ದಾಖಲೆ ನೀಡಲು ಕ್ಯೂ, ಸಿಲಿಂಡರ್ ವ್ಯತ್ಯಯ

ವಿಕ ವಿಶೇಷ ಮೈಸೂರು
ನಗರದ ಬಹುತೇಕ  ಗ್ಯಾಸ್ ಏಜೆನ್ಸಿಗಳ  ಮುಂದೆ  ಉದ್ದುದ್ದ  ಸಾಲು. ಗ್ಯಾಸ್ ಸಿಲಿಂಡರ್ ಪಡೆಯಲಿಕ್ಕಲ್ಲ,`ಸಕ್ರಮ'ದ ದಾಖಲೆ  ಸಲ್ಲಿಸಲು. ಈ ಪ್ರಕ್ರಿಯೆ, ಸಿಲಿಂಡರ್ ಪೂರೈಕೆಯ ವ್ಯತ್ಯಯಕ್ಕೂ ಕಾರಣವಾಗಿದೆ.
`ಅನಿಲ ಸಿಲಿಂಡರ್  ಸಂಪರ್ಕ ಹೊಂದಿದವರು ಪಡಿತರ  ಕಾರ್ಡ್ ಮತ್ತು ವಿದ್ಯುತ್ ಬಿಲ್ ಪ್ರತಿ ನೀಡಬೇಕು' ಎಂಬ ಆಹಾರ ಮತ್ತು ನಾಗರಿಕ  ಸರಬರಾಜು ಇಲಾಖೆ  ಸೂಚನೆ,ಅದಕ್ಕೆ  ನಿಗದಿಪಡಿಸಿರುವ  ಫೆ.೧೯ರ ಗಡುವು ಏಜೆನ್ಸಿಗಳ ಮುಂದೆ  `ಜನದಟ್ಟಣೆ'ಯನ್ನು ಸೃಷ್ಟಿಸಿದೆ.
ದಾಖಲೆ  ನೀಡುವ ಪ್ರಕ್ರಿಯೆಯನ್ನು ಸಾಕಷ್ಟು  ಸರಳಗೊಳಿಸಲಾಗಿದೆ ಎಂದು ಉನ್ನತ ಅಧಿಕಾರಿಗಳು ಹೇಳುತ್ತಾರಾದರೂ, ನಗರದ ಬಹುತೇಕ ಏಜೆನ್ಸಿಗಳಲ್ಲಿ ಅದು ಅಷ್ಟೊಂದು ಸರಳವಲ್ಲ. ತಾಸು ಗಟ್ಟಲೆ ಸಾಲು ನಿಲ್ಲ ಬೇಕು. ಬೇಗ ಮುಗಿದರೆ, ಅದವರ ಅದೃಷ್ಟ. ಕೆಲವೆಡೆ ಯಂತೂ ೧ರೂ.ನೀಡಿ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ,ಅದಕ್ಕೆ ಮುದ್ರೆ ಒತ್ತಿಸಿ, ನೀಡಲು ಮತ್ತೆ ಸಾಲು ನಿಲ್ಲಬೇಕಾದಂತ ಸ್ಥಿತಿ. ಎಷ್ಟೆ, ಸರಳವೆಂದರೂ ಅರ್ಧ  ದಿನದ  ಬಾಬತ್ತು.
ಡ್ರಾಪ್ ಬಾಕ್ಸ್ ಇಲ್ಲ: ಪಡಿತರ ಕಾರ್ಡ್ ಇಲ್ಲದವರು ಆರ್‌ಆರ್ ಸಂಖ್ಯೆ ನಮೂದಿಸಿ,ವಿದ್ಯುತ್ ಬಿಲ್ ನಕಲು ಪ್ರತಿಯನ್ನು ಗ್ಯಾಸ್ ಅಂಗಡಿ ಮುಂದಿನ `ಡ್ರಾಪ್ ಬಾಕ್ಸ್'ಗೆ ಹಾಕಿದರೆ  ಸಾಕು ಎನ್ನುತ್ತಾರೆ  ಅಧಿಕಾರಿಗಳು. ರಾಜ್ಯದ ಕೆಲವೆಡೆ  ಇಂಥ ವ್ಯವಸ್ಥೆ  ಇರುವುದು ನಿಜ.ಆದರೆ, ನಗರದ ಯಾವ ಏಜೆನ್ಸಿ ಮುಂದೆಯೂ ಇಂಥದೊಂದು ಡ್ರಾಪ್ ಬಾಕ್ಸ್ ವ್ಯವಸ್ಥೆ  ಇಲ್ಲ. ಸಂಬಂಧಪಟ್ಟವರನ್ನು ಕೇಳಿದರೆ `ನಮಗೆ  ಯಾವುದೇ ಸ್ಪಷ್ಟ  ನಿರ್ದೇಶನವಿಲ್ಲ' ಎನ್ನುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ