ಹಿಪ್ಪುನೇರಳೆಗೆ ಪಪಾಯ ಹಿಟ್ಟು ತಿಗಣೆ ಪೀಡೆ

ವಿಶೇಷ ವರದಿ ಚಾಮರಾಜನಗರ
ಸ್ವಲ್ಪ ಚೇತರಿಕೆ ಹಾದಿಯಲ್ಲಿದ್ದ ರೇಷ್ಮೆ ಬೆಳೆಗಾರರಿಗೆ ಇದೀಗ ಮತ್ತೆ ಪೆಟ್ಟು ಬಿದ್ದಿದೆ. ಹಿಪ್ಪುನೇರಳೆ ಬೆಳೆಗೆ ಪಪಾಯ ಹಿಟ್ಟು ತಿಗಣೆ (ಪ್ಯಾರಾಕಾಕಸ್ ಮಾರ್ಜಿನೇಟಸ್)  ಎಂಬ  ಕೀಟ ಪೀಡೆ ಆವರಿಸಿಕೊಂಡಿದ್ದು, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಈ ಹಿಟ್ಟು ತಿಗಣೆ ಬಾಧೆ ಚಾ.ನಗರ ತಾಲೂಕಿನ ವಿವಿಧೆಡೆ ಆವರಿಸಿಕೊಂಡು ಹಿಪ್ಪು ನೇರಳೆ ಬೆಳೆಯುವ ರೈತರನ್ನು ಆತಂಕಕ್ಕೆ ಸಿಲುಕಿಸಿದೆ. ಈ ಕೀಟ ಪೀಡೆ ತಗುಲಿದ ಬೆಳೆಯನ್ನು ಕಟಾವು ಮಾಡುವುದೊಂದೇ ಮಾರ್ಗ. ಹೀಗಾಗಿ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
ಚಾ.ನಗರ ತಾಲೂಕಿನ ಮಂಗಲ, ಅಂಕನಶೆಟ್ಟಿಪುರ, ವೆಂಕಟಯ್ಯಛತ್ರ, ಕಾಗಲವಾಡಿ, ಮೇಲಾಜಿಪುರ ಹಾಗೂ ತಾಳವಾಡಿ ಭಾಗದಲ್ಲಿ ಅಧಿಕವಾಗಿ ಕಂಡು ಬಂದಿದೆ. ಇಲ್ಲಿನ ಹಲವಾರು ಮಂದಿ ರೈತರು ಈಗಾಗಲೇ ಹಿಪ್ಪು ನೇರಳೆಯನ್ನು  ಅನಿವಾರ್ಯವಾಗಿ ಕಟಾವು ಮಾಡಿದ್ದಾರೆ.
ಚಾ.ನಗರ ದಶಕಗಳ ಹಿಂದೆ ರೇಷ್ಮೆನಾಡು ಎಂದೇ ಪ್ರಸಿದ್ಧಿ ಪಡೆದಿತ್ತು. ಆದರೆ ಮಾರುಕಟ್ಟೆಯಲ್ಲಿನ ದರ ಕುಸಿತ. ವಾಣಿಜ್ಯ ಬೆಳೆಗಳ ಆಕರ್ಷಣೆ  ಕಾರಣಕ್ಕಾಗಿ ರೈತರು ರೇಷ್ಮೆಯಿಂದ ವಿಮುಖರಾಗಿದ್ದರು. ಆದರೆ ಈಚೆಗೆ ರೇಷ್ಮೆಗೆ  ಉತ್ತಮ ದರ ಬರುವಂತಾದ ಕಾರಣ ರೈತರು ಮತ್ತೆ  ರೇಷ್ಮೆ ಕಡೆಗೆ ಮುಖ ಮಾಡಿದ್ದರು.
ಒಂದೂವರೆ ದಶಕದ ಹಿಂದೆ ಚಾ.ನಗರ ತಾಲೂಕುವೊಂದರಲ್ಲೇ ೧೬ ಸಾವಿರ ಹೆಕ್ಟೇರ್ ಹಿಪ್ಪು ನೇರಳೆ ಬೆಳೆ ಇತ್ತು. ಅದು ಕ್ರಮೇಣ ಐದೂವರೆ ಸಾವಿರ ಹೆಕ್ಟೇರ್‌ಗೆ  ಇಳಿದಿತ್ತು.  ಒಂದೂವರೆ ವರ್ಷದಿಂದೀಚೆಗೆ  ಹಿಪ್ಪು ನೇರಳೆ ಬೆಳೆಯುವವರ ಸಂಖ್ಯೆ ಹೆಚ್ಚಾಗಿ ಸದ್ಯ ೬೪೮೭ ಹೆಕ್ಟೇರ್ ಬೆಳೆ ಇದೆ.
ಹೆಮ್ಮಾರಿಯಾಗಿ ಅಪ್ಪಳಿಸಿದೆ: ಇಂಥ ಸಂದರ್ಭದಲ್ಲಿ ಪಪಾಯ ಹಿಟ್ಟು ತಿಗಣೆ ಬಾಧೆ ಹೆಮ್ಮಾರಿಯಂತೆ  ಅಪ್ಪಳಿಸಿದೆ. ತಾಲೂಕಿನಲ್ಲಿರುವ  ಹಿಪ್ಪುನೇರಳೆ ತೋಟದ ಪೈಕಿ ಶೇ. ೨೫ರಷ್ಟಕ್ಕೆ  ಇದು ಹರಡಿದೆ. ಈಗ ನಿರ್ಲಕ್ಷ್ಯ ಮಾಡಿದರೆ ವ್ಯಾಪಕವಾಗಿ ಹರಡಲಿದೆ ಎಂದು  ಕೇಂದ್ರೀಯ  ರೇಷ್ಮೆ ಸಂಶೋಧನಾ ಪ್ರಾದೇಶಿಕ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಇದು ಒಂದು ರೀತಿಯಲ್ಲಿ ಅಂಟು ಬಾಧೆಯಾಗಿದ್ದು, ಹಿಪ್ಪು ನೇರಳೆ ಸೇರಿದಂತೆ ಹತ್ತಿ, ಸೀಬೆ, ದಾಳಿಂಬೆ, ಸೂರ್ಯಕಾಂತಿ, ತೇಗ, ಅಲಸಂದೆ, ದಾಸವಾಳ ಗಿಡಕ್ಕೆ ಬೇಗ ತಗಲುತ್ತದೆ. ತಾಲೂಕಿನಲ್ಲಿ ಹಿಪ್ಪು ನೇರಳೆ  ಹೊರತು ಪಡಿಸಿ ಉಳಿದ ಬೆಳೆ ಅಷ್ಟಾಗಿ ಇಲ್ಲ. ಹೀಗಾಗಿ ಸದ್ಯ ತೊಂದರೆಗೆ ಒಳಗಾಗಿರುವವರು ರೇಷ್ಮೆ ಬೆಳೆಗಾರರು ಮಾತ್ರ.
ಏನಿದು ಬಾಧೆ, ಎಲ್ಲಿಂದ ಬಂತು: ಪಪಾಯ  ಹಿಟ್ಟು ತಿಗಣೆ  ಎಂಬುದು ಈ ಕೀಟ ಪೀಡೆಯ ಸ್ಥಳೀಯ ಹೆಸರು. ಇದನ್ನು ವೈಜ್ಞಾನಿಕವಾಗಿ  ‘ಪ್ಯಾರಾಕಾಕಸ್ ಮಾರ್ಜಿನೇಟಸ್’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇದರ ಮೂಲಕ ಮೆಕ್ಸಿಕೋ. ಪರಂಗಿ ಬೆಳೆಯೊಂದಿಗೆ ಇದು ಭಾರತಕ್ಕೆ ಕಾಲಿಟ್ಟಿತ್ತು.
ಹೀಗಾಗಿ ಇದನ್ನು ಪಪಾಯ ಹಿಟ್ಟು ತಿಗಣೆ ಎಂದು ಕರೆಯಲಾಗುತ್ತದೆ. ಬಿಳಿ ಬಣ್ಣದ ಈ ಪೀಡೆ. ಅಂಟು ದ್ರವವನ್ನೊಳಗೊಂಡಿದೆ.   ಇದು ಹೆಚ್ಚಾಗಿ ಪರಂಗಿ ಗಿಡಕ್ಕೆ ಆಕರ್ಷಿತವಾಗುತ್ತದೆ. ಪರಂಗಿ ಗಿಡಗಳ ಹತ್ತಿರ ಹಿಪ್ಪು ನೇರಳೆ ತೋಟವಿದ್ದರೆ ತೊಂದರೆ ತಪ್ಪಿದ್ದಲ್ಲ.  ಇದು ಚಾ.ನಗರ ತಾಲೂಕಿಗೆ ದಾಳಿ ಇಡುವ ಮುನ್ನ ತಮಿಳುನಾಡಿನಲ್ಲಿ ಕಾಣಿಸಿಕೊಂಡಿತ್ತು. ಕೊಯಮತ್ತೂರು, ಈರೋಡ್ ಜಿಲ್ಲೆಗಳಲ್ಲಿ  ಹೆಕ್ಟೇರ್‌ಗಟ್ಟಲೆ ಹಿಪ್ಪು ನೇರಳೆ ತೋಟ ಈ ಬಾಧೆಯಿಂದ ಹಾನಿಗೀಡಾಗಿದೆ ಎನ್ನುತ್ತಾರೆ  ಕೇಂದ್ರದ ಅಧಿಕಾರಿಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ