ದೊಡ್ಡರಾಯಪೇಟೆ ಸಮಸ್ಯೆಗಳೂ ದೊಡ್ಡವೇ...

ವಿಕ ಸುದ್ದಿಲೋಕ ಚಾಮರಾಜನಗರ
ದೊಡ್ಡರಾಯಪೇಟೆ ಗ್ರಾಮದ ಹೊಸ ಬಡಾವಣೆ ಯಲ್ಲಿ ಸಮಸ್ಯೆಗಳೂ ‘ದೊಡ್ಡ’ಗಾತ್ರದಲ್ಲೇ  ಇವೆ. ಅನೈರ್ಮಲ್ಯ ಮನೆಗಳ ಮುಂದೆಯೇ ತಾಂಡವವಾಡುತ್ತಿದೆ. ಮೂಲ ಸೌಲಭ್ಯ ಮರೆಯಾಗಿದೆ.
ಈ ಬಡಾವಣೆ ಹೊಸದಾದರೂ ಇಲ್ಲಿ ಹೊಸತನವಿಲ್ಲ. ನಿವಾಸಿಗಳ ಗೋಳನ್ನು ಕೇಳೋರಿಲ್ಲ. ರಾತ್ರಿಯಾದರೆ ಬೆಳಕನ್ನು ನೀಡಲು ಇಲ್ಲಿ ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಚರಂಡಿ ವ್ಯವಸ್ಥೆ ಹದಗೆಟ್ಟಿರುವ ಪರಿಣಾಮ ಎಲ್ಲೆಂದರಲ್ಲಿ ಗಬ್ಬು ಸಾಮಾನ್ಯ.
ಗ್ರಾಮದಲ್ಲಿ ಏಳೆಂಟು ವರ್ಷಗಳ ಹಿಂದೆ  ಹೊಸ ಬಡಾವಣೆ ನಿರ್ಮಿಸಲಾಗಿದ್ದು, ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಇವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವಲ್ಲಿ ಆಡಳಿತ ವರ್ಗ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ  ಇಲ್ಲಿನ ನಿವಾಸಿಗಳು  ಸಮಸ್ಯೆಗಳೊಡನೆಯೇ ಕಾಲ ದೂಡಬೇಕಾದ ಅನಿವಾರ್ಯತೆ.
ಬಡಾವಣೆಯಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಬಹುತೇಕ ಮಂದಿಗೆ ಬೇಸಾಯ ಹಾಗೂ ಕೂಲಿಯೇ ಆಧಾರ. ಇದು ಹೇಳಿ, ಕೇಳಿ ಹೊಸ  ಬಡಾವಣೆ. ಎಲ್ಲ ಸೌಲಭ್ಯಗಳು ಹೊಸದಾಗೇ ಆಗಬೇಕಿತ್ತು. ಆದರೆ ಏಳೆಂಟು ವರ್ಷ ಕಳೆದರೂ ಸೌಲಭ್ಯಗಳು ಇತ್ತ  ತಿರುಗಿ ನೋಡಿಲ್ಲ.
ರಸ್ತೆ ಎಂಬುದು ನೆಪಮಾತ್ರಕ್ಕಿದೆ. ಅದರ ಬದಿಯಲ್ಲೇ ಕೊಳಚೆ ನೀರು ಮಡುಗಟ್ಟಿ ನಿಂತಿದ್ದು, ಸಾಂಕ್ರಾಮಿಕ ರೋಗಗಳನ್ನು ಹರಡುವ ಕೇಂದ್ರವಾಗಿದೆ.
ಕಾವೇರಿ ಕೈ ಕೊಟ್ಟರೆ ದೇವರೇ ಗತಿ: ದೊಡ್ಡರಾಯ ಪೇಟೆ ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಲ್ಲಿದೆ. ಹೀಗಾಗಿ ನಗರಕ್ಕೆ ಸರಬರಾಜಾಗುವ ಕಾವೇರಿ ಪೈಪ್‌ಲೈನ್ ಮೂಲಕವೇ  ನೀರು ಕೊಂಡೊಯ್ಯಲಾಗಿದೆ. ಒಂದು ವೇಳೆ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದರೆ ಈ ಬಡಾವಣೆ ನಿವಾಸಿಗಳ ಪಾಡು ಹೇಳ ತೀರದು.
ಬಡಾವಣೆಯಲ್ಲೇ ೫ ಕೊಳವೆ ಬಾವಿಗಳಿದ್ದವು. ಆಗ ಕಾವೇರಿ ನೀರು ಬಾರದಿದ್ದರೂ ತೊಂದರೆ ಇರುತ್ತಿರಲಿಲ್ಲ. ಆದರೀಗ ಒಂದು ದಿನ ಕಾವೇರಿ ಕೈಕೊಟ್ಟರೆ ನಿವಾಸಿಗಳು ದೂರದ ಪಂಪ್‌ಸೆಟ್‌ಗಳಿಂದ ನೀರು ಹೂಡುವ ಸ್ಥಿತಿ ನಿರ್ಮಾಣವಾಗುತ್ತದೆ. ಏಕೆಂದರೆ  ೬ ತಿಂಗಳಿಂದ ಕೆಟ್ಟಿರುವ ಕೊಳವೆ ಬಾವಿಯ ಕೈ ಯಂತ್ರಗಳನ್ನು ಸರಿಪಡಿಸಿಲ್ಲ.
ದುರಸ್ತಿಗೆಂದು ಪೈಪ್, ಚೈನ್‌ಗಳನ್ನು ಬಿಚ್ಚಿ ಒಯ್ಯಲಾಗಿದೆ. ನಂತರ ಅವುಗಳನ್ನು ತಂದು ಜೋಡಿಸಿಲ್ಲ. ಪರಿಣಾಮ ಕೊಳವೆಯಲ್ಲಿ ನೀರಿದ್ದರೂ ಅದನ್ನು ಪಡೆಯಲಾಗುತ್ತಿಲ್ಲ.
ಬೀದಿ ದೀಪ ವ್ಯವಸ್ಥೆ ಇಲ್ಲ: ಇದು  ಹೆಸರಿಗೆ ಮಾತ್ರ ಹೊಸ ಬಡಾವಣೆ. ಸಮಸ್ಯೆಗಳು ಮಾತ್ರ ಹಳೆಯವೇ.  ರಾತ್ರಿ ಆಯಿತೆಂದರೆ  ಬಡಾವಣೆ ತುಂಬ ಅಂಧಕಾರ ನೆಲೆಸುತ್ತದೆ. ಬೀದಿ ದೀಪದ ವ್ಯವಸ್ಥೆ ಸರಿಯಿಲ್ಲದ್ದು ಇದಕ್ಕೆ ಕಾರಣ. ಗ್ರಾಮ ಪಂಚಾಯಿತಿಯವರು ಒಮ್ಮೆ ಬಲ್ಬ್  ಅಳವಡಿಸಿದರೆ ಮತ್ತೆ ಇತ್ತ ತಿರುಗಿ ನೋಡುವ ಸೌಜನ್ಯ ತೋರಿಲ್ಲ.
ಇದರಿಂದ ಕೆಟ್ಟ ಬಲ್ಬ್ ಅದೇ ಸ್ಥಿತಿಯಲ್ಲಿರುತ್ತವೆ. ನಿವಾಸಿಗಳು ಹೋಗಿ ಗಲಾಟೆ ಮಾಡದ ಹೊರತು ಹೊಸ ಬಲ್ಬ್ ಬರೋಲ್ಲ. ಬಡಾವಣೆ ಗ್ರಾಮದ ಹೊರ ವಲಯದಲ್ಲಿದೆ. ಹೀಗಾಗಿ ರಾತ್ರಿ ವೇಳೆ ಓಡಾಡಲು ಬೆಳಕು ಬೇಕೇ ಬೇಕು. ಆದರೆ  ಗ್ರಾ.ಪಂ. ಅಧಿಕಾರಿಗಳ ನಿರ್ಲಕ್ಷ್ಯ ಪರಿಣಾಮ ರಾತ್ರಿ ವೇಳೆ ಭಯದಿಂದಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಾಲುವೆಯಂತೆ ಹರಿಯುವ ಕೊಳಚೆ: ಬಡಾವಣೆಯ ಅನತಿ ದೂರದಲ್ಲಿ ಕೊಳಚೆ ನೀರು ಕಾಲುವೆ ರೀತಿಯಲ್ಲಿ ಹರಿಯುತ್ತದೆ.  ಚಾ.ನಗರದ  ವಿವಿಧ ಬಡಾವಣೆಗಳ ಕೊಳಚೆ  ನೀರನ್ನು ಈ ಭಾಗಕ್ಕೆ ಬಿಡಲಾಗಿದೆ. ಪರಿಣಾಮ ರಾತ್ರಿ ವೇಳೆ ಗಬ್ಬು ನಾರುತ್ತದೆ.
ಇದರಿಂದ ಸೊಳ್ಳೆ ಕಾಟವೂ ಹೆಚ್ಚು. ಈ ನೀರನ್ನು ಬೇರೆಡೆಗೆ  ಬಿಡಬೇಕು ಎಂಬುದು ನಿವಾಸಿಗಳ ಒತ್ತಾಯ. ಜಿಲ್ಲಾ ಕೇಂದ್ರದಲ್ಲಿ ಒಳ ಚರಂಡಿ ವ್ಯವಸ್ಥೆ ಆಗುವವರೆಗೂ  ಇಲ್ಲಿ ಈ ಗೋಳು ತಪ್ಪಿದ್ದಲ್ಲ.
ಸುವರ್ಣ ಯೋಗ ಇಲ್ಲ: ಗ್ರಾಮದಲ್ಲಿ ಸಮಸ್ಯೆಗಳು ಹೆಚ್ಚು ಪ್ರಮಾಣದಲ್ಲಿರುವ ಕಾರಣ  ಸುವರ್ಣ ಗ್ರಾಮೋದಯ ವ್ಯಾಪ್ತಿಗೆ ಒಳಪಡಲಿದೆ ಎಂಬ ನಿರೀಕ್ಷೆ ಗ್ರಾಮಸ್ಥರದಾಗಿತ್ತು. ಆದರೆ ಅದನ್ನು ಗ್ರಾ.ಪಂ. ಕೇಂದ್ರ ಸ್ಥಾನವಾದ ಕೂಡ್ಲೂರಿಗೆ ನೀಡಲಾಯಿತು. ಮುಂದಿನ ಬಾರಿಯಾದರೂ ಗ್ರಾಮವನ್ನು ಸುವರ್ಣ ಗ್ರಾಮೋದಯ ಯೋಜನೆಗೆ ಒಳಪಡಿಸಬೇಕು. ಆ ಮೂಲಕ ಅಭಿವೃದ್ಧಿಗೆ  ಒತ್ತು ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಹ.  ಸದ್ಯದಲ್ಲೇ ಗ್ರಾ.ಪಂ.ನಲ್ಲಿ ಹೊಸ ಆಡಳಿತ ಅಧಿಕಾರಕ್ಕೆ ಬರಲಿದ್ದು, ಇನ್ನಾದರೂ ಗ್ರಾಮದ ಹೊಸ ಬಡಾವಣೆ ಸಮಸ್ಯೆ ನೀಗಲಿ, ಗ್ರಾ.ಪಂ. ನ  ಹೊಸ  ಸದಸ್ಯರು ತಮ್ಮ ವ್ಯಾಪ್ತಿಯ ಸಮಸ್ಯೆ ಬಗೆಹರಿಸಲು ಶ್ರಮಿಸಲಿ ಎಂಬ ಒತ್ತಾಯ ನಿವಾಸಿಗಳದ್ದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ