ನಕಲಿ ಔಷಧ ಪಿಡುಗು ತಡೆಗೆ ಕಲಾಂ ಕರೆ

ವಿಕ ಸುದ್ದಿಲೋಕ ಮೈಸೂರು
ದೇಶದಲ್ಲಿ ನಕಲಿ ಔಷಧ ಹಾವಳಿ ಹೆಚ್ಚಿದ್ದು,ಅಕ್ರಮ ತಡೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಕರೆ ನೀಡಿದ್ದಾರೆ.
ಜೆಎಸ್‌ಎಸ್ ವಿಶ್ವವಿದ್ಯಾನಿಲಯ ಮಂಗಳವಾರ ಆಯೋಜಿಸಿದ್ದ  ಪ್ರಥಮ ಘಟಿಕೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ದೇಶದಲ್ಲಿ ಮಾರಾಟವಾಗುತ್ತಿರುವ  ಶೇ.೪೦ ರಷ್ಟು  ಔಷಧಗಳ ಗುಣಮಟ್ಟ, ನೈಜತೆಯ ಬಗ್ಗೆ ಅನುಮಾನಗಳಿವೆ. ತತ್ವರಹಿತ ಜನರು ನಕಲಿ ಔಷಧಗಳನ್ನು ವಾಮಮಾರ್ಗದಲ್ಲಿ ಪೂರೈಸುವ ಕಳ್ಳದಂಧೆ ನಡೆಸಿದ್ದಾರೆ ಎಂದು ಆಕ್ಷೇಪಿಸಿದರು.
ತಡೆ ಪ್ರತಿಜ್ಞೆ: ಔಷಧ, ಸೌಂದರ್ಯವರ್ಧಕ ಕಾಯಿದೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮರ್ಥವಾಗಿ ಜಾರಿಗೊಳಿಸಿ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು. ಮಾರಾಟಗಾರರೂ ಆಗಾಗ  ಔಷಧಗಳ ಮೂಲವನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು. ಅಕ್ರಮ ತಡೆ ರೀತಿ ನೀತಿಗಳ ಕುರಿತು ಫಾರ್ಮಸಿ ವಿದ್ಯಾರ್ಥಿಗಳಿಗೆ ಅರಿವು ಮಾಡಿಸುವಂತ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಸಲಹೆ ನೀಡಿದರು. ‘ನಕಲಿ ಔಷಧ ಹಾವಳಿ ತಡೆಯಲು ಪ್ರಯತ್ನಿಸುತ್ತೇನೆ ’ ಎಂದು ನೂತನ ಪದವೀಧರರಿಂದ ಪ್ರತಿಜ್ಞೆಯನ್ನೂ ಮಾಡಿಸಿದರು.
ಭಾರತ ನಾಯಕನಾಗಲಿ: ಜಗತ್ತಿನ ಔಷಧ ಉದ್ಯಮದ ಒಟ್ಟು  ವಹಿವಾಟು ೭೭೩ ಬಿಲಿಯನ್ ಡಾಲರ್. ಇದರಲ್ಲಿ ಭಾರತದ ಪಾಲು ೧೭ ಬಿಲಿಯನ್ ಡಾಲರ್ ಮಾತ್ರ. ೨೦೨೦ ರ ವೇಳೆಗೆ ೨೫ ಬಿಲಿಯನ್ ಯುಎಸ್ ಡಾಲರ್‌ಗೆ ಏರಿಸುವ ಗುರಿ ಇದೆ. ಈ ಪೈಕಿ ಶೇ. ೬೦ರಷ್ಟು ರಪ್ತು ಸಂಬಂಧಿ. ಈಗಲೂ, ಅಮೆರಿಕ ಉಪಯೋಗಿಸುವ ಸಸ್ಯಜನ್ಯ ಔಷಧದ ಶೇ.೪೦ ಭಾಗ ಭಾರತ ಮೂಲದ್ದು ಎಂದು ವಿವರಿಸಿದರು.
ಹತ್ತು ವರ್ಷದಲ್ಲಿ ದೇಶದ  ಔಷಧ ಉದ್ಯಮದ ವಹಿವಾಟನ್ನು ನೂರು ಬಿಲಿಯನ್ ಡಾಲರ್‌ಗೆ ಏರಿಸಬೇಕು. ಪ್ರಪಂಚದ ಶೇ.೨೦ರಷ್ಟು ಉತ್ಪಾದನೆ  ದೇಶದಲ್ಲಾಗುವಂತೆ ಗುರಿ ನಿಗದಿಪಡಿಸಬೇಕು.ಆ ಮೂಲಕ ಔಷಧ ಕ್ಷೇತ್ರದಲ್ಲಿ ಭಾರತ ನಾಯಕನಾಗಬೇಕು ಎಂದು ಆಶಿಸಿದರು. ಅಂಥ ಸಾಮರ್ಥ್ಯ ದೇಶಕ್ಕಿದೆ. ಕ್ಷೇತ್ರದಲ್ಲಿ ತೊಡಗಿಸಿಕೊಂಡ ಎಲ್ಲರೂ ಗುರಿ ಸಾಧನೆಗೆ  ದುಡಿಯಬೇಕು. ಅಡ್ಡ ಪರಿಣಾಮ ಬೀರದ ಔಷಧ ತಯಾರಿಕೆಯತ್ತಲೂ ಗಂಭೀರ  ಚಿಂತನೆ ಅಗತ್ಯ ಎಂದು ಕಿವಿಮಾತು ಹೇಳಿದರು.
ಫಾರ್ಮಸಿ ವಿಷನ್: ಕಲಾಂ ಅವರ ‘ಫಾರ್ಮಸಿ ವಿಷನ್ -೨೦೨೦’ರ  ಸಲಹೆ ಸೂಚನೆಗಳ ಮುಖ್ಯಾಂಶ. ಎಚ್‌ಐವಿ, ಮಲೇರಿಯಾ, ಕ್ಯಾನ್ಸರ್‌ನಂತ ಕಾಯಿಲೆಗಳಿಗೆ ಕಡಿಮೆ ವೆಚ್ಚದ, ಗುಣಮಟ್ಟದ ಲಸಿಕೆ ತಯಾರಿಸಬೇಕು. ೪೭ ಬಿಲಿಯನ್ ಬೆಲೆಯ ೫೦ಕ್ಕೂ ಹೆಚ್ಚು ಜನಪರಿಚಿತ ಔಷಧಗಳು ೩ರಿಂದ ೫ ವರ್ಷಗಳಲ್ಲಿ ಪೇಟೆಂಟ್ ಕಳೆದಿದ್ದು, ಹೊಸ ಔಷಧಗಳ ಮೂಲಕ ಮಾರುಕಟ್ಟೆ  ಪ್ರವೇಶಿಸ ಬಹುದಾದ ಸದವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು.
ದೇಶದಲ್ಲಿನ ಸಾಂಪ್ರದಾಯಿಕ  ಔಷಧ ಪದ್ಧತಿ, ಗಿಡಮೂಲಿಕೆಗಳನ್ನು ಬಳಸಿ ಜಗತ್ತಿನ ಕಾಯಿಲೆಗಳಿಗೆ ಔಷಧ ಉತ್ಪಾದಿಸಲು ತೊಡಗಿಸಿಕೊಳ್ಳಬೇಕು. ಮೂಲ ಪರಿಕರಗಳನ್ನು ಬಳಸಿಕೊಂಡು ಅಧಿಕೃತ  ಸಂಶೋಧನೆ ಗಳನ್ನು ನಡೆಸುವ ಮೂಲಕ ‘ನಾಯಕತ್ವ’ ಸಾಧಿಸಬೇಕು.
ಉಪದೇಶ: ಘಟಿಕೋತ್ಸವದಲ್ಲಿ ಪದವಿ ಪಡೆದ ಎಲ್ಲರೂ ‘ಎಂ.ಫಾರ್ಮ’ ವಿದ್ಯಾರ್ಥಿಗಳಾಗಿದ್ದರಿಂದ, ಔಷಧ ಉದ್ಯಮ ಮತ್ತು ವೈದ್ಯ ಕ್ಷೇತ್ರದತ್ತಲೇ ತಮ್ಮ ಭಾಷಣವನ್ನು ಕೇಂದ್ರೀಕರಿಸಿದ ಕಲಾಂ, ಜನರು ಬದುಕು,ಆರೋಗ್ಯವನ್ನು ನಿಮ್ಮ ನಂಬಿಕೆಗೆ ಒಪ್ಪಿಸುತ್ತಾರೆ. ಅವರ ಹಿತ ಕಾಯ್ದುಕೊಳ್ಳಲು ಶ್ರಮಿಸಿ. ಒಳ್ಳೆಯ ಆರೋಗ್ಯ ಸೇವೆ ನೀಡುವುದೇ ನಿಮ್ಮ ಆದ್ಯತೆಯಾಗಲಿ ಎಂದು ಕರೆ ನೀಡಿದರು.
ಇಲ್ಲದವರಿಗೆ ಸ್ಪಂದಿಸಿ: ಆಂಧ್ರಪ್ರದೇಶದ ಭೀಮಾವರಂನ ಡಾ.ಸೋಮರಾಜು, ಬಿಳಿಗಿರಿರಂಗನಬೆಟ್ಟದ ವಿವೇಕಾ ನಂದ ಗಿರಿಜನ ಕಲ್ಯಾಣ ಕೇಂದ್ರದ ಡಾ.ಸುದರ್ಶನ್, ಬೆಂಗಳೂರು ಥ್ರೊಂಬೊಸಿಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಿರ್ದೇಶಕ ಡಾ.ವಿ.ವಿ.ಕಕ್ಕೇರ್, ಕಠ್ಮಂಡುವಿನ ಮುಖ್ಯ ಧರ್ಮಗುರು ಮತ್ತು ವೈದ್ಯ ಸಂಶೋಧಕ  ಚೊಯ್ಕಿ ನೈಯ್ಮ ರಿಂಪೋಂಚಿ ಅವರು ಕಾರ‍್ಯಕ್ಷೇತ್ರದಲ್ಲಿ ಸಾಧಿಸಿದ ಯಶೋಗಾಥೆಗಳನ್ನು ಹೃದಯಂಗಮವಾಗಿ ವಿವರಿಸಿದ ಕಲಾಂ, ನೀವೂ ಅವರಂತೆಯೇ ಆಗಿ.ಗ್ರಾಮೀಣ ಮತ್ತು ಗಿರಿಜನರ ಸೇವೆಗೆ ಕಂಕಣಬದ್ಧರಾಗಿ,‘ಇಲ್ಲದವರ ’ ನೋವಿಗೆ ಸದಾ ಸ್ಪಂದಿಸಿ ಎಂದು ಸಲಹೆ ನೀಡಿದರು.
ನಿಮ್ಮ ಬುದ್ಧಿ ನಿವಾರಿಸಲಿ ನೋವು: ಬುದ್ಧಿವಂತಿಕೆ ಇನ್ನೊಬ್ಬರಿಗೆ ನೋವು ನೀಡಬಾರದು ಎನ್ನುವುದು ಅವರ ಮಾತಿನ  ಪ್ರಧಾನ ಆಶಯವಾಗಿತ್ತು. ‘ನನ್ನ ಬು ನಿವಾರಿಸಲಿ ನೋವು’  ಎಂಬ ವಾಕ್ಯದೊಂದಿಗೆ ಭಾಷಣ ಆರಂಭಿಸಿದ ಅವರು,ಅದೇ ಆಶಯದೊಂದಿಗೆ ಮುಗಿಸಿದರು.
‘ಸಮಾಜ ಯಾವ ಕಾರಣಕ್ಕಾಗಿ ನಿಮ್ಮನ್ನು  ನೆನಪಿಸಿ ಕೊಳ್ಳಲು ಬಯಸುತ್ತೀರಿ’ ಎಂದು ಪ್ರಶ್ನಿಸಿದ ಅವರು, ನಿಮ್ಮ ಗುರಿ ಇತಿಹಾಸ ನಿರ್ಮಿಸಬಲ್ಲದ್ದಾಗಬಹುದು. ಆದ್ದರಿಂದ, ಉತ್ತಮ ಗುರಿ ಸಾಧನೆಗೆ ನಿರಂತರವಾಗಿ ಶ್ರಮಿಸಿ.ಉದಾತ್ತ ಮನೋಭಾವ, ಮೌಲ್ಯಾಧಾರಿತ ಸೇವೆ, ಸಹಿಷ್ಣುತೆ, ನಿರಂತರತೆ, ಜ್ಞಾನ ವರ್ಧನೆ ಮತ್ತಿತರ ಗುಣಗಳು ವೃತ್ತಿಗೆ ಮಾನವೀಯ ಅಂತಃಕರಣದ ಸ್ಪರ್ಶ ನೀಡಲು ನೆರವಾಗುತ್ತವೆ  ಎಂದು ಹೊಸ ಪದವೀಧರರನ್ನು ಹುರಿದುಂಬಿಸಿದರು.
೧೦ಮಂದಿಗೆ ಚಿನ್ನ: ವಿವಿ ಕುಲಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿ, ೧೧೯ ಎಂ.ಫಾರ್ಮ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಪೈಕಿ ೬೫ ಮಂದಿ ಖುದ್ದು ಹಾಜರಿದ್ದು ಪ್ರತಿಜ್ಞೆ ಸ್ವೀಕರಿಸಿದರು.ಉನ್ನತ ಸಾಧನೆ ಮಾಡಿದ ೧೦ಮಂದಿಗೆ ಚಿನ್ನದ ಪದಕ,ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್, ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಸಮ ಕುಲಾಧಿಪತಿ  ಡಾ.ಬಿ.ಎನ್. ಬೆಟ್ಕೆರೂರ್, ಕುಲಸಚಿವ ಡಾ.ಮೃತ್ಯುಂಜಯ ಪಿ.ಕುಳೇನೂರ್, ಪರೀಕ್ಷಾಂಗ ಕುಲಸಚಿವ ಡಾ.ಆರ್. ವಿಜಯಸಿಂಹ ಮತ್ತಿತರರು ಭಾಗವಹಿಸಿದ್ದರು. ಕುಲಪತಿ ಡಾ.ಬಿ.ಸುರೇಶ್ ಸ್ವಾಗತಿಸಿ,ವರದಿ ಮಂಡಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ