ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಮೇಲ್ದರ್ಜೆಯ ಚಿಕಿತ್ಸೆ

ಜೆ. ಶಿವಣ್ಣ ಮೈಸೂರು
ನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ (ಇ.ಡಿ. ಹಾಸ್ಪಿಟಲ್)ಯನ್ನು ಮೇಲ್ದರ್ಜೆಗೇರಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಸುಮಾರು ೧೮೬೧ರಲ್ಲಿ ಆರಂಭಗೊಂಡ ಆಸ್ಪತ್ರೆ ೧೫೦ ವರ್ಷಗಳನ್ನು ದಾಟಿದ್ದು, ಪ್ರಸ್ತುತವಿರುವ ೫೦ ಹಾಸಿಗೆಗಳಿಂದ ೨೫೦ ಹಾಸಿಗೆಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಕರ್ನಾಟಕ ರಾಜ್ಯ ಆರೋಗ್ಯ ವ್ಯವಸ್ಥೆ ಸುಧಾರಣೆ ಯೋಜನೆಯಡಿ ಹೊಸ ಕಟ್ಟಡಗಳೊಂದಿಗೆ ಆಸ್ಪತ್ರೆಯನ್ನು ವಿಸ್ತರಿಸಿ ಅತ್ಯಾಧುನಿಕ ವಾಗಿ ಸುಸಜ್ಜಿತಗೊಳಿಸಲು ಚಿಂತನೆ ನಡೆಸಲಾಗಿದೆ.
ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಕಾರ್‍ಯದರ್ಶಿ ರಮಣರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿರುವರು. ಮೈಸೂರಿನಲ್ಲಿ `ಜಿಲ್ಲಾ ಆಸ್ಪತ್ರೆ' ಇಲ್ಲ ಎನ್ನುವ ಕಾರಣಕ್ಕೆ ಸರಕಾರವೂ ಆಸಕ್ತಿ ವಹಿಸಿದೆ ಎನ್ನಲಾಗಿದ್ದು, ಅನುಮತಿ ದೊರೆತರೆ  ಇ.ಡಿ.ಆಸ್ಪತ್ರೆ `ಸ್ಪೆಷಾಲಿಟಿ ಆಸ್ಪತ್ರೆ'ಯಾಗಿ ಬದಲಾ ಗಲಿದೆ. 
ಆರಂಭದಲ್ಲಿ ೩೦ ಹಾಸಿಗೆಗಳನ್ನು ಹೊಂದಿದ್ದ  ಆಸ್ಪತ್ರೆ ಒಳರೋಗಿ ಗಳ ಚಿಕಿತ್ಸೆಗೆ ಮೀಸಲಾ ಗಿತ್ತು. ೨೦೦೪-೦೫ರಲ್ಲಿ ೫೦ ಹಾಸಿಗೆಗಳಿಗೇರಿದ ಬಳಿಕ ಹೊರರೋಗಿಗಳ ತಪಾಸಣೆಯನ್ನೂ ಆರಂಭಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊರತುಪಡಿಸಿ ಸುತ್ತಮುತ್ತ ಸರಕಾರಿ ಆಸ್ಪತ್ರೆ ಇಲ್ಲದಿರುವ ಕಾರಣಕ್ಕೆ ಹೊರ ರೋಗಿಗಳಿಗೂ ಅವಕಾಶ ಮಾಡಲಾಯಿತು.
ಪ್ರಸ್ತುತ ಈ ಆಸ್ಪತ್ರೆಯಲ್ಲಿ ಸಾಂಕ್ರಾಮಿಕ ಕಾಯಿಲೆ ಗಳಾದ ವಾಂತಿಭೇದಿ, ಕಾಲರಾ, ಗಂಟಲು ಬೇನೆ, ಧನುರ್ವಾಯು, ನಾಯಿ ಕಡಿತ, ಚಿಕನ್‌ಫಾಕ್ಸ್ ಇತ್ಯಾದಿಗೆ  ಚಿಕಿತ್ಸೆ ನೀಡಲಾಗುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ