`ನರ'ರಿಗಲ್ಲವೋ ಈ ರಸ್ತೆ...

 ಕೆ.ಎಸ್. ಶಿವಶಂಕರ್ ಮಳವಳ್ಳಿ
ಕಿತ್ತು ಬಂದ ಡಾಂಬರು. ರಸ್ತೆಯಲ್ಲಿ ಗುಂಡಿಗಳದೇ ಕಾರುಬಾರು. ಕಿರಿದಾದ ರಸ್ತೆಗಳಲ್ಲಿ ಸಂಚಾರಕ್ಕೆ ಇಕ್ಕಟ್ಟು.  ಜಿಲ್ಲೆಯಲ್ಲಿ ಅತಿ ದೊಡ್ಡ ಪಟ್ಟಣವೆಂಬ ಹೆಗ್ಗಳಿಕೆ ಹೊಂದಿದ ಮಳವಳ್ಳಿ ಟೌನ್‌ನ ರಸ್ತೆಗಳ ಸ್ಥಿತಿಗತಿ.  ಹಲವೆಡೆ ಗುಂಡಿಯೊಳಗೆ ರಸ್ತೆಗಳು. ಕೆಲವೆಡೆ ಡಾಂಬರೇ ಕಾಣದ ಮಾರ್ಗಗಳು. ಈ ರಸ್ತೆಗಳಲ್ಲಿ ಸಂಚಾರ ನಿಜಕ್ಕೂ ದುಸ್ತರ.
ಕೆಲವು ಬಡಾವಣೆಗಳಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡ ರಸ್ತೆಗಳು ಈವರೆಗೆ ಡಾಂಬರನ್ನೇ ಕಂಡಿಲ್ಲ. ಡಾಂಬರಿನ ಮಾತಿರಲಿ ಮೆಟ್ಲಿಂಗ್ ಕಾಮಗಾರಿಯೇ ನಡೆದಿಲ್ಲ. ಇನ್ನೂ ಕಚ್ಚಾ ರಸ್ತೆಗಳೇ ಆಗಿರುವ ಅವುಗಳ ಸ್ಥಿತಿ ಆ ದಂಡಿನ ಮಾರಮ್ಮನಿಗೇ ಪ್ರೀತಿಯಾಗಬೇಕು. ತೇಪೆ ಹಚ್ಚುವ ಕೆಲಸಗಳೂ ಸರಿಯಾಗಿ ನಡೆಯುತ್ತಿಲ್ಲ.
ಗುಂಡಿಬಿದ್ದ ರಸ್ತೆಗಳಲ್ಲಿ ವಾಹನಗಳು ಸಂಚರಿಸಿದಾಗ ಬರೀ ಧೂಳು. ಸುತ್ತಮುತ್ತಲಿನ ವಾತಾವರಣವೂ ಧೂಳುಮಯ. ೨೩ ವಾರ್ಡ್‌ಗಳಿರುವ ಮಳವಳ್ಳಿಯ ಯಾವೊಂದು ವಾರ್ಡ್‌ಗಳಲ್ಲೂ ಒಂದೂ ರಸ್ತೆಯೂ ಸರಿಯಿಲ್ಲ. ಅವುಗಳ ದುರಸ್ತಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಿದ್ದೂ ಇಲ್ಲ. ಪ್ರತಿಷ್ಠಿತರು ವಾಸವಿರುವ ಎನ್‌ಇಎಸ್ ಬಡಾವಣೆ, ಆದರ್ಶ ಕಾನ್ವೆಂಟ್ ಪ್ರದೇಶ, ಕೀರ್ತಿನಗರ, ಸಿದ್ಧಾರ್ಥ ನಗರದಲ್ಲೂ ರಸ್ತೆಗಳನ್ನು ಹುಡುಕಬೇಕು. ಹೊಸ ಬಡಾವಣೆಗಳಲ್ಲಿ ಸರಿಯಾದ ರಸ್ತೆಗಳೇ ನಿರ್ಮಾಣವಾಗಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ