ಆಂಥೊರಿಯಂ: ಹಣ ಗಳಿಕೆಯ ಹೊಸ ಮಾರ್ಗ

ಸದೇಶ್ ಕಾರ್ಮಾಡ್
ಸದಾ ಸಸ್ಯರಾಶಿಯ ಮಧ್ಯೆ ಕಂಗೊಳಿಸುವ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಂಥೊರಿಯಂ ಹೂಗಳ ಸಾಮ್ರಾಜ್ಯ.
ಸಾಕಷ್ಟು ಮನೆಗಳಲ್ಲಿ ಅಲಂಕಾರಿಕ ಪುಷ್ಪವಾಗಿ ಅರಳಿದ ಆಂಥೊರಿಯಂ, ಉಳಿದೆಡೆ ವಾಣಿಜ್ಯ ಉದ್ದೇಶಕ್ಕೆ ಅರಳಿ ನಿಂತಿವೆ. ಕೇಂದ್ರ ಸರಕಾರವು ಕೊಡಗನ್ನು ಈ ಬೆಳೆಗೆ ಸೂಕ್ತ ಪ್ರದೇಶವೆಂದು ಗುರುತಿಸಿದೆ. ದೇಶದ ಯಾವುದೇ ಭಾಗದಲ್ಲೂ ಕೊಡಗಿನಲ್ಲಿ ಬೆಳೆಯುವಷ್ಟು ಉತ್ಕೃಷ್ಟ ಮಟ್ಟದ ಆಂಥೊರಿಯಂ ದೊರೆಯದು. ಇಲ್ಲಿನ ಫಲವತ್ತಾದ ಮಣ್ಣು ಹಾಗೂ ಹವಾಗುಣವೇ ಅದಕ್ಕೆ ಕಾರಣ.
ಆಂಥೊರಿಯಂ ಜನಪ್ರಿಯ ವಾಣಿಜ್ಯ ಪುಷ್ಪ ಬೆಳೆ. ನೆರಳು ಮನೆ ಅಥವಾ ಹಸಿರುಮನೆಗಳಲ್ಲಿ, ಪಾತಿ ಅಥವಾ ಕುಂಡಗಳಲ್ಲಿ ಬೆಳೆಯಲಾಗುತ್ತಿದೆ. ಇವುಗಳನ್ನು ಹೂದಾನಿಗಳಲ್ಲಿ ಇಡಲು, ಪುಷ್ಪಗುಚ್ಛ ತಯಾರಿಕೆಯಲ್ಲಿ ಹಾಗೂ ಹೂ ಜೋಡಣೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಆಂಥೊರಿಯಂ ಅನ್ನು ವರ್ಷವಿಡೀ ಬೆಳೆಯ ಬಹುದಾದರೂ ತಂಪಾದ ಹವಾಮಾನವಿರುವ ಮತ್ತು ಶೇ.೭೫ ರಿಂದ ೮೦ರಷ್ಟು ನೆರಳಿರುವ ೧೮ ರಿಂದ ೨೮ ಡಿಗ್ರಿ ಸೆ.ಉಷ್ಣಾಂಶ ಹಾಗೂ ಶೇ.೭೦ ರಿಂದ ೭೫ ರಷ್ಟು ಆರ್ದ್ರತೆಯಿಂದಿರುವ ಪ್ರದೇಶವೇ ಸೂಕ್ತ. ಜೂನ್‌ನಿಂದ ಅಕ್ಟೋಬರ್ ಸೀಸನ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ