ಪ್ರತ್ಯೇಕ ಶಿಕ್ಷಣ ವ್ಯವಸ್ಥೆ ಸಲ್ಲ:ದೇಜಗೌ


-‘ಕರ್ನಾಟಕ ರತ್ನ’ ಪ್ರಶಸ್ತಿಗೆ ಭಾಜನರಾಗಿರುವ ವಿಶ್ರಾಂತ ಕುಲಪತಿ ದೇ.ಜವರೇಗೌಡ ಅವರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಅಭಿನಂದಿಸಲಾಯಿತು.

ವಿಕ ಸುದ್ದಿಲೋಕ ಮೈಸೂರು
ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಶಿಕ್ಷಣ ವ್ಯವಸ್ಥೆ ಸರಿಯಲ್ಲ.ಎಲ್ಲಾ ಧರ್ಮಿಯರು ಒಟ್ಟು ಕುಳಿತು ಕಲಿಯುವ ವ್ಯವಸ್ಥೆ ಸೂಕ್ತ ಎಂದು ವಿಶ್ರಾಂತ ಕುಲಪತಿ ಪ್ರೊ.ದೇ.ಜವರೇಗೌಡ ಅವರು ಪ್ರತಿಪಾದಿಸಿದ್ದಾರೆ.
ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಶಾಲಾ,ಕಾಲೇಜು ತೆರೆದಿರುವುದರ ಔಚಿತ್ಯವನ್ನು ಪ್ರಶ್ನಿಸಿದ ಅವರು,ರಾಜಕಾರಣಿಗಳು ಮತಕ್ಕಾಗಿ ಜಾತಿ,ಧರ್ಮಗಳ ಹೆಸರಿನಲ್ಲಿ ಮನಸ್ಸುಗಳನ್ನು ಛಿದ್ರಗೊಳಿಸುತ್ತಿದ್ದಾರೆ.ಬೆಸೆಯುವ ಪ್ರಯತ್ನವನ್ನು ಯಾರೂ ಮಾಡುತ್ತಿಲ್ಲ ಎಂದು ವಿಷಾದಿಸಿದರು.
‘ಕರ್ನಾಟಕ ರತ್ನ’ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಪತ್ರಕರ್ತರ ಸಂಘ ನೀಡಿದ ಪ್ರೀತಿ ಪೂರ್ವಕ ಅಭಿನಂದನೆಯನ್ನು ಸ್ವೀಕರಿಸಿ ‘ಮಾಧ್ಯಮ ಸಂವಾದ’ದಲ್ಲಿ ಮಾತನಾಡಿದ ಅವರು,ನಾಡಿನ ಶ್ರೀಮಂತ ಪರಂಪರೆ, ಕನ್ನಡಿಗರ ನಿಷ್ಕಾಳಜಿ,ಮತಾಂತರ ಸಮಸ್ಯೆ,ಶಿಕ್ಷಣ ವ್ಯವಸ್ಥೆ,ರಾಜಕಾರಣ ಎಲ್ಲದರ ಕುರಿತು ‘ಹಕ್ಕಿನೋಟ’ಬೀರಿದರು.
ಮನಸ್ಸುಗಳನ್ನು ಬೆಸೆಯುವ ನಿಟ್ಟಿನಲ್ಲಿ ಎಲ್ಲಾ ಜಾತಿ,ಧರ್ಮದ ಮಕ್ಕಳು ಒಂದೇ ಸೂರಿನಡಿ ಕಲಿಯುವಂತಾಗಬೇಕು.ಅಲ್ಲಿ ಉರ್ದು ಸೇರಿದಂತೆ ಎಲ್ಲ ಅಗತ್ಯ ಭಾಷೆಯನ್ನೂ ಕಲಿಸಬಹುದು. ಆದರೆ,ಪ್ರತ್ಯೇಕ ಶಾಲೆ,ಕಾಲೇಜು ಸಲ್ಲ.ಯಾವುದೇ ಜಾತಿ,ಧರ್ಮದ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಯೂ ಸರಿಯಲ್ಲ. ಭಾಷೆಯಾಗಿ ಉರ್ದು,ಸಂಸ್ಕೃತ ವಿವಿಗಳನ್ನು ಆರಂಭಿಸಿದರೆ ಅಭ್ಯಂತರವಿಲ್ಲ ಎಂದು ಹೇಳಿದರು.
ಮತಾಂತರ -ಮಠಗಳು:ಮತಾಂತರಕ್ಕೆ ಮಠಗಳು,ರಾಜಕಾರಣಿಗಳೇ ಕಾರಣ. ಮತಾಂತರದ ಬೇರುಗಳಿರುವುದು ಹಿಂದೂ ಧರ್ಮದಲ್ಲಿಯೇ.
ದೇಶದಲ್ಲಿರುವ ಸಾವಿರಾರು ಮಠಗಳು ‘ಎಲ್ಲರನ್ನು ಪ್ರೀತಿಯಿಂದ ಕಾಣುವುದೇ ಧರ್ಮ’ ಎಂಬ ಸತ್ಯ ಅರಿತು ಅಸ್ಪೃಶ್ಯತೆ,ಜಾತೀಯತೆ ನಿವಾರಣೆಗೆ ಪ್ರಯತ್ನಿಸಿದ್ದರೆ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ.
ಯಾವತ್ತೂ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ರಾಜಕಾರಣಿಗಳಿಗೂ ಈ ಬಗ್ಗೆ ಕಾಳಜಿ ಇಲ್ಲ.ಆಮಿಷ, ಬಲತ್ಕಾರದಿಂದ ಮತಾಂತರ ಮಾಡಿದರೆ ಅದು ತಪ್ಪು.ಹಾಗಂತ,ದಾಳಿ ನಡೆಸಿ ಕ್ರಿಸ್ತ,ಮೇರಿ ಪ್ರತಿಮೆಯನ್ನು ಭಗ್ನಗೊಳಿಸುವುದು ಸಲ್ಲ. ಧೈರ್ಯ ಶಕ್ತಿ ಇದ್ದರೆ ಉಪವಾಸ ಕುಳಿತುಕೊಳ್ಳಿ.
ಭಾಷೆಗೆ ಬೆಸೆಯುವ ಶಕ್ತಿ: ಧರ್ಮ ಜನರ ಮನಸ್ಸುಗಳನ್ನು ಛಿದ್ರ ಮಾಡುತ್ತಿದೆ.ಇಂಥ ಸಂದರ್ಭದಲ್ಲಿ ಕನ್ನಡದ ಮೂಲಕ ಮಾತ್ರ ನಾಡು ಕಟ್ಟಲು,ಹೃದಯಗಳನ್ನು ಬೆಸೆಯಲು ಸಾಧ್ಯ.ಮನೆಯೊಳಗಿನ ಮಾತು ಯಾವುದೇ ಆಗಿರಲಿ,ಹೊರಗಿನ ವ್ಯವಹಾರ ಭಾಷೆ ಕನ್ನಡವೇ ಆಗಬೇಕು.ಇಲ್ಲಿನ ನೆಲ,ಜಲವನ್ನು ಬಳಸಿಕೊಳ್ಳುವ ಬಹುರಾಷ್ಟ್ರೀಯ ಕಂಪನಿಗಳೂ ಸೇರಿ ನಾಡಿನಲ್ಲಿರುವ ಎಲ್ಲರೂ ಕನ್ನಡದಲ್ಲೇ ಕಡ್ಡಾಯವಾಗಿ ವ್ಯವಹರಿಸಬೇಕು.
ನಿಷ್ಕಾಳಜಿ: ಕನ್ನಡ ಸಾಹಿತ್ಯ,ನಾಡು ನುಡಿಯದ್ದು ಶ್ರೀಮಂತ ಪರಂಪರೆ. ನಾಡಿನ ಬಗ್ಗೆ ಕಾಳಜಿ ಕಡಿಮೆಯಾಗುತ್ತಿರುವುದು ದುರ್ದೈವ.ತಮಿಳುನಾಡು ಸೇರಿ ಹಲವು ರಾಜ್ಯದ ಜನರು ಅಪಾರ ಸಂಖ್ಯೆಯಲ್ಲಿ ಬಂದು ಜಮೀನು ಖರೀದಿಸುತ್ತಿದ್ದಾರೆ. ಸರಕಾರ ಎಚ್ಚರ ವಹಿಸುತ್ತಿಲ್ಲ.ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳೂ ತಡೆಯುವ ಪ್ರಯತ್ನ ಮಾಡುತ್ತಿಲ್ಲ. ಹಾಗಂತ,ನಮ್ಮದು ಭಾಷಾ ದುರಭಿಮಾನ ಅಲ್ಲ. ಹೊರಗಿನಿಂದ ಬಂದವರು ಕನ್ನಡದ ಮೇಲೆ ಸವಾರಿ ಮಾಡುವಂತಾಗಬಾರದು.
ಟೀಕೆ-ಟಿಪ್ಪಣಿ:ಶಾಸ್ತ್ರೀಯ ಭಾಷೆ ವಿಚಾರದಲ್ಲಿ ತಮಿಳುನಾಡು ಸರಕಾರದ ನಡವಳಿಕೆಗಳನ್ನು ಅವರು ಟೀಕಿಸಿದರು. ಕೇಂದ್ರ ಸರಕಾರ ಈ ವಿಷಯದಲ್ಲಿ ಅಪರಾಧ ಮಾಡಿದೆ. ಆನಂತರವಾದರೂ ತಿದ್ದಿಕೊಳ್ಳುವ ಗೋಜಿಗೆ ಹೋಗಿಲ್ಲ ಎಂದು ಆಕ್ಷೇಪಿಸಿದರು.
ಕನ್ನಡದ ಕೆಲಸಕ್ಕಾಗಿ ಕೋಟಿ ಅನುದಾನ ಪಡೆದಿರುವ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಸಂಸ್ಥೆಗಳು ಈ ನಿಟ್ಟಿನಲ್ಲಿ ಏನನ್ನೂಮಾಡದ ಬಗ್ಗೆ ಕೇಳಿದ ಪ್ರಶ್ನೆಗೆ ನೇರ ಉತ್ತರ ನೀಡಲು ನಿರಾಕರಿಸಿದರು.‘ ಆ ಬಗ್ಗೆ ಹೇಳಬೇಕಾದ್ದನ್ನು ಸರಕಾರಕ್ಕೆ ಹೇಳಿದ್ದೇನೆ. ಎಲ್ಲವನ್ನೂ ಹೇಳಿ ಮೈಮೇಲೆ ಎಳೆದುಕೊಳ್ಳಲಾರೆ. ಏನಾಗಬೇಕು ಎನ್ನುವ ಬಗ್ಗೆ ನೀವೇ ಪ್ರಯತ್ನ ನಡೆಸಿ’ ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಕೆ.ಶಿವಕುಮಾರ್,ಪ್ರಧಾನ ಕಾರ‍್ಯದರ್ಶಿ ಬಿ.ಎಸ್.ಪ್ರಭುರಾಜನ್ ಸನ್ಮಾನಿಸಿದರು. ಉಪಾಧ್ಯಕ್ಷ ರಾಜೇಶ್ವರನ್ ಸ್ವಾಗತಿಸಿ,ಖಜಾಂಚಿ ಕುಂದೂರು ಉಮೇಶ್ ಭಟ್ ವಂದಿಸಿದರು. ಹಿರಿಯ ಪತ್ರಕರ್ತ ಈಚನೂರು ಕುಮಾರ್ ದೇಜಗೌ ಕುರಿತು ಮಾತನಾಡಿದರು.
***********************
***
‘ಪಾಪಿ’ಗುದ್ಧಾರಮಿಹುದು ...
ಕನ್ನಡ ಹೋರಾಟದಲ್ಲಿ ಮುತ್ತಪ್ಪರೈ ಮತ್ತಿತರ ಅಪರಾಧಿ ಹಿನ್ನೆಲೆಯ ‘ಕನ್ನಡ ರಕ್ಷಕ’ರು,‘ದಂಧೆ ’ಯ ರಕ್ಷಣೆಗೆ ಕನ್ನಡವನ್ನು ಬಳಸಿಕೊಳ್ಳುತ್ತಿರುವವರ ಪಾಲ್ಗೊಳ್ಳುವಿಕೆಯ ಔಚಿತ್ಯದ ಕುರಿತ ಪ್ರಶ್ನೆಗೆ ದೇಜಗೌ ಉತ್ತರ ‘ನನಗೆ ಕನ್ನಡ ಒಂದೇ ಗೊತ್ತು.ಉಳಿದದ್ದೆಲ್ಲ ಅಮುಖ್ಯ...’. ಈ ಕುರಿತ ‘ಪ್ರಶ್ನಾಸ್ತ್ರ’ಕ್ಕೆ ಕರ್ನಾಟಕ ರತ್ನ ನೀಡಿದ ಉತ್ತರ ಹೀಗಿತ್ತು.
*ಹಾಗಿದ್ರೆ,ದಂಧೆ-ವ್ಯವಹಾರಕ್ಕೂ ಕನ್ನಡ ಹೋರಾಟ ಬಳಕೆ ಆಗಬಹುದಾ?
-ಪಾಪಿಗೂ ಉದ್ಧಾರದ ಅವಕಾಶ ಇದೆ. ಸಾಹಿತ್ಯವನ್ನು ಓದಿ, ನಿಮಗೆ ಎಲ್ಲಾ ಅರ್ಥವಾಗುತ್ತೆ (ರಾಮಾಯಣ ದರ್ಶನಂ ಉದಾಹರಣೆ)
*ಉದ್ದಾರವಾದ್ರೆ ತೊಂದರೆ ಇಲ್ಲ; ‘ದಂಧೆ’ಗೆ ಹೆಚ್ಚು ಬಳಕೆ ಆಗ್ತಿದೆಯಲ್ಲ?
- ಮುಂದೆ ನನಗೂ ನೀವು ಹೀಗೇ ಹೇಳಬಹುದು,ಹೋರಾಟದಿಂದ ಇಷ್ಟೆಲ್ಲ ಮಾಡಿಕೊಂಡ ಅಂತ...
* ಅಷ್ಟಕ್ಕೂ ಇಂಥ ರಕ್ಷಕರು ಭಾಷೆಗೆ ನೀಡಿದ ಕೊಡುಗೆ ಏನು?
- ಕನ್ನಡದ ಕೆಲಸಕ್ಕೆ ಎಷ್ಟಾದರೂ ಹಣ ಕೊಡ್ತಾರೆ. ಪುಸ್ತಕ ಪ್ರಕಟಿಸುತ್ತಾರೆ...
* ಅಕ್ರಮ ದಂಧೆಯಿಂದ ಗಳಿಸಿದ ಹಣವನ್ನು ಕನ್ನಡದ ಉದ್ಧಾರಕ್ಕೆ ಬಳಸುವಂತ ದರ್ದ್ದು ಏನಿದೆ?
- ನಿಮ್ಮ ಪ್ರಶ್ನೆ,ಕಾಳಜಿ ಅರ್ಥ ಆಗಿದೆ. ಆದರೆ, ಸರಕಾರದಲ್ಲೆ ಅಂಥ ಹಿನ್ನೆಲೆಯ ಮಂತ್ರಿಗಳಿದ್ದಾರಲ್ಲ, ಏನ್ ಮಾಡೋದು !?
***********************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ