ಇಂದಿನಿಂದ ತಿರುಮಕೂಡಲು ಪೂರ್ಣಕುಂಭ ಮೇಳ

ಜೆ.ಶಿವಣ್ಣ ಶ್ರೀಕ್ಷೇತ್ರ ತಿರುಮಕೂಡಲು, ವಿಕ ಸುದ್ದಿಲೋಕ
ಕುಂಭ ಮೇಳದ ಪವಿತ್ರ ಮಾಘ ಸ್ನಾನ ಮಾಡುವ ಭಕ್ತಾದಿಗಳಿಗೆ ಪುಣ್ಯ ಧಾರೆ ಎರೆಯಲು ತಿರುಮಕೂಡಲಿನಲ್ಲಿ ಕಪಿಲೆ-ಕಾವೇರಿ ಸಿದ್ಧರಾಗಿ ನಿಂತಿದ್ದಾರೆ. ಈ ಎರಡು ನದಿಗಳೊಂದಿಗೆ ಗುಪ್ತಗಾಮಿನಿಯಾಗಿ ಹರಿಯುವ ಸ್ಫಟಿಕ ಸರೋವರವೂ ಸನ್ನದ್ಧವಾಗಿದೆಯಂತೆ !
ಕೇವಲ ನಾಲ್ಕು ತಿಂಗಳ ಅಂತರದಲ್ಲಿ ಎರಡು ಮಹಾ ಹಬ್ಬಗಳನ್ನು ಕಂಡ ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಮಹಾ ಉತ್ಸವ ಬಂದಿದೆ. ಜಗದ್ವಿಖ್ಯಾತ ನಾಡಹಬ್ಬ ದಸರೆ ಬಳಿಕ, ಮರಳು ರಾಶಿಯ ನಡುವಿನ ಪುರಾಣ ಪ್ರಸಿದ್ಧ ತಲಕಾಡಿನ ಪಂಚಲಿಂಗ ದರ್ಶನದ ಮಹಾ ಧಾರ್ಮಿಕ ಉತ್ಸವಗಳನ್ನು ಸಂಭ್ರಮದಿಂದ ಆಚರಿಸಿದ ಬೆನ್ನ ಹಿಂದೆಯೇ ಈಗ ದಕ್ಷಿಣ ಭಾರತದ ಮಹಾಕುಂಭಮೇಳ ಎಂದೇ ಪರಿಗಣಿತವಾಗಿರುವ ಸ್ಥಳ ಐತಿಹ್ಯವಿರುವ ‘ತಿರುಮಕೂಡಲು ಪೂರ್ಣಕುಂಭ’ ಮೇಳದ ಆಗಮನವಾಗಿದೆ.
ಶ್ರೀ ವಿರೋಧಿನಾಮ ಸಂವತ್ಸರದಲ್ಲಿ ನಡೆದ ಕಾವೇರಿ ತಡಿಯ ತಲಕಾಡಿನಲ್ಲಿ ಮರಳರಾಶಿಯ ನಡುವೆ ಹುದುಗಿರುವ ಪಂಚಲಿಂಗಗಳ ದರ್ಶನದ ಭಕ್ತಿಭಾವದ ಗುಂಗಿನಿಂದ ಹೊರ ಬರುವ ಮುನ್ನವೇ ತಿರುಮಕೂಡಲು ನರಸೀಪುರದ ಜನತೆ ರಾಜ್ಯ, ಹೊರರಾಜ್ಯಗಳಿಂದ ಆಗಮಿಸಿರುವ ಅಪಾರ ಸಂಖ್ಯೆಯ ಭಕ್ತಾದಿಗಳನ್ನು ಕುಂಭಮೇಳಕ್ಕೆ ಸ್ವಾಗತಿಸಲು ಸಜ್ಜಾಗಿದ್ದಾರೆ.
ನಾಡಿನ ಜೀವನಾಡಿಯಾಗಿರುವ ಜೀವನದಿ ಕಾವೇರಿ, ಕಪಿಲೆಯ ನದಿ ಪಾತ್ರ ಕಳೆಗಟ್ಟಲಾರಂಭಿಸಿದೆ. ಈ ಎರಡೂ ಪವಿತ್ರ ನದಿಗಳು ಗುಪ್ತಗಾಮಿನಿ ಸ್ಫಟಿಕ ಸರೋವರದೊಂದಿಗೆ ಸಂಗಮಿಸುವ ನದಿಯ ನಟ್ಟನಡುವಿನ ಸ್ಥಳ ‘ಬಸವನ ಕಲ್ಲಿನಕಂಭ’ಪ್ರಮುಖ ಆಕರ್ಷಣೆ. ಪುರಾಣೇತಿಹಾಸಗಳಲ್ಲಿ ಮಹತ್ವದ ಮನ್ನಣೆ ಪಡೆದಿರುವ ತ್ರಿವೇಣಿ ಸಂಗಮ ಭಕ್ತರನ್ನು ಪಾವನಗೊಳಿಸಲು ಸಂಭ್ರಮಾದರಗಳಿಂದ ಸಜ್ಜಾಗುತ್ತಿದೆ.
ಉತ್ತರ ಭಾರತದ ಪ್ರಯಾಗ, ಹರಿದ್ವಾರ, ನಾಸಿಕ, ಉಜ್ಜಯಿನಿಯಂತೆಯೇ ಪುರಾಣ ಪ್ರಸಿದ್ಧ, ಇತಿಹಾಸ ಪ್ರಸಿದ್ಧ ಸಂಗಮ ಕ್ಷೇತ್ರವಾದ ಶ್ರೀಕ್ಷೇತ್ರದ ‘ತ್ರಿವೇಣಿ ಸಂಗಮ’ದಲ್ಲಿ ಲಕ್ಷಾಂತರ ಮಂದಿ ಪುಣ್ಯಸ್ನಾನ ಮಾಡಿ ಪುನೀತರಾಗಲಿದ್ದಾರೆ.
ತಿರುಮಕೂಡಲುವಿನಲ್ಲಿ ೧೯೮೯ ರಿಂದ ಆರಂಭಗೊಂಡು ೩ ವರ್ಷಗಳಿಗೊಮ್ಮೆ ನಡೆಯುವ ಈ ಮಹಾಮೇಳದ ವಿಶೇಷವೆಂದರೆ ಪುಣ್ಯಸ್ನಾನ. ಈ ಬಾರಿ ಮಹೋದಯ ಪುಣ್ಯಸ್ನಾನಕ್ಕೆ ಜ.೩೦ ರಂದು ಮೀನ ಲಗ್ನದಲ್ಲಿ ಬೆಳಗ್ಗೆ ೯.೨೫ ರಿಂದ ೧೧.೦೫ ಹಾಗೂ ಮಧ್ಯಾಹ್ನ ೧೨.೨೫ ರಿಂದ ೧.೧೩ ರವರೆಗೆ ಅಭಿಜಿನ್ ಮುಹೂರ್ತ, ವಿಧಿಮುಹೂರ್ತ ಹಾಗೂ ವೇದಮುಹೂರ್ತ ಪ್ರಶಸ್ತವೆಂದು ನಿಗದಿಯಾಗಿದೆ.
ಎರಡೂ ನದಿಯ ದಡದಲ್ಲಿ ಪ್ರಾಚೀನ ಶ್ರೀ ಗುಂಜಾ ನರಸಿಂಹಸ್ವಾಮಿ ಮತ್ತು ಶ್ರೀಅಗಸ್ತ್ಯೇಶ್ವರ ಸ್ವಾಮಿ ದೇವಾಲಯಗಳು (ಹರಿ-ಹರ) ಇರುವುದು ಮತ್ತೊಂದು ವಿಶೇಷ. ಅಗಸ್ತ್ಯ ಮುನಿಗಳು ಮರಳಿನಿಂದ ಲಿಂಗ ರೂಪಿಸಿ ಪ್ರತಿಷ್ಠಾಪಿಸಿ ಪೂಜಿಸಿದರೆನ್ನುವುದಕ್ಕೆ ಅಗಸ್ತ್ಯೇಶ್ವರ ಸ್ವಾಮಿ ದೇವಾಲಯ ಸಾಕ್ಷಿಭೂತವಾಗಿದೆ. ಅಗಸ್ತ್ಯೇಶ್ವರ ಲಿಂಗದಿಂದ ನೆತ್ತಿಯಿಂದ ಸದಾ ತೀರ್ಥೋದ್ಭವ ಮತ್ತೊಂದು ವಿಶೇಷ ಮತ್ತು ಅಚ್ಚರಿ.
ಜತೆಗೆ ಭಿಕ್ಷೇಶ್ವರ, ಮೂಲನಾಥೇಶ್ವರ, ಚೌಡೇಶ್ವರಿ, ರುದ್ರಪಾದ, ಭಾರದ್ವಾಜ ಋಷ್ಯಾಶ್ರಮ, ಅಕ್ಷಯ ವಟವೃಕ್ಷ, ಅಶ್ವತ್ಥ್‌ವೃಕ್ಷ, ವ್ಯಾಸರಾಜ ಮಠ ಇತ್ಯಾದಿ ಸಂಗಮವೂ ಹೌದು ಈ ತಿರುಮಕೂಡಲು.
ಇಂದಿನಿಂದ ಆರಂಭ
ಗುರುವಾರ (ಜ.೨೮)ದಿಂದ ತಿರುಮಕೂಡಲಿನಲ್ಲಿ ಕುಂಭ ಮೇಳ ನದಿಯ ಮರಳಿನ ದಿಬ್ಬದ ಮೇಲೆ ಆರಂಭವಾಗಲಿದೆ. ಕುಂಭಮೇಳ ನಡೆಯುವ ದಕ್ಷಿಣ ಭಾರತದ ಏಕೈಕ ಶ್ರೀಕ್ಷೇತ್ರ ತಿರುಮಕೂಡಲುವಿನಲ್ಲಿ ೧೯೮೯, ೧೯೯೨, ೧೯೯೫, ೧೯೯೫, ೧೯೯೮, ೨೦೦೧, ೨೦೦೪, ೨೦೦೭ ರ ಬಳಿಕ ಎಂಟನೇ ಪೂರ್ಣಕುಂಭ ನಾಳೆ(ಜ.೨೮)ಯಿಂದ ಆರಂಭವಾಗಲಿದ್ದು, ಮೂರು ದಿನಗಳು ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಶ್ರದ್ಧಾಭಕ್ತಿ ಮೆರೆಯಲಿದೆ.
ಜ.೨೮ ರಂದು ಬೆಳಗ್ಗೆ ೬ಕ್ಕೆ ಅಗಸ್ತ್ಯೇಶ್ವರಸ್ವಾಮಿ ದೇವಾಲಯದಲ್ಲಿ ಅನುಜ್ಞೆ, ಪುಣ್ಯಾಹ ಕಲಶ ಸ್ಥಾಪನೆ, ಗಣಹೋಮ, ಅಭಿಷೇಕ, ದೇವತಾರಾಧನೆ ಮೂಲಕ ಆಶೀರ್ವಾದ ಪಡೆದು ಲಿಂಗದಲ್ಲಿ ಉದ್ಭವಿಸುವ ಅಗ್ರತೀರ್ಥ ಸಮೇತ ಯಾಗಶಾಲೆ ಪ್ರವೇಶಿಸಿ ಹೋಮ, ಹವನ ನಡೆಸುವ ಮೂಲಕ ಮೇಳಕ್ಕೆ ಚಾಲನೆ ದೊರೆಯಲಿದೆ.
ಗಂಗೆ, ಕಾವೇರಿ, ಕಪಿಲೆ, ಯಮುನೆ ಸೇರಿದಂತೆ ಸಪ್ತ ನದಿಗಳಿಂದ ಕಳಶದಲ್ಲಿ ತರಲಾಗಿರುವ ಪವಿತ್ರ ಜಲವನ್ನು ಯಜ್ಞ ಸ್ಥಳದಲ್ಲಿಟ್ಟು ಪೂಜೆ, ಹೋಮ ನಡೆಸಿ ಜ.೩೦ ರಂದು ಬೆಳಗ್ಗೆ ೯.೨೫ಕ್ಕೆ ಪೂರ್ಣಾಹುತಿಯೊಂದಿಗೆ ಮೂರು ನದಿಗಳು ಸಂಗಮಿಸುವ ಸ್ಥಳವಾದ ಬಸವನ ಕಂಬದ ಬಳಿ ವಿಸರ್ಜಿಸುವ ಮೂಲಕ ಪುಣ್ಯಸ್ನಾನಕ್ಕೆ ಚಾಲನೆ ಸಿಗಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ