ರಸ್ತೆ ಅವ್ಯವಸ್ಥೆ, ಸಂಚಾರ ದುಸ್ತರ, ದುರಸ್ತಿ ನಿರಂತರ !

ವಿಕ ಸುದ್ದಿಲೋಕ  ಮಂಡ್ಯ
ಇಲ್ಲೊಂದು ರಸ್ತೆ ವರ್ಷಕ್ಕೆ ಎರಡು ಮೂರು ಬಾರಿ ದುರಸ್ತಿಯಾಗುತ್ತಲೇ ಇದೆ.  ದುರಸ್ತಿಯಾಗಿ ತಿಂಗಳು ತುಂಬುವಷ್ಟರಲ್ಲಿ ಮತ್ತೆ ಯಥಾಸ್ಥಿತಿಯಂತೆ ಮಂಡಿಯುದ್ದ ಗುಂಡಿಗಳು ಮೂಡುತ್ತವೆ. ಸಂಚಾರ ದುಸ್ತರ. 
ಮಂಡ್ಯದ ಪ್ರಮುಖ ಜಿಲ್ಲಾ ಹೆದ್ದಾರಿಗಳಲ್ಲಿ ಒಂದಾಗಿರುವ ಮತ್ತು ಅತಿ ಹೆಚ್ಚು ವಾಹನ, ಕಬ್ಬಿನ ಗಾಡಿಗಳ ಸಂಚಾರವಿರುವ ಮಂಡ್ಯ-ನಾಗಮಂಗಲ ರಸ್ತೆಯು ಅವ್ಯವಸ್ಥೆ, ಅಧ್ವಾನಗಳ ಆಗರವಾಗಿದೆ. ಅದರ ಕಥೆವ್ಯಥೆ ಇಲ್ಲಿದೆ.
ಮಂಡ್ಯ-ನಾಗಮಂಗಲ ರಸ್ತೆ ಸುಮಾರು ೪೦ ಕಿ.ಮೀ. ಉದ್ದವಿದೆ. ಈಚೆಗಷ್ಟೇ ಅಭಿವೃದ್ಧಿಪಡಿಸಿರುವ ರಸ್ತೆಯಲ್ಲಿ ಎಲ್ಲಿ ನೋಡಿದರೂ ಹಳ್ಳ-ಗುಂಡಿಗಳೇ ಕಾಣುತ್ತವೆ. ಭಾರಿ ಮತ್ತು ಲಘು ವಾಹನಗಳಿರಲಿ ಸೈಕಲ್, ದ್ವಿಚಕ್ರ ವಾಹನಗಳ ಸಂಚಾರವೂ ಸುಗಮವಲ್ಲ.
ಈ ರಸ್ತೆಯಲ್ಲಿ ಹಳ್ಳ, ಗುಂಡಿಗಳು ಮತ್ತು ಉಬ್ಬುಗಳನ್ನು ದಾಟಿ ಸಾಗಲು ಚಾಲಕರು ವಾಹನಗಳನ್ನು ಸರ್ಕಸ್ ರೀತಿಯಲ್ಲಿ ಅತ್ತಿತ್ತ ಎಳೆದಾಡಿಕೊಂಡೇ ಹೋಗುತ್ತಾರೆ. ನಾಗಮಂಗಲ- ಮಂಡ್ಯ ನಡುವಣ ಸಂಚಾರಕ್ಕೆ ಕಮ್ಮಿಯೆಂದರೂ  ಒಂದುಕಾಲು ಗಂಟೆ ಬೇಕೇಬೇಕು. ಇತ್ತ ಮಂಡ್ಯದ ಕೆರೆಯಂಗಳದ ಮಗ್ಗುಲಲ್ಲಿ ಮತ್ತು ಅತ್ತ ನಾಗಮಂಗಲ ಸಮೀಪಿಸುವಾಗ ರಸ್ತೆ ಚಿಂದಿ ಚಿತ್ರಾನ್ನವಾಗಿದೆ. ಇಲ್ಲಿ ವಾಹನಗಳು ಸಾಗುವಾಗ ಚಾಲಕ ಮತ್ತು ಪ್ರಯಾಣಿಕರಿಗೆ ನರಕ ಸದೃಶವಾಗುತ್ತಿದೆ. ಅವರೆಲ್ಲರೂ ಅಧಿಕಾರಿ ಗಳು ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಕಣ್ಣಿಗೆ ಕಾಣದ ಸಮಸ್ಯೆ: ಮಂಡ್ಯ-ಕೆರಗೋಡು, ಮಂಡ್ಯ-ನಾಗಮಂಗಲ ರಸ್ತೆಗಳು ಚಿಕ್ಕಮಂಡ್ಯ ಬಳಿ ಕೂಡುತ್ತವೆ. ಮಂಡ್ಯ ಮತ್ತು ಚಿಕ್ಕಮಂಡ್ಯ ನಡುವೆ ೨.೫ ಕಿ.ಮೀ. ರಸ್ತೆಯು ತೀರಾ ಹದಗೆಟ್ಟಿದೆ. ಘಟಾನುಘಟಿ ರಾಜಕಾರಣಿಗಳು, ಅಧಿಕಾರಿಗಳು ದಿನ ನಿತ್ಯ ಈ ರಸ್ತೆಯಲ್ಲೇ ಸಂಚರಿಸುತ್ತಿದ್ದರೂ ಸಮಸ್ಯೆ ಕಣ್ಣಿಗೆ ಕಂಡಿಲ್ಲ. 
ಮಂಡ್ಯದಿಂದ ಹಾದು ಹೋಗುವಾಗ ರಸ್ತೆಯ ಎಡಕ್ಕೆ ವಿಶ್ವೇಶ್ವರಯ್ಯ ನಾಲೆಯ ಪಿಕಪ್‌ನಲ್ಲಿ ನೀರು ಹರಿಯುತ್ತದೆ. ಆ ಪಿಕಪ್‌ನಿಂದ ರಸ್ತೆಯ ಬಲ ಮಗ್ಗುಲಲ್ಲಿರುವ ಸುಮಾರು ೫೦೦ ಎಕರೆ ಜಮೀನಿಗೆ ನೀರೊದಗಿಸಲಾಗುತ್ತಿದೆ. 
ಸದಾ ನೀರು ಹರಿಯುವ ಪ್ರದೇಶದಲ್ಲಿ ರಸ್ತೆಯ ಆಯಸ್ಸು ಕಮ್ಮಿ ನಿಜ. ಆದರೆ, ಪಿಕಪ್ ನಾಲೆ ಅಭಿವೃದ್ಧಿಪಡಿಸುವ ಜತೆಗೆ ರಸ್ತೆ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಮತ್ತು ವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಿದಲ್ಲಿ ರಸ್ತೆಯನ್ನು ದೀರ್ಘ ಬಾಳಿಕೆ ಬರುವಂತೆ ಅಭಿವೃದ್ಧಿಪಡಿಸಬಹುದು.
ಈ ಬಗ್ಗೆ ಅಧಿಕಾರಿಗಳಾಗಲೀ ಜನ ಪ್ರತಿನಿಧಿಗಳಾಗಲೀ ಕಾಳಜಿ ವಹಿಸಿಯೇ ಇಲ್ಲ. ಗುಂಡಿ ಬಿದ್ದು ಸಂಚಾರಕ್ಕೆ ಅಡ್ಡಿಯಾದ ಒಂದಿಷ್ಟು ಮಣ್ಣು ಸುರಿದು, ದುರಸ್ತಿ ಹೆಸರಿನಲ್ಲಿ ಗುತ್ತಿಗೆದಾರರು ಮತ್ತು ತಮ್ಮ ಕಿಸೆ ತುಂಬಿಸಿಕೊಳ್ಳುವುದಷ್ಟೇ ಇಲ್ಲಿ ಆಗುತ್ತಿರುವ ಕೆಲಸ.
ರಸ್ತೆಯ ಹಳ್ಳ, ಗುಂಡಿಗಳಿಗೆ ಮಣ್ಣು ತುಂಬಿ ಕೆಲವೇ ದಿನಗಳಾಗಿದೆ. ಪಿಕಪ್‌ನಲ್ಲಿ ಹರಿಯುತ್ತಿರುವ ನೀರು ರಸ್ತೆಯನ್ನು ಆವರಿಸಿಕೊಂಡು ಮತ್ತೆ ಗುಂಡಿ ಬಿದ್ದಿದೆ. ೩-೪ ದಿನಗಳಿಂದ ವಾಹನ ಸಂಚಾರಕ್ಕೆ ತೀರಾ ಅಡ್ಡಿಯುಂಟಾಗಿದೆ. ಚಾಲಕರು ಮತ್ತು ಪ್ರಯಾಣಿಕರ ಪಾಡು ಹೇಳ ತೀರದಾಗಿದೆ.
ಮುಸುಕಿನ ಗುದ್ದಾಟ: ಮಂಡ್ಯ ಮತ್ತು ಚಿಕ್ಕಮಂಡ್ಯ ನಡುವಿನ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸೇರಿದೆ. ಆದರೆ, ರಸ್ತೆ ಮಗ್ಗುಲಲ್ಲಿರುವ ಪಿಕಪ್ ನಾಲೆಯು ಕಾವೇರಿ ನೀರಾವರಿ ನಿಗಮದ ಸ್ವತ್ತು. ಈಗ ಉಭಯ ಇಲಾಖೆಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.
ಪಿಕಪ್ ನಾಲೆಯನ್ನು ಅಭಿವೃದ್ಧಿಪಡಿಸಿ, ರಸ್ತೆಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕೆಂದು ಲೋಕೋಪಯೋಗಿ ಇಲಾಖೆಯು ಕಾವೇರಿ ನೀರಾವರಿ ನಿಗಮಕ್ಕೆ ಮೇಲಿಂದ ಮೇಲೆ ಪತ್ರ ಬರೆ ಯುತ್ತಲೇ ಇದೆ. ಕಾವೇರಿ ನೀರಾವರಿ ನಿಗಮ ಕಣ್ಮುಚ್ಚಿ ಕುಳಿತಿದೆ.
ಮೈಷುಗರ್‌ನಲ್ಲಿ ರಸ್ತೆ ಅಭಿವೃದ್ಧಿ ನಿಧಿಯನ್ನು ಸಂಗ್ರಹಿಸಲಾಗುತ್ತಿದೆ. ತನ್ನ ಕಾರ್ಖಾನೆಗೆ ಈ ಮಾರ್ಗದಲ್ಲೇ ಅತಿ ಹೆಚ್ಚು ಕಬ್ಬು ಬರುತ್ತಿದ್ದು, ಈ ರಸ್ತೆಯನ್ನು ನಿಧಿಯಿಂದ ಅಭಿವೃದ್ಧಿಪಡಿಸಬಹುದು. ಆದರೆ, ಕಾರ್ಖಾನೆ ಆಡಳಿತ ಮಂಡಳಿ ತನಗೇನೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದೆ.
ಹೀಗೆ ಒಂದು ಇಲಾಖೆಯು ಮತ್ತೊಂದು ಇಲಾಖೆ ಮೇಲೆ ದೂಷಣೆ ಮಾಡುತ್ತಾ ಹೊಣೆಯಿಂದ ಜಾರಿಕೊಳ್ಳುತ್ತಲೇ ಇದೆ.  ಸಮಸ್ಯೆ ಪರಿಹಾರಕ್ಕೆ ಕಾಳಜಿ ತೋರದ ಜನಪ್ರತಿನಿಧಿಗಳು ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾರೆ. ಜನರು ಪರಿತಪಿಸುತ್ತಿದ್ದಾರೆ.
ಎತ್ತುಗಳಿಗೆ ರಕ್ತ ಕಣ್ಣೀರು: ಕೆರಗೋಡು ಮತ್ತು ನಾಗಮಂಗಲ ರಸ್ತೆ ಕಡೆಯಿಂದ ಟ್ರ್ಯಾಕ್ಟರ್, ಎತ್ತಿನ ಗಾಡಿ ಮತ್ತು ಲಾರಿಗಳಲ್ಲಿ ಇದೇ ಮಾರ್ಗವಾಗಿ ಕಬ್ಬು ತುಂಬಿಕೊಂಡು ನೂರಾರು ರೈತರು ಪ್ರತಿನಿತ್ಯ ಮಂಡ್ಯದ ಮೈಷುಗರ್‌ಗೆ ಬರುತ್ತಾರೆ.
ಈಗ ಕಾರ್ಖಾನೆ ಸ್ಥಗಿತಗೊಂಡಿದೆ. ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ನಡೆಯುವಾಗ ೪-೫ ಟನ್ ಕಬ್ಬು ತುಂಬಿಕೊಂಡು ಗಾಡಿ ಎಳೆದು ಬರುವ ಎತ್ತುಗಳ ಕಣ್ಣಲ್ಲಿ ನೀರಿನ ಬದಲು ರಕ್ತವೇ ಹರಿಯುವಂತಾಗುತ್ತದೆ. ಗೋ ಹತ್ಯೆ ನಿಷೇಧ ಜಾರಿಗೆ ತಂದು ಗೋವುಗಳ ಸಂರಕ್ಷಣೆಗೆ ಒತ್ತು ನೀಡಿರುವುದಾಗಿ ಬಿಜೆಪಿ ಸರಕಾರ ಬೊಬ್ಬೆಯಿಡುತ್ತಿದೆ. ಆದರೆ, ಈ ರಸ್ತೆಯಲ್ಲಿ ಕಬ್ಬು ತುಂಬಿದ ಗಾಡಿ ಎಳೆದೊಯ್ಯುವ ಎತ್ತುಗಳಿಗೆ ಸರಕಾರವೇ ಹಿಂಸೆ ನೀಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ