ಮೈಸೂರು ಭಾಗದಲ್ಲಿ ಕಂಡ ಹುಲಿಗಳು ೭೦

ಮುಗಿದ ಗಣತಿ: ಇನ್ನೇನಿದ್ದರೂ ವರದಿಯತ್ತ ಚಿತ್ತ
ಕುಂದೂರು ಉಮೇಶಭಟ್ಟ/ಮೈಸೂರು
ಮೈಸೂರು ಭಾಗದಲ್ಲಿ ಗಣತಿಗೆ ಸಿಕ್ಕ ಹುಲಿಗಳ ಸಂಖ್ಯೆ ೭೦. ಚಿರತೆಗಳು ೨೭.
ಗುರುವಾರ ಮುಕ್ತಾಯವಾದ ಆರು ದಿನಗಳ ಹುಲಿ ಗಣತಿಯ ಪ್ರಾಥಮಿಕ ಅಂದಾಜಿನ ಲೆಕ್ಕಾಚಾರವಿದು.
ಬಂಡೀಪುರ, ನಾಗರಹೊಳೆಯನ್ನೊಳಗೊಂಡ ಹುಲಿ ಯೋಜನೆ ಹಾಗೂ ಬಿಳಿಗಿರಿರಂಗ ವನ್ಯಧಾಮದಲ್ಲಿ ಹುಲಿ ಗಣತಿ ಯಶಸ್ವಿಯಾಗಿ ಮುಗಿದಿದೆ. ೫೪೮ ಸ್ವಯಂ ಸೇವಕರು ಹಾಗೂ ೫೦೦ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಹೆಜ್ಜೆ ಜಾಡು ಹಿಡಿದು ಆರು ದಿನ ಕಾಡು ಸುತ್ತಿದ್ದಾರೆ.
ಗಣತಿದಾರರು ಅರಣ್ಯ ಇಲಾಖೆ ಸಿಬ್ಬಂದಿಗೆ ನೀಡಿದ ಮಾಹಿತಿಯನ್ನು ಕಲೆ ಹಾಕುವ ಕೆಲಸ ಶುಕ್ರವಾರದಿಂದಲೇ ಆರಂಭಗೊಂಡಿದ್ದು. ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಪೂರ್ಣ ವರದಿ ಲಭ್ಯವಾಗಲಿದೆ. ಬರುವ ಅಕ್ಟೋಬರ್‌ನಲ್ಲಿ ವಿಶ್ವ ಹುಲಿ ಸಮ್ಮೇಳನ ಭಾರತದಲ್ಲಿ ನಡೆಯುತ್ತಿರುವುದರಿಂದ ಈ ಬಾರಿಯ ಹುಲಿ ಗಣತಿ ಮಹತ್ವ ಪಡೆದಿದೆ.
ಬಂಡೀಪುರ ರಾಷ್ಟೀಯ ಉದ್ಯಾನದ ೧೨ ವಲಯದ ೧೦೩ ಬೀಟ್‌ಗಳಲ್ಲಿ ಸಂಚರಿಸಿದಾಗ ಕಂಡ ಹುಲಿಗಳ ಸಂಖ್ಯೆ ೩೦. ಚಿರತೆಗಳ ಸಂಖ್ಯೆ ೧೫. ಇದರಲ್ಲಿ ಮಾಂಸಾಹಾರಿ ಪ್ರಾಣಿಗಳ ಗಣತಿ ದಿನ ೧೭, ಸಸ್ಯಾಹಾರಿ ಗಣತಿ ದಿನ ೧೩ ಹುಲಿ ಕಂಡಿವೆ. ಹುಲಿ ಹೆಜ್ಜೆಯಲ್ಲದೇ, ಮಲವನ್ನು ಸಂಗ್ರಹಿಸಲಾಗಿದೆ. ೨೬೭ ಮಂದಿ ಸ್ವಯಂ ಸೇವಕರು ಬಂಡೀಪುರ ವ್ಯಾಪ್ತಿಯ ೯೦೦ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಸುತ್ತು ಹಾಕಿದ್ದಾರೆ.
ನಾವೀಗ ಮಾಹಿತಿಯನ್ನೆಲ್ಲಾ ಸಾಫ್ಟ್‌ವೇರ್‌ನಲ್ಲಿ ಕಲೆ ಹಾಕುತ್ತಿದ್ದೇವೆ. ಪೂರ್ಣ ವರದಿಯನ್ನು ಹುಲಿ ಯೋಜನೆ ನಿರ್ದೇಶಕರಿಗೆ ರವಾನಿಸಲಾಗುತ್ತದೆ. ಬಂಡೀಪುರ ದಲ್ಲಿ ಹುಲಿ ಸಂಖ್ಯೆ ಹೆಚ್ಚಾಗಿರುವ ವಾತಾವರಣವಂತೂ ಗಣತಿ ವೇಳೆ ಕಂಡು ಬಂದಿದೆ ಎಂದು ಬಂಡೀಪುರ ಡಿಸಿಎಫ್ ಡಾ.ಕೆ.ಟಿ.ಹನುಮಂತಪ್ಪ ತಿಳಿಸಿದರು.
ಇನ್ನು ನಾಗರಹೊಳೆಯ ೬೪೩ ಚದರ ಕಿ.ಮಿ ವ್ಯಾಪ್ತಿಯಲ್ಲಿ ೨೫ ಹುಲಿ ಹಾಗೂ ೭ ಚಿರತೆ ಕಂಡು ಬಂದಿವೆ. ೭ ವಲಯದಲ್ಲಿ ಅಂತರಸಂತೆ ವನ್ಯಜೀವಿ ವಲಯದಲ್ಲೇ ಅತಿ ಹೆಚ್ಚು ಅಂದರೆ ೬. ಡಿ.ಬಿ.ಕುಪ್ಪೆ ಹಾಗೂ ವೀರನಹೊಸಳ್ಳಿ ವಲಯದಲ್ಲಿ ತಲಾ ೫, ಮೇಟಿಕುಪ್ಪೆ ಹಾಗೂ ಕಲ್ಲಹಳ್ಳದಲ್ಲಿ ತಲಾ ೩, ಆನೆಚೌಕಲೂರು ವಲಯದಲ್ಲಿ ೨ ಹಾಗೂ ನಾಗರಹೊಳೆ ವಲಯದಲ್ಲಿ ೧ ಹುಲಿಯನ್ನು ನೇರವಾಗಿಯೇ ಕಂಡಿವೆ.
೬೩ ಬೀಟ್ ರೂಪಿಸಿ ೧೯೯ ಸ್ವಯಂ ಸೇವಕರನ್ನು ಬಳಸಲಾಗಿತ್ತು. ೧೫ ಕಿ,ಮೀ.ಗೆ ಒಂದು ಬೀಟ್‌ನಂತೆ ರೂಪಿಸಿ ಯಶಸ್ವಿಯಾಗಿ ಗಣತಿ ನಡೆಸಿದ್ದೇವೆ ಎಂದು ನಾಗರಹೊಳೆ ಡಿಸಿಎಫ್ ವಿಜಯರಂಜನ್‌ಸಿಂಗ್ ಹೇಳಿದರು.
ತಮಿಳುನಾಡು ಗಡಿಗೆ ಹೊಂದಿಕೊಂಡ ಬಿಳಿಗಿರಿರಂಗ ವನ್ಯಧಾಮದಲ್ಲೂ ಹುಲಿಗಳ ಸಂಖ್ಯೆ ಚೆನ್ನಾಗಿಯೇ ಇದೆ. ಇಲ್ಲಿ ೧೫ ಹುಲಿ ಹಾಗೂ ೫ ಚಿರತೆ ಕಂಡಿವೆ.ಇಲ್ಲಿ ೮೨ ಸ್ವಯಂ ಸೇವಕರನ್ನು ಬಳಸಿ ೪೩ಬೀಟ್‌ಗಳಲ್ಲಿ ಗಣತಿ ಕಾರ‍್ಯ ನಡೆದಿದೆ ಎನ್ನುವುದು ಅಲ್ಲಿನ ಡಿಸಿಎಫ್ ಬಿಸ್ವಜೀತ್ ಮಿಶ್ರ ನೀಡಿದ ಹೇಳಿಕೆ.
ಈ ವನ್ಯಧಾಮವನ್ನು ಹುಲಿ ಯೋಜನೆಗೆ ಸೇರಿಸಬೇಕೆಂಬ ಪ್ರಸ್ತಾವ ಇದ್ದರೂ ಸ್ಥಳೀಯರ ವಿರೋಧದಿಂದ ಇನ್ನೂ ಅನುಮತಿ ಕೇಂದ್ರದಿಂದ ಸಿಕ್ಕಿಲ್ಲ.
================
ಎಲ್ಲಿ ಎಷ್ಟು
ಬಂಡೀಪುರ-೩೦
ನಾಗರಹೊಳೆ-೨೫
ಬಿಆರ್‌ಟಿ-೧೫
--------

ಹುಲಿ ಗಣತಿ ಕಾರ‍್ಯ ಪೂರ್ಣಗೊಂಡಿದೆ. ಈಗ ಕಲೆ ಹಾಕಿದ ಮಾಹಿತಿ ಒಂದೆಡೆ ಸೇರಿಸುವ ಕೆಲಸ ಶುರುವಾಗಿದೆ. ಇದು ಸುದೀರ್ಘ ಕೆಲಸವಾಗಿರುವುದರಿಂದ ಮೂರು ತಿಂಗಳಾದರೂ ಸಮಯ ಬೇಕು. ಅದನ್ನು ಕೇಂದ್ರಕ್ಕೆ ಸಲ್ಲಿಸಿದ ನಂತರ ವೈಜ್ಞಾನಿಕ ಪರಾಮರ್ಶೆಯ ನಂತರ ಹುಲಿಗಳ ಸಂಖ್ಯೆಯ ಸ್ಪಷ್ಟ ಚಿತ್ರಣ ಸಿಗಲಿದೆ.
-ಬಿ.ಜೆ.ಹೊಸಮಠ, ಹುಲಿ ಯೋಜನೆ ನಿರ್ದೇಶಕ ಮೈಸೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ