ಬೀಸೋ ಕೊಡಲಿಯಿಂದ ಸಾಲು ಮರ ಬಚಾವ್

ವಿಕ ಸುದ್ದಿಲೋಕ ಮೈಸೂರು
ಅಂತೂ ನಗರದ ಲಲಿತಮಹಲ್ ರಸ್ತೆಯ ನೂರಕ್ಕೂ ಹೆಚ್ಚು ಮರಗಳು ‘ಬೀಸೋ ಕೊಡಲಿ’ಯಿಂದ ಬಚಾವಾಗಿವೆ. ಪಾರಂಪರಿಕ ‘ರಾಜ ಮಾರ್ಗ’ದ ಮರಗಳನ್ನು ಉಳಿಸಬೇಕು ಎಂಬ ಪರಿಸರ ಪ್ರೇಮಿಗಳ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ.
ಅಭಿವೃದ್ಧಿಯ ದಾಹದಿಂದ ಮರಗಳನ್ನು ಕಡಿದುರುಳಿಸಲು ಕತ್ತಿ ಮಸೆಯುತ್ತಿದ್ದ ‘ಪ್ರಭಾವಿ’ಗಳ ಒತ್ತಾಯಕ್ಕೆ ಸೊಪ್ಪು ಹಾಕದ ಮಹಾನಗರಪಾಲಿಕೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಗಳು, ಸಾಲು ಮರಗಳನ್ನು ಉಳಿಸಿಕೊಂಡೆ ರಸ್ತೆ ಅಭಿವೃದ್ಧಿ ಪಡಿಸಲು ನಿರ್ಧರಿಸಿವೆ.
ಮರಕಡಿಯಲು ತೀವ್ರ ವಿರೋಧ ದಾಖಲಿಸಿದ್ದ ನಗರದ ಸ್ವಯಂ ಸೇವಾ ಸಂಘ,ಸಂಸ್ಥೆಗಳ ಪ್ರಮುಖರೊಂದಿಗೆ ಸೋಮವಾರ ಸಂಜೆ ಚರ್ಚೆ ನಡೆಸಿ,ಸಲಹೆ ಸೂಚನೆ ಆಲಿಸಿದ ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್,ಮುಡಾ ಆಯುಕ್ತ ಎಸ್.ಜಯಣ್ಣ ಅವರು ಅಂತಿಮವಾಗಿ‘ಮರ ಉಳಿಸುವ ’ಬದ್ಧತೆ ಪ್ರದರ್ಶಿಸಿದರು.
ಸೈಕಲ್ ಪಥ: ಪಾರಂಪರಿಕ ಮಹತ್ವದ ಮಾರ್ಗದ ಸಾಲು ಮರಗಳನ್ನು ಖಂಡಿತಾ ಕಡಿಯುವುದಿಲ್ಲ.‘ಪರ‍್ಯಾಯ’ಗಳ ಕುರಿತು ಸಭೆಯಲ್ಲಿ ವ್ಯಕ್ತವಾದ ಸಲಹೆ,ಸೂಚನೆಗಳನ್ನು ಸ್ವೀಕರಿಸಿದ್ದು,ಅನುಷ್ಠಾನ ಕುರಿತು ಚಿಂತನೆ ನಡೆಸಲಾಗುವುದು. ಪಾರಂಪರಿಕ ಪ್ರವಾಸೋದ್ಯಮಕ್ಕೆ ಪೂರಕವಾಗಿ ಮರಗಳ ಎರಡು ಮಗ್ಗುಲಲ್ಲಿ ಸೈಕಲ್ ಮತ್ತು ನಡಿಗೆ ಪಥವನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಇಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಮಾದರಿ ಮಾರ್ಗವನ್ನಾಗಿ ರೂಪಿಸುವ ಕುರಿತು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ವರ್ತುಲ ರಸ್ತೆ: ವರ್ತುಲ ರಸ್ತೆಯ ೯ ಕಿ.ಮಿ.ಬಾಕಿ ಕಾಮಗಾರಿಗೆ ಇದ್ದ ತೊಡಕು ನಿವಾರಣೆಯಾಗಿದ್ದು,ನಿರ್ಮಾಣ ಸಂಬಂಧ ಪ್ರಕ್ರಿಯೆ ಆರಂಭವಾಗಿದೆ. ಒಂದೂವರೆ ವರ್ಷದಲ್ಲಿ ಪೂರ್ತಿಗೊಳಿಸಲಾಗುವುದು.ಭೂಮಿ ಮಾಲೀಕರಿಗೆ ಪರಿಹಾರದ ಜತೆಗೆ ನಿವೇಶನವನ್ನು ನೀಡಲು ಮುಡಾ ಒಪ್ಪಿದೆ. ಇಷ್ಟರಲ್ಲೇ ವಿವಾದ ಬಗೆಹರಿಯಲಿದ್ದು, ಫೆಬ್ರವರಿ ಅಂತ್ಯದೊಳಗೆ ವಶಕ್ಕೆ ಪಡೆಯುತ್ತೇವೆ ಎಂದು ಎಂದು ಮುಡಾ ಆಯುಕ್ತ ಜಯಣ್ಣ ಸಭೆಗೆ ತಿಳಿಸಿದರು.
ವರ್ತುಲ ರಸ್ತೆ ಮುಗಿದರೆ ಸಂಚಾರ ಸಮಸ್ಯೆ ಬಹುತೇಕ ಬಗೆ ಹರಿಯಲಿದೆ.ಅಲ್ಲಿಯವರೆಗೆ ಸುಗಮ ಸಂಚಾರಕ್ಕೆ ‘ಪರ‍್ಯಾಯ’ಕ್ರಮಗಳ ಕುರಿತು ಚರ್ಚೆನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು.ಸಾಧ್ಯವಿರುವ ಕಡೆ ಮಾತ್ರ ಚತುಷ್ಪತ ರಸ್ತೆ ನಿರ್ಮಿಸಿ,ಉಳಿದೆಡೆ ವಾಹನ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಮರ ಕಡಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೇಡ,ಬೇಕು:ಅರಣ್ಯ ಇಲಾಖೆ ಎಸಿಎಫ್ ಗೋಪಿನಾಥ್ ,‘ಪ್ರಕರಣ ನ್ಯಾಯಾಲಯದಲ್ಲಿದೆ. ಟ್ರೀಕೋರ್ಟ್ ಮತ್ತು ಜಿಲ್ಲಾಧಿಕಾರಿಗಳು ತಡೆ ನೀಡಿದ್ದಾರೆ. ಏನೇ ಮಾಡಬೇಕೆಂದರೂ ಮೇಲ್ಮನವಿ ಹೋಗಬೇಕು. ಇಲ್ಲಿರುವ ೫೦ ವರ್ಷದ ೯೪ ಬೇವಿನ ಮರಗಳನ್ನು ಕಡಿಯುವುದು ಉಚಿತವಲ್ಲ’ ಎಂದು ಅಭಿಪ್ರಾಯಪಟ್ಟರು. ನಗರಪಾಲಿಕೆ ಕಾರ‍್ಯಪಾಲಕ ಎಂಜಿನಿಯರ್ ಹಾಗೂ ಸಂಚಾರ ಎಸಿಪಿ ಶಂಕರೇಗೌಡ,ಇನ್ಸ್‌ಪೆಕ್ಟರ್ ರಾಮಚಂದ್ರ ಅವರು ಸಂಚಾರ ದಟ್ಟಣೆ ಮತ್ತು ಅಪಘಾತದ ಅಂಕಿ ಅಂಶ ನೀಡುವ ಮೂಲಕ ರಸ್ತೆ ವಿಸ್ತರಣೆಯ ಅಗತ್ಯವನ್ನು ಪ್ರತಿಪಾದಿಸಿದರು.
ಏಕ ಅಭಿಪ್ರಾಯ:ಆದರೆ,ಸಭೆಯಲ್ಲಿ ಮಾತನಾಡಿದ ಸಂಸ್ಥೆಯ ಪ್ರತಿನಿಧಿಗಳು ‘ನಾವು ಅಭಿವೃದ್ಧಿ ವಿರೋಧಿಗಳಲ್ಲ.ಹಾಗಂತ ಮರ ಕಡಿದು ಅಭಿವೃದ್ಧಿ ಮಾಡುವುದನ್ನು ಒಪ್ಪುವುದೂ ಇಲ್ಲ.ಉಳಿಸಿಕೊಂಡೇ ಅಭಿವೃದ್ಧಿ ಮಾಡುವ ಕುರಿತು ಚಿಂತನೆ ನಡೆಸಿ’ ಎಂದು ಏಕ ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರು ಗ್ರಾಹಕರ ಪರಿಷತ್‌ನ ಡಾ.ಭಾಮಿ ವೀ.ಶೆಣೈ, ಬಾಪು ಸತ್ಯನಾರಾಯಣ, ಎಸಿಐಸಿಎಂನ ಎಂ.ಲಕ್ಷ್ಮಣ್, ನಿವೃತ್ತ ಕರ್ನಲ್ ಡಾ.ಆನಂದ್,ವಕೀಲರಾದ ತಮ್ಮಯ್ಯ,ಭಾಸ್ಕರ್, ಮಾಜಿ ಉಪಮೇಯರ್ ಪುಷ್ಪವಲ್ಲಿ,ವಿವಿಧ ಸಂಘಟನೆಗಳ ರವಿ,ಬಾಲಕೃಷ್ಣ, ಬಸವರಾಜ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
*****
ಸಲಹೆ -ಸೂಚನೆ-ಅಭಿಪ್ರಾಯ
೧.ಸಂಚಾರ ದಟ್ಟಣೆಗೂ ಅಪಘಾತಕ್ಕೂ ಸಂಬಂಧ ಕಲ್ಪಿಸೋದು ಸರಿಯಲ್ಲ. ಇತ್ತೀಚೆಗೆ ಈ ಮಾರ್ಗದಲ್ಲಿ ಅಪಘಾತ ನಡೆದದ್ದು ಮುಂಜಾನೆ ೫.೩೦ಕ್ಕೆ. ಆಗ ,ಯಾವ ಸಂಚಾರ ದಟ್ಟಣೆ ಇತ್ತು ? ಯಾವುದೇ ಅಪಘಾತಕ್ಕೆ ಅತಿವೇಗ, ಚಾಲಕರ ನಿರ್ಲಕ್ಷ್ಯಕಾರಣ. ಅದಕ್ಕೆ ಕಡಿವಾಣ ಹಾಕಿ.ಅಗತ್ಯವಿರುವ ಎಲ್ಲಾ ಕಡೆ ಹಂಪ್ಸ್ ಅಳವಡಿಸಿ. ಏಕ ಮುಖ ಸಂಚಾರ ವ್ಯವಸ್ಥೆ ಮಾಡಿ.
೨. ವಸತಿ ಪ್ರದೇಶದಲ್ಲಿ ನ್ಯಾಷಿನಲ್ ಹೈವೆಗೆ ಅನುಮತಿ ನೀಡಿದ್ದೇ ತಪ್ಪು. ಅನುಮತಿಗೆ ಮೊದಲು ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ಅಧ್ಯಯನವನ್ನೇ ಮಾಡಿಲ್ಲ. ‘ಪಿಸಿಯು’ಕೂಡ ಹಾದಿ ತಪ್ಪಿಸುವಂತದ್ದು.
೩.ಈ ಮಾರ್ಗದ ಮರಗಳು ಪಾರಂಪರಿಕ ಮಹತ್ವದವು. ಕಡಿಯುವುದು ಸುಲಭ. ಬೆಳೆಸುವುದರ ಕಷ್ಟವನ್ನು ಅರ್ಥಮಾಡಿಕೊಳ್ಳಿ. ವರ್ತುಲ ರಸ್ತೆ ನಿರ್ಮಿಸಿದರೆ ಎಲ್ಲಾ ಸಮಸ್ಯೆ ಬಗೆ ಹರಿಯುತ್ತೆ. ಮರ ಕಡಿಯುವ ಬದಲು ಆ ಬಗ್ಗೆ ಆಸಕ್ತಿ ವಹಿಸಿ.
೪.ಮೃಗಾಲಯ ಸುತ್ತ ೧ ಕೀ.ಮಿ.ನಿಷೇಧಿತ ಪ್ರದೇಶ ಎನ್ನುವುದು ಪಾಲಿಕೆಯದೇ ತೀರ್ಮಾನ. ಅದನ್ನೇ ಉಲ್ಲಂಘಿಸುವುದು ಎಷ್ಟು ಸರಿ.ಅಪಘಾತವನ್ನೇ ನೆಪ ಮಾಡಿಕೊಂಡು ೩೨ ಮರ ಕಡಿಯಲು ಪ್ರೇರೇಪಿಸಿದ ದುಷ್ಕರ್ಮಿಗಳ ವಿರುದ್ಧ ಅಗತ್ಯ ಕ್ರಮಕೈಗೊಳ್ಳಿ.
೫.ಕೆ.ಸಿ.ಬಡಾವಣೆಯ ನಿವೇಶನ ಮೌಲ್ಯ ಹೆಚ್ಚಿಸಿಕೊಳ್ಳಲು ಅಗಲ ರಸ್ತೆ ಅಗತ್ಯವನ್ನು ಪ್ರತಿಪಾದಿಸುವ ಷಡ್ಯಂತ್ರ ನಡೆಯುತ್ತಿದೆ.
೬.ಕಾಮಗಾರಿ ನಡೆಯದಿದ್ದರೆ ಐದೋ -ಹತ್ತೋ ಕೋಟಿ ಅನುದಾನ ವಾಪಸ್ ಹೋಗುತ್ತೆ ಎಂದು ಕೆಲ ಜನಪ್ರತಿನಿಧಿಗಳು ಹೇಳುತ್ತಿದ್ದಾರೆ.ಆದರೆ,ಒಂದು ಮರದ ‘ನಿಜ ಮೌಲ್ಯ’ ೫೦ಲಕ್ಷ ರೂ.ಗಿಂತ ಹೆಚ್ಚು .೧೧೪ ಮರ ಕಡಿದರೆ ಮೈಸೂರಿಗೆ ೫೦ ಕೋಟಿ ರೂ.ಗಿಂತ ಹೆಚ್ಚು ನಷ್ಟವಾಗುತ್ತೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ