ಬಾಗಿದ ಶಿಕ್ಷಕನಿಗೆ ಬಿತ್ತು ಗುದ್ದು

ಚೀ.ಜ.ರಾಜೀವ ಮೈಸೂರು
ಬಗ್ಗುವವನಿಗೆ  ಮೂರು ಗುದ್ದು ಜಾಸ್ತಿ ಎಂಬುದು ಗ್ರಾಮೀಣ ಪ್ರದೇಶದ ಆಡು ನುಡಿ !
ರಾಜ್ಯದ ಪ್ರಾಥಮಿಕ ಶಿಕ್ಷಕರ ಪಾಡು ಹೆಚ್ಚು ಕಡಿಮೆ ಹೀಗೆ ಆಗಿದೆ.  ಜನಗಣತಿ, ಮಕ್ಕಳ ಗಣತಿ,  ಬಾಲ ಕಾರ್ಮಿಕರ ಗಣತಿ,  ಎಪಿಎಲ್-ಬಿಪಿಎಲ್ ಕಾರ್ಡ್ ಸಮೀಕ್ಷೆ, ಮತಪಟ್ಟಿ  ಪರಿಷ್ಕರಣೆ  ಎಂದು  ಶಿಕ್ಷಣೇತರ ಇಲಾಖೆಗಳಿಗೆ ಸಂಬಂಧಿಸಿದ  ಹೆಚ್ಚುವರಿ ಕಾರ್ಯಕ್ಕಾಗಿ  ಮೈ ಬಗ್ಗಿಸಿ ಕೆಲಸ ಮಾಡುತ್ತಲೇ ಬಂದಿರುವ  ಶಿಕ್ಷಕ ಸಮುದಾಯಕ್ಕೆ ಈಗ ಸರಕಾರ ಸರಿಯಾದ  ಗುದ್ದನ್ನೆ  ಪ್ರಯೋಗಿಸಿದೆ.
ಜನಗಣತಿಯಲ್ಲಿರುವ ಶಿಕ್ಷಕರನ್ನು  ಈ  ವರ್ಷ  ವರ್ಗಾವಣೆ ಮಾಡದಂತೆ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಆದೇಶ ಶಿಕ್ಷಕ ಸಮುದಾಯದಲ್ಲಿ  ಬೇಸರವನ್ನಷ್ಟೇ ಮೂಡಿಸಿಲ್ಲ, ಆಕ್ರೋಶವನ್ನು ತಂದಿದೆ.  ಅಂತೂ-ಇಂತೂ ಜೂ. ೧೫ ರಿಂದ  ವರ್ಗಾವಣೆ ಪ್ರಕ್ರಿಯೆ ಶುರುವಾಗಲಿದೆ ಎಂದು ಕೌನ್ಸೆಲಿಂಗ್‌ಗೆ ಮಾನಸಿಕ ಸಿದ್ಧತೆ ಆರಂಭಿಸಿರುವ ಶಿಕ್ಷಕ ಸಮುದಾಯಕ್ಕೆ  ಹೊಸ ಆದೇಶ  ಗೊಂದಲವನ್ನೂ ಮೂಡಿಸಿದೆ.
ಮೂರು ವರ್ಷಗಳಿಂದ ಶಿಕ್ಷಕರ ಸಾಮಾನ್ಯ ವರ್ಗಾವಣೆಗೆ ಸತಾಯಿಸುತ್ತಾ ಬಂದಿದ್ದ  ಸರಕಾರ  ಕಳೆದ ವರ್ಷವಷ್ಟೇ  ಕೌನ್ಸೆಲಿಂಗ್ ಮೂಲಕ ವರ್ಗಾವಣೆ  ಪ್ರಕ್ರಿಯೆಯನ್ನು ಸರಿಯಾದ ಹಳಿಗೆ ತರುವ ಪ್ರಯತ್ನ ಆರಂಭಿಸಿತು.  ಹತ್ತು-ಹಲವು ಗೊಂದಲಗಳ ನಡುವೆಯೂ ೨೦೦೯ರಲ್ಲಿ  ಶೇ. ೫ರಷ್ಟು ಶಿಕ್ಷಕರನ್ನು ಕೌನ್ಸೆಲಿಂಗ್ ಮೂಲಕ  ವರ್ಗ ಮಾಡಿತು.  ಕಳೆದ ಸಾಲಿನ  ಕೌನ್ಸೆಲಿಂಗ್‌ನಿಂದ ಪಾಠ ಕಲಿತು, ಈ ವರ್ಷ  ಒಂದಿಷ್ಟು ಸುಧಾರಣೆ ಮೂಲಕ ವರ್ಗಾವಣೆ ಕೈಗೆತ್ತಿಕೊಳ್ಳಬಹುದು ಎಂದೇ  ಶಿಕ್ಷಕ ಸಮುದಾಯ ಭಾವಿಸಿತ್ತು. ಅಂಥಾ ಯಾವುದೇ ರೀತಿಯ ಸುಧಾರಣೆಯನ್ನೂ ಸರಕಾರ ಮಾಡಲೇ ಇಲ್ಲ. ಆ  ಬೇಸರದ  ನಡುವೆಯೂ ವರ್ಗಾವಣೆಗಾಗಿ ಸಿದ್ಧವಾಗಿದ್ದವರಿಗೆ, ಹೊಸ ಆದೇಶ ಆತಂಕ  ಮೂಡಿಸಿದೆ. ಆದೇಶ ಹೊರಬಿದ್ದು ನಾಲ್ಕು ದಿನವಾದರೂ  ಸಾರ್ವಜನಿಕ ಶಿಕ್ಷಣ ಇಲಾಖೆ ಈ ಬಗ್ಗೆ  ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಶಿಕ್ಷಕರ ಆತಂಕವನ್ನು ಹೆಚ್ಚಿಸಿದೆ.
ಯಾಕೆ ಈ ಆದೇಶ: ಕೇಂದ್ರ ಸರಕಾರ ೧೦ ವರ್ಷಕ್ಕೊಮ್ಮೆ ನಡೆಸುವ ‘ಭಾರತದ ಜನಗಣತಿ ೨೦೧೧: ಮನೆ ಪಟ್ಟಿ  ಮತ್ತು ಮನೆ ಗಣತಿ ಅನುಸೂಚಿ’ ಕಾರ್ಯಾರಂಭಗೊಂಡಿದ್ದು, ರಾಜ್ಯದ ಲಕ್ಷಾಂತರ ಶಿಕ್ಷಕರು ಈ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ಏಪ್ರಿಲ್ ೧೫ ರಿಂದ ಜೂನ್ ೦೧ರವರೆಗೆ ಮೊದಲ ಹಂತದಲ್ಲಿ  ಮನೆ ಗಣತಿ ನಡೆದಿದ್ದು, ಎರಡನೇ ಹಂತದಲ್ಲಿ ೨೦೧೧ನೇ ಫೆಬ್ರವರಿಯಲ್ಲಿ  ಜನಗಣತಿ ನಡೆಯಬೇಕಿದೆ. ಈ ಮಹಾಗಣತಿಯಲ್ಲಿ ದೊರಕುವ ಮಾಹಿತಿ ದೇಶದ  ಮಾನವ ಸಂಪನ್ಮೂಲದ  ಬಳಕೆಗೆ ಸಹಕಾರಿಯಾಗಲಿದೆ. ಹಾಗಾಗಿ ಜನಗಣತಿ ಒಂದಿಷ್ಟೂ ತಪ್ಪಿಲ್ಲದೆ, ಅಚ್ಚುಕಟ್ಟಾಗಿ, ವೈಜ್ಞಾನಿಕವಾಗಿ ನಡೆಯಬೇಕೆಂಬುದು ಕೇಂದ್ರ ಸರಕಾರದ ಬಯಕೆ. ಗಣತಿ ಕಾಯ್ದೆ ಅನುಸಾರ- ಗಣತಿ ದಾರರನ್ನು ಗಣತಿ ಸಂದರ್ಭದಲ್ಲಿ ವರ್ಗಾವಣೆ  ಮಾಡುವಂತಿಲ್ಲ. ಹಾಗಾಗಿ,  ಐಎಎಸ್  ಅಧಿಕಾರಿಗಳು  ಇಂಥದ್ದೊಂದು ಆದೇಶ ಹೊರಡಿಸಿದ್ದಾರೆ. 
ಕೌನ್ಸೆಲಿಂಗ್‌ಗೆ ಭಂಗವಿಲ್ಲ: ಶಿಕ್ಷಕರ ಕೌನ್ಸೆಲಿಂಗ್ ಈಗಾಗಲೇ ಪ್ರಕಟವಾಗಿರುವ ವೇಳಾಪಟ್ಟಿಯಂತೆ ನಡೆಯಲಿದೆ. ಆದರೆ, ಕೌನ್ಸೆಲಿಂಗ್ ಬಳಿಕ ವರ್ಗಾವಣೆ ಆದೇಶವನ್ನೂ ನೀಡಲಾಗುವುದು.  ಆದರೆ, ವರ್ಗಾವಣೆ ಆದ ಶಿಕ್ಷಕರ ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದರೆ,  ಅಂಥವರನ್ನ್ನು ಗಣತಿ ಮುಕ್ತಾಯಗೊಳ್ಳುವವರೆಗೂ ಬಿಡುಗಡೆ ಮಾಡುವಂತಿಲ್ಲ. ಅನಿವಾರ್ಯ ಎನಿಸಿದರೆ  ಜಿಲ್ಲಾ ಜನಗಣತಿ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯ ಪೂರ್ವಾನುಮತಿ  ಪಡೆಯಲೇಬೇಕು ಎಂದು ಮುಖ್ಯ ಕಾರ್ಯದರ್ಶಿಗಳು ತಮ್ಮ ಕಚೇರಿಗೂ ಪತ್ರ ಬರೆದಿದ್ದಾರೆ ಎಂದು  ಮೈಸೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗೇಂದ್ರ ಕುಮಾರ್ ವಿಜಯಕರ್ನಾಟಕಕ್ಕೆ ತಿಳಿಸಿದರು.
‘ಹಾಗಾಗಿ, ಗಣತಿಯಲ್ಲಿ ಭಾಗಿಯಾಗದೇ ಇರುವ  ಶಿಕ್ಷಕರಿಗೆ ಈ ಆದೇಶದಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಅವರನ್ನು ಬಿಡುಗಡೆ ಮಾಡಲಾಗುವುದು.  ಗಣತಿ ಕಾರ್ಯದಲ್ಲಿ ಭಾಗಿಯಾಗಿರುವವರನ್ನು ಮಾತ್ರ ಮುಖ್ಯ ಕಾರ್ಯದರ್ಶಿ ಸೂಚನೆ ಅನುಸಾರ ಬಿಡುಗಡೆ ಮಾಡಲಾಗುವುದು’ ಎಂದು ಸ್ಪಷ್ಟಪಡಿಸಿದರು.
ನಿರರ್ಥಕ ಕೌನ್ಸೆಲಿಂಗ್ ? 
ಒಂದು ವೇಳೆ ಈ ಆದೇಶವೇನಾದರೂ ಚಾಚೂ ತಪ್ಪದೇ ಅನುಷ್ಠಾನವಾಗುತ್ತದೆ ಎಂದರೆ- ಈ ವರ್ಷ ಯಾವುದೇ ಶಿಕ್ಷಕರ ವರ್ಗಾವಣೆ ಆಗುವುದೇ ಇಲ್ಲ.  ಏಕೆಂದರೆ ಶೇ. ೯೦ರಷ್ಟು ಶಿಕ್ಷಕರು ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಹಾಗಾಗಿ ಈ ಆದೇಶ ಬಹುಪಾಲು ಶಿಕ್ಷಕರಿಗೆ ಅನ್ವಯಿಸುತ್ತದೆ. ಜಿಲ್ಲೆಯೊಳಗೆ ಶೇ. ೫ರಷ್ಟು ಹಾಗೂ ಜಿಲ್ಲೆಯಿಂದ ಹೊರಗೆ ಶೇ. ೨ರಷ್ಟು ಪ್ರಮಾಣದ ಶಿಕ್ಷಕರಷ್ಟೇ ವರ್ಗಾವಣೆ ಆಗುತ್ತಿರುವುದು. ಉಳಿದಂತೆ ಸಾವಿರಾರು ಶಿಕ್ಷಕರು ಪರಸ್ಪರ ವರ್ಗಾವಣೆಯ ಪ್ರಯೋಜನ ಪಡೆಯಲು ಕಾದು ಕುಳಿತಿದ್ದಾರೆ. ಇವರಿಗೆ ಆದೇಶದಿಂದ ಹೆಚ್ಚು ತೊಂದರೆಯಾಗಲಿದೆ.  ಒಂದು ವೇಳೆ  ಕೌನ್ಸೆಲಿಂಗ್‌ನಲ್ಲಿ ವರ್ಗಾವಣೆ ಆದೇಶ ಸಿಕ್ಕರೂ, ಗಣತಿ ಶಿಕ್ಷಕರು ಬಿಡುಗಡೆ ಹೊಂದಲು ೨೦೧೧ರ ಮಾರ್ಚ್ ತನಕ ಕಾಯಬೇಕು.  ಮಾರ್ಚ್ ನಂತರ ಬೇಸಿಗೆ ರಜೆ ಶುರುವಾಗುತ್ತದೆ. ಆ ವೇಳೆಗೆ ೨೦೧೧-೧೨ನೇ ಸಾಲಿನ ವರ್ಗಾವಣೆಗೆ ಸಿದ್ಧತೆ ಆರಂಭವಾಗಿರುತ್ತದೆ. ಇದೆಲ್ಲವನ್ನೂ ಗಮನಿಸಿದರೆ ಈ ವರ್ಷದ ಕೌನ್ಸೆಲಿಂಗ್ ಏಕೆ ಬೇಕು ಎನಿಸುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ