ಕುಂಟ ಕುಂಟ ಕೂರ‍್ಗೆ ನಮ್ಮ ನಗರ ಸಾರಿಗೆ !

ಜೆ. ಶಿವಣ್ಣ ಮೈಸೂರು
ನಗರ ಸಾರಿಗೆ ಬಸ್ ‘ಸೇವೆ’ ಸುಧಾರಣೆ ಕಂಡಿಲ್ಲ. ಪ್ರಯಾ ಣಿಕರ ಬವಣೆ ತಪ್ಪಿಲ್ಲ. ಸಮಯ ಪರಿಪಾಲನೆ ಸಾರಿಗೆ ಸಂಸ್ಥೆಗೆ ಗೊತ್ತೇ ಇಲ್ಲ. ನಮ್ಮದು ‘ಸಾರ್ವಜನಿಕ ಸೇವೆ’ ಎನ್ನುವುದನ್ನು ಮರೆತ ವಿವೇಚನಾರಹಿತ ಅಧಿಕಾರಿಗಳು, ಸಿಬ್ಬಂದಿಯ ಉದ್ಧಟತನದ, ಕಾಟಾಚಾರದ ವರ್ತನೆಗೆ ಕೊನೆ ಇಲ್ಲ. ಪ್ರಯಾಣ ದರ ಏರುವುದೂ ನಿಂತಿಲ್ಲ. ಸೇವೆ ಮಾತ್ರ ಕೆಟ್ಟು ನಿಂತ ಬಸ್‌ನಂತೆ ನಿಂತಲ್ಲೇ ಇದೆ !
ಸಾರಿಗೆ ಸೇವೆಯನ್ನೇ ಅವಲಂಬಿಸಿದವರು ಬಸ್‌ಗಾಗಿ ಗಂಟೆಗಟ್ಟಲೆ ಕಾಯಲೇ ಬೇಕು. ಬಸ್‌ಗಾಗಿ ಅಸಹನೆ, ಚಡಪಡಿಕೆಯಿಂದ ಕಾಯುವ ಪ್ರಯಾಣಿಕನಿಗೆ ಒತ್ತಡದಂಥ  ಮಾನಸಿಕ ಸಮಸ್ಯೆಗಳನ್ನು ತಂದಿಡುತ್ತಿದೆ. ಮಕ್ಕಳಿಗೆ ಶಾಲೆಗೆ ಚಕ್ಕರ್ ಇಲ್ಲವೇ ಲೇಟ್ ಎಂಟ್ರಿ, ದೂರದೂರಿಗೆ ಬಸ್ಸೋ, ರೈಲೋ ಹಿಡಿದು ಹೋಗುವ ಉದ್ಯೋಗಿಗಳಿಗೆ ಸಂಬಳ ಕಟ್ ಇಲ್ಲವೇ ಬಾಸ್‌ನಿಂದ ಬೈಗುಳ. ಇದು ಸಾರಿಗೆ ಬಸ್ ಪ್ರಯಾಣಿಕರ ದಿನನಿತ್ಯದ ಹಾಡು-ಪಾಡು.
ಬೆಳಗ್ಗೆ, ಸಂಜೆ ಹೊತ್ತು ಬಸ್‌ಸ್ಟಾಪ್‌ಗಳಲ್ಲಿ ಜನಸಂದಣಿ ಸಾಮಾನ್ಯ. ಬೆಳಗ್ಗೆ ೮ ರಿಂದ  ೯- ೯.೩೦ ರ ವೇಳೆ, ಸಂಜೆ ೪ ರಿಂದ ೫- ೫.೩೦ ರ ವೇಳೆ ಯಾವುದೇ ಮಾರ್ಗದಲ್ಲೂ ಬಸ್ ರಶ್. ಶಾಲಾ, ಕಾಲೇಜು, ವ್ಯಾಪಾರ, ಉದ್ಯೋಗಕ್ಕೆ ಬಹುತೇಕರು ಹೊರಡುವುದು/ಮರಳುವುದು ಈ ಹೊತ್ತಿನಲ್ಲೇ. ಆದರೆ ಬಸ್ಸೇ ಬಿರಿಯುವಷ್ಟು  ಭರ್ತಿ. ಬಾಗಿಲಲ್ಲೇ ಜೋತು ಬಿದ್ದಿರುತ್ತಾರೆ. ಇಳಿಯಲು, ಹತ್ತಲು ಹರಸಾಹಸ ಮಾಡಬೇಕು. ಹತ್ತಲಾಗದ ಅಸಹಾಯಕರು ಮತ್ತೊಂದು ಬಸ್ ಕಾಯುವ ಸ್ಥಿತಿ.
ಆ ಇಕ್ಕಟ್ಟಿನಲ್ಲಿ ಮಹಿಳೆಯರು, ಮಕ್ಕಳ ಪಾಡು ಹೇಳತೀರದು. ಪುಸ್ತಕದ ಬ್ಯಾಗ್ ಹೊತ್ತ ಶಾಲಾ ಮಕ್ಕಳ ಸ್ಥಿತಿ ಚಿಂತಾಜನಕ. ನಿರ್ವಾಹಕನ ಪಾಡು ಇದಕ್ಕಿಂತ ಭಿನ್ನವಿಲ್ಲ. ಟಿಕೆಟ್ ವಿತರಿಸಲೇ ಅರ್ಧತಾಸುಬೇಕು. ಇನ್ನು ನಿಗದಿತ ಸಮಯಕ್ಕೆ ಸರಿಯಾಗಿ ಬಸ್ ಗುರಿ ಸೇರುವುದಾದರೂ ಹೇಗೆ ? ಕೆಲ ಸ್ಟಾಪ್‌ಗಳಲ್ಲಿ ಜನಜಾಸ್ತಿಯಿದ್ದರೆ ಬಸ್ ನಿಲ್ಲಿಸುವುದೇ ಇಲ್ಲ.
ಹೆಚ್ಚು ಸೌಲಭ್ಯ ಒದಗಿಸಲು ಪ್ರತ್ಯೇಕ ‘ನಗರ ಸಾರಿಗೆ ವಿಭಾಗ’ ಮಾಡಿದರೂ  ಪ್ರಯೋಜನವಿಲ್ಲ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಇರಬಹುದು. ರಶ್ ಇರಲಿ, ಇಲ್ಲದಿರಲಿ, ಬಸ್‌ಗಳನ್ನು ಒಂದೇ ವಿಧದಲ್ಲಿ ನಿಯೋಜಿಸಲಾಗುತ್ತಿದೆ.ಅಗತ್ಯವಿರುವ ಕಡೆಗೂ, ಇಲ್ಲದಿರುವ ಮಾರ್ಗಗಳಿಗೂ ಸಮಾನವಾಗಿ ಬಸ್‌ಗಳನ್ನು ಬಿಡಲಾಗುತ್ತದೆ. ಒಮ್ಮೊಮ್ಮೆ ಮೂರ‍್ನಾಲ್ಕು ಬಸ್‌ಗಳು ಒಟ್ಟಿಗೆ ಖಾಲಿ ಖಾಲಿ ಮೆರವಣಿಗೆ ಹೊರಡುತ್ತವೆ.
ಮಧ್ಯಾಹ್ನದ ವೇಳೆ ಎಲ್ಲಾ ಬಸ್‌ಗಳಿಗೆ ವಿಶ್ರಾಂತಿ ! ಟೀ- ಕಾಫಿ, ತಿಂಡಿಗಾಗಿ ಎಲ್ಲೆಂದ ರಲ್ಲಿ ಬಸ್ ನಿಂತು ಬಿಡುವುದೂ ಉಂಟು. ಬಸ್ ನಂಬಿದರೆ ವೇಳೆಗೆ ಸರಿಯಾಗಿ ಶಾಲೆ ತಲುಪೋದು ಕಷ್ಟವೆಂದೇ ಪೋಷಕರು ತಮ್ಮ ಮಕ್ಕಳನ್ನು ಆಟೋರಿಕ್ಷಾ, ವ್ಯಾನ್‌ಗಳಲ್ಲಿ ಕಳುಹಿಸುತ್ತಿದ್ದಾರೆ. ಬಹುತೇಕ ಶಿಕ್ಷಕರಿಗೂ ಆಟೋಗಳೇ ಗತಿ.
ನರ್ಮ್ ಲೆಕ್ಕ ತೋರಿಸಲೆಂದೇ ಹೊಸ ಬಸ್‌ಗಳನ್ನು ಬಿಡಲಾಗುತ್ತಿದೆ ಎನ್ನುವ ಸಂಶಯವಿದೆ. ಮೇಲಧಿಕಾರಿಗಳನ್ನು ಮೆಚ್ಚಿಸಲು  ‘ಹಳೆಯ ಬಸ್‌ಗಳಿಲ್ಲ’ ಎಂದು ದಾಖಲಿಸುವ ಉಮೇದಿನ ಕೆಲ ಅಧಿಕಾರಿಗಳಿಂದ ೨ ಹಳೆ ಬಸ್‌ಗಳಿಗೆ ಬದಲಾಗಿ ಒಂದು ಹೈಟೆಕ್ ಬಸ್ ನಿಯೋಜಿಸುವ ಕೆಲಸವೂ ನಡೆಯುತ್ತಿದ್ದು, ಮತ್ತೆ ಸಮಸ್ಯೆ ಪ್ರಯಾಣಿಕರಿಗೆ ಉಚಿತ ಮತ್ತು ಖಚಿತ. ಮುಖ್ಯ ಬಸ್ ನಿಲ್ದಾಣಗಳು ಹೈಟೆಕ್ ಸ್ವರೂಪದೊಂದಿಗೆ ಲಕಲಕಿಸುತ್ತಿವೆ, ಜಾಹೀರಾತುಗಳಿಂದ ಕಂಗೊಳಿಸುತ್ತಿವೆ. ಅತ್ಯಾಧುನಿಕ ಬಸ್‌ಗಳೂ ರಸ್ತೆಯಲ್ಲಿವೆ. ಇಷ್ಟನ್ನೇ ತೋರಿ ‘ಅತ್ಯುತ್ತಮ ಸೇವೆ’ನಮ್ಮದು ಎಂದು ಬೆನ್ನು ತಟ್ಟಿಕೊಳ್ಳುತ್ತಾರೆ ಅಧಿಕಾರಿಗಳು. ಆದರೆ ‘ಸೇವೆ’ ಪಡೆದಿರುವ ಪ್ರಯಾಣಿಕರು ಪರದಾಡುವುದು ತಪ್ಪಿಲ್ಲ.
ವರ್ಣರಂಜಿತವಾಗಿ ರಸ್ತೆಯಲ್ಲಿ ಅಡ್ಡಾಡುತ್ತಿರುವ  ನರ್ಮ್‌ನ ‘ನಾಜೂಕಿನ ಬಸ್’ಗಳು ಹೆಚ್ಚು ಕಾಲ ರಸ್ತೆಯಲ್ಲಿರದೇನೋ. ಹಿಂಭಾಗ ಎಂಜಿನ್‌ವುಳ್ಳ ಮಾರ್ಕೋಪೋಲೊ ಬಸ್ ಹೊರಡಿಸುವ ಕರ್ಕಶ ಶಬ್ದ, ಹೊಗೆಯಿಂದ ಪರಿಸರ ಮಾಲಿನ್ಯ ಹೇಳತೀರದು. ವೋಲ್ವೋ ಸೇರಿದಂತೆ ವಿವಿಧ ವಿನ್ಯಾಸದ ಆಧುನಿಕ ಬಸ್‌ಗಳು ರಸ್ತೆಗಿಳಿದರೂ ‘ಡಬ್ಬಾ’ ಬಸ್‌ಗಳೇನೂ ಕಮ್ಮಿಯಿಲ್ಲ. ಗ್ರಾಮಾಂತರ ಸಿಟಿ ಬಸ್‌ಗಳಲ್ಲಿ ಬೆರಳೆಣಿಕೆಯಷ್ಟು ಹೊರತುಪಡಿಸಿದರೆ, ಎಲ್ಲವೂ ಹಳೇ ಮಾಡೆಲ್. ತಾಲೂಕಿನ ೧೩೧ ಗ್ರಾಮಗಳಿಗೆ ಬಸ್ ಕಲ್ಪಿಸಲಾಗಿದ್ದು, ‘ತಳ್ಳುಮಾಡೆಲ್’ಗಳಿಗೆ ಕೊರತೆ ಇಲ್ಲ. ಈ ಭಾಗದ ನಿಲ್ದಾಣ ದುರಸ್ತಿ ಕಾಣದೇ  ಗಬ್ಬೆದ್ದು ಹೋಗಿದೆ. 
ನರ್ಮ್ ಎಂದರೆ ನವೀಕರಣ. ಆದರೆ ಸಾರಿಗೆ ವ್ಯವಸ್ಥೆಯಲ್ಲಿ ಮೇಲ್ನೋಟದ ನವೀಕರಣಕವಷ್ಟೇ. ನಗರ ಬಸ್ ನಿಲ್ದಾಣವೇ ಇದಕ್ಕೆ ತಾಜಾ ಉದಾಹರಣೆ. ನರ್ಮ್‌ನಲ್ಲಿ ಈ ನಿಲ್ದಾಣವನ್ನು ೧೨ ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗಿದೆ. ಆದರೆ ನಿಲ್ದಾಣ ಸ್ಕೇಟಿಂಗ್ ರಿಂಕ್‌ನಂತಾಗಿದೆ. ೨ ಹೆಜ್ಜೆಯ ಅಂಕಣ ತಲುಪಲೂ ಅಂಡರ್‌ಪಾಸ್ ಬಳಸಬೇಕು. ಅಂಕಣಗಳು ಕಿಷ್ಕಿಂಧೆಯಾಗಿದ್ದು, ಮುಂದೆ ನಿಂತ ಬಸ್ ಜಾಗದಿಂದ ಕದಲುವವರೆಗೂ ಹಿಂದಿರುವ ಬಸ್ ಚಲಿಸಲಾಗದು. ಈ ನಡುವೆ  ನಿಲ್ದಾಣ ಎತ್ತಂಗಡಿ ಯಾಗುವ ಭೀತಿ ಎದುರಿಸುತ್ತಿದೆ. ನಿಲ್ದಾಣದಿಂದ ಅರಮನೆ ಅಂದಕ್ಕೆ ಧಕ್ಕೆ ಎನ್ನುವುದು ಅಧಿಕಾರಿಗಳಿಗೆ ತಡವಾಗಿ ಜ್ಞಾನೋದಯವಾಗಿದೆ. ಯಾರದು ಸರಿ, ಯಾರದು ತಪ್ಪು ಎನ್ನುವ ತರ್ಕಕ್ಕಿಂತ ಜನರ ಹಣ ಪೋಲು ಎನ್ನುವುದರಲ್ಲಿ ಸಂಶಯವಿಲ್ಲ.     ಒಟ್ಟಾರೆ ಸಾರಿಗೆ ಸರಿಯಾಗುವುದೆಂದೋ, ಉತ್ತಮ ಸೇವೆ ದೊರಕುವುದೆಂದೋ ?
ಇಷ್ಟೆಲ್ಲಾ ಅಧ್ವಾನಗಳ ಮಧ್ಯೆ ಸಮಾಧಾನಕರ ಸಂಗತಿ ಎಂದರೆ ಜೆಎನ್-ನರ್ಮ್ ಕೊಡುಗೆ. ಜೆಎನ್-ನರ್ಮ್ ಅಡಿಯಲ್ಲಿ ನೂತನ ವಾಹನಗಳಿಗೆ ೫೦.೩೦ ಕೋಟಿ ರೂ. ಮಂಜೂರಾಗಿದ್ದು, ೩೩.೯೮ ಕೋಟಿ ರೂ. ಬಿಡುಗಡೆಯಾಗಿದೆ. ೩೦ ನಗರ ಸಾರಿಗೆ ವೋಲ್ವೋ ಬಸ್, ೭೯ ಸೆಮಿ ಲೋಫ್ಲೋರ್ ವಾಹನಗಳು, ೪೧ ಮಾರ್ಕೋ ಫೋಲೋ ವಾಹನ ಸೇರಿ ೧೫೦ ಬಸ್‌ಗಳನ್ನು ಖರೀದಿಸಲಾಗಿದೆ.
ಜೆಎನ್-ನರ್ಮ್‌ನಲ್ಲಿ ೨೨.೭೦ ಕೋಟಿ ರೂ.ಗಳಲ್ಲಿ ಇಂಟಲಿ ಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಂ ಯೋಜನೆಗೆ ಅನುಮತಿ ಸಿಕ್ಕಿದ್ದು, ಜಾಗತಿಕ ಟೆಂಡರ್  ಕರೆಯಲಾಗಿದೆ. ಇದರಡಿ ಜಿಪಿಎಸ್ ಅಳವಡಿಸಿ ಯಾವ ಬಸ್, ಯಾವ ಭಾಗದಲ್ಲಿದೆ ಎನ್ನುವುದರ ಮಾಹಿತಿ ಲಭ್ಯತೆ, ಬೇಡಿಕೆಗೆ ಅನುಗುಣವಾಗಿ ಬಸ್ ವ್ಯವಸ್ಥೆ ಇತ್ಯಾದಿ ಆಗಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ