು ಆಧುನೀಕರಣವಾಗ ಬಹುದು ಎಂಬ ನಿರೀಕ್ಷೆ  ವರ್ಷಗಳಿಂದ ಈ ಭಾಗದ ಜನರಲ್ಲಿತ್ತು. ಹಿಂದೆಲ್ಲಾ ಸಣ್ಣಪುಟ್ಟ ಕಾಮಗಾರಿಗಳು ನಡೆದರೂ ಅವುಗಳ ದರ್ಶನವೂ ಈಗ ಸಿಗುವುದಿಲ್ಲ.
ನಾಲೆ ತುದಿ ಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ನೀರು ತಲುಪಿಸಲು ನಾಲೆ ಆಧುನೀಕರಣ ಆಗಲೇಬೇಕು ಎಂದು ಮನಗಂಡ ಹಿಂದಿನ ಸರಕಾರ ಅನುಮತಿ ನೀಡಿತ್ತು. ಅದರಂತೆ ಕಬಿನಿ ಬಲದಂಡೆ ನಾಲೆಯ ಮೊದಲ ೪೦ ಕಿ.ಮೀ .ಉದ್ದದ ಆಧುನೀಕರಣದ ಕಾಮಗಾರಿಯನ್ನು ೫೫.೭೫ ಕೋಟಿ ರೂ.ಗಳಲ್ಲಿ ಕೈಗೆತ್ತಿಕೊಳ್ಳಲಾಯಿತು. ಸಾಕಷ್ಟು ವಿವಾದ, ರಾಜಕೀಯ ಹಸ್ತಕ್ಷೇಪಗಳ  ನಡುವೆಯೂ ಎರಡು ವರ್ಷದ ಹಿಂದೆ ೪೦. ಕಿ.ಮೀ.ವರೆಗಿನ ನಾಲೆ ಕಾಮಗಾರಿ ಮುಗಿದು ನೀರು ಸರಾಗವಾಗಿ ಹರಿಯುತ್ತಿದೆ.
ಇದನ್ನರಿತೇ ಸರಕಾರ ಈಗ ೨ ನೇ ಹಂತದಲ್ಲಿ ಸುಮಾರು ೬೦ ಕಿ.ಮೀ. ಕಾಮಗಾರಿಗೆ ಬೇಗನೇ ಅನುಮತಿ ನೀಡಿದೆ. ಈಗಾಗಲೇ ೨ನೇ ಹಂತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದ್ದು ಕಾಮಗಾರಿ ಆರಂಭವಾಗುವುದಷ್ಟೇ ಬಾಕಿ.
ಈ ಬಾರಿ ಟೆಂಡರ್ ಗೊಂದಲವಿಲ್ಲ: ೦-೪೦ ಕಿ.ಮೀ. ಲೈನಿಂಗ್ ಕಾಮಗಾರಿ ಆರಂಭವಾಗಲು ಸರಕಾರವೇನೋ ಅನುಮತಿ ನೀಡಿತು. ಆದರೆ ಗುತ್ತಿಗೆ ನೀಡುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳಾದವು. ಒಬ್ಬರೇ ಗುತ್ತಿಗೆ ಬಂದಿದ್ದರಿಂದ ಗುಣಮಟ್ಟದ ದೃಷ್ಟಿಯಿಂದ ಕಾಮಗಾರಿಯನ್ನು ಒಂದು ವರ್ಷಕ್ಕೆ ಮುಂದೂಡಲಾಯಿತು.೨೦೦೭ರ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ ನೀರಾವರಿ ಇಲಾಖೆಗೆ ಅಡ್ಡಿಯಾಗಿದ್ದು ರಾಜಕೀಯ ಕರಿನೆರಳಿನ ಛಾಯೆ. ಆನಂತರ ೨ ಪ್ಯಾಕೇಜ್‌ಗಳಲ್ಲಿ ವಹಿಸಿ ಕಾಮಗಾರಿಯೂ ಶುರುವಾಗಿತ್ತು. ಈ ವರ್ಷ ಇಂಥ ಗೊಂದಲ ಆಗದಂತೆ ಸಚಿವರ ಮಟ್ಟದಲ್ಲೇ ಮೂರು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿ ನೀಡಲಾಗಿದೆ.
‘ನಾಲೆ ೨ನೇ ಹಂತದ ಲೈನಿಂಗ್ ಕಾಮಗಾರಿಗೆ ೮೨ ಕೋಟಿ ರೂ. ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿಯುವ ಹಂತದಲ್ಲಿದೆ ‘ಎಂದು ಕಬಿನಿ ಅಧೀಕ್ಷಕ ಎಂಜಿನಿಯರ್ ವರದರಾಜು ‘ವಿಜಯ ಕರ್ನಾಟಕ’ಕ್ಕೆತಿಳಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ