ಜೀವಜಾಲ ಸಂಶೋಧನೆಯತ್ತ ವಿವಿ ಚಿತ್ತ

ಚೀ. ಜ. ರಾಜೀವ ಮೈಸೂರು
‘ಜೀವ ವೈವಿಧ್ಯ, ಜೀವ ಸಂಪನ್ಮೂಲಗಳ ಅನ್ವಯಿಕ ಉಪಯುಕ್ತತೆ ಮತ್ತು ಸುಸ್ಥಿರ ಅಭಿವೃದ್ಧಿ’ ಕುರಿತ ಬೃಹತ್ ಸಂಶೋಧನಾ ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಕಡೆಗೂ ಮೈಸೂರು ವಿಶ್ವವಿದ್ಯಾನಿಲಯ ಅಣಿಗೊಂಡಿದೆ.
ಯಾವುದಾದರೊಂದು ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಜ್ಞಾನದ ಉತ್ಕೃಷ್ಟ ಮಂದಿರವಾಗಿ(ಇನ್ಸುಟಿಟ್ಯೂಷನ್ ಆಫ್ ಎಕ್ಸಲೆನ್ಸ್) ರೂಪುಗೊಳ್ಳಬೇಕೆಂಬುದು ಕೇಂದ್ರ ಸರಕಾರದ ಆಶಯ. ಹಾಗಾಗಿ ಎರಡು ವರ್ಷಗಳ ಹಿಂದೆ ವಿವಿಗೆ ೧೦೦ ಕೋಟಿ ರೂ. ವಿಶೇಷ ಅನುದಾನ ಘೋಷಿಸಿ, ಐದು ತಿಂಗಳ ಹಿಂದೆಯಷ್ಟೇ ಅದರ ಬಾಬ್ತಿನ ಹಣ ಬಿಡುಗಡೆ ಮಾಡಿದೆ. ತಾನು ನೀಡುವ ಅನುದಾನದ ಪೈಕಿ ಒಂದಿಷ್ಟು ಹಣವನ್ನು ವಿವಿಯ ಮೂಲ ಸೌಕರ‍್ಯಗಳ ಅಭಿವೃದ್ಧಿ ಹಾಗೂ ಗಣಕೀಕರಣದಂಥ ಉನ್ನತೀಕರಣ ಕಾರ‍್ಯಕ್ಕೆ ಬಳಸಿಕೊಂಡು, ಕನಿಷ್ಠ ಶೇ. ೫೦ರಷ್ಟು ಅನುದಾನದಲ್ಲಿ ವಿಶಿಷ್ಟ ರೀತಿಯ ಸಂಶೋಧನಾ ಚಟುವಟಿಕೆ ಕೈಗೊಳ್ಳಬೇಕು ಎಂಬುದು ಕೇಂದ್ರದ ಕಟ್ಟುಪಾಡು. ಈ ಹಿನ್ನೆಲೆಯಲ್ಲಿ ಸಕಲ ಜೀವ ಚರಾಚರಗಳ ಪ್ರವರವನ್ನು ಶೋಧಿಸಿ, ವಿಶ್ಲೇಷಿಸಿ ಅವುಗಳ ವಾಣಿಜ್ಯ ಉಪಯುಕ್ತತೆಯ ಸಾರವನ್ನು ಸಮಾಜಕ್ಕೆ ಉಣ ಬಡಿಸುವುದಾಗಿ ಹೇಳಿದ್ದ ವಿ ವಿ ಯ ಯೋಜನೆಗೆ, ಕೇಂದ್ರ ಭೇಷ್ ಎಂದಿತ್ತು. ವಿವಿಯ ಪಂಡಿತರ ತಲೆಯಲ್ಲಿರುವ ಈ ಯೋಜನೆ-ಯೋಚನೆ, ಅಕ್ಷರಶಃ ಈಗ ಕಾರ‍್ಯರೂಪಕ್ಕೆ ಇಳಿಯಲಿದೆ.
ವಿಶ್ವವಿದ್ಯಾನಿಲಯ ಸಂಶೋಧನಾ ಚಟುವಟಿಕೆಗಾಗಿ ಆಯ್ದು ಕೊಂಡಿರುವ ವಿಷಯದ ಕುರಿತು ೪೩ಕ್ಕೂ ಹೆಚ್ಚು ಪ್ರಸ್ತಾವನೆಗಳನ್ನು ವಿವಿಯ ಸಂಶೋಧಕರು ಸಲ್ಲಿಸಿದ್ದಾರೆ. ಶೇ. ೯೯ರಷ್ಟು ಈ ಎಲ್ಲವೂ ಸ್ವೀಕರಿಸಲು ಅರ್ಹವಾಗಿವೆ. ವಿವಿಯ ಅಧ್ಯಾಪಕ ವರ್ಗದಲ್ಲಿಯೇ ಇರುವ ಸಂಶೋಧಕರು, ಕಿರಿಯ ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ೧೦೦ಕ್ಕೂ ಹೆಚ್ಚು ಪರಿಣತರು ೧೦ ಗುಂಪುಗಳಲ್ಲಿ ಈ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ, ವಿವಿ ಈ ಯೋಜನೆಗಾಗಿ ೫೭ ಕೋಟಿ ರೂ. ಗಳನ್ನು ಮೀಸಲಿರಿಸಲಿದೆ ’ ಎಂದು ಯೋಜನೆಯ ನಿರ್ವಹಣಾ ಹಾಗೂ ಸಮನ್ವಯ ಸಮಿತಿಯ ಸಂಚಾಲಕ ಡಾ. ಎಸ್. ಆರ್. ನಿರಂಜನ್ ವಿಜಯ ಕರ್ನಾಟಕಕ್ಕೆ ತಿಳಿಸಿದರು.
‘ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಸೇರಿದಂತೆ ರಾಜ್ಯದಲ್ಲಿ ಹಾದು ಹೋಗಿರುವ ೯ ಜಿಲ್ಲೆಗಳ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಮ್ಮ ಕೆಲಸ ನಡೆಯಲಿದೆ.
ಕ್ಷೇತ್ರ ಕಾರ್ಯದ ಬಳಿಕ, ಅಲ್ಲಿನ ಎಲ್ಲ ಸಂಗತಿಗಳ ಕುರಿತು ಸಂಶೋಧನೆ ನಡೆಸಲೆಂದೇ, ಮಾನಸ ಗಂಗೋತ್ರಿಯ ಆವರಣದಲ್ಲಿ ಅತ್ಯಾಧುನಿಕ ಸಂಶೋಧನಾಲಯವನ್ನು ನಿರ್ಮಿಸಲಾಗುವುದು’ ಎಂದು ವಿವರಿಸಿದರು. ಜೈವಿನ ತಂತ್ರಜ್ಞಾನ, ರಸಾಯನ, ಭೌತ, ಜೀವ ವಿಜ್ಞಾನ, ಸಸ್ಯ ಶಾಸ್ತ್ರ, ಪ್ರಾಣಿ ಶಾಸ್ತ್ರ, ಭೂಗೋಳ ಶಾಸ್ತ್ರ, ಭೂ ಗರ್ಭ ಶಾಸ್ತ್ರ, ಮಾನವ ಶಾಸ್ತ್ರ, ಸಮಾಜ ವಿಜ್ಞಾನ ಶಾಸ್ತ್ರ ಸೇರಿದಂತೆ ವಿವಿಧ ಅಧ್ಯಯನ ವಿಭಾಗಗಳು ಈ ಕಾರ್ಯದಲ್ಲಿ ಭಾಗವಹಿಸಲಿವೆ. ಏನೀ ಸಂಶೋಧನೆ
ಪಶ್ಚಿಮ ಘಟ್ಟಗಳ ಸಕಲ ಜೀವವೈವಿಧ್ಯ, ಮಾನವ ಸಂಪನ್ಮೂಲ, ಸಾಂಪ್ರದಾಯಿಕ ಜ್ಞಾನ ಪರಂಪರೆ ಹಾಗೂ ನಿರ್ಜೀವ ಸಂಪನ್ಮೂಲಗಳನ್ನು ಗುರುತಿಸುವುದು ಮತ್ತು ದಾಖಲೆ ಮಾಡುವುದು; -ಅವನತಿಯ ಅಂಚಿನಲ್ಲಿರುವ ಎಲ್ಲ ಔಷಧೀಯ ಸಸ್ಯಗಳನ್ನು ಸಂರಕ್ಷಿಸುವ ಬಗೆ ಕುರಿತು ಅಧ್ಯಯನ ನಡೆಸುವುದು; ಜನಪದ ಮತ್ತು ಆಯುರ್ವೇದ ವೈದ್ಯ ಪದ್ಧತಿಯ ವೈಜ್ಞಾನಿಕ ಮೌಲ್ಯವನ್ನು ನಿರ್ಧರಿಸುವುದು; ಜೀವವೈವಿಧ್ಯತೆಯ ಅಳಿವು-ಉಳಿವಿನಲ್ಲಿ ಸಮಾಜೋ ಆರ್ಥಿಕ ನೆಲೆಯ ಸಂಬಂಧಗಳ ಅಧ್ಯಯನ ಮತ್ತು ಸುಸ್ಥಿರ ಅಭಿವೃದ್ಧಿ ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಂಶೋಧನೆ,ವಿಶ್ಲೇಷಣೆ ನಡೆಯಲಿದೆ.
ಸಂಶೋಧನಾ ಕಾರ‍್ಯದ ಬಳಿಕ ವಿವಿಯಲ್ಲೇ ಪ್ರಯೋಗಾಲಯ ಸ್ಥಾಪಿಸುವುದು ಮತ್ತು ಅಲ್ಲಿಯೇ ಸಂಶೋಧನಾ ತರಬೇತಿ ನೀಡುವುದು; ಬೌದ್ಧಿಕ ಹಕ್ಕು ಸ್ವಾಮ್ಯತೆ ಪಡೆಯಲು ಸಹಕಾರ ; ಸಂಶೋಧನೆಯ ಫಲ ಕೈಗಾರಿಕೆಗೆ ತಲುಪುವಂತೆ ಮಾಡುವುದು ಸೇರಿದಂತೆ ನಾನಾ ರೀತಿಯ ರಚನಾತ್ಮಕ ಕಾರ‍್ಯಗಳ ಕನಸು ಕಂಡಿದೆ ಮೈಸೂರು ವಿವಿ. ಎಲ್ಲವೂ ನನಸಾಗುವ ಹಾದಿ ಹಿಡಿಯಬೇಕಷ್ಟೆ !
ಕೋಟ್
ನಮ್ಮ ಸುತ್ತಮುತ್ತಲಿನ ನೈಸರ್ಗಿಕ ಸಂಪನ್ಮೂಲವನ್ನು ಮಾನವ ಕಲ್ಯಾಣಕ್ಕೆ, ಆರೋಗ್ಯ ಕ್ಷೇತ್ರಕ್ಕೆ ಸದ್ವಿನಿಯೋಗ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಶೋಧನೆ ನಡೆಸಲೆಂದೇ ವಿವಿ ಈ ಯೋಜನೆ ಕೈಗೆತ್ತಿಕೊಂಡಿದೆ. ಸಮಾಜಕ್ಕೆ ಇದರ ಗರಿಷ್ಠ ಹಾಗೂ ಶಾಶ್ವತ ಪ್ರಯೋಜನ ದೊರೆಯಬೇಕು. ಈ ನಿಟ್ಟಿನಲ್ಲಿ - ಒಂದು ಸುಸಜ್ಜಿತ ಜೀವ ಸಂಪನ್ಮೂಲಗಳ ನಿರ್ವಹಣಾ ಸಂಸ್ಥೆಯನ್ನು ವಿವಿ ಸ್ಥಾಪಿಸಲಿದೆ. ಈ ಸಂಸ್ಥೆ ಜಗತ್ತಿನಲ್ಲಿಯೇ ಉತ್ಕೃಷ್ಟ ಸಂಶೋಧನಾ ಕೇಂದ್ರವಾಗಬೇಕೆಂಬುದು ನಮ್ಮ ಆಸೆ.
- ಪ್ರೊ. ವಿ. ಜಿ. ತಳವಾರ್, ಕುಲಪತಿ.
------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ