ಶಿಥಿಲಾವಸ್ಥೆಯಲ್ಲಿ ಗುಲಾಂ ಆಲಿಖಾನ್ ಗುಂಬಸ್!

 ಜಿ.ಎನ್. ರವೀಶ್‌ಗೌಡ ಶ್ರೀರಂಗಪಟ್ಟಣ
ಐತಿಹಾಸಿಕ ಸ್ಥಳ ಹಾಗೂ ಕೋಟೆ ಕೊತ್ತಲಗಳ ನಾಡು ಶ್ರೀರಂಗಪಟ್ಟಣದ ಗುಲಾಂ ಅಲಿಖಾನ್ ಗುಮ್ಚಿ(ಗುಂಬಸ್) ಶಿಥಿಲಾವಸ್ಥೆ ತಲುಪಿದ್ದು, ಪುರಾತತ್ತ್ವ ಮತ್ತು ಪ್ರಾಚ್ಯ ವಸ್ತು ಇಲಾಖೆಗಳು ನಿರ್ಲಕ್ಷ್ಯ ತಳೆದಿವೆ.
ಇತಿಹಾಸ ಪ್ರಸಿದ್ಧ ಸ್ಮಾರಕಗಳಿಂದಲೇ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುವ ಶ್ರೀರಂಗಪಟ್ಟಣದಲ್ಲಿ ಅನೇಕ ಸ್ಮಾರಕಗಳು ರಕ್ಷಣೆ ಇಲ್ಲದೆ ಮೂಲೆಗುಂಪಾಗುತ್ತಿವೆ. ಇವುಗಳಲ್ಲಿ ಗುಲಾಂ ಅಲಿಖಾನ್ ಗುಮ್ಚಿಯೂ ಒಂದು.
`ಮೈಸೂರು ಹುಲಿ' ಸುಲ್ತಾನ್ ಟಿಪ್ಪುವಿನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಗುಲಾಂ ಅಲಿಖಾನ್ ಗುಮ್ಚಿ, ಶ್ರೀರಂಗಪಟ್ಟಣದ ರಾಯಭಾರಿಯಾಗಿ ಫ್ರಾನ್ಸ್‌ನ ನೆಪೋಲಿಯನ್ ಬೋನೋ ಪಾರ್ಟೆ ಬಳಿಗೆ ಪಟ್ಟಣದ ನಿಯೋಗ ಕರೆದೊಯ್ದಿದ್ದನು.
ಇದಕ್ಕೂ ಮಿಗಿಲಾಗಿ ಈತ ಟಿಪ್ಪು ಸುಲ್ತಾನನ ಸಂಬಂಧಿ. ಬಹು ಭಾಷಾ ಪಂಡಿತ. ಅಕಾಲಿಕ ಸಾವಿಗೀಡಾದ ತನ್ನ ಪತ್ನಿಯ ನೆನಪಿ ಗಾಗಿ ೧೮ನೇ ಶತಮಾನದ ಅಂತ್ಯಭಾಗದಲ್ಲಿ ಕಾವೇರಿ ನದಿ ದಡ ದಲ್ಲಿ (ಹೊಳೆಚಂದಗಾಲು ರಸ್ತೆ ಬಳಿ) ಗುಂಬಸ್ ನಿರ್ಮಿಸಿದ್ದನು.
ಈ ಕಾರಣಕ್ಕಾಗಿ ಇದು ಗುಲಾಂ ಅಲಿಖಾನ್ ಗುಮ್ಚಿ(ಗುಂಬಸ್) ಎಂದೇ ಹೆಸರಾಗಿದೆ. ಇಂಡೋ-ಅರೇಬಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಗುಂಬಸ್ ನೋಡಲು ತುಂಬಾ ಆಕರ್ಷಣೀಯವಾಗಿತ್ತು.
ಕುಸುರಿ ಕೆತ್ತನೆ, ಬಣ್ಣಗಳ ಚಿತ್ತಾರ ಹೊಂದಿರುವ ಈ ಗುಂಬಸ್,  ೪೦  ೪೦ ಅಡಿಗಳ ವಿಸ್ತೀರ್ಣದ ಅಳತೆಯಲ್ಲಿ ನಿರ್ಮಾಣವಾಗಿದೆ. ಹದಿನಾರು ಕಂಬಗಳನ್ನು ಹೊಂದಿದ್ದ ಇದು ೯೦ ಅಡಿ ಎತ್ತರವಿದೆ. ಆದರೀಗ ೧೬ ಕಂಬಗಳ ಪೈಕಿ ೫ ಮಾತ್ರ ಇವೆ.
ಟಿಪ್ಪು ಆಳ್ವಿಕೆ ನಂತರ ನಿರ್ಲಕ್ಷ್ಯಕ್ಕೊಳಗಾದ ಈ ಗುಂಬಜ್, ದಿನಗಳೆದಂತೆ ತನ್ನ ಆಕರ್ಷಣೆಯನ್ನು ಕಳೆದುಕೊಂಡಿದೆ. ಗುಂಬಜ್ ಮೇಲಿನ ಗುಮ್ಮಟ ಸಂಪೂರ್ಣ ಶಿಥಿಲವಾಗಿದೆ. ಗೋಡೆಗಳು ಹಾಳಾಗಿವೆ. ಈ ಸ್ಮಾರಕದ ಸುತ್ತಲೂ ಗಿಡಗಂಟಿಗಳು ಬೆಳೆದುಕೊಂಡಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ