ಪೂರ್ಣಕುಂಭ ಮೇಳಕ್ಕೆ ಚಾಲನೆ



ವಿಕ ಸುದ್ದಿಲೋಕ ತಿರುಮಕೂಡಲು ನರಸೀಪುರ
ಕಪಿಲೆ-ಕಾವೇರಿ-ಗುಪ್ತಗಾಮಿನಿ ಸ್ಫಟಿಕ ಸರೋವರದ ಸಂಗಮ ಕ್ಷೇತ್ರದಲ್ಲಿ ೮ನೇ ಪೂರ್ಣಕುಂಭಮೇಳ ಗುರುವಾರ ವಿಧ್ಯುಕ್ತವಾಗಿ ಆರಂಭವಾಯಿತು.
ಸಂಗಮ ಕ್ಷೇತ್ರದ ಮರಳು ದಿಬ್ಬದ ಮೇಲಿನ ‘ಮಹಾಮಂಟಪ’ದಲ್ಲಿ ಇಳಿ ಸಂಜೆ ನಡೆದ ಕಾರ‍್ಯಕ್ರಮದಲ್ಲಿ ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ‘ಕುಂಭ’ದ ಮೇಲಿಟ್ಟ ದೀಪ ಬೆಳಗುವ ಮೂಲಕ ಮೂರು ದಿನದ ಪವಿತ್ರ ಮಾಘ ಸ್ನಾನಕ್ಕೆ ಚಾಲನೆ ನೀಡಿದರು.
ಮೂರು ದಿನದ ಪುಣ್ಯ ಸ್ನಾನಕ್ಕೆ ಲಕ್ಷಾಂತರ ಜನರನ್ನು ನಿರೀಕ್ಷಿಸಿ,ಸಕಲ ವ್ಯವಸ್ಥೆ ಮಾಡಲಾಗಿದೆಯಾದರೂ ಆರಂಭದ ದಿನ ತ್ರಿವೇಣಿ ಸಂಗಮ ಭಕ್ತರ ಕೊರತೆಯನ್ನು ಎದುರಿಸಿತು.ಉದ್ಘಾಟನೆಯ ನಂತರ ಸಂಜೆ ಸಂಗಮ ಸ್ಥಳ ಜಾತ್ರೆಯ ಮೆರಗು ಪಡೆಯಿತು.ಶನಿವಾರ ಪುಣ್ಯ ಸ್ನಾನಕ್ಕೆ ಶುಭ ಮೂಹೂರ್ತ ನಿಗಧಿಯಾಗಿದೆ.
ನಿಜ ಧರ್ಮ:ಪರರ ಕಷ್ಟದಲ್ಲಿ ಭಾಗಿಯಾಗುವುದು,ಯಾರಿಗೂ ಕೇಡು ಬಯಸದಿರುವುದು ನಿಜವಾದ ಧರ್ಮ. ಮಾಡಬಾರದ ಪಾಪಗಳನ್ನೆಲ್ಲ ಮಾಡಿ ಸಂಗಮಕ್ಕೆ ಬಂದು ಮುಳುಗು ಹಾಕಿದರೆ ಪ್ರಯೋಜನವಿಲ್ಲ.ಒಳ್ಳೆಯ ಮನಸ್ಸು,ಹೃದಯ,ಭಾವನೆಗಳೊಂದಿಗೆ ಬಂದು ಸ್ನಾನ ಮಾಡಿ;ಒಳ್ಳೆಯದಾಗುತ್ತದೆ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ಸಲಹೆ ನೀಡಿದರು.
ಸಾಮರಸ್ಯ :ಹಲವು ಧರ್ಮ,ಜಾತಿ,ಭಾಷೆಗಳಿಂದ ಕೂಡಿದ ವೈವಿಧ್ಯಮಯ ಭಾರತದಲ್ಲಿ ಸಾಮರಸ್ಯ ಮೂಡಿಸುವುದು,ಕಾಪಿಡುವುದು ಎಲ್ಲರ ಜವಾಬ್ದಾರಿ.ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ,ಅದಕ್ಕೆ ಪ್ರಚೋದನೆ ಯಾವುದೇ ಧರ್ಮದಲ್ಲಿ ನಂಬಿಕೆ ಇಲ್ಲದ ಕಿಡಿಗೇಡಿಗಳ ಕೃತ್ಯ. ದ್ವೇಷ ಬಿತ್ತುವುದಕ್ಕಿಂತ ದ್ರೋಹ ಮತ್ತೊಂದಿಲ್ಲ. ಆದ್ದರಿಂದ ಧರ್ಮವನ್ನು ಸರಿಯಾಗಿ ಅರ್ಥೈಸುವ ನಿಟ್ಟಿನಲ್ಲಿ ಇಂಥ ಮೇಳಗಳು ಅಗತ್ಯ ಎಂದು ಹೇಳಿದರು.
ಸಮಗ್ರ ಅಭಿವೃದ್ಧಿ : ಮುಂದಿನ ಕುಂಭಮೇಳದ ವೇಳೆಗೆ ತಿರುಮಕೂಡಲು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ವ ಪ್ರಯತ್ನ ಮಾಡುತ್ತೇನೆ.ಈ ಬಾರಿಯ ಲೋಪಗಳನ್ನು ಮುಂದಿನ ಮೇಳದಲ್ಲಿ ಸರಿಪಡಿಸಿ,ಉತ್ತಮ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಒಳಗಿನ ಕೊಳೆ:ಉಪನ್ಯಾಸ ನೀಡಿದ ಮಹಾರಾಜ ಕಾಲೇಜು ಪ್ರಾಧ್ಯಾಪಕ ಡಾ.ಎಸ್.ಶಿವರಾಜಪ್ಪ ,ಮಾಘ ಸ್ನಾನ ಸಾಂಕೇತಿಕ. ಎಲ್ಲರೂ ಒಳಗಿನ ಕೊಳೆ ತೊಳೆದುಕೊಂಡು ಮನಸ್ಸುಗಳನ್ನು ಶುಚಿಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,ಆದಿಚುಂಚನಗಿರಿ ಶಾಖಾಮಠದ ಸೋಮೇಶ್ವರನಾಥ ಸ್ವಾಮೀಜಿ,ಬೆಂಗಳೂರು ಓಂಕಾರಾಶ್ರಮದ ಮಧುಸೂದನಾಂದ ಸ್ವಾಮೀಜಿ,ವಾಟಾಳು ಮಠದ ಸಿದ್ಧಲಿಂಗ ಸ್ವಾಮೀಜಿ,ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಹಲವರು ಗೈರು:ಕ್ಷೇತ್ರದ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಆಹ್ವಾನಿತ ಹಲವು ಜನಪ್ರತಿನಿಧಿಗಳು ಗೈರು ಹಾಜರಾಗಿದ್ದರು. ಜಿ.ಪಂ.ಅಧ್ಯಕ್ಷ ಕೆ.ಎಸ್.ಧರ್ಮೇಂದ್ರ,ಉಪಾಧ್ಯಕ್ಷೆ ನಂದಿನಿ ಚಂದ್ರಶೇಖರ್,ತಾ.ಪಂ.ಅಧ್ಯಕ್ಷ ಎಸ್.ಸಿದ್ದು ,ಪ.ಪಂ.ಅಧ್ಯಕ್ಷೆ ಯಶೋಧ,ಭೈರಾಪುರ ಗ್ರಾ.ಪಂ. ಅಧ್ಯಕ್ಷೆ ಇಂದ್ರಮ್ಮ ಸೇರಿದಂತೆ ಸ್ಥಳೀಯ ಸಂಸ್ಥೆ ಯ ಹಲವು ಜನಪ್ರತಿನಿಧಿಗಳು, ಅಪರ ಜಿಲ್ಲಾಧಿಕಾರಿ ಡಾ.ಬೆಟ್‌ಸೂರ್ ಮಠ, ಮೇಳದ ವಿಶೇಷಾಧಿಕಾರಿ ಭಾರತಿ ,ಎಸ್ಪಿ ರಾಮಸುಬ್ಬ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು. ಕೆ.ಎಂ.ನಾಗಣ್ಣಾಚಾರ್ ಸ್ವಾಗತಿಸಿದರು.
ಧಾರ್ಮಿಕ ಕಾರ‍್ಯಕ್ರಮ: ಬೆಳಗ್ಗೆ ಅಗಸ್ತ್ಯೇಶ್ವರಸ್ವಾಮಿ ದೇವಾಲಯದಲ್ಲಿ ಪ್ರಧಾನ ಅರ್ಚಕ ಜ್ಞಾನಸ್ಕಂದ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಆದಿಚುಂಚನಗಿರಿ ಶಾಖಾ ಮಠದ ಸೋಮನಾಥೇಶ್ವರ ಸ್ವಾಮೀಜಿ, ವಾಟಾಳು ಸಿದ್ಧಲಿಂಗ ಸ್ವಾಮೀಜಿ,ಅರ್ಚಕ ಕುಮಾರಸ್ವಾಮಿ ದೀಕ್ಷಿತ್, ಅಶ್ವತ್ಥನಾರಾಯಣ, ಎಂ.ಎ.ಕುಮಾರ್, ಪಿ.ಸ್ವಾಮಿನಾಥ್ ಮತ್ತಿತರರು ಹಾಜರಿದ್ದರು.
***********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ